• Thu. Sep 28th, 2023

PLACE YOUR AD HERE AT LOWEST PRICE

ತೆಲುಗು ಸಿನಿಮಾ ನಿರ್ದೇಶಕ ತೇಜಾ ಇತ್ತೀಚೆಗೆ ಯೂ ಟ್ಯೂಬ್ ಸಂದರ್ಶನವೊಂದರಲ್ಲಿ ಒಂದು ಮಾತು ಹೇಳಿದ್ದಾರೆ; ‘ಸಿನಿಮಾ ಸಾಯುತ್ತಿರುವುದು ಒಟಿಟಿಯಿಂದ ಅಥವಾ ಟಿವಿಯಿಂದ ಅಲ್ಲ. ಪಾಪ್‌ಕಾರ್ನ್‌ನಿಂದ. ಪಾಪ್‌ಕಾರ್ನ್, ಕೋಕ್ ಬೆಲೆ ಮಲ್ಟಿಫ್ಲೆಕ್ಸ್‌ ಗಳಲ್ಲಿ ಸಿನಿಮಾಗಳನ್ನು ಸಾಯಿಸುತ್ತಿದೆ’ ಎನ್ನುವುದು ಅವರ ಅನಿಸಿಕೆ. ‘ಹಾಗಾಗಿ ಆದಷ್ಟೂ ಸಿಂಗಲ್ ಸ್ಕ್ರೀನ್‌ನಲ್ಲಿ ಸಿನಿಮಾಗಳನ್ನು ನೋಡಿ’ ಎನ್ನುವುದು ಅವರ ಸಲಹೆ.

ತಕ್ಷಣ ನಂಬುವುದಕ್ಕೆ ಕೊಂಚ ಕಷ್ಟವೆನಿಸಿದರೂ ತೇಜಾ ಮಾತಿನಲ್ಲಿ ಸತ್ಯಾಂಶವಿದೆ. ಸಮೋಸ, ಪಾಪ್‌ಕಾರ್ನ್ ತಿನ್ನುತ್ತಾ, ಕೋಕ್ ಕುಡಿಯುತ್ತಾ ಸಿನಿಮಾ ನೋಡುವುದು ಬಹುತೇಕ ಪ್ರೇಕ್ಷಕರಿಗೆ ರೂಢಿ. ಅದು ಅವರ ಸಿನಿಮಾ ಅನುಭವದ ಒಂದು ಅವಿಭಾಜ್ಯ ಅಂಗ. ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಮಲ್ಟಿಫ್ಲೆಕ್ಸ್‌ ಗಳು ತಿಂಡಿ ತಿನಿಸು ಪಾನೀಯಗಳಿಗೆ (ಫುಡ್ ಅಂಡ್ ಬೆವರೇಜಸ್‌) ಅತ್ಯಂತ ದುಬಾರಿ ಬೆಲೆ ವಿಧಿಸುವ ಮೂಲಕ ಜನರನ್ನು ಸುಲಿಯುತ್ತಿವೆ. ಮಲ್ಟಿಫ್ಲೆಕ್ಸ್‌ ಗಳಲ್ಲಿ ಸಿನಿಮಾ ಟಿಕೆಟ್‌ಗೆ 200 ರೂಪಾಯಿ ಖರ್ಚು ಮಾಡಿದರೆ, ಸ್ನಾಕ್ಸ್ ಮತ್ತು ಬೆವರೇಜಸ್‌ಗೆ 500ರಿಂದ 600 ರೂಪಾಯಿ ಖರ್ಚು ಮಾಡಬೇಕಾದ ಸಂದರ್ಭ ಇದೆ. ಗಂಡ ಹೆಂಡತಿ, ಇಬ್ಬರು ಮಕ್ಕಳ ಕುಟುಂಬ ಒಮ್ಮೆ ಸಿನಿಮಾ ನೋಡಲು 1500ರಿಂದ 2000 ರೂಪಾಯಿವರೆಗೆ ಖರ್ಚು ಮಾಡಬೇಕಾಗಿದೆ.

