• Sat. Jul 27th, 2024

PLACE YOUR AD HERE AT LOWEST PRICE

ಕೆ.ರಾಮಮೂರ್ತಿ.

ಬಂಗಾರಪೇಟೆ:ಕೋಲಾರ, ಕೆಜಿಎಫ್ ಮತ್ತು ಬಂಗಾರಪೇಟೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಪ್ರತಿದಿನ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಮಾಡುತ್ತಾ ಬಂಗಾರಪೇಟೆ ರೈಲ್ವೆ ನಿಲ್ದಾಣದ ಬಳಿಗೆ ಸರ್ಕಾರಿ ವಾಹನ ಕರೆಸಿಕೊಂಡು ಕಛೇರಿಗೆ ತೆರಳುವ ಮೂಲಕ ಸರ್ಕಾರಿ ವಾಹನ ದುರುಪಯೋಗಪಡಿಸಿಕೊಳ್ಳುತ್ತಿದ್ದರೂ ಜಿಲ್ಲಾಧಿಕಾರಿಗಳು ಅಥವಾ ಮೇಲಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ವಾಸ ಇರಬೇಕು ಎಂಬ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿರುವ ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು  ಮಟ್ಟದ ಬಹುತೇಕ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸವಿಲ್ಲ. ಬದಲಿಗೆ ಬೆಂಗಳೂರು ಮತ್ತು ಬೇರೆ ಬೇರೆ ಕಡೆ ವಾಸವಿದ್ದು ಪ್ರತಿದಿನ ದೂರದಿಂದ ಪ್ರಯಾಣಿಸಿ ಕಛೇರಿಗೆ ಬರುತ್ತಿದ್ದಾರೆಂದು ಆರೋಪಿಸಲಾಗಿದೆ.

ಅಧಿಕಾರಿ ಕೇಂದ್ರ ಸ್ಥಾನದಲ್ಲಿ ವಾಸವಿದ್ದರೆ ಯಾವುದೇ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ನೆರವಾಗಲು ಅನುಕೂಲ ಎಂದು ಸರ್ಕಾರ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ವಾಸ ಇರಬೇಕೆಂದು ಆದೇಶ ಮಾಡಿದೆ. ಅದಕ್ಕಾಗಿ ಅಧಿಕಾರಿ/ಸಿಬ್ಬಂದಿಗೆ ಹೆಚ್.ಆರ್.ಎ ಮೊದಲಾದ ಭತ್ಯೆಗಳ ಮೂಲಕ ಹಣವನ್ನೂ ನೀಡಲಾಗುತ್ತಿದೆ ಎನ್ನಲಾಗಿದೆ.

ಆದರೆ ಅಧಿಕಾರಿಗಳು ಮಾತ್ರ ಕೇಂದ್ರ ಸ್ಥಾನದಲ್ಲಿ ವಾಸ ಇರದೆ ದಿನನಿತ್ಯ ಬೆಂಗಳೂರು ಮತ್ತು ಬೇರೆ ಬೇರೆ ಕಡೆಗಳಿಂದ ಪ್ರಯಾಣಿಸಿ ಬರುತ್ತಾರೆ. ಬಹುತೇಕರು ಬೆಂಗಳೂರುನಿಂದ ರೈಲಿನಲ್ಲಿ ಬಂದು ಬಂಗಾರಪೇಟೆಯಲ್ಲಿ ಇಳಿದು ಇಲ್ಲಿಗೆ ಸರ್ಕಾರಿ ವಾಹವ ಕರೆಸಿಕೊಂಡು ಕಛೇರಿಗೆ ತೆರಳುವ ಮೂಲಕ ಸರ್ಕಾರಿ ವಾಹನ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಲಾಗಿದೆ.

