• Fri. Oct 11th, 2024

ಸ್ಮಶಾನ ಮತ್ತು ಶಾಲೆಗೆ ಜಮೀನು ಮಂಜೂರಿಗಾಗಿ ರೈತಸಂಘದಿಂದ ಪ್ರತಿಭಟನೆ.

PLACE YOUR AD HERE AT LOWEST PRICE

ಬಂಗಾರಪೇಟೆ.ಡಿ.೧೯:ತಾಲೂಕಿನ ಗಡಿಭಾಗದ ಕದಿರಿನತ್ತ ಗ್ರಾಮದ ಸ್ಮಶಾನಕ್ಕೆ ಮಂಜೂರಾಗಿರುವ ಸರ್ವೇ ನಂ. ೧೩ರಲ್ಲಿ ೨ ಎಕರೆ ಗೋಮಾಳ ಜಮೀನನ್ನು ಗುರುತಿಸಿ ಅಭಿವೃದ್ಧಿ ಮಾಡುವ ಜೊತೆಗೆ ಅದೇ ಸರ್ವೇ ನಂಬರ್‌ನಲ್ಲಿ ೩ ಎಕರೆ ಜಮೀನನ್ನು ಸರ್ಕಾರಿ ಶಾಲೆ ಅಭಿವೃದ್ಧಿಗೆ ಮಂಜೂರು ಮಾಡುವಂತೆ ರೈತಸಂಘ ಹಾಗೂ ಗ್ರಾಮಸ್ಥರಿಂದ ಕದಿರಿನತ್ತದ ಬಳಿ ಗೋಮಾಳ ಜಮೀನಿನಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.

ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ದೋಣಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದಿರಿನತ್ತದ ಗೋಮಾಳ ಜಮೀನು ಬಳಿ ಬೆಳಗ್ಗೆ ೮ ಗಂಟೆಯಿಂದ ಹೋರಾಟ ನಡೆಸಿ, ೧ ವಾರ ಗಡುವು ನೀಡಿ ಸ್ಮಶಾನ ಹಾಗೂ ಶಾಲೆಯ ಜಾಗದ ಸಮಸ್ಯೆ ಬಗೆಹರಿಸದಿದ್ದರೆ ಜಾನುವಾರುಗಳು, ವಯಸ್ಸಾದವರ ಜೊತೆಗೆ ಗ್ರಾಮದಲ್ಲಿ ಮರಣ ಹೊಂದಿದರೆ ಮೃತದೇಹವನ್ನು ತಾಲೂಕು ಕಚೇರಿಯ ಆವರಣದಲ್ಲಿ ಅಂತ್ಯಕ್ರಿಯೆ ಮಾಡುವ ಎಚ್ಚರಿಕೆಯನ್ನುರೈತಸಂಘದ ಮುಖಂಡರು ಮತ್ತು ಗ್ರಾಮಸ್ಥರು ನೀಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಗಡಿ ಭಾಗದ ರೈತ ಕೂಲಿಕಾರ್ಮಿಕರ ಸಮಸ್ಯೆಗಳನ್ನು ಜನಪ್ರತಿನಿಧಿಗಳು ನಿರ್ಲಕ್ಷಿಸುವಂತೆ ತಾಲೂಕು ಆಡಳಿತವೂ ನಿರ್ಲಕ್ಷ್ಯ ಮಾಡುತ್ತಿದೆ. ಒಂದು ಕಡೆ ಕಾಡಾನೆಗಳ ಹಾವಳಿಯಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ ಬೆಳೆ ನಾಶವಾಗುತ್ತಿದೆ.

ಮತ್ತೊಂದು ಕಡೆ ಮೂಲಭೂತ ಸೌಕರ್ಯಗಳಾದ ರಸ್ತೆ, ಗ್ರಾಮೀಣ ಅಭಿವೃದ್ಧಿ ಎಂಬುದು ಜನಪ್ರತಿನಿಧಿಗಳಿಗೆ ಚುನಾವಣೆ ಸಮಯದಲ್ಲಿ ಮಾತ್ರ ನೆನಪಿಗೆ ಬಂದು ಮತ ಕೇಳಲು ಬಂದಾಗ ಬೀದಿಯಲ್ಲಿ ಸಿಕ್ಕ ಎಲ್ಲರಿಗೂ ಕಾಲಿಗೆ ಬಿದ್ದು, ಗೆದ್ದ ನಂತರ ಮೈಸೂರು ಸ್ಯಾಂಡಲ್ ಸೋಪ್ ನಲ್ಲಿ ಸ್ನಾನ ಮಾಡಿ ನಾಪತ್ತೆಯಾಗುತ್ತಿರುವ ಜನಪ್ರತಿಧಿಗಳಿಗೆ ಗಡಿ ಭಾಗದ ಜನರ ಸಮಸ್ಯೆ ಗಂಭೀರವಾಗಿ ಪರಿಗಣಿಸಲು ಸಮಯವಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಕಡೆ ಕಾಡಾನೆಗಳ ಹಾವಳಿ ಮತ್ತೊಂದೆಡೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಗಡಿಭಾಗದ ಕದಿರಿನತ್ತ ಗ್ರಾಮದಲ್ಲಿ ಸುಮಾರು ೨೦೦ ಮನೆಗಳು, ೮೦೦ ಜನಸಂಖ್ಯೆ ಇದ್ದು ಶಾಶ್ವತವಾದ ಸ್ಮಶಾನದ ಜಾಗವಿಲ್ಲ. ಊರಿನಲ್ಲಿ ಮರಣ ಹೊಂದುವ ವ್ಯಕ್ತಿಗಳನ್ನು ಕೋಡಿ ಹರಿಯುವ ಹೊಳೆಯಲ್ಲಿ ಅಂತ್ಯಕ್ರಿಯೆ ಮಾಡಬೇಕಾದ ಪರಿಸ್ಥಿತಿ ಇದೆ.

ಈಗಾಗಲೇ ೨೦ ವರ್ಷಗಳ ಹಿಂದೆ ಸರ್ವೇ ನಂ.೧೩ರ ೫೦ ಎಕರೆ ಸರ್ಕಾರಿ ಗೋಮಾಳ ಜಮೀನಿನಲ್ಲಿ ೨ ಎಕರೆ ಜಮೀನನ್ನು ಸ್ಮಶಾನ ಎಂದು ಪಹಣಿಯಲ್ಲಿ ಬನಮೂದಿಸಿದ್ದರೂ ಆ ಜಾಗವನ್ನು ಗುರುತಿಸಿಕೊಡುವಲ್ಲಿ ತಾಲೂಕು ಆಡಳಿತ ಮತ್ತು ಸರ್ವೇ ಇಲಾಖೆ ವಿಫಲವಾಗಿರುವುದರಿಂದ ಅಲ್ಲಿನ ಜನರು ಸ್ಮಶಾನ ಜಾಗಕ್ಕಾಗಿ ಅಲೆದು ಅಲೆದು ಸಾಕಾಗಿ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದರು.

ಗ್ರಾಮಸ್ಥರು ಮಾತನಾಡಿ, ಇದೀಗ ಅದೇ ಸರ್ವೇ ನಂಬರ್‌ನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಈ ಜಾಗ ನಮಗೆ ಸೇರಿದ್ದು ಎಂದು ಪದೇಪದೇ ಗೋಮಾಳ ಜಮೀನಿಗೆ ತಕರಾರು ಮಾಡುವ ಮುಖಾಂತರ ಹೊಸ ವರಸೆಯನ್ನು ಆರಂಭಿಸಿದ್ದಾರೆ. ಒಂದು ಕಡೆ ತಾಲೂಕು ಆಡಳಿತದ ನಿರ್ಲಕ್ಷ್ಯ ಮತ್ತೊಂದು ಕಡೆ ಅರಣ್ಯ ಇಲಾಖೆಯ ದೌರ್ಜನ್ಯದಿಂದ ಬೇಸತ್ತಿರುವ ಊರಿನ ಜನರು ಕಾನೂನನ್ನು ಕೈಗೆತ್ತಿಕೊಳ್ಳುವ ಮೊದಲು ಸರ್ಕಾರ  ಸ್ಮಶಾನಕ್ಕೆ ಜಾಗವನ್ನು ಗುರುತಿಸಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.

ಅಲ್ಲದೆ ಸುಮಾರು ೮೦ ಮಕ್ಕಳಿರುವ ಸರ್ಕಾರಿ ಶಾಲೆ ಅಭಿವೃದ್ಧಿಗೆ ಜಾಗವಿಲ್ಲದೆ ಮಕ್ಕಳು ಇಕ್ಕಟ್ಟಿನಲ್ಲಿ ಕುಳಿತು ಪಾಠ ಕೇಳಬೇಕಾದ ಪರಿಸ್ಥಿತಿಯಿದ್ದು, ಮೇಲ್ಕಂಡ ಸರ್ವೇ ನಂಬರ್‌ನಲ್ಲಿ ೩ ಎಕರೆ ಜಾಗವನ್ನು ಸರ್ಕಾರಿ ಶಾಲೆಗೆ ಮಂಜೂರು ಮಾಡಿದರೆ ಶಾಲಾ ಕಟ್ಟಡವನ್ನು ಅಭಿವೃದ್ಧಿಪಡಿಸಿಕೊಂಡು ಈಗಾಗಲೇ ಅವನತಿಯಲ್ಲಿರುವ ಸರ್ಕಾರಿ ಶಾಲೆಗಳ ಮಧ್ಯೆ ಗಡಿಭಾಗದ ಶಾಲೆ ತಲೆ ಎತ್ತಿ ಜಿಲ್ಲಾದ್ಯಂತ ಎಲ್ಲಾ ಶಾಲೆಗಳಿಗೆ ಮಾದರಿಯಾಗುತ್ತದೆ ಎಂದರು.

ತಹಸೀಲ್ದಾರ್ ರಶ್ಮಿ.ಯು ಮನವಿ ಸ್ವೀಕರಿಸಿದರು. ಕಾಮಸಮುದ್ರ ರಾಜಸ್ವ ನಿರೀಕ್ಷಕ ಶ್ರೀನಿವಾಸ್, ಪಂಚಾಯಿತಿ ಅಭಿವೃದ್ಧಿ ಅಧೀಮಾರಿ ವಸಂತಕುಮಾರ್, ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ನರಸಿಂಹಯ್ಯ, ಕದಿರಿನತ್ತ ಗ್ರಾಮದ ಗ್ರಾಪಂ ಸದಸ್ಯ ಶ್ರೀರಾಮ್, ಪತ್ರಕರ್ತ ಶ್ರೀರಾಮ್ ವಿರಾಟ್, ಊರಿನ ಗೌಡರು ಗೋವಿಂದರಾವ್, ಅಪ್ಪೋಜಿರಾವ್, ವೆಂಕಟೇಶ್, ರಕ್ಮೋಜಿರಾವ್, ಸೋಮೋಜಿರಾವ್,ತಮ್ಮರಾಯಸ್ವಾಮಿ, ಸುರೇಶ್ ರಾವ್,  ಗೋವಿಂದಪ್ಪ, ಲಕ್ಷ್ಮಣ, ಸುಬ್ರಮಣಿ, ಮುನಿಯಮ್ಮ, ಮುತ್ತಮ್ಮ, ಪದ್ಮಮ್ಮ, ಮಂಜುಳಬಾಯಿ  ಮತ್ತು ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!