• Thu. Sep 28th, 2023

ಸೆ.೧೭ರ೦ದು ನುಡಿಗಾರರಿಗೆ ಗೌರವ ಸಮರ್ಪಿಸುವ ನುಡಿ ಹಬ್ಬ ಕ್ರಾಂತಿಕಾರಿ ಕವಿ ಗದ್ದರ್ ನುಡಿನಮನ ಮತ್ತು ದ್ರಾವಿಡದಾತ ಪೆರಿಯಾರ್ ಜನ್ಮದಿನ

PLACE YOUR AD HERE AT LOWEST PRICE

ಕೋಲಾರ: ನುಡಿಗಾರರಿಗೆ ಗೌರವ ಸಮರ್ಪಿಸುವ ನುಡಿ ಹಬ್ಬವಾಗಿ ಕ್ರಾಂತಿಕಾರಿ ಕವಿ ಗದ್ದರ್ ಗೆ ನುಡಿನಮನ ಮತ್ತು ದ್ರಾವಿಡದಾತ ತಂದೆ ಪೆರಿಯಾರ್ ಜನ್ಮದಿನವನ್ನು ಸೆ.೧೭ರ ರವಿವಾರ ಬೆಳಗ್ಗೆ ೧೧.೩೦ಕ್ಕೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದು, ಜಿಲ್ಲೆಯ ಸಮಸ್ತ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಮಾಜ ಚಿಂತಕ ಹಾಗೂ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮನವಿ ಮಾಡಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ನುಡಿನಮನ ಕಾರ್ಯಕ್ರಮ ಪ್ರತಿ ಕುಟುಂಬದವರು ನೋಡಲೇಬೇಕಾದ ಸುಸಂಸ್ಕೃತವಾದ ನುಡಿಗಾರರಿಗೆ ಗೌರವವನ್ನು ಸಮರ್ಪಿಸುವಂತ ನುಡಿ ಹಬ್ಬವಾಗಿದೆ ಎಂದು ಅಭಿಪ್ರಾಯಪಟ್ಟರು.

ಗದ್ದರ್ ರವರು ಹಾಡಿನ ಆದಿದಾತ, ನುಡಿಕಾರ, ನಡೆಗಾರ. ದಮನಿತರ ಜೀವನಾಡಿಯಾಗಿದ್ದು ನಮ್ಮನ್ನಗಲಿದ್ದಾರೆ. ಹಾಡೇ ತನ್ನ ಬದುಕಾಗಿಸಿಕೊಂಡ ಏಕಾಂಗಿ ಸಾಂಸ್ಕೃತಿಕ ಸೇನಾನಿಯಾಗಿ ಸುಮಾರು ಅರ್ಧ ಶತಮಾನದ ಕಾಲ ಶೋಷಿತರ ದಮನಿತರ ಪ್ರತಿರೋಧದ ಕಿಚ್ಚು ಅರದಂತೆ ಹಾಡುತ್ತಾ ಬರೆಯುತ್ತಾ, ಹೋರಾಟದ ಮಹಾ ನದಿಯಾಗಿದ್ದರು. ಇಂತಹ ಸಮರ್ಪಣಾ ಮನೋಭಾವದ ಗದ್ದರ್‌ಗೊಂದು ಹನಿಕಂಬನಿ ಮೀಡಿಯುವುದೇ ಸೆ.೧೭ರ ಕಾರ್ಯಕ್ರಮವಾಗಿದೆ ಎಂದರು .

ಈ ಕಾರ್ಯಕ್ರಮ ಕರ್ನಾಟಕದ ಹೆಸರಾಂತ ಜಾನಪದ ಕಲಾವಿದ ಪಿಚ್ಚಳ್ಳಿ ಶ್ರೀನಿವಾಸ್‌ರ ನೇತೃತ್ವದಲ್ಲಿ ಗದ್ದರ್ ವೇಷ ಭೂಷಣಗಳನ್ನು ಧರಿಸಿದ ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಅನೇಕ ಕಲಾ ಮಂಡಳಿ ತಂಡಗಳು ಕ್ರಾಂತಿಕಾರಿ ಹಾಡುಗಳಿಂದ ನಿಮ್ಮನ್ನು ರೋಮಾಂಚನಗೊಳಿಸಲಿದ್ದಾರೆ ಎಂದು ತಿಳಿಸಿದರು.

ನಮ್ಮ ನೆಲಕ್ಕೆ ಕಾಲುಗಳ ಬರವಣಿಗೆ ಬರೆದವರು ನೂರಾರು ಹಾಡುಗಾರರ ಬಾಯಿಗೆ ಹಾಡಿನ ಎದೆಹಾಲು ಗುಟುಕು ಕೊಟ್ಟವರು ಗದ್ದರ್‌ರಿಗೆ ಕೋಲಾರಕ್ಕೂ ಅವಿನಾಭಾವ ನಂಟು ಇತ್ತು ಎಂದು ನೆನಪಿಸಿದ ಅವರು ಇಂದು ಸಾಂಸ್ಕೃತಿಕ ಗುಲಮಾಗಿರಿ ಸನಾತನ ಚರ್ಚೆಗಳು ಆಗುತ್ತಿರುವುದು ಆತಂಕಕಾರಿಯ ಪರಮಾವಧಿಯಾಗಿದೆ. ಮುಂದಿನ ಪೀಳಿಗೆಗಳಿಗೆ ಇಂತಹ ವಿಷಯಗಳ ಕುರಿತು ಜ್ಞಾನೋದಯದ ಅರಿವು ಮೂಡಿಸಲು ಈ ಕಾರ್ಯಕ್ರಮವು ಸಂಗಮ ಬಿಂದುವಾಗಿದೆ ಎಂದರು.

