• Sat. Mar 2nd, 2024

PLACE YOUR AD HERE AT LOWEST PRICE

ಕೋಲಾರ: ಕೊಲೆ ಆರೋಪಿ ಹತ್ಯೆಗೆ ಯತ್ನ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣದಲ್ಲಿ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ನಂಬಿಹಳ್ಳಿ ಗ್ರಾಮದ ಸಾವಿರಕ್ಕೂ ಅಧಿಕ ಜನರ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಕಳೆದ ಸೆ.12ರಂದು ಪತ್ನಿಯನ್ನು ಕೊಲೆ ಮಾಡಿದ್ದ ಆರೋಪಿ ನಾಗೇಶ್‌ ಅಡಗಿದ್ದ ಸಣ್ಣ ಹೋಟೆಲ್‌ ಕೊಠಡಿ ಮೇಲೆ ದಾಳಿ ನಡೆಸಿದ್ದ ಗ್ರಾಮಸ್ಥರು, ಪೊಲೀಸರ ಕರ್ತವ್ಯಕ್ಕೂ ಅಡ್ಡಿ ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ಠಾಣೆ ಪಿಎಸ್‌ಐ ಈಶ್ವರಪ್ಪ ದೂರು ದಾಖಲಿಸಿದ್ದರು. ಬಂಧನ ಭೀತಿಯಿಂದ ಗ್ರಾಮದ ಹಲವರು ತಲೆಮರೆಸಿಕೊಂಡಿದ್ದಾರೆ.

ದೂರಿನಲ್ಲಿ  ಶ್ರೀನಿವಾಸಪುರ ಪಟ್ಟಣದ ಕುರಿ ವ್ಯಾಪಾರಿ‌, ಗ್ರಾಮದ ನಾಗೇಶ್ ಎಂಬಾತ ಮಚ್ಚಿನಿಂದ ಮೊದಲ ಪತ್ನಿ ರಾಧಾ, ಮಾವ ಮುನಿಯಪ್ಪ, ಪತ್ನಿ ಸಂಬಂಧಿಕರಾದ ವರುಣ್‌ ಹಾಗೂ ಅನುಷಾ ಎಂಬುವರ ಮೇಲೆ ಮಟನ್‌ ಕತ್ತರಿಸಲು ಬಳಸುತ್ತಿದ್ದ ಮಚ್ಚಿನಿಂದ ಹಲ್ಲೆ ಮಾಡಿ ಹೋಟೆಲ್‌ ಕೊಠಡಿಯಲ್ಲಿ ಅವಿತುಕೊಂಡಿದ್ದ. ರಾಧಾ ಸ್ಥಳದಲ್ಲೇ ಮೃತಪಟ್ಟಿದ್ದರು. ರೊಚ್ಚಿಗೆದ್ದ ನಂಬಿಹಳ್ಳಿ ಸಾವಿರಕ್ಕೂ ಅಧಿಕ ಗ್ರಾಮಸ್ಥರು ದೊಣ್ಣೆ, ಕಲ್ಲು ಹಿಡಿದು ಆರೋಪಿಯನ್ನು ಹೊಡೆದು ಸಾಯಿಸಲು ಮುಂದಾದರು. ಆಗ ನಾಗೇಶ್‌, ಅಡುಗೆ ಅನಿಲ ಸಿಲಿಂಡರ್‌ ತೋರಿಸಿ ಒಳಕ್ಕೆ ಬಂದರೆ ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದ. ಆಗ ಗ್ರಾಮಸ್ಥರು ಕಲ್ಲು ತೂರಿದರು. ಅಡುಗೆ ಅನಿಲ ಸಿಲಿಂಡರ್‌ ತಂದು ಸ್ಫೋಟಿಸುವುದಾಗಿ ಹೇಳಿ ಆತಂಕ ಸೃಷ್ಟಿಸಿದರು. ವ್ಯಕ್ತಿಯೊಬ್ಬ ಪೆಟ್ರೋಲ್‌ ಎರಚಿ ಬೆಂಕಿ ಹಾಕಲು ಮುಂದಾದಾಗ ಪೊಲೀಸರು ಆತನನ್ನು ತಡೆದರು’ ಎಂದು ಪಿಎಸ್‌ಐ ಈಶ್ವರಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

FIR NAMBI HALLY-01 (2)

ಅಂದಿನ ಘಟನೆ ಕುರಿತು ಮಾಹಿತಿ ನೀಡಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ, ‘ಮುಳಬಾಗಿಲು ಡಿವೈಎಸ್ಪಿ ಸೇರಿದಂತೆ ಪೊಲೀಸರು ಸಾರ್ವಜನಿಕರಿಗೆ ತಿಳಿ ಹೇಳಿದರೂ ‌ಕೇಳಲಿಲ್ಲ. ನಾನೂ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸಿದೆ. ಮೊದಲ ಬಾರಿ ಎಚ್ಚರಿಕೆ ನೀಡಿದೆವು. ಲಾಠಿ ಪ್ರಹಾರ ಮಾಡಿದರೂ ಸುಮ್ಮನಾಗಲಿಲ್ಲ. ಪರಿಸ್ಥಿತಿ ಹತೋಟಿಗೆ ತರಲು ಟಿಯರ್‌ ಗ್ಯಾಸ್‌ ಸಿಡಿಸಿದೆವು. ಏಳು ಸುತ್ತು ಅಶ್ರುವಾಯು ಸಿಡಿಸಿದರೂ ಕೇಳಲಿಲ್ಲ. ಒಂದು ಸುತ್ತು ರಬ್ಬರ್‌ ಬುಲೆಟ್‌ ಹಾರಿಸಿದೆವು. ಆಗ ವಿಧಿ ಇಲ್ಲದೆ ಐದು ಸುತ್ತು ಗುಂಡನ್ನು ಗಾಳಿಯಲ್ಲಿ ಹಾರಿಸಿದೆವು. ಆಗ ಜನರು ಚದುರಿದರು. ಈ ಸಂಬಂಧ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾಗಿದೆ. ಅವಿತುಕೊಂಡಿದ್ದ ಆರೋಪಿ ನಾಗೇಶ್‌ ಪೊಲೀಸರ ಮೇಲೆ ಮಚ್ಚಿನಿಂದ ‌ಹಲ್ಲೆ ಮಾಡಿದ್ದರಿಂದ ಸ್ವಯಂರಕ್ಷಣೆಗಾಗಿ ಆತನ ಮೇಲೆ ಗುಂಡು ಹಾರಿಸಿದ್ದೆವು. ಕುಸಿದ ಬಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದೆವು. ತನಿಖೆ ಮುಂದುವರಿದಿದೆ’ ಎಂದಿದ್ದರು

Leave a Reply

Your email address will not be published. Required fields are marked *

You missed

error: Content is protected !!