ಈ ಬಗ್ಗೆ ಅನೇಕ ಬಾರಿ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗಿದೆ. ಕಲೆವು ದಿನಗಳ ಹಿಂದೆ ನಮ್ಮಸುದ್ದಿ.ಕಾಂನಲ್ಲೂ ವಿವರವಾದ ವರದಿ ಪ್ರಕಟವಾಗಿತ್ತು. ಈ ಬಗ್ಗೆ ಸಾರ್ವಜನಿಕರೂ ಅನೇಕ ಬಾರಿ ದೂರುಗಳನ್ನು ನೀಡಿದ್ದಾರೆನ್ನಲಾಗಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಮೌನವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂಬ ಆರೋಪವಿದೆ.

ಇಂದು ಬೆಳಿಗ್ಗೆ ಬಂಗಾರಪೇಟೆ ರೈಲ್ವೆ ನಿಲ್ದಾಣದ ಬಳಿ ಕೋಲಾರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಾಹನ, ಕೋಲಾರದ ಲೋಕೋಪಯೋಗಿ ಇಲಾಖೆ ವಾಹನ, ಕೆಜಿಎಫ್ ನ ತಾಪಂ ಕಾರ್ಯನಿರ್ವಹಣಾಧಿಕಾರಿಗಳ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ವಾಹನ ಮೊದಲಾದ ವಾಹನಗಳು ರೈಲಿನಲ್ಲಿ ಬಂದ ಅಧಿಕಾರಿಗಳನ್ನು ಹತ್ತಿಸಿಕೊಂಡು ಹೋದವು ಎನ್ನಲಾಗುತ್ತಿದೆ. ಇದಲ್ಲದೆ ಪ್ರತಿದಿನ ಕೋಲಾರ, ಕೆಜಿಎಫ್ ಮತ್ತು ಬಂಗಾರಪೇಟೆಯಲ್ಲಿ ಕೆಲಸ ಮಾಡುವ ಬಹುತೇಕ  ಅಧಿಕಾರಿಗಳನ್ನು ಕರೆದುಕೊಂಡು ಹೋಗಲು ಪ್ರತಿನಿತ್ಯ ಸರ್ಕಾರಿ ವಾಹನಗಳು ರೈಲ್ವೆ ನಿಲ್ದಾಣದ ಬಳಿ ಸಾಲುಗಟ್ಟಿ ನಿಲ್ಲುತ್ತವೆ ಎಂದು ಆರೋಪಿಸಲಾಗಿದೆ.

ಪ್ರತಿ ಕೆಲಸದ ದಿನ ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಬೆಳಿಗ್ಗೆ ಮತ್ತು ಸಂಜೆ ಕೋಲಾರ, ಕೆಜಿಎಫ್ ಮತ್ತು ಬಂಗಾರಪೇಟೆಯಲ್ಲಿ ಕೆಲಸ ಮಾಡುವ ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳು  ಕಾಣಿಸಿಕೊಳ್ಳುತ್ತಾರೆ. ಇವರು ಕೇಂದ್ರ ಸ್ಥಾನದಲ್ಲಿ ವಾಸವಿರದೆ ಬೆಂಗಳೂರಿನಲ್ಲಿ ವಾಸವಿದ್ದು, ರೈಲಿನಲ್ಲಿ ಪ್ರತಿದಿನ ಪ್ರಯಾಣಿಸುತ್ತಾರೆಂದು ಆರೋಪಿಸಲಾಗಿದೆ.

ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುವ ಅಧಿಕಾರಿಗಳಿಂದ ಅಧಿಕಾರ ದುರುಪಯೋಗ ಮತ್ತು ಸರ್ಕಾರಿ ವಾಹನ ದುರುಪಯೋಗವು ಪದೇ ಪದೇ ನಡೆಯುತ್ತಿದೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸವಿರದ ಕಾರಣ ಅನೇಕ ರೀತಿಯ ಸಮಸ್ಯೆಗಳು ದೊಡ್ಡದಾಗಲು ಕಾರಣವಾಗುತ್ತಿದೆ. ತುರ್ತು ಸಂದರ್ಭದಲ್ಲಿ ಅಧಿಕಾರಿ ಸಿಗದೆ ಅನೇಕ ರೀತಿಯ ತೊಂದರೆಗಳಿ ತಕ್ಷಣ ಪರಿಹಾರ ಇಲ್ಲದಂತಾಗಿದೆ.

