• Sun. Apr 28th, 2024

PLACE YOUR AD HERE AT LOWEST PRICE

-ಕೆ.ರಾಮಮೂರ್ತಿ.

ನೀರು ಆರೋಗ್ಯಕ್ಕೆ ಅಮೃತವಿದ್ದಂತೆ. ಚಿಕ್ಕವಯಸ್ಸಿನಿಂದಲೇ ಶರೀರಕ್ಕೆ ಬೇಕಾದಷ್ಟು ನೀರು ಕುಡಿಯುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಬಾರದಂತೆ ತಡೆಗಟ್ಟಬಹುದು ಎಂದು ಸರ್ವೆ ವರಧಿಗಳನ್ನು ಆಧರಿಸಿ ವೈದ್ಯಕೀಯ ತಜ್ಞರ ಅಭಿಪ್ರಯಾಯವಾಗಿದೆ. ದೈನಂದಿನ ಜೀವನದಲ್ಲಿ ಕುಡಿಯುವ ನೀರಿನ ಮಹತ್ವವನ್ನು ಅರಿತ ಸರ್ಕಾರ ರಾಜ್ಯಾದ್ಯಂತ ಇರುವ ಸರ್ಕಾರಿ ಶಾಲೆಗಳಲ್ಲಿನ ಪ್ರತಿ ಮಗುವೂ ಕುಡಿಯುವ ನೀರನ್ನು ಸೇವಿಸಬೇಕು ಎಂದು ಗುರುತಿಸಿತು.

ಅದರಂತೆ ದಿನಾಂಕ:17-12-2019ರಲ್ಲಿ ಕುಡಿಯುವ ನೀರಿನ ಬೆಲ್ (ವಾಟರ್ ಬೆಲ್) ಹೆಸರಿನಲ್ಲಿ ಸುತ್ತೋಲೆ ಹೊರಡಿಸಿ ಮಕ್ಕಳು ಕುಡಿಯುವ ನೀರನ್ನು ಕುಡಿಯಬೇಕು ಎಂದು ಕಾರ್ಯಕ್ರಮವನ್ನು ರೂಪಿಸಿತ್ತು. ಶಾಲೆಯಲ್ಲಿ ಕುಡಿಯುವ ನೀರಿನ ಬೆಲ್ (ವಾಟರ್ ಬೆಲ್) ಶಬ್ದ ಕೇಳಿದ ತಕ್ಷಣ ಮಕ್ಕಳು ನೀರು ಕುಡಿಯಲು ವ್ಯವಸ್ಥೆಮಾಡಿ ಸ್ವಲ್ಪ ಸಮಯ ವಿರಾಮ ನೀಡಲು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

ಆದರೆ ಇದು ಅನೇಕ ಶಾಲೆಗಳಲ್ಲಿ ಜಾರಿಗೆ ಬಂದಿಲ್ಲ. ಆ ಮೂಲಕ ಸರ್ಕಾರಿ ಸುತ್ತೋಲೆ ಮೂಲೆಗುಂಪಾಯಿತು. ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಈ ರೀತಿಯ ಸುತ್ತೋಲೆ ಇತ್ತು ಎನ್ನುವುದೇ ಗೊತ್ತಿಲ್ಲ. ಇದರ ಫಲವಾಗಿ ಕುಡಿಯುವ ನೀರಿನ ಬೆಲ್ (ವಾಟರ್ ಬೆಲ್) ಕಾರ್ಯಕ್ರಮ ಹಳ್ಳಹಿಡಿದಿದೆ.

ನೀರು ಕುಡಿಯದ ಕಾರಣಕ್ಕೆ ವಿದ್ಯಾರ್ಥಿಗಳು ಅನಾರೋಗ್ಯದ ಪಾಲಾಗುತ್ತಿದ್ದಾರೆ. ವಿಧ್ಯಾರ್ಥಿಗಳು ಬೆಳಿಗ್ಗೆಯಿಂದ ಸಂಜೆಯತನಕ ಹೆಚ್ಚು ಸಮಯ ಶಾಲೆಯಲ್ಲೇ ಇರುತ್ತಾರೆ. ಮಕ್ಕಳ ಬಾಲ್ಯದಿಂದಲೇ ದೇಹಕ್ಕೆ ಬೇಕಾದಷ್ಟು ನೀರು ಸೇರದ ಕಾರಣ ನಾನಾ ಸಮಸ್ಯಗಳನ್ನು ಎದಿರುಸುತ್ತಿರುತ್ತಾರೆ. ಮುಖ್ಯವಾಗಿ ಮನುಷ್ಯ ನೀರು, ಗಾಳಿ ಮತ್ತು ಆಹಾರವನ್ನು ಕ್ರಮಬದ್ದವಾಗಿ ತೆಗೆದುಕೊಳ್ಳಬೇಕು.

