• Sat. Jul 13th, 2024

PLACE YOUR AD HERE AT LOWEST PRICE

ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ. ಬಿಜೆಪಿ ಶಾಸಕರ ವಿಧಾನಸಭಾ ಕ್ಷೇತ್ರಗಳಲ್ಲಿನ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದೆ ಸೇಡಿನ ರಾಜಕಾರಣ ಮಾಡುತ್ತಿದೆ. ಸರ್ಕಾರದ ತನ್ನ ನಿಲುವು ಬದಲಿಸಿಕೊಳ್ಳದಿದ್ದರೆ ವಿಧಾನಸೌಧದ ಮುಂದೆ ಉಪವಾಸ ಸತ್ಯಾಗ್ರಹ ಮಾಡುವೆ ಎಂದು ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಎಚ್ಚರಿಸಿದರು.

ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿ ಶಾಸಕರನ್ನು ಗುರಿಯಾಗಿಸಿಕೊಂಡು ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ. ನಮ್ಮ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಿಲ್ಲ. ಇದೊಂದು ಸೇಡಿನ ರಾಜಕಾರಣ” ಎಂದು ಆರೋಪಿಸಿದರು.

ಸರ್ಕಾರ ತನ್ನ ನಿಲುವು ಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ ನವೆಂಬರ್‌ ತಿಂಗಳಿನಲ್ಲಿಯೇ ವಿಧಾನಸೌಧ ಮುಂದೆ ಅಥವಾ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಸರ್ಕಾರದಲ್ಲಿ ಯಾವುದೇ ನಿಯಂತ್ರಣವಿಲ್ಲ. ಜನ ಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದನೆ‌ ಇಲ್ಲ. ಹೀಗಾಗಿ ಈ ಸರ್ಕಾರದ ಆಡಳಿತ ವಿರೋಧಿ ನೀತಿಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ” ಎಂದರು.

“ಬೆಂಗಳೂರಿನ ಕೆಲವು ರಸ್ತೆಗಳನ್ನು ನೋಡಿದರೆ ಇದು ಬೆಂಗಳೂರು ನಗರವೋ ಅಥವಾ ಹಳ್ಳಿಯೋ ಎನ್ನುವ ಅನುಮಾನ ಕಾಡುತ್ತಿದೆ. ಕೆಲ ಕಡೆಗಳಲ್ಲಿ ಅನುದಾನ ನೀಡಿದ್ದರೂ, ಕೆಲಸ ಮಾಡಲು ಬಿಡುತ್ತಿಲ್ಲ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು, ವೈಯಕ್ತಿಕ ದ್ವೇಷ ಬಿಡಬೇಕು” ಎಂದು ಹೇಳಿದರು.

“ರಾಜ್ಯದೆಲ್ಲೆಡೆ ಎಲ್ಲ ಮಾದರಿಯ ಕಾಮಗಾರಿಗಳ ಮಂಜೂರು ಹಾಗೂ ಹಣ ಪಾವತಿಗೆ ಶೇ. 7ರಿಂದ 7.5 ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಇದು ಈಗಿನ ಸರ್ಕಾರದ ಮಹಾನ್ ಸಾಧನೆಯಾಗಿದೆ. ಇದರ ವಿರುದ್ಧ ಹೋರಾಟ ಅಗತ್ಯವಾಗಿದ್ದು, ರಾಜ್ಯದ ಎಲ್ಲ ಭಾಗಗಳಿಂದ ಸಾವಿರಾರು ಕಾರ್ಯಕರ್ತರು ಹೋರಾಟದಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಎಚ್ಚರಿಕೆ ನೀಡಲಿದ್ದಾರೆ” ಎಂದರು.

“ಹಿಂದಿನ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ‌ನಡೆದ ಕಾಮಗಾರಿಗಳ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಅಕ್ರಮ ಕಾಮಗಾರಿಗಳು ನಡೆದಿದ್ದರೆ, ಈ ಸಂಬಂಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ. ಆದರೆ, ಉದ್ದೇಶಪೂರ್ವಕವಾಗಿ ಅನುದಾನ ನಿಲ್ಲಿಸಿ, ಕಾಮಗಾರಿ ನಡೆಯದಂತೆ ನೋಡಿಕೊಳ್ಳುವುದು ಸೇಡಿನ ರಾಜಕಾರಣ” ಎಂದು ಕಿಡಿಕಾರಿದರು.

Leave a Reply

Your email address will not be published. Required fields are marked *

You missed

error: Content is protected !!