ಇತ್ತೀಚೆಗೆ ಕೇಂದ್ರ ಸರ್ಕಾರವು ಥಿಯೇಟರ್‌ನಲ್ಲಿನ ತಿನಿಸುಗಳ ಮೇಲಿನ ಜಿಎಸ್‌ಟಿ ಅನ್ನು ಶೇ.18ರಿಂದ ಶೇ.5ಕ್ಕೆ ಇಳಿಸಿದೆ. ಆದರೂ ಚಿತ್ರಮಂದಿರಗಳ ತಿನಿಸುಗಳಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ. ಬಹಳಷ್ಟು ಹೋರಾಟದ ನಂತರ ಸಿನಿಮಾ ಟಿಕೆಟ್ ದರಗಳಲ್ಲಿ ಒಂದು ಮಟ್ಟದ ಏಕರೂಪತೆಯನ್ನು ಸಾಧಿಸಲಾಗಿದೆ. ಟಿಕೆಟ್ ಬೆಲೆಯನ್ನು ಥಿಯೇಟರ್‌ಗಳವರು ಬೇಕಾಬಿಟ್ಟಿ ಹೆಚ್ಚಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಅವರು ಫುಡ್ ಮತ್ತು ಬೆವರೇಜಸ್ ಬೆಲೆಯನ್ನು ಮನಸೋ ಇಚ್ಛೆ ಹೆಚ್ಚಿಸುತ್ತಾರೆ. ಅದೇ ಅವರಿಗೆ ಆದಾಯದ ಮುಖ್ಯ ಮೂಲವಾಗಿದೆ.

ಪಿವಿಆರ್‌ನಲ್ಲಿ ಫುಡ್ ಅಂಡ್ ಬೆವರೇಜಸ್ ಉದ್ಯಮದ ವಹಿವಾಟು 1500 ಕೋಟಿ ಎಂದು ಪಿವಿಆರ್ ಎಂಡಿ ಅಜಯ್ ಬಿಜ್ಲಿ ಹಿಂದೊಮ್ಮೆ ಹೇಳಿದ್ದರು. ‘ಗುಣಮಟ್ಟ ಚೆನ್ನಾಗಿದ್ದಾಗ ದುಬಾರಿಯಾಗುವುದು ಸಹಜ. ಜನ ಎಲ್ಲಿಯವರೆಗೆ ನಮ್ಮ ಸೇವೆಯಿಂದ ಖುಷಿಯಾಗಿರುತ್ತಾರೋ ಅಲ್ಲಿಯವರೆಗೆ ಅವರು ದುಬಾರಿ ಹಣದ ಬಗ್ಗೆ ದೂರುವುದಿಲ್ಲ’ ಎಂದು ಹೇಳಿಕೊಂಡಿದ್ದರು ಅವರು. ಆದರೆ, ಅವರು ಹೇಳಿದಂತೆ ಸುಮ್ಮನಿರಲಿಲ್ಲ. ಥಿಯೇಟರ್‌ಗಳಲ್ಲಿ ತಿಂಡಿ ಪಾನೀಯಗಳ ಬೆಲೆ ವಿಪರೀತ ಹೆಚ್ಚು. ವೀಕ್ಷಕರಿಗೆ ಹೊರಗಿನಿಂದ ತಿಂಡಿ ಪಾನೀಯ ಒಯ್ಯಲು ಅನುಮತಿ ನೀಡಬೇಕು ಎನ್ನುವ ವಿಚಾರ ಕೋರ್ಟ್ ಮೆಟ್ಟಿಲು ಏರಿತ್ತು.

 

2018ರಲ್ಲಿ ಜಮ್ಮು ಕಾಶ್ಮೀರದ ಹೈಕೋರ್ಟ್, ಸಿನಿಮಾ ವೀಕ್ಷಕರು ಹೊರಗಿನಿಂದ ತಂದ ಆಹಾರವನ್ನು ಮಲ್ಟಿಫ್ಲೆಕ್ಸ್‌ಗಳು ನಿಷೇಧಿಸುವಂತಿಲ್ಲ ಎಂದು ಆದೇಶ ಹೊರಡಿಸಿತ್ತು. ಆದರೆ, ಸುಪ್ರೀಂಕೋರ್ಟ್ ಅದಕ್ಕೆ ವ್ಯತಿರಿಕ್ತ ತೀರ್ಪು ನೀಡಿತು; ‘ಚಲನಚಿತ್ರ ವೀಕ್ಷಕರು ಯಾವುದೇ ಚಿತ್ರಮಂದಿರದ ಟಿಕೆಟ್ ಖರೀದಿಸಿದ ತಕ್ಷಣ ಚಿತ್ರಮಂದಿರದೊಳಗೆ ಕರಾರಿಗೆ ಒಳಗಾಗುತ್ತಾರೆ. ಅದಕ್ಕೆ ತಕ್ಕಂತೆಯೇ ಅವರು ವರ್ತಿಸಬೇಕಾಗುತ್ತದೆ. ಪ್ರೇಕ್ಷಕರು ಹೊರಗಿನಿಂದ ತಿಂಡಿ ಪಾನೀಯಗಳನ್ನು ತರದಂತೆ ನಿರ್ಬಂಧಿಸುವ ಹಕ್ಕು ಥಿಯೇಟರ್ ಮಾಲೀಕರಿಗೆ ಇದೆ. ಚಿತ್ರಮಂದಿರದವರು ನೀಡುವ ಟಿಕೆಟ್ ಮೇಲೆ ಹೊರಗಿನ ಆಹಾರವನ್ನು ನಿಷೇಧಿಸಲಾಗಿದೆ ಎಂಬ ಸೂಚನೆ ಇಲ್ಲದಿದ್ದರೆ ಪ್ರೇಕ್ಷಕರು ಆಹಾರವನ್ನು ಕೊಂಡೊಯ್ಯಬಹುದಾಗಿದೆ’ ಎಂದಿತ್ತು ಸುಪ್ರೀಂ ಕೋರ್ಟ್.

ಕೊರೊನಾ ನಂತರ ಹೆಚ್ಚು ಜನ ಒಟಿಟಿಗಳಲ್ಲೇ ಸಿನಿಮಾಗಳನ್ನು ನೋಡತೊಡಗಿದ್ದಾರೆ. ಇದು ಥಿಯೇಟರ್‌ಗಳ ಸಂಪಾದನೆಗೆ ಹೊಡೆತ ನೀಡಿವೆ. ಅದರಲ್ಲೂ ಮಲ್ಟಿಫ್ಲೆಕ್ಸ್‌ಗಳಿಗೆ ಹೋದರೆ, ಪಾರ್ಕಿಂಗ್‌ನಿಂದ ಆರಂಭಿಸಿ, ತಿನಿಸು, ಡ್ರಿಂಕ್ ಎಲ್ಲದಕ್ಕೂ ದುಬಾರಿ ದರ ತೆರಬೇಕು. ಅದರ ಸಹವಾಸವೇ ಬೇಡ ಎಂದುಕೊಂಡರೋ ಏನೋ ಜನ. ಇದರಿಂದಾಗಿ ಏಕಪರದೆ ಥಿಯೇಟರ್‌ಗಳಿಗೆ, ಮಲ್ಟಿಫ್ಲೆಕ್ಸ್‌ಗಳಿಗೆ ಭಾರಿ ನಷ್ಟವೊದಗಿತು. ಕೊರೊನಾ ಮೊದಲ ಮತ್ತು ಎರಡನೆಯ ಅಲೆಯ ನಂತರ ಭಾರತದಾದ್ಯಂತ ಸುಮಾರು 2000 ಏಕಪರದೆ ಚಿತ್ರಮಂದಿರಗಳು ಬಾಗಿಲು ಮುಚ್ಚಿದವು. ಪಿವಿಆರ್ ಮತ್ತು ಐನಾಕ್ಸ್ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದವು.

ಇತ್ತೀಚೆಗೆ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಮಲ್ಟಿಫ್ಲೆಕ್ಸ್‌ಗಳಲ್ಲಿ ತಿಂಡಿ ತಿನಿಸು ಹಾಗೂ ಪಾನೀಯಗಳ ಬೆಲೆಗಳ ಬಗ್ಗೆ ಮಾಡಿದ್ದ ಟ್ವೀಟ್ ವೈರಲ್ ಆಗಿತ್ತು. ‘55 ಗ್ರಾಂ ಚೀಸ್ ಪಾಪ್‌ಕಾರ್ನ್‌ಗೆ, 600 ಎಂಎಲ್‌ ಪೆಪ್ಸಿಗೆ ಕೊಡುವ ಹಣ ಪ್ರೈಮ್ ವಿಡಿಯೋದ ಒಂದು ವರ್ಷದ ಚಂದಾ ಮೊತ್ತಕ್ಕೆ ಸಮನಾಗುತ್ತದೆ. ಜನ ಸಿನಿಮಾ ವೀಕ್ಷಿಸಲು ಚಿತ್ರಮಂದಿರಗಳಿಗೆ ಹೋಗದೇ ಇರುವುದರಲ್ಲಿ ಆಶ್ಚರ್ಯ ಏನೂ ಇಲ್ಲ’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು. ಅದರ ನಂತರ, 2023ರ ಜುಲೈನಲ್ಲಿ ಪಿವಿಆರ್ ಮತ್ತು ಐನಾಕ್ಸ್ ಸೋಮವಾರದಿಂದ ಗುರುವಾರದವರೆಗೆ, ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಫುಡ್ ಅಂಡ್ ಬೆವರೇಜಸ್ ಬೆಲೆಯಲ್ಲಿ ಶೇ.40ರವರೆಗೆ ಕಡಿತ ಮಾಡಿತ್ತು. ಆದರೂ ನಷ್ಟದಿಂದ ಪಾರಾಗಲು ಕೊನೆಗೆ ಪಿವಿಆರ್ ಮತ್ತು ಐನಾಕ್ಸ್ ವಿಲೀನ ಆಗಬೇಕಾಗಿ ಬಂತು.

Leave a Reply

Your email address will not be published. Required fields are marked *

error: Content is protected !!