PLACE YOUR AD HERE AT LOWEST PRICE
ಬೆಂಗಳೂರು, ಅಕ್ಟೋಬರ್ 13; ಕರ್ನಾಟಕ ಸರ್ಕಾರ 2023-24ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಕೆಲವು ಕಾರ್ಯಕ್ರಮಗಳನ್ನು ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸಲಾಗುತ್ತದೆ. ಈ ಪ್ರಸ್ತಾವನೆಗೆ ಕೆಲವು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕರು 6/10/2023ರಂದು ಜ್ಞಾಪನಾ ಪತ್ರದಲ್ಲಿ 2023-24ನೇ ಸಾಲಿಗೆ ಶಾಲಾ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳನ್ನು ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸುವ ಕುರಿತು ಎಂದು ವಿಷಯ ಪ್ರಸ್ತಾಪಿಸಿದ್ದಾರೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ದಿನಾಂಕ 28/08/2023ರಂದು ನಡೆದ ಸಭಾ ನಡಾವಳಿ ಹಾಗೂ ದಿನಾಂಕ 30/09/2023ರ ಪತ್ರವನ್ನು ಉಲ್ಲೇಖಿಸಿದ್ದಾರೆ.
2023-24ನೇ ಸಾಲಿನ ಬಜೆಟ್‌ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಡಿಯಲ್ಲಿ, ಪ್ರಸ್ತುತ ನಿರ್ವಹಿಸಲಾಗುತ್ತಿರುವ ಕೆಲವು ಕಾರ್ಯಕ್ರಮಗಳನ್ನು ವಿಕೇಂದ್ರಿಕರಣಗೊಳಿಸಿ ಜಿಲ್ಲಾ/ ತಾಲ್ಲೂಕು ವಲಯಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸುವ ಸಂಬಂಧ ಕರಡು ಪಟ್ಟಿಯನ್ನು ಸಿದ್ಧಪಡಿಸಿರುತ್ತಾರೆ ಎಂದು ಹೇಳಿದ್ದಾರೆ.
ಯಾವ-ಯಾವ ಕಾರ್ಯಕ್ರಮ?; ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿದ್ಯಾರ್ಥಿಗಳ ಪ್ರವೇಶಾತಿ, ಶಿಕ್ಷಕರ ನೇಮಕಾತಿ ಹೊರತುಪಡಿಸಿ ಗ್ರಾಮೀಣ ಪ್ರದೇಶದ ಶಾಲೆಗಳ ಬಹುತೇಕ ಎಲ್ಲಾ ಕಾರ್ಯಕ್ರಮಗಳು ಇನ್ನು ಮುಂದೆ ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ (ಆರ್‌ಡಿಪಿಆರ್) ಇಲಾಖೆಗೆ ಹೋಗಲಿವೆ.
ಈ ಪ್ರಸ್ತಾವನೆಯ ಅನ್ವಯ ಶಿಕ್ಷಕರ ಹಾಜರಾತಿ ಪರಿಶೀಲಿಸುವ ಅಧಿಕಾರ, ಅತಿಥಿ ಶಿಕ್ಷಕರ ನೇಮಕ, ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಬಿಡುಗಡೆ ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಬರಲಿದೆ. ಶಿಕ್ಷಣ ಇಲಾಖೆಯ ಒಟ್ಟು 26 ಕಾರ್ಯಕ್ರಮಗಳನ್ನು ಆರ್‌ಡಿಪಿಆರ್‌ಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ. ಇದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಹ ಈ ಕುರಿತು ಮಾತನಾಡಿದ್ದು, “ಶಿಕ್ಷಣ ಇಲಾಖೆಯ ಕೆಲವು ಕಾರ್ಯಕ್ರಮಗಳನ್ನು ಯಾರಿಗೂ ತೊಂದರೆ ಆಗದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸಲಾಗುತ್ತದೆ. ಇದಕ್ಕಾಗಿ ಶಿಕ್ಷಕರ ಎಲ್ಲಾ ಸಂಘಟನೆಗಳನ್ನು ವಿಶ್ವಾಸಕ್ಕೆ ಪಡೆದುಕೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ 26 ಕಾರ್ಯಕ್ರಮಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸುವ ಸಂಬಂಧ ಸಾಧಕ ಬಾಧಕಗಳ ಕುರಿತು ಚರ್ಚೆಗಳು ನಡೆಯಲಿ ಎಂಬುದು ಏಕಾಏಕಿ ತೀರ್ಮಾನ ಬೇಡ ಎಂಬುದು ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಗ್ರಾಮೀಣ ಮಟ್ಟದಲ್ಲಿ ಸ್ಥಳೀಯ ಆಡಳಿತಕ್ಕೆ ಈಗಾಗಲೇ ಕೇರಳ ಸರ್ಕಾರ ಹಂಚಿಕೆ ಮಾಡಿದೆ. ಇದು ಯಶಸ್ವಿಯೂ ಆಗಿದೆ. ಆದ್ದರಿಂದಲೇ ಕರ್ನಾಟಕ ಬಜೆಟ್‌ನಲ್ಲಿ ಈ ಕುರಿತು ಘೋಷಣೆಯನ್ನು ಮಾಡಲಾಗಿತ್ತು.
ಕಾರ್ಯಕ್ರಮಗಳ ವರ್ಗಾವಣೆಯಿಂದ ಶಿಕ್ಷಕರಿಗೆ ಕಿರುಕುಳ ಉಂಟಾಗಬಾರದು. ಎಸ್‌ಡಿಎಂಸಿ, ಸಿಆರ್‌ಪಿ, ಬಿಆರ್‌ಪಿ, ಬಿಇಒ, ಡಿಡಿಪಿಐ ಹೀಗೆ ಹಲವು ಹಂತಗಳಲ್ಲಿ ಈಗಾಗಲೇ ಅಧಿಕಾರ ನಿರ್ವಹಣೆಯಾಗುತ್ತಿದೆ. ಶಿಕ್ಷಣ ಇಲಾಖೆ ಕಾರ್ಯಕ್ರಮ ಗ್ರಾಮೀಣಾಭಿವೃದ್ಧಿ ಇಲಾಖೆಗೆ ವಹಿಸುವುದು ಎಷ್ಟು ಸರಿ?. ಈ ಕುರಿತು ಚರ್ಚೆಗಳು ನಡೆಯಬೇಕು ಎಂಬುದು ಶಿಕ್ಷಕರ ವಾದ.
ಮತ್ತೊಂದು ಕಡೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸಹ ಸರ್ಕಾರದ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆ ಕಾರ್ಯಕ್ರಮಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸುವುದು ಅವೈಜ್ಞಾನಿಕ ನಿರ್ಧಾರ. ಈ ಮೂಲಕ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಲು ಸರ್ಕಾರ ಹೊರಟಿದೆ ಎಂದು ಹೇಳಿದ್ದಾರೆ.