ಇವುಗಳಲ್ಲಿ ಯಾವುದು ಕಡಿಮೆಯಾದರೂ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ಮುಖ್ಯವಾಗಿ ಚಿಕ್ಕವಯಸ್ಸಿನಿಂದ ವಿದ್ಯಾರ್ಥಿಗಳಿಗೆ ಹೆಚ್ಚು ನೀರಿನ ಅವಶ್ಯಕತೆ ಇರುತ್ತದೆ. ಈ ಬಗ್ಗೆ ಕೇರಳ ಸರ್ಕಾರ ಹೊಸ ಮಾರ್ಗವನ್ನು ಅನುಸರಿಸುತ್ತಿದೆ. ಆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿ ಮೂರು ಘಂಟೆಗೆ ಒಮ್ಮೆ ವಾಟರ್ ಬೆಲ್ ಹೊಡೆಯಬೇಕು ಎಂದು ಆದೇಶವಿದೆ.

ಆ ಸಮಯದಲ್ಲಿ ವಿದ್ಯಾರ್ಥಿಗಳು ನೀರು ಕುಡಿಯುವ ಹಾಗೆ ಶಿಕ್ಷಕರು ಗಮನಹರಿಸುವಂತೆ ತಿಳಿಸಲಾಗಿದೆ. ಆ ಮೂಲಕ ಅಲ್ಲಿನ ಮಕ್ಕಳು ನೀರು ಕುಡಿಯುವಂತೆ ಮಾಡಲಾಗುತ್ತಿದೆ. ಇದೇ ರೀಯಲ್ಲಿ ತಮಿಳುನಾಡಿನಲ್ಲೂ ನಡೆಯುತ್ತದೆ.

ಶುದ್ಧ ಕುಡಿಯುವ ನೀರನ್ನು ಕ್ರಮವಾಗಿ ತೆಗೆದುಕೊಳ್ಳದಿದ್ದರೆ ಆಗುವ ತೊಂದರೆಗಳು.

ಶರೀರದಲ್ಲಿ ಉತ್ಪತ್ತಿಯಾಗುವ ಕಲ್ಮಶಗಳನ್ನು ಹೊರಗೆ ಕಳಿಸಲು, ಶರೀರದ ಉಷ್ಣಾಂಶ ನಿಯಂತ್ರಿಸಲು, ಮೆದುಳಿನ ಆರೋಗ್ಯಕ್ಕೆ ನೀರಿನ ಅಗತ್ಯ ಬಹಳವಿದೆ. ವಿಶ್ವ ಆರೋಗ್ಯ ಸಂಸ್ಥೆ ಸೂಚನೆಯಂತೆ ಪ್ರತಿದಿನ 2 ರಿಂದ 3 ಲೀಟರ್ ಶುದ್ಧ ಕುಡಿಯುವ ನೀರನ್ನು ಕಡ್ಡಾಯವಾಗಿ ಕುಡಿಯಬೇಕು.

ಮುಖ್ಯವಾಗಿ ಬೆಳವಣಿಗೆ ಹಂತದಲ್ಲಿರುವ ವಿದ್ಯಾರ್ಥಿಗಳಲ್ಲಿ, ಮಕ್ಕಳಲ್ಲಿ ಕುಡಿಯುವ ನೀರಿನ ಮಹತ್ವ ಬಹುದೊಡ್ಡದು. ಪ್ರತಿನಿತ್ಯ ಆಟವಾಡುವಾಗ ಬೆವರಿನ ಮೂಲಕ ಅತಿಹೆಚ್ಚು ನೀರು ದೇಹದಿಂದ ಹೊರಗೆ ಹೋಗುತ್ತದೆ. ಮಕ್ಕಳಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದ ಮಲಬದ್ದತೆ, ಕಣಗಳಿಗೆ ಸರಿಯಾದ ಪೋಷಣೆ ಸಿಗದೆಹೋಗುವುದು, ಮೆದುಳಿನ ಮೇಲೆ ಪ್ರಭಾವ ಬೀರಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ ಕಡಿಮೆಯಾಗಲಿದೆ.