ಜಿ್ಲ್ಲಾಧಿಕಾರಿಗಳಾಗಲಿ ಅಥವಾ ಸಂಬಂಧಪಟ್ಟವರು ಇತ್ತಕಡೆ ಗಮನಹರಿಸಿ ಅಧಿಕಾರ ಮತ್ತು ವಾಹನ ದುರುಪಯೋಗಪಡಿಸಿಕೊಳ್ಳುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕಿದೆ. ಆ ಮೂಲಕ ಪಾರದರ್ಶಕ ಆಡಳಿತಕ್ಕಾಗಿ ಮತ್ತು ಜನತೆಯ ಅನುಕೂಲಕ್ಕಾಗಿ  ಸರ್ಕಾರದ ಗೌರವ ಉಳಿಸುವ ಕೆಲಸ ಆಗಬೇಕಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

…………………………………………

ಕೇಂದ್ರ ಸ್ಥಾನದಲ್ಲಿ ವಾಸ ಇರದ ಕಾರಣ ಅಧಿಕಾರಿಗಳು ಸಮಯಕ್ಕೆ ಸೆರಿಯಾಗಿ ಕಛೇರಿಗಳಿಗೆ ಬರುವುದಿಲ್ಲ. ರೈತರು ದಿನನಿತ್ಯ ಕಛೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಮುಂದುವರೆದಿದೆ. ಜೊತೆಗೆ ಜನಪ್ರತಿನಿಧಿಗಳ ಮನೆಗಳಿಗೆ ಹೋಗಿ ಅವರ ಕೆಲಸಗಳನ್ನು ಮಾಡಿಕೊಡುವುದರಿಂದ ಜನಕ್ಕೆ ಅಧಿಕಾರಿಗಳು ಕಛೇರಿಗಳಲ್ಲಿ ಸಿಗುತ್ತಿಲ್ಲ. ಪ್ರತಿದಿನ 11ಘಂಟೆಯ ನಂತರ ಅಧಿಕಾರಿಗಳು ಕಛೇರಿಗೆ ಬರುವುದರಿಂದ ಜನತೆಗೆ ತೊಂದರೆಯಾಗಿದೆ. ಮದ್ಯಾನ್ಹ ಊಟಕ್ಕೆ ಹೊರಗೆ ಹೋದರೆ ಘಂಟೆಗಟ್ಟಲೆ ಬರುವುದಿಲ್ಲ. ಇಂಥಹ ರೈತ ವಿರೋಧಿ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ಬೇರೆಡೆಗೆ ವರ್ಗಾವಣೆ ಮಾಡಿ ಕೇಂದ್ರ ಸ್ಥಾನದಲ್ಲಿ ವಾಸ ಇರಲು ಇಷ್ಟಪಡುವ ಅಧಿಕಾರಿಗಳನ್ನು ನಿಯೋಜಿಸಲು ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಬೇಕು.

ರಾಮೇಗೌಡ. ಜಿಲ್ಲಾಧ್ಯಕ್ಷರು, ಹಸಿರು ಸೇನೆ, ಕೋಲಾರ ಜಿಲ್ಲೆ, ಬಂಗಾರಪೇಟೆ.

…………………………………………

ಕೆಜಿಎಫ್ ಗಡಿತಾಲ್ಲೂಕಾಗಿದ್ದು ಅತಿ ಸೂಕ್ಷ್ಮ ಪ್ರದೇಶವಾಗಿದೆ. ಹೊಸದಾಗಿ ತಾಲ್ಲೂಕು ಅಸ್ತಿತ್ವಕ್ಕೆ ಬಂದ ನಂತರ ತಾಲ್ಲೂಗೆ ಬಂದ ