• Sat. Apr 27th, 2024

PLACE YOUR AD HERE AT LOWEST PRICE

-ಕೆ.ಎಸ್.ಗಣೇಶ್

ಕೋಲಾರ:ನೆಲ ಸಂಸ್ಕೃತಿಯ ಹುಡುಕಾಟದ ಭಾಗವಾಗಿ ಆರಂಭವಾಗಿ, ಜನಪದ ಸಾಂಸ್ಕೃತಿಕ ಚಟುವಟಿಕೆಗಳ ತವರಾಗಿರುವ ಆದಿಮ ಸಾಂಸ್ಕೃತಿಕ ಕೇಂದ್ರವು ೨೦೦ ನೇ ಹುಣ್ಣಿಮೆ ಹಾಡು ಕಾರ್ಯಕ್ರಮವನ್ನು ದಕ್ಷಿಣ ಭಾರತದ ಪಂಚ ರಾಜ್ಯಗಳ ಸಾಂಸ್ಕೃತಿಕ ಸಂಗಮವಾಗಿ ರೂಪಿಸಲು ಸಜ್ಜಾಗುತ್ತಿದೆ.

ದಿನಕ್ಕೊಂದು ರೂಪಾಯಿ!

ಮನೆಗೊಂದು ಹುಂಡಿ, ದಿನಕ್ಕೊಂದು ರೂಪಾಯಿ ಸಂಗ್ರಹಿಸುವ ನೇಮದೊಂದಿಗೆ ಸಮಾನ ಮನಸ್ಕ ಗೆಳೆಯರ ಬಳಗದಲ್ಲಿ ಸಂಗ್ರಹಿಸಲ್ಪಟ್ಟ ೩೬ ಸಾವಿರ ರೂಗಳ ಸಂಗ್ರಹದೊಂದಿಗೆ ಆರಂಭವಾಗಿದ್ದೆ ಆದಿಮ  ಸಾಂಸ್ಕೃತಿಕ ಕೇಂದ್ರ.

ಆರಂಭದಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಆದಿಮ ಸಾರಥ್ಯ ವಹಿಸಿಕೊಂಡಿದ್ದರೆ, ಈಗ ಎನ್.ಮುನಿಸ್ವಾಮಿ, ಕೊಮ್ಮಣ್ಣ ಹಾಗೂ ಹ.ಮಾ.ರಾಮಚಂದ್ರ ಮತ್ತಿತತರ ಮುಖಂಡತ್ವದಲ್ಲಿ  ಮುನ್ನುಗ್ಗುತ್ತಾ ಸಾಂಸ್ಕೃತಿಕ ಲೋಕದಲ್ಲಿ ದಾಪುಗಾಲು ಇಡುತ್ತಿದೆ.

ಅಂತರಗಂಗೆ ಬೆಟ್ಟದ ಏಳು ಜನವಸತಿ ಗ್ರಾಮಗಳ ಪೈಕಿ  ಒಂದಾಗಿರುವ ಶಿವಗಂಗೆಯನ್ನು ನೆಲೆಯಾಗಿಸಿಕೊಂಡು ಆರಂಭವಾದ ಆದಿಮ, ಈಗ ಕೇವಲ ಬೆಟ್ಟಕ್ಕೆ ಮಾತ್ರವಲ್ಲದೆ, ಭಾರತ ದೇಶದಲ್ಲಿಯೇ ಜನಪದ ಆದಿಮ ಕಲೆಗಳ ಕೀರ್ತಿ ಕಿರೀಟವಾಗಿ ರೂಪುಗೊಂಡಿದೆ.

ಹುಣ್ಣಿಮೆ ಹಾಡು

ಕೋಲಾರದಲ್ಲಿ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬರವಾಗಿದ್ದ ಸಂದರ್ಭದಲ್ಲಿ ಆದಿಮ ಆರಂಭಿಸಿದ್ದು ಹುಣ್ಣಿಮೆ ಹಾಡು ಕಾರ್ಯಕ್ರಮ. ೧೦ ಆಗಸ್ಟ್ ೨೦೦೬ ರಿಂದ ಪ್ರತಿ ಹುಣ್ಣಿಗೆ ಆದಿಮ ಬಯಲು ರಂಗ ಮಂದಿರದಲ್ಲಿ ಹುಣ್ಣಿಮೆ ಹಾಡು ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈವರೆವಿಗೂ ೧೯೯ ಕಾರ್ಯಕ್ರಮಗಳು ನಾಟಕ, ಹಾಡು, ತತ್ವಪದ, ನೃತ್ಯರೂಪಕ, ಜಾನಪದ ಕಲಾ ಪ್ರಾಕಾರಗಳ ಪ್ರದರ್ಶನ, ಗದ್ದುಗೆ ಗೌರವ, ನುಡಿ ನಮನ ಹೀಗೆ ಬಹುವಿಧದ ಕಲೆ ಕಲಾವಿದರಿಗೆ ವೇದಿಕೆ ಒದಗಿಸಿದೆ. ನೂರಾರು ಕಲಾವಿದರನ್ನು ಸೃಷ್ಠಿಸಿ ಕನ್ನಡ ಕಲಾಲೋಕಕ್ಕೆ ಕೊಡುಗೆ ನೀಡಿದೆ.