ಇದರ ಜೂತೆಯಲ್ಲಿ ದ್ರಾವಿಡದಾತ ಪೆರಿಯಾರ್ ಜನ್ಮದಿನವೂ ಇದೇ ದಿನವಾಗಿದ್ದು, ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಬರಹಗಾರರು, ಹಾಡುಗಾರರು, ಒಡನಾಡಿಗಳು ಒಂದಾಗಿ ಜೊತೆಗೂಡಿ ನಾಡಿನಾದ್ಯಂತ ನಡೆದಿರುವ ನೂರಾರು ನುಡಿನಮನಗಳ ಸಾಲಿಗೆ ನಮ್ಮದೂ ಒಂದು ಹನಿ ಕಂಬನಿ ಅರ್ಪಿಸುವ ಮೂಲಕ ನೆನಪಿನ ಜ್ಯೋತಿ ಬೆಳಗೋಣ ಎಂದು ಕರೆ ನೀಡಿದರು.

ಹಿರಿಯ ದಸಂಸ ಚಾಲನಾ ಸಮಿತಿ ಮುಖಂಡ ಎನ್.ವೆಂಕಟೇಶ್ ಮಾತನಾಡಿ, ತಮಿಳುನಾಡಿನ ದ್ರಾವಿಡ ಚಳವಳಿಯ ಮುನ್ನಡೆಯ ಮೂಲಕ ಶೋಷಿತರನ್ನು ದಮನಿತರನ್ನು ಸಂಘಟಿಸಿದ ಗದ್ದರ್ ೧೯೭೦-೮೦ರ ದಶಕದಲ್ಲಿಯೇ ವಿದ್ಯಾರ್ಥಿ ದೆಸೆಯಲ್ಲಿ ಸಂಘಟನೆಯ ಚತುರತೆ ಹೊಂದಿದ್ದರು, ಕೋಲಾರದಲ್ಲಿ ದಲಿತರ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ಅವರ ಪಾತ್ರವು ಪ್ರಮುಖವಾಗಿತ್ತು, ಅವರ ಕ್ರಾಂತಿಕಾರಿ ಹಾಡುಗಳಿಂದಲೇ ದಮನಿತರಿಗೆ ಶಕ್ತಿ, ಚೈತನ್ಯ, ಧೈರ್ಯ ಸ್ಥೆರ್ಯ ತುಂಬುತ್ತಿದ್ದರು, ಅವರ ತೆಲುಗು ಭಾಷೆಯ ಹಾಡುಗಳನ್ನು ಕೋಟಿಗಾನಹಳ್ಳಿ ರಾಮಯ್ಯನವರು ಕನ್ನಡಕ್ಕೆ ತರ್ಜುಮೆ ಮಾಡುತ್ತಿದ್ದರು ಎಂದು ನೆನಪಿಸಿದ ಅವರು, ಹೈದರಾಬಾದಿನ ಪ್ರಜಾನಾಯಕಿ ಅರುಣೋದಯ ಸಂಘದ ವಿಮಲಕ್ಕ ಹಾಗೂ ಜಾನಪದ ಗಾಯನದ ಗಾರುಡಿಗ ಡಾ.ಬಾನಂದೂರು ಕೆಂಪಯ್ಯ ಹಾಗೂ ಸುಮಾರು ೧೨ ಕಲಾತಂಡಗಳು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ ಎಂದರು.

ದ್ರಾವಿಡ ಆಸ್ಮಿತೆ ಕುರಿತು ಸಾಹಿತಿ ಲಕ್ಷ್ಮಿಪತಿ ಕೋಲಾರ, ದಲಿತ ಸಂಘರ್ಷ ಸಮಿತಿಯ ಮರುಹುಟ್ಟಿಗೆ ಕಿವಿ ಮಾತುಗಳು ಕುರಿತು ಡಾ.ಸಿ.ಎಂ.ಮುನಿಯಪ್ಪ , ನಾನು ಹಾಡುಗಳ ಮೂಲಕ ಗದ್ದರ್ ಅವರನ್ನು ನಡೆಸಿದೆ ಎಂದು ಎನ್. ಮುನಿಸ್ವಾಮಿ, ನಾನು ಕವಿ ಮತ್ತು ಕಲಾವಿದನಾಗಲು ಗದ್ದರ್ ಪ್ರಭಾವ ಕುರಿತು ಪ್ರಜಾಕವಿ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಎನ್.ಮುನಿಸ್ವಾಮಿ, ಕದಸಂಸ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್, ದಸಂಸ ಜಿಲ್ಲಾ ಸಂಚಾಲಕ ಹಾರೋಹಳ್ಳಿ ರವಿ, ಗಮನ ಶಾಂತಮ್ಮ, ಕಲಾವಿದ ಈನೆಲ-ಈಜಲ ವೆಂಕಟಾಚಲಪತಿ, ರೈತ ಮುಖಂಡ ಕುವೆಂಪುನಗರ ಆನಂದ್ , ಹಿರೇಕರಪನಹಳ್ಳಿ ಯಲ್ಲಪ್ಪ ಇದ್ದರು.

Leave a Reply

Your email address will not be published. Required fields are marked *

error: Content is protected !!