PLACE YOUR AD HERE AT LOWEST PRICE
By-ಡಾ.ವಡ್ಡಗೆರೆ ನಾಗರಾಜಯ್ಯ
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮೇಧಾವಿರಾಯಕೋಟ ಗ್ರಾಮದಲ್ಲಿ ಪಾರಂಪರಿಕ ಚಲವಾದಿ ದೇಶಮುದ್ರೆ ಗಂಟೆಬಟ್ಟಲುಗಳನ್ನು ಹೊರುವ ಕುಳವಾಡಿ ಮಲ್ಲಪ್ಪ ಮತ್ತು ಆತನ ಕಿರಿಯ ತಮ್ಮನಾದ ಅಮರೇಶಪ್ಪ ಹಾಗೂ ಅಮರೇಶಪ್ಪನ ಮಗನಾದ ಯಲ್ಲಪ್ಪ ಕೋಟ ಎಂಬುವವರು ದೇಶಮುದ್ರೆ ಗಂಟೆಬಟ್ಟಲುಗಳನ್ನು ಕುರಿತು ಕೆಲವು ಕುತೂಹಲಕರ ಮಾಹಿತಿಗಳನ್ನು ನನ್ನೊಂದಿಗೆ ಹಂಚಿಕೊಂಡರು.
ಕಳೆದ ಐದಾರು ತಲೆಮಾರುಗಳಿಂದ ದೇಶಮುದ್ರೆ ಗಂಟೆಬಟ್ಟಲುಗಳ ಚಲವಾದಿಗಳಾಗಿ ಸಾಂಪ್ರದಾಯಿಕ ಕುಲಕರ್ತವ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಮನೆತನ ಇವರದ್ದು. ಲಿಂಗಸುಗೂರು ಪ್ರಾಂತ್ಯವನ್ನಾಳಿದ ಹದಿನಾರು ಪಾಳ್ಳೆಗಾರರ ಕಾಲದಿಂದಲೂ ದೇಶಮುದ್ರೆ ಗಂಟೆಬಟ್ಟಲುಗಳನ್ನು ಬಳಸಲಾಗುತ್ತಿದೆ.
ಗುರಗುಂಟ ಎಂಬ ಊರಿನ ಅಮರೇಶ್ವರ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಗೂ ನವರಾತ್ರಿ ದಸರಾ ಉತ್ಸವದಲ್ಲಿ ಚಲವಾದಿಗಳ ದೇಶಮುದ್ರೆ ಗಂಟೆಬಟ್ಟಲುಗಳಿಗೆ ಅಗ್ರಪೂಜೆ ಸಲ್ಲಿಸಲಾಗುತ್ತಿದೆ. ಚಲವಾದಿಗಳಿಗೆ ಅಗ್ರತಾಂಬೂಲ ಮತ್ತು ಗೌರವ ಕಾಣಿಕೆಗಳನ್ನು ಸಲ್ಲಿಸಿ “ಸುಬಸ್ತು” ಅನ್ನಿಸಿಕೊಂಡ ಬಳಿಕವೇ ಇಲ್ಲಿನ ಧಾರ್ಮಿಕ ಕಾರ್ಯಗಳು ವಿದ್ಯುಕ್ತವಾಗಿ ಪ್ರಾರಂಭವಾಗುತ್ತವೆ.
ವೀರಶೈವ/ ಲಿಂಗಾಯತರು ವಿಶೇಷವಾಗಿ ಬಲಿಜ (ಬಣಜಿಗ) ಲಿಂಗಾಯತರು ತಮ್ಮ ಮನೆಗಳಲ್ಲಿ ನಡೆಯುವ ಮುಖ್ಯ ಕಾರ್ಯಗಳಿಗೆ ದೇಶಮುದ್ರೆ ಗಂಟೆಬಟ್ಟಲುಗಳನ್ನು ಹೊತ್ತ ಚಲವಾದಿಗಳನ್ನು ಕರೆಸಿಕೊಂಡು ಆಶೀರ್ವಾದ ಪಡೆಯುತ್ತಾರೆ.
ರಾಯಚೂರು ಕವಿತಾಳ ಗ್ರಾಮ, ಮಸ್ಕಿ, ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ, ಬಳ್ಳಾರಿ ಜಿಲ್ಲೆಯ ಕುಡಿತಿನಿ, ಇಳಕಲ್, ಸುರಪುರ ತಾಲೂಕಿನ ಅಮಾಪುರ, ಶಹಾಪುರ ತಾಲೂಕಿನ ಲಿಂಗದಹಳ್ಳಿ ಮುಂತಾದ ಕಡೆಗಳಲ್ಲಿ ದೇಶಮುದ್ರೆ ಗಂಟೆಬಟ್ಟಲುಗಳಿವೆ ಎಂದು ಅಮರೇಶಪ್ಪ ತಿಳಿಸಿದರು.
ಬಲಗೈ ಪಣಕಟ್ಟಿನ ಹದಿನೆಂಟು ಸಮುದಾಯಗಳ ಮುಂಚೂಣಿಯ ಕುಳವಾಡಿಕೆ ಅಥವಾ ಆಯಗಾರಿಕೆ ಕೆಲಸ ಮಾಡುತ್ತಿದ್ದ ಚಲವಾದಿ ಹೊಲೆಯರಿಗೆ ವಿಜಯನಗರ ಸಾಮ್ರಾಜ್ಯದ ಅರಸರು ಹಾಗೂ ಮೈಸೂರು ಸಂಸ್ಥಾನದ ಒಡೆಯರು ತಮ್ಮ ರಾಜ್ಯಗಳಲ್ಲಿ “ದೇಶಮುದ್ರೆ ಗಂಟೆಬಟ್ಟಲು” ಎಂಬ ವಿಶೇಷ ಲಾಂಛನಗಳನ್ನು ನೀಡಿದ್ದರು.
ಕಂಚಿನ ಲೋಹದ ಈ ಲಾಂಛನಗಳನ್ನು ತೋರಿಸಿ ಹದಿನೆಂಟು ಸಮುದಾಯಗಳ ಜನರಿಂದ ಜಮಾಬಂದಿ ಸುಂಕ ವಸೂಲು ಮಾಡುವ ಮತ್ತು ವಸೂಲಾದ ಸುಂಕವನ್ನು ಸರ್ಕಾರದ ಬೊಕ್ಕಸಕ್ಕೆ ತುಂಬುವ ಅಧಿಕಾರವನ್ನು ನೀಡಿದ್ದರು.
ಬಲಗೈಲಿ ಗಂಟೆ ಬಾರಿಸಿಕೊಂಡು ಶಬ್ದ ಮಾಡುತ್ತಾ ಎಡ ಭುಜದ ಮೇಲೆ ದೇಶಮುದ್ರೆಯ ದೊಡ್ಡ ಸೌಟು ಬಟ್ಟಲನ್ನು ಹೊತ್ತುಕೊಂಡು ಸಂತೆ, ಜಾತ್ರೆ, ಊರುಕೇರಿಗೆ ಸುಂಕ ವಸೂಲಾತಿಗಾಗಿ ಬರುತ್ತಿದ್ದ ಚಲವಾದಿ ಹೊಲೆಯರ ಕುಳವಾಡಿಗಳನ್ನು ರಾಜ ಮಹಾರಾಜರ ಅಧಿಕೃತ ವಕ್ತಾರರೆಂದು ತಿಳಿಯುತ್ತಿದ್ದ ಜನ ಆ ಕಾಲದಲ್ಲಿ ವಿಶೇಷ ಗೌರವ ಮರ‌್ಯಾದೆಗಳನ್ನು ನೀಡುತ್ತಿದ್ದರು. “ರಾಜಾ ಪ್ರತ್ಯಕ್ಷ ದೇವತಾ” ಎಂಬುವಂತೆ ದೇಶಮುದ್ರೆ ಗಂಟೆಬಟ್ಟಲುಗಳನ್ನು ಹೊರುವ ಚಲವಾದಿಗಳು ನೇರವಾಗಿ ರಾಜನ ವಕ್ತಾರರಾಗಿದ್ದರಿಂದ ಚಲವಾದಿಗಳಿಗೆ ಗೌರವ ಸಲ್ಲಿಸುವುದನ್ನು ರಾಜನಿಗೆ ತೋರಿಸುವ ಗೌರವವೆಂದೇ ತಿಳಿಯಲಾಗಿತ್ತು.
ಮೂರು ಅಡಿ ಉದ್ದ ಮತ್ತು ಅರ್ಧ ಅಡಿ ಅಗಲದ ಸಮತಟ್ಟು ಹಿಡಿಕೆಯುಳ್ಳ ಕಂಚಿನ ದೊಡ್ಡ ಕೈಬಟ್ಟಲು ಮತ್ತು ದೊಡ್ಡ ಗಂಟೆಯನ್ನು ಕಂಚಿನ ಸರಪಳಿಯಿಂದ ಬೆಸುಗೆ ಹಾಕಲಾಗಿರುತ್ತದೆ. ಹಿಡಿಯುದ್ದಕ್ಕೂ ಬಲಗೈ ಪಣಕಟ್ಟಿನ ಆಯಾ ಜಾತಿಗಳ ಹದಿನೆಂಟು ಕುಲಲಾಂಛನಗಳನ್ನು ಕೆತ್ತಿಸಲಾಗಿರುತ್ತದೆ. ಸೂರ್ಯ, ಚಂದ್ರ, ನಾಗ, ಲಿಂಗ, ಕತ್ತರಿ, ಸನಿಕೆ, ನವಿಲು, ಸಿಂಹ, ಆನೆ, ಅರಸ, ಕುದುರೆ ಮುಂತಾದ ಮುದ್ರೆಗಳ ಈ ಸೌಟನ್ನು ದೇಶಮುದ್ರೆ ಬಟ್ಟಲು ಎಂದು ಕರೆಯುತ್ತಾರೆ.
ಇವುಗಳನ್ನು ಘನಬಟ್ಟಲು, ಗಂಧಬಟ್ಟಲು, ಮುದ್ರಾಬಟ್ಟಲು ಮುಂತಾದ ಹೆಸರುಗಳಿಂದಲೂ ಕರೆಯುತ್ತಾರೆ. ಕೆಲವು ಬಟ್ಟಲುಗಳ ಮೇಲೆ ಚೌಕಾಕಾರದ ಮಂಟಪದಲ್ಲಿ ನಾಂಗ ಲಿಂಗ ರೂಪಗಳನ್ನು ಕೆತ್ತಿ ಎದುರಿಗೆ ಹೋರಿಯನ್ನು ಕೆತ್ತಲಾಗಿರುತ್ತದೆ. ಇದು ನೋಡಲು ಶಿವನ ದೇವಾಲಯದ ಗರ್ಭಗುಡಿಯನ್ನು ಹೋಲುತ್ತದೆ. ಕೆಲವು ಬಟ್ಟಲುಗಳ ಮೇಲೆ ಲಿಪಿ ಇದ್ದರೆ, ಕೆಲವು ಬಟ್ಟಲುಗಳ ಮೇಲೆ ಲಿಪಿ ಇರುವುದಿಲ್ಲ.
ಹೊಲೆಯ ಸಮುದಾಯದ ಆದಿಶೈವ ಚಲವಾದಿಗಳು ಮಾತ್ರ ಈ ದೇಶಮುದ್ರೆ ಬಟ್ಟಲು ಮತ್ತು ಗಂಟೆಯನ್ನು ಹೊರುವ ಹಕ್ಕುಳ್ಳವರಾಗಿದ್ದರೇ ಹೊರತು ರಾಮಾನುಜಾಚಾರ್ಯರ ವೈಷ್ಣವ ಪಂಥೀಯ ಹೊಲೆಯರಿಗೆ ಇಂತಹ ಹಕ್ಕುಬಾಧ್ಯತೆ ಅನುಕೂಲವಿರಲಿಲ್ಲ. ಪಲ್ಲವ, ಚಾಲುಕ್ಯ ಮತ್ತು ವಿಜಯನಗರ ಸಾಮ್ರಾಜ್ಯದ ಅರಸರು ಹಾಗೂ ಮೈಸೂರು ಸಂಸ್ಥಾನದ ಒಡೆಯರುಗಳು ಚಲವಾದಿಗಳಿಗೆ ಈ ಗಂಟೆಬಟ್ಟಲುಗಳನ್ನು ಕೊಟ್ಟು ರಾಜಕೀಯ- ಧಾರ್ಮಿಕ ಅಧಿಕಾರಗಳನ್ನು ನೀಡಿದ್ದರು.
ಊರಿನ ಮುಂದಾರದ ಜಗಲಿಕಟ್ಟೆ, ಸಂತೆಮಾಳ ಅಥವಾ ಮಾರುಕಟ್ಟೆ ಜಗಲಿಕಟ್ಟೆಯ ಮೇಲೆ ಗಂಟೆಬಟ್ಟಲುಗಳೊಂದಿಗೆ ಪಟ್ಟಾಂಗ ಹಾಕಿ ಕುಳಿತಿದ್ದ ಚಲವಾದಿಗೆ, ಊರಿನ ಜನ, ಅಂಗಡಿ ಮುಂಗಟ್ಟುಗಳ ವ್ಯಾಪಾರಿಗಳು ನೆಲಗಂದಾಯ, ತಲೆಗಂದಾಯ, ಸುಂಕ, ತೆರಿಗೆ ಇತ್ಯಾದಿ ಬಾಬ್ತುಗಳನ್ನು ತಂದೊಪ್ಪಿಸಿ ಶಾನುಭೋಗರ ಜಮಾಬಂದಿ ಪುಸ್ತಕದಲ್ಲಿ ದೇಕಿರೇಖಿ ಬರೆಸುವುದು ಕಡ್ಡಾಯವಾಗಿತ್ತು.
ಗಂಟೆಬಟ್ಟಲುಗಳಿಗೆ ಮತ್ತು ಈ ಅಧಿಕಾರ ಮುದ್ರೆ ಹೊತ್ತ ಚಲವಾದಿಗೆ ವಿಶೇಷ ಗೌರವ ಮರ್ಯಾದೆ ಹಾಗೂ ಕಾಣಿಕೆಗಳು ಸಲ್ಲುತ್ತಿದ್ದವು. ಸಂತೆಮಾಳದಲ್ಲಿ ಸಕಾಲಕ್ಕೆ ಸುಂಕ ತೆರಿಗೆ ತಂದೊಪ್ಪಿಸದ ಅಥವಾ ಕಾಣಿಕೆ ನೀಡದಿರುವ ವ್ಯಾಪಾರಿಗಳ ಅಂಗಡಿಗಳಿಂದ ಈ ಚಲವಾದಿಯು ತನ್ನ ಸೌಟಿನ ಪ್ರಮಾಣದಷ್ಟು ತನ್ನಿಷ್ಟದ ಸರಕುಗಳನ್ನು ತೆಗೆದುಕೊಳ್ಳುವ ಪ್ರಶ್ನಾತೀತ ಹಕ್ಕು ಪಡೆದವನಾಗಿದ್ದನು.
ಬಲಗೈ ಪಣಕಟ್ಟಿನ ಎಲ್ಲಾ ಹದಿನೆಂಟು ಜಾತಿಯವರು ತಮ್ಮ ಮನೆಗಳಲ್ಲಿ ನಡೆಯುವ ಮದುವೆ ಶೋಬನ ಜನನ ಋತುಮತಿ ಬಸುರಿಬಾಣ್ತಿ, ಹುಟ್ಟು ಕೂದಲು ಮಂಡೆಕ್ಷೌರ, ಗೃಹ ಪ್ರವೇಶ, ಮನೆದೇವರ ಪೂಜಾಕಾರ್ಯ, ಪರಿಶೆಪಾಢ್ಯ ಮುಂತಾದ ಸಮಯಗಳಲ್ಲಿ ಮಂಗಳವಾಗಲೆಂದು ಗಂಟೆಬಟ್ಟಲುಗಳ ಚಲವಾದಿಯನ್ನು ಕರೆಸಿಕೊಂಡು ಗಂಟೆಬಟ್ಟಲುಗಳಿಗೆ ಅಗ್ರಪೂಜೆ ಸಲ್ಲಿಸಿ ಚಲವಾದಿಗೆ ಅಗ್ರತಾಂಬೂಲ, ಕೊರಳಿಗೆ ಮಲ್ಲಿಗೆ ಹೂವಿನ ಹಾರ, ಹೊಸ ಬಟ್ಟೆ ಮುಂತಾದ ಕಾಣಿಕೆಗಳನ್ನು ಕೊಟ್ಟು “ಸುಬಸ್ತು” ಅನ್ನಿಸಿಕೊಂಡು ಸಕಲ ಮರ್ಯಾದೆ ಗೌರವಗಳಿಂದ ಬೀಳ್ಕೊಡುತ್ತಿದ್ದರು.
ಸಾವು ತಿಥಿ ಮುಂತಾದ ಸಮಯಗಳಲ್ಲಿಯೂ ಸೂತಕ ಕಳೆಯಲು ಚಲವಾದಿ ಗಂಟೆಬಟ್ಟಲುಗಳು ಬರಲೇಬೇಕಿತ್ತು. ಬಲಗೈ ಪಣಕಟ್ಟಿನ ಹದಿನೆಂಟು ಜಾತಿಗಳ ಮದುವೆ ದಿಬ್ಬಣದ ಮೆರವಣಿಗೆ, ರಾಜ ಮಂತ್ರಿ ಮಹೋದಯರ ಮೆರವಣಿಗೆ, ಯುದ್ಧ ಗೆದ್ದ ವಿಜಯೋತ್ಸವ, ಪಟ್ಟಾಭಿಷೇಕ, ಒಡ್ಡೋಲಗ ಮುಂತಾದ ಸಂದರ್ಭಗಳಲ್ಲಿ ದೇಶಮುದ್ರೆ ಗಂಟೆಬಟ್ಟಲುಗಳನ್ನು ಹೊತ್ತ ಚಲವಾದಿಯು ಮೊದಲ ಸ್ಥಾನದಲ್ಲಿ ನಿಲ್ಲಬೇಕಿತ್ತು.
ವೈಷ್ಣವ ಪಂಥೀಯರು ಯಾವ ಬಗೆಯಲ್ಲಿ ತಮ್ಮ ಮನೆಗಳ ಕಾರ್ಯಗಳಿಗೆ ಗರುಡಗಂಭದ ದಾಸಯ್ಯನನ್ನು ಕರೆಸಿಕೊಂಡು, ದಾಸಯ್ಯನು ಜಾಗಟೆ ಬಾರಿಸಿ ಬಾಂಕಿ ಅಥವಾ ಶಂಖ ಊದಿದ ಬಳಿಕ ಮಾತ್ರ ಶುಭವೆಂದು ತಿಳಿಯಲಾಗುತ್ತದೆಯೋ ಅದೇ ಬಗೆಯಲ್ಲಿ ಬಲಗೈ ಪಣಕಟ್ಟಿನ ಶೈವಾಚಾರದ ಹದಿನೆಂಟು ಕುಲದವರ ಮನೆಗಳಿಗೆ ಗಂಟೆಬಟ್ಟಲುಗಳನ್ನು ಹೊತ್ತ ಚಲವಾದಿಯು ಹೋಗಿ “ಸುಬಸ್ತು” ಎಂದಾಗ ಮಾತ್ರ ಶ್ರೇಯಸ್ಕರವೆಂಬ ನಂಬಿಕೆ ಇತ್ತು. ಗಂಟೆಬಟ್ಟಲುಗಳ ಚಲವಾದಿಯ ಗೈರುಹಾಜರಿಯನ್ನು ಅಮಂಗಳವೆಂದು ಪರಿಗಣಿಸಲಾಗುತ್ತಿತ್ತು.
ಗಂಡು ಮಕ್ಕಳಿಲ್ಲದ ಮನೆಗಳಲ್ಲಿ ಆ ಮನೆಯ ಹೆಣ್ಣುಮಕ್ಕಳು ದೇಶಮುದ್ರೆ ಗಂಟೆಬಟ್ಟಲುಗಳನ್ನು ಹೊರುತ್ತಾರೆ. ಸಾಮಾನ್ಯವಾಗಿ ಗಂಟೆ ಬಟ್ಟಲನ್ನು ಛಲವಾದಿ ಗಂಡಮಕ್ಕಳು ಅಥವಾ ಆ ಮನೆತನದ ಹಿರಿಯರು ಹೊರುತ್ತಾರೆ. ಕೆಲವು ಕಡೆಗಳಲ್ಲಿ ದೇವದಾಸಿ ತಾಯಂದಿರು ಕೂಡಾ ಹೊರುವ ಪದ್ಧತಿ ಇದೆ. ದೇಶಮುದ್ರೆ ಗಂಟೆಬಟ್ಟಲುಗಳನ್ನು ಹೊರುವ ಚಲವಾದಿಯು ಗುರು ಸ್ಥಾನವನ್ನು ಹೊಂದಿರುತ್ತಾನೆ.
ಚಲವಾದಿ ಗಂಟೆಬಟ್ಟಲುಗಳು ಕೇವಲ ಒಂದು ನಿರ್ದಿಷ್ಟ ಮನೆತನದ ಹಿರಿಯ ಮಗನಿಗೆ ಮಾತ್ರ ಸೀಮಿತವಾಗಿದ್ದದ್ದು ಕೂಡಾ ಈ ಸಂಪ್ರದಾಯದ ಅವನತಿಗೆ ಕಾರಣವಾಗಿರಬಹುದು . ಇದಕ್ಕಿಂತಲೂ ಹೆಚ್ಚಾಗಿ, ರಾಜಸತ್ತೆಯು ಕೊನೆಗೊಂಡ ಬಳಿಕ ಜಮಾಬಂದಿ ಸುಂಕ ವಸೂಲಾತಿಯ ಕೆಲಸಗಳಿಗೆ ಆಧುನಿಕ ಸರ್ಕಾರಗಳು ಕಂದಾಯ ಅಧಿಕಾರಿಗಳನ್ನು ನೇಮಿಸಿಕೊಳ್ಳತೊಡಗಿದ ಬಳಿಕ ಚಲವಾದಿಗಳ ಗಂಟೆಬಟ್ಟಲುಗಳು ಮಹತ್ವ ಕಳೆದುಕೊಂಡವು.
ವಿಶೇಷ ರಾಜಮರ್ಯಾದೆಗೆ ಪಾತ್ರರಾಗಿದ್ದ ಗಂಟೆಬಟ್ಟಲುಗಳ ಚಲವಾದಿಗಳು ತಮಗಿದ್ದ ಸ್ಥಾನದ ಕಿಮ್ಮತ್ತು ಕಳೆದುಕೊಂಡರು. ಗಂಟೆಬಟ್ಟಲುಗಳು ಪೂಜಾಪಟಗಳ ಮುಂದಿಡುವ ಪೂಜಾರ್ಹ ವಸ್ತುಗಳಾಗಿ ಉಳಿದುಹೋದವು. ಕೆಲವರು ತಮ್ಮ ಮನೆಗಳಲ್ಲಿದ್ದ ಗಂಟೆಬಟ್ಟಲುಗಳನ್ನು ಲಿಂಗಾಯತ / ವೀರಶೈವ ಮಠಗಳಿಗೋ, ಗುಡಿಗಳಿಗೋ, ಮ್ಯೂಸಿಯಂಗಳಿಗೋ ಅಥವಾ ಪಾತ್ರೆ ಮಾರಾಟ ಮಾಡುತ್ತಿದ್ದ ಚಿಟುಗರಿಗೋ ಕೊಟ್ಟು ಕಳೆದುಕೊಂಡರು.
ಡಾ.ವಡ್ಡಗೆರೆ ನಾಗರಾಜಯ್ಯ.
8722724174.
“ಕರ್ನಾಟಕದ ಚಲವಾದಿ ಗಂಟೆಬಟ್ಟಲುಗಳ ಅಧ್ಯಯನ” ಎಂಬ ಸಂಶೋಧನಾ ಕೃತಿಯನ್ನು ಮಾಳವ ಮುನಿರಾಜು, ಮಾಳವ ಮಂಜುನಾಥ್, ಮಾಳವ ಗೌತಮ್ ಅವರು ಬರೆದು ಪ್ರಕಟಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಎಂ.ನಂಜುಂಡಸ್ವಾಮಿ IPS ಅವರ ಮುನ್ನುಡಿಯಿರುವ ಈ ಕೃತಿಯ ಪ್ರತಿಗಳಿಗಾಗಿ ಸಂಪರ್ಕಿಸಿರಿ Malava ಮಾಳವ ಮುನಿರಾಜು ಮೊ.ನಂ. 7337750548.