೨೫, ೫೦, ೭೫, ೧೦೦, ೧೫೦ ರ ಗಡಿ ದಾಟಿದ ಹುಣ್ಣಿಮೆ ಹಾಡು ಕಾರ್ಯಕ್ರಮ ಇದೀಗ ಡಿ.೨೫ ರಿಂದ ೨೭ ರವರೆವೆಗೂ ೨೦೦ ಹುಣ್ಣಿಮೆ ಹಾಡು ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸುತ್ತಿದೆ.

ಚುಕ್ಕಿಮೇಳ

ಹುಣ್ಣಿಮೆ ಹಾಡು ಕಾರ್ಯಕ್ರಮದ ಜೊತೆಗೆ ಆದಿಮ ಪ್ರತಿ ವರ್ಷ ನಡೆಸುವ ಚುಕ್ಕಿಮೇಳ ಹೆಸರಿನ ಮಕ್ಕಳ ಬೇಸಿಗೆ ಶಿಬಿರಕ್ಕೂ ಹೆಸರಾಗಿದೆ. ಮಕ್ಕಳಿಗೆ ರಂಗ ಚಟುವಟಿಕೆಗಳ ಪರಿಚಯಿಸುವುದರ ಜೊತೆಗೆ ಅವರ ಸಮಗ್ರ ವ್ಯಕ್ತಿತ್ವ ವಿಕಸನಕ್ಕೂ ದಾರಿ ದೀಪವಾಗಿದೆ.

ಸಂಪ್ರದಾಯಿಕ ಕೊಠಡಿ, ಕಪ್ಪು ಹಲಗೆ ಕಲಿಕೆಯಿಂದ ಹೊರತಾಗಿ ಸಾಂಸ್ಕೃತಿಕ ಚಟುವಟಿಕೆ, ಮಣ್ಣಿನ ಆಟಿಕೆಗಳ ತಯಾರಿಕೆ, ಚಿತ್ರಕಲೆ, ಪೇಪರ್ ಕ್ರಾಫ್ಟ್, ನಾಟಕ, ತಮಟೆ ವಾದನ, ಡೊಳ್ಳುಕುಣಿತ, ಕೋಲಾಟ, ಪಟದ ಕುಣಿತ, ನಗಾರಿ, ನೃತ್ಯರೂಪಕ, ಸ್ಥಳೀಯ ಕಲಾ ಪ್ರಕಾರಗಳಲ್ಲಿ ಮಕ್ಕಳು ಚುಕ್ಕಿಮೇಳದ ಮೂಲಕ ನುರಿತ ಕಲಾವಿದರಾಗಿ ವಿಜೃಂಭಿಸಿ ಗಮನ ಸೆಳೆದಿದ್ದಾರೆ. ಕಲಾವಿದರಾಗಿ ರೂಪುಗೊಂಡಿದ್ದಾರೆ.

ಆದಿಮ ಪ್ರಕಾಶನ

ಅರ್ಥಪೂರ್ಣ ಸಾಂಸ್ಕೃತಿಕ ಸಂವಾದಕ್ಕೆ ಆಶಯವಾದ ಪೂರಕವಾದ ಜೀವಪರ ಚಟುವಟಿಕೆಗೆ ಪುಸ್ತಕ ಪ್ರಕಟಣೆಯು ಅತ್ಯಗತ್ಯ ಎನ್ನುವುದನ್ನು ಆದಿಮ ಮನಗಂಡಿದೆ. ಆದ್ದರಿಂದ ಪುಸ್ತಕ ಪ್ರಕಾಶನಕ್ಕೂ ಕೈ ಹಾಕಿ ಈವರೆವಿಗೂ ೧೨ ಕ್ಕೂ ಹೆಚ್ಚು ಮಹತ್ವದ ಕೃತಿಗಳನ್ನು ಹೊರ ತಂದಿದೆ. ಕಾವ್ಯ, ಸಂಸ್ಕೃತಿ, ವಿಚಾರಧಾರೆ, ಸ್ಥಳೀಯ ವಾತಾವರಣಕ್ಕೆ ಪೂರಕವಾದ ವಿವಿಧ ರೀತಿಯ ಪುಸ್ತಕಗಳನ್ನು ಪ್ರಕಾಶಿಸಿ ಕನ್ನಡ ಪುಸ್ತಕ ಲೋಕಕ್ಕೆ ಕೊಡುಗೆ ನೀಡಿದೆ.

ಆದರ್ಶ ಗ್ರಂಥಾಲಯ

ಆದರ್ಶ ಎಂಬ ಬಾಲಕನ ನೆನಪಿನಲ್ಲಿ ಆದಿಮ ಆದರ್ಶ ಗ್ರಂಥಾಲಯಕ್ಕೂ ವೇದಿಕೆಯಾಗಿದೆ. ಗ್ರಂಥಾಲಯವು ವಿದ್ಯಾರ್ಥಿ, ಯುವ ಜನತೆಗೆ ಸಂಶೋಧನೆಗೆ ಮತ್ತು ಅಧ್ಯಯನಶೀಲರಿಗೆ ಸಹಕಾರಿಯಾಗಿದೆ. ದೇಶ ವಿದೇಶಿ ವಿದ್ಯಾರ್ಥಿ ಯುವಕರು ಈ ಗ್ರಂಥಾಲಯದ ಪ್ರಯೋಜನ ಪಡೆದಕೊಂಡಿದ್ದಾರೆ. ಆದಿಮ ಹಿತೈಷಿಗಳು ತಮ್ಮಲ್ಲಿರುವ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆ ನೀಡಿ ಬೆಳೆಸುತ್ತಿದ್ದಾರೆ. ನಾಟಕ, ವಿಮರ್ಶೆ, ಸಾಹಿತ್ಯ, ಆತ್ಮಕಥನ, ಮಕ್ಕಳ ಜನಪ್ರಿಯ ಪುಸ್ತಕಗಳು, ವಿಜ್ಞಾನ ಸಾಹಿತ್ಯ ಮತ್ತು ಹಲವಾರು ಮೌಲಿಕ ಸಾಹಿತ್ಯ ಪ್ರಕಾರದ ಪುಸ್ತಕಗಳು ಗ್ರಂಥಾಲಯದ ಮಹತ್ವವನ್ನು ಹೆಚ್ಚಿಸಿದೆ.

೨೦೦ ನೇ ಹುಣ್ಣಿಮೆ ಹಾಡು

ಡಿ.೨೫ ರಿಂದ ೨೭ ರವರೆವಿಗೂ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ೨೦೦ ನೇ ಹುಣ್ಣಿಮೆ ಹಾಡು ಕಾರ್ಯಕ್ರಮವನ್ನು ಮರೆತ ದಾರಿಗಳ ಹರಿಕಾರ ಎಂ.ಶ್ರೀರಾಮರೆಡ್ಡಿ ವೇದಿಕೆಯಲ್ಲಿ  ಆಯೋಜಿಸಲಾಗುತ್ತಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿ ಹೊಳಿ ಕಾರ್ಯಕ್ರಮ ಉದ್ಘಾಟಿಸುವರು. ಸಮಾರೋಪ ಸಮಾರಂಭಕ್ಕೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದಾರೆ. ಇದಕ್ಕಾಗಿ ಬೆಟ್ಟದ ರಸ್ತೆಗೆ ಹೊಸದಾಗಿ ಡಾಂಬರು ಹಾಕಲಾಗುತ್ತಿದೆ. ಆದಿಮ ಕೇಂದ್ರವನ್ನು ನವ ವಧುವಿನಿಂತೆ ಸಿಂಗರಿಸಲಾಗುತ್ತಿದೆ. ವಿವಿಧ ಸಾಹಿತ್ಯ ಗೋಷ್ಠಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯನ್ನೊದಗಿಸಲಾಗುತ್ತಿದೆ. ರಾಜ್ಯ ಹೊರ ರಾಜ್ಯಗಳಿಂದ ಸಾವಿರಾರು ಮಂದಿ ಆಗಮಿಸಲಿದ್ದಾರೆ. ಮುಖ್ಯವಾಗಿ ದಕ್ಷಿಣ ಭಾರತದ ಪಂಚ ರಾಜ್ಯಗಳ ಸಾಂಸ್ಕೃತಿಕ ಸಂಗಮವಾಗಿ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ.

ಸಾಂಸ್ಕೃತಿಕ ಸಂಗಮ

ಆದಿಮ ಸಾಂಸ್ಕೃತಿಕ ಸಂಗಮದಲ್ಲಿ ತಮಿಳುನಾಡಿನ ಆರ್.ಮತ್ತಿಯಾಸಗನ್ ಮತ್ತು ತಂಡದಿಂದ ಕರಗಾಟಂ ಕೊಲ್ಲಾಟಂ, ಪುರುಚೇರಿ ಎ.ರಾಮಚಂದಿರನ್ ಮತ್ತು ತಂಡದಿಂದ ಕಾಲಿಯಾಟಂ, ಸೂರನ್ ವಾದ್ಯಂ, ಆಂಧ್ರಪ್ರದೇಶ ಪಲ್ಲ ಧನಂಜಯರಾವ್ ಮತ್ತು ತಂಡದಿಂದ ತಪ್ಪೆಟ ಗುಳ್ಳು, ತೆಲಂಗಾಣದಿಂದ ರತ್ಲಾವತ್ ರಾಜಶೇಖರ್ ತಂಡದಿಂದ ಲಂಬಾಣಿ ನೃತ್ಯ, ತಮಿಳುನಾಡು ಮುತ್ತುಪಾಂಡಿ ಮತ್ತು ತಂಡದಿಂದ ಕಾವಡಿ ಮತ್ತು ನಯ್ಯಾಂಡಿ ಮೇಳ ಆಗಮಿಸುತ್ತಿದೆ.

ಇವರೊಂದಿಗೆ ಆದಿಮ ತಂಡಗಳ ಕಿನ್ನೂರಿ ನುಡಿದೋ, ಡೊಳ್ಳು ಕುಣಿತ, ತಮಟೆ, ನಗಾರಿ, ತುಡುಮು, ಗೊರವರ ಕುಣಿತ, ಕೊಂಬು ಮತ್ತು ಕಹಳೆ, ಕೋಲಾಟ ಕಲೆಗಳು, ಜಾನಪದ ಗಾಯಕರಾದ ಗೊಲ್ಲಹಳ್ಳಿ ಶಿವಪ್ರಸಾದ್ ಹಾಗೂ ಡಿ.ಆರ್.ರಾಜಪ್ಪರಿಂದ ಹಾಡುಗಾರಿಕೆಯೂ ನಡೆಯಲಿದೆ.

ಆದಿಮ ಮುಂದಿನ ಹೆಜ್ಜೆಗಳು

ಆದಿಮ ೨೦೦ ನೇ ಹುಣ್ಣಿಮೆ ಹಾಡು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಸಚಿವರು ಆಗಮಿಸುತ್ತಿರುವುದರಿಂದ ಆದಿಮ ತನ್ನ ಮುಂದಿನ ಹೆಜ್ಜೆಗಳ ಕುರಿತು ಬೇಡಿಕೆಗಳನ್ನು ಸರಕಾರದ ಮುಂದೆ ಮಂಡಿಸಲು ನಿರ್ಧರಿಸಿದೆ.

ಬೆಟ್ಟಕ್ಕೆ ಸುಸಜ್ಜಿತವಾಗಿ ರಸ್ತೆಯೂ ಆಗಿರುವುದರಿಂದ ಬೆಟ್ಟದ ಭೂಮಿ ಪರಭಾರೆಯಾಗದಂತೆ ಭೂಪರಿವರ್ತನೆಗೆ ಅವಕಾಶ ನೀಡಬಾರದು, ಅಂತರಗಂಗೆ ಬೆಟ್ಟವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಬೇಕು, ಈಗಾಗಲೇ ಮಂಜೂರಾತಿ ಪಡೆದಿರುವ ಆದಿಮ ರಂಗಭೂಮಿ ಶಿಕ್ಷಣ ಕೇಂದ್ರಕ್ಕೆ ಮೂಲ ಸೌಕರ್ಯ ಸೌಲಭ್ಯ ಕಲ್ಪಿಸಬೇಕು, ಆದಿಮದ ಅನುಗಾನದ ಚಟುವಟಿಕೆಗಳಿಗೆ ಶಾಶ್ವತ ಅನುದಾನ ನೀಡಬೇಕು, ನೆಲ ಪಠ್ಯಗಳನ್ನೇ ಜಗಪಠ್ಯಗಳಾಗಿಸಬೇಕು, ತೊಟ್ಟಿ ಮನೆ ಪರಿಕಲ್ಪನೆಯಲ್ಲಿ ಮಕ್ಕಳ ವಸತಿ ಶಾಲೆ ಮಂಜೂರು ಮಾಡಬೇಕು, ಆದಿಮದಲ್ಲಿ ಸಾಂಸ್ಕೃತಿಕ ಕೇಂದ್ರಗಳ ೪೦ ಮಂದಿ ಉಳಿದುಕೊಳ್ಳಲು ವಸತಿ ಸಮುಚ್ಛಯ ನಿರ್ಮಾಣ ಮಾಡಿಕೊಡಬೇಕು, ಸಂಶೋಧನಾ ಕೇಂದ್ರವಾಗಿ ಅತ್ಯಾಧುನಿಕ ಗ್ರಂಥಾಲಯವನ್ನು ನಿರ್ಮಿಸಬೇಕೆಂಬ ಬೇಡಿಕೆಗಳನ್ನು ಇಡಲು ತೀರ್ಮಾನಿಸಿದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!