ಜೊತೆಗೆ ರಕ್ತಹೀನತೆಯಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ರಕ್ತಪರಿಚಲನೆಯಲ್ಲಿ ಅಸಮತೋಲನ, ಕಿಡ್ನಿ ಸಂಬಂಧಿತ ಸಮಸ್ಯೆಗಳು, ಶರೀರದಲ್ಲಿ ಉಷ್ಣಾಂಶ ಹೆಚ್ಚುವುದು, ಶರೀರದ ಮೇಲೆ ಚರ್ಮ ಸೊಕ್ಕುವುದು, ಚರ್ಮದ ಬಣ್ಣ ಬದಲಾಗುವುದು, ಜೀರ್ಣಕ್ರಿಯೆ ಸಮಸ್ಯ ಹೆಚ್ಚುತ್ತದೆ. ವಿದ್ಯಾರ್ಥಿಗಳ ದೈನಂದಿನ ಜೀವನದಲ್ಲಿ ಅತ್ಯಂತ ಪ್ರಭಾವ ಬೀರುವ ಕುಡಿಯುವ ನೀರಿನ ಪ್ರಾಮುಖ್ಯತೆಯನ್ನು ಗುರುತಿಸಬೇಕಿದೆ. ಈ ಬಗ್ಗೆ ಶಿಕ್ಷಕರು ಮತ್ತು ಅಧಿಕಾರಿಗಳು ಗಮನಹರಿಸಿಬೇಕು.

ಮಕ್ಕಳ ಆರೋಗ್ಯದ ದೃಷ್ಟಿಯಿಂದ ನೀರು ಕುಡಿಯಲು ಪ್ರೋತ್ಸಾಹಿಸಬೇಕಿದೆ.

ಸರ್ಕಾರಿ ಸುತ್ತೋಲೆ ಪ್ರಕಾರ ಎಲ್ಲಾ ಮಕ್ಕಳು ಕುಡಿಯುವ ನೀರಿನ ಬೆಲ್ (ವಾಟರ್ ಬೆಲ್) ಹೊಡೆಯುತ್ತಿದ್ದಂತೆ ನೀರು ಕುಡಿಯುವಂತೆ ಶಿಕ್ಷಕರು ಪ್ರೋತ್ಸಾಹಿಸಬೇಕು. ರಜೆ ದಿನಗಳಲ್ಲಿ ಮನೆಗಳಲ್ಲಿದ್ದಾಗಲೂ ನೀರು ಕುಡಿಯಬೇಕು ಎಂದು ಮಕ್ಕಳಿಗೆ ತಿಳುವಳಿಕೆ ಮೂಡಿಸಬೇಕು. ಹೆಚ್ಚಿನ ಪ್ರಚಾರದ ಕೊರತೆ ಮತ್ತು ಇಲಾಖಾ ಮೇಲಧಿಕಾರಿಗಳ ನಿರ್ಲಕ್ಷತೆಯಿಂದಾಗಿ ಕುಡಿಯುವ ನೀರಿನ ಬೆಲ್ ಯೋಜನೆ ಮೂಲೆಗುಂಪಾಗಿದೆ.

ಕುಡಿಯುವ ನೀರಿನ ಮಹತ್ವದ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲದೆ ಇರುವುದು ಮತ್ತು ಕೆಲವು ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ದೊರೆಯದಿರುವುದೂ ಯೋಜನೆಯ ವಿಫಲತೆಗೆ ಕಾರಣವಾಗಿದೆ. ಕುಡಿಯುವ ನೀರಿನ ಬೆಲ್ (ವಾಟರ್ ಬೆಲ್) ಕಾರ್ಯಕ್ರಮ ಜಾರಿಗೆ ತರುವಾಗ ವಿದ್ಯಾರ್ಥಿಗಳಿಗೆ ನೀರು ಕುಡಿಯಲು ಬೇಕಾದ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಜೊತೆಗೆ ಸಮರ್ಪಕವಾದ ಶೌಚಾಲಯಗಳಿಲ್ಲದಿರುವುದೂ ಮುಖ್ಯ ಕಾರಣವಾಗಿದೆ ಎಂದು ತಜ್ಞರು  ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರ ಈಗಲಾದರೂ ಮಕ್ಕಳು ನೀರು ಕುಡಿಯಲು ಕ್ರಮವಹಿಸುವುದೇ ಕಾದು ನೋಡಬೇಕುದೆ.

ಮಕ್ಕಳು ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯಲು ಪ್ರೋತ್ಸಾಹಿಸಬೇಕು:ಡಾ.ಕಮಲಾಕರ.

ದೇಹದಲ್ಲಿ ಶೇ 75 ಭಾಗದಷ್ಟು ನೀರಿನ ಅಂಶ ಇರುವಂತೆ ನೋಡಿಕೊಳ್ಳಬೇಕು. ದೇಹದ ಎಲ್ಲಾ ಕ್ರಿಯೆಗಳಿಗೆ ಮತ್ತು ಆರೋಗ್ಯವಂತ ಬೆಳವಣಿಗೆಗೆ ಶುದ್ಧ ಕುಡಿಯುವ ನೀರು ಅಗತ್ಯದಷ್ಟು ದೇಹಕ್ಕೆ ಸೇರಬೇಕು. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ಕಿಡ್ನಿ ಸಮಸ್ಯೆಯಾಗುವ ಸಂಭವ ಇರುತ್ತದೆ. ವಾಂತಿಬೇದಿ ಆದಂತಹ ಸಂದರ್ಭದಲ್ಲಿ ಅತಿಹೆಚ್ಚು ನೀರು ಕುಡಿಯುವುದರಿಂದ ಹೆಚ್ಚಿನ ಅನಾಹುತ ತಡೆಯಬಹುದಾಗಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯುವಂತೆ ಮಕ್ಕಳಿಗೆ ಹೆಚ್ಚಿನ ತಿಳುವಳಿಕೆ ಮೂಡಿಸಬೇಕಿದೆ.

ಡಾ.ಕಮಲಾಕರ. ಮಕ್ಕಳ ವೈದ್ಯರು.

…………………………………………………

ಕುಡಿಯುವ ನೀರಿನ ಬೆಲ್ ಕಡ್ಡಾಯಗೊಳಿಸಿ:ಚಿಕ್ಕವಲಗಮಾದಿ ಲಕ್ಷ್ಮಮ್ಮ.

ಕುಡಿಯುವ ನೀರು ಮನುಷ್ಯನ ಆರೋಗ್ಯಕ್ಕೆ ಅತಿಮುಖ್ಯ. ಆರೋಗ್ಯ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಮಕ್ಕಳು ಪ್ರತಿದಿನ ಕ್ರಮಬದ್ದವಾಗಿ ನೀರು ಕುಡಿಯುವುದನ್ನು ಕಡ್ಡಾಯಗೊಳಿಸಬೇಕು. ‘ಕುಡಿಯುವ ನೀರಿನ ಬೆಲ್’ ಸರ್ಕಾರದ ಸುತ್ತೋಲೆಯನ್ನು ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಜಾರಿಗೆ ತರಬೇಕು.

ಚಿಕ್ಕವಲಗಮಾದಿ ಲಕ್ಷ್ಮಮ್ಮ. ಬೆಂಗಳೂರು ವಿಭಾಗೀಯ ಸಂಚಾಲಕರು, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಣ್ಣಯ್ಯ ಬಣ).

………………………………………………..

ಮತ್ತೊಮ್ಮೆ ನೆನಪೋಲೆ ಹೊರಡಿಸುತ್ತೇವೆ:ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ.

ಶಾಲೆಗಳಲ್ಲಿ ಕುಡಿಯುವ ನೀರಿನ ಬೆಲ್ ಯೋಜನೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದೆ. ಶುದ್ಧ ಕುಡಿಯುವ ನೀರು ಮಗುವಿನ ಆರೋಗ್ಯಕ್ಕೆ ಬಹಳ ಮುಖ್ಯ. ಸುತ್ತೋಲೆಯಂತೆ ಕುಡಿಯುವ ನೀರಿನ ಬೆಲ್ ಹೊಡೆದು ಮಕ್ಕಳು ನೀರು ಕುಡಿಯುವಂತೆ ಮಾಡಲು ಎಲ್ಲಾ ಶಾಲೆಗಳಿಗೆ ಮತ್ತೋಮ್ಮೆ ನೆನಪೋಲೆ ಹೊರಡಿಸುತ್ತೇವೆ.

ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!