• Wed. Nov 29th, 2023

PLACE YOUR AD HERE AT LOWEST PRICE

ಇತ್ತೀಚೆಗೆ ಬಿಡುಗಡೆಯಾಗಿ ವಿಶ್ವದಾದ್ಯಂತ ನೂರಾರು ಕೋಟಿ ಕಲೆಕ್ಷನ್ ಮಾಡಿರುವ ರಜನಿಕಾಂತ್ ಅಭಿನಯದ ಜೈಲರ್ ಕರ್ನಾಟಕದಲ್ಲೂ ಸಕತ್ ಕಮಾಲ್ ಮಾಡಿದೆ. ಆದರೆ, ಈಗ ಕಾವೇರಿ ವಿಚಾರದಲ್ಲಿ ಅದೇ ದೊಡ್ಡ ವಿವಾದವಾಗಿ ಪರಿಣಮಿಸಿದೆ. ರಜನಿಕಾಂತ್ ಅವರನ್ನು ನಟ ದರ್ಶನ್ ಪರೋಕ್ಷವಾಗಿ ಕಾಲೆಳೆದಿದ್ದರು. ಈಗ ಹೋರಾಟಗಾರ ವಾಟಾಳ್ ನಾಗರಾಜ್ ಬಹಿರಂಗವಾಗಿ ವಾರ್ನಿಂಗ್ ನೀಡಿದ್ದಾರೆ.

ಕರ್ನಾಟಕದಲ್ಲಿ ಕಾವೇರಿ ಕಿಚ್ಚು ಜೋರಾಗಿದ್ದು. ಕಾವೇರಿ ನಮ್ಮದು ಎಂದು ಬೆಂಗಳೂರು ಬಂದ್ ನಡೆಸಲಾಗಿದೆ. ಇದರ ಜೊತೆಗೆ ಶುಕ್ರವಾರ (ಸೆಪ್ಟೆಂಬರ್ 29) ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಕಾವೇರಿ ಹೋರಾಟಕ್ಕೆ ನಾಡಿನಾದ್ಯಂತ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು, ಚಿತ್ರರಂಗ ಕೂಡ ಸಂಪೂರ್ಣ ಬೆಂಬಲ ಘೋಷಿಸಿದೆ. ಬುಧವರಾ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬೆಂಬಲ ಕೋರಲು ಹೋಗಿದ್ದ ವಾಟಾಳ್ ನಾಗರಾಜ್ ಗಂಭೀರ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ರಾಜ್ಯಕ್ಕೆ ರಜನಿ ಬರಬಾರದು!

ರಾಜ್ಯದವರು ಎಂದು ಹೇಳಿಕೊಂಡಿ ಇಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಿ ಕೋಟಿ ಕೋಟಿ ಗಳಿಸುತ್ತಾರೆ. ಆದರೆ, ಇಂತಹ ಸಮಸ್ಯೆಗಳು ಬಂದಾಗ ಒಂದು ಮಾತು ಆಡುವುದಿಲ್ಲ. ನಟ ರಜನಿಕಾಂತ್ ಅವರು ಕಾವೇರಿ ವಿವಾದ ವಿಚಾರವಾಗಿ ಧ್ವನಿ ಎತ್ತುತ್ತಿಲ್ಲ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

“ನಟ ರಜನಿಕಾಂತ್ ಪದೇ ಪದೆ ನಾನು ಕರ್ನಾಟಕ ಮೂಲದವನು ಎನ್ನುವ ನೀವು, ತಮಿಳುನಾಡು ಮುಖ್ಯಮಂತ್ರಿ ಜೊತೆ ಹೋಗಿ ಈ ಬಗ್ಗೆ ಮಾತನಾಡಬೇಕು. ಅದನ್ನ ಬಿಟ್ಟು ಆಟ ಆಡಬೇಡಪ್ಪಾ ರಜನಿಕಾಂತ್ ನೀನು. ಅದು ಮಾಡಲು ಆಗದಿದ್ದ ಮೇಲೆ ನೀನು ಇಲ್ಲಿಗೆ ಬರಕೂಡದು” ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ರಜನಿಕಾಂತ್ ಮೇಲೆ ದರ್ಶನ್ ಪರೋಕ್ಷ ದಾಳಿ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಟ ದರ್ಶನ್ ತೂಗೂದೀಪ, “ಕರ್ನಾಟಕದಲ್ಲಿ ತಮಿಳು ಸಿನಿಮಾವೊಂದು 36 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅವರ ಬಳಿ ಒಂದೇ ಒಂದು ಟ್ವೀಟ್ ಕೇಳಿಲ್ಲ. ದರ್ಶನ್, ಶಿವಣ್ಣ, ಸುದೀಪ್, ಯಶ್ ಮಾತ್ರ ನಿಮಗೆ ಕಾಣುತ್ತಾರಾ..? ಅವರು ಯಾರೂ ಕಾಣಿಸೋದಿಲ್ಲವೇ.. ?” ಎಂದು ಕಿಡಿಕಾರಿದ್ದರು.

ಇದು ರಜನಿಕಾಂತ್ ಅವರ ಕಾಲೆಳೆಯುತ್ತಿರುವುದು ಎಂದು ಎಲ್ಲರಿಗೂ ಗೊತ್ತಾಗಿತ್ತು. ರಜನಿಕಾಂತ್ ಅವರ ಜೈಲರ್ ಸಿನಿಮಾ ಕರ್ನಾಟಕದಲ್ಲಿ ಕೂಡ ದೊಡ್ಡ ಸಕ್ಸಸ್ ಕಂಡಿತ್ತು. ಅದರಲ್ಲೂ ಬೆಂಗಳೂರಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದನ್ನು ಉಲ್ಲೇಖಿಸಿ ಹಲವು ಮಂದಿ ರಜನಿಕಾಂತ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ, ತಲೈವಾ ಇಲ್ಲಿಯವರೆಗೂ ಒಂದು ಮಾತನಾಡಿಲ್ಲ.

ಕರ್ನಾಟಕ ಬಂದ್ಗೆ ಚಿತ್ರರಂಗದ ಬೆಂಬಲ.

ಶುಕ್ರವಾರ (ಸೆಪ್ಟೆಂಬರ್ 29) ನಡೆಯಲಿರುವ ಕರ್ನಾಟಕ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರರಂಗದ ನಿರ್ಧಾರದ ಕುರಿತು ಫಿಲ್ಮ್ ಚೇಂಬರ್‌ನಲ್ಲಿ ಬುಧವಾರ ಸಭೆ ನಡೆಸಲಾಗಿದೆ. ಬಂದ್‌ಗೆ ಬೆಂಬಲ ಸೂಚಿಸಬೇಕು ಎಂದು ಫಿಲ್ಮ್ ಚೇಂಬರ್‌ಗೆ ಆಗಮಿಸಿ ಹೋರಾಟಗಾರ ವಾಟಾಳ್ ನಾಗರಾಜ್ ಬೇಡಿಕೆ ಇಟ್ಟಿದ್ದರು. ವಾಟಳ್ ನಾಗರಾಜ್ ಮನವಿ ಬೆನ್ನಲ್ಲೇ ಕರ್ನಾಟಕ ಬಂದ್‌ಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಮ್ ಸುರೇಶ್ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಶುಕ್ರವಾರ ನಡೆಯಲಿರುವ ಪ್ರತಿಭಟನೆಯಲ್ಲಿ ಇಡೀ ಚಿತ್ರರಂಗ ಭಾಗಿಯಾಗಲಿದೆ ಎಂದು ತಿಳಿಸಿದ್ದಾರೆ.

“ರಾಜ್ ಕುಮಾರ್ ಅವರ ಕಾಲದಿಂದಲೂ ಚಿತ್ರರಂಗ ನಾಡಿನ ಪರ ಇದೆ. ಮುಂದೆಯೂ ಚಿತ್ರರಂಗ ನಾಡು ನುಡಿ ವಿಚಾರದಲ್ಲಿ ಜೊತೆ ಇರಲಿದೆ. 29ನೇ ತಾರೀಖು ಚಿತ್ರರಂಗದ ಎಲ್ಲಾ ಕೆಲಸ ನಿಲ್ಲಿಸಿ ಬಂದ್‌ಗೆ ಬೆಂಬಲ ನೀಡಲಿದೆ. ಇವತ್ತು ಚಿತ್ರರಂಗದ ಎಲ್ಲಾ ಅಂಗಸಂಸ್ಥೆಗಳ ಜೊತೆ ಸಭೆ ನಡೆಸಿದ್ದೇವೆ. 29 ನೇ ತಾರೀಖು ಶುಕ್ರವಾರ ಚಿತ್ರರಂಗದವರೆಲ್ಲಾ ಫಿಲ್ಮ್ ಚೇಂಬರ್ ಬಳಿ ಸೇರುತ್ತೇವೆ. ಇಲ್ಲಿಂದ ಟೌನ್ ಹಾಲ್ ಬಳಿಯ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ” ಎಂದು ಅಧ್ಯಕ್ಷ ಎಮ್ ಎನ್ ಸುರೇಶ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!