• Sat. Jul 27th, 2024

PLACE YOUR AD HERE AT LOWEST PRICE

 ಕೋಲಾರ:ನವೆಂಬರ್ 25 ರಂದು ಚಿಕ್ಕಬಳ್ಳಾಪುರದ ಕೆಇಬಿ ಸಮುದಾಯ ಭವನದಲ್ಲಿ “ಶಾಶ್ವತ ನೀರಾವರಿ ದುಂಡು ಮೇಜಿನ ಸಭೆ” ನಡೆಯಲಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡ ಆಂಜನೇಯರೆಡ್ಡಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.  ಬಯಲುಸೀಮೆ ಜಿಲ್ಲೆಗಳಾದ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರುಣಿಸುವ ವಿವಿಧ ಹಂತದಲ್ಲಿರುವ ಘೋಷಿತ ಉದ್ದೇಶದ ನೀರಾವರಿ ಯೋಜನೆಗಳು ಅನುಷ್ಠಾನದ ಬಗ್ಗೆ ಮುಂಬರುವ ಬೆಳಗಾವಿ ಅಧಿವೇಶನದ ಪೂರ್ವಭಾವಿಯಾಗಿ ಅವುಗಳ ಅವಲೋಕನ ಮತ್ತು ಚರ್ಚೆ ನಡೆಸುವ ಉದ್ದೇಶದಿಂದ ದುಂಡು ಮೇಜಿನ ಸಭೆಯನ್ನು ಏರ್ಪಡಿಸಲಾಗಿದೆ ಎಂದರು.

ಬಯಲುಸೀಮೆ ಜಿಲ್ಲೆಗಳಾದ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಕಳೆದ 40, ವರ್ಷಗಳಿಂದ ಬರಪೀಡಿತ ಜಿಲ್ಲೆಗಳಾಗಿವೆ. ಕೃಷಿ ಯೋಗ್ಯವಾಗಿದ್ದ ಭೂಮಿ ಇಂದು ಬಂಜರು ನೆಲೆಯಾಗುತ್ತಿದೆ. ನೀರಿನ ಬವಣೆಯನ್ನು ನೀಗಿಸುವಲ್ಲಿ ಸರ್ಕಾರ ಈ ಜಿಲ್ಲೆಗಳಿಗೆ ದೊಡ್ಡ ಮಟ್ಟದಲ್ಲಿ ತಾರತಮ್ಯ ತೋರಿದೆ. ಸ್ವಾತಂತ್ರ್ಯ ನಂತರದಲ್ಲಿ ಈ ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಅಲ್ಲದೆ ನೀರಾವರಿಯಲ್ಲಿ ಶೂನ್ಯ ನೀಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕುಡಿಯುವ ನೀರಿನ ಗುಣಮಟ್ಟವೂ ಸಹ ಕಳೆದ 20 ವರ್ಷಗಳಲ್ಲಿ ಗಣನೀಯವಾಗಿ ಕುಸಿದಿದೆ. ಕೆಸಿ ವ್ಯಾಲಿ ಹಾಗೂ ಹೆಚ್ ಎನ್ ವ್ಯಾಲಿ ಯೋಜನೆಯಲ್ಲಿ ಮೂರನೇ ಹಂತದ ಶುದ್ಧೀಕರಣ ಮಾಡದೆ ಹರಿಸುತ್ತಿರುವುದು ಅತ್ಯಂತ ಅಪಾಯಕಾರಿ ಎಂದು ಈಗಾಗಲೇ ರಾಷ್ಟ್ರೀಯ ಮಟ್ಟದ ಸಂಶೋಧನಾ ಸಂಸ್ಥೆಗಳು ಹೇಳಿದ್ದರೂ ನಿರ್ಲಕ್ಷ್ಯ ತೋರಲಾಗಿದೆ. ಕಳೆದ ವರ್ಷ ಅತಿ ಹೆಚ್ಚು ಮಳೆ ಬಂದ ಕಾರಣ ಕೆಸಿ ವ್ಯಾಲಿ ನೀರಿನ ದುಷ್ಪರಿಣಾಮ ಗೊತ್ತಾಗಿಲ್ಲ, ಆದರೆ, ಈ ವರ್ಷ ಮುಂಗಾರು ಮತ್ತು ಹಿಂಗಾರು ಎರಡೂ ಮಳೆಗಳು ಕೈಕೊಟ್ಟಿದೆ ಮುಂದಿನ ದಿನಗಳಲ್ಲಿ ಅಂತರ್ಜಲ ಗುಣಮಟ್ಟದ ಅಪಾಯದ ಸ್ಥಿತಿ ತಲುಪಲಿದೆ ಎಂದು ಆತಂಕ ಪಟ್ಟರು.

ಏಷ್ಯಾ ಖಂಡದ ಅತಿ ದೊಡ್ಡ ಕುಂಡೆ ಕೆರೆಗಳ ಪ್ರದೇಶ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳು. ಇಂದು ಕೆರೆಗಳ ಸ್ಥಿತಿ ಅಧೋಗತಿಗೆ ಇಳಿದಿದೆ.  ಕಳೆದ 15 ವರ್ಷಗಳಿಂದ ಎತ್ತಿನಹೊಳೆ ಯೋಜನೆಯಿಂದ ಈ ಜಿಲ್ಲೆಗಳಿಗೆ ಹನಿ ನೀರು ಹರಿಸಲು ಆಗಿಲ್ಲ. ಇಷ್ಟೆಲ್ಲಾ ಸಮಸ್ಯೆಗಳಿಗೆ ಮಳೆಯಾದಾರಿತ ಜೀವವಿಜ್ಞಾನದಲ್ಲಿ ಸರ್ಕಾರ ಸೋತಿದೆ ಎಂದು ವಿಷಾದಿಸಿದರು.  ಒಟ್ಟಾರೆ ಶಾಸನ ಸಭೆಗಳಲ್ಲಿ ನೀರಾವರಿ ಚರ್ಚೆ ಗಳ ಕೊರತೆಯಿಂದ ಜಲಪ್ರಜ್ಞೆ ಇಲ್ಲವಾಗಿದೆ. ಇಂದು

ನೀರಾವರಿ ವಿಷಯದಲ್ಲಿ ಪ್ರತ್ಯೇಕ ಅಧಿವೇಶನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ, ಈ ನಿಟ್ಟಿನಲ್ಲಿ ಶಾಶ್ವತ ನೀರಾವರಿಗಾಗಿ ದುಂಡು ಮೇಜಿನ ಸಭೆ ಆಯೋಜಿಸಲಾಗಿದೆ, ಈ ಸಭೆಗೆ ಅವಳಿ ಜಿಲ್ಲೆಗಳ ಶಾಸಕರುಗಳು, ಸಂಸದರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ರೈತ, ದಲಿತ, ಪ್ರಗತಿಪರ,ಕನ್ನಡ ಪರ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ನೀರಾವರಿ ಹೋರಾಟಗಾರ ಹೊಳಲಿ ಪ್ರಕಾಶ್, ರೈತ ಮುಖಂಡ ಅಬ್ಬಿಣಿ ಶಿವಪ್ಪ, ಕಲ್ವಮಂಜಲಿ ರಾಮು ಶಿವಣ್ಣ, ಕೆ.ನಾರಾಯಣಗೌಡ, ವಿ.ಕೆ.ರಾಜೇಶ್, ಶಿವಕುಮಾರ್ ಗೌಡ, ಯುವಶಕ್ತಿ ಪುಟ್ಟರಾಜು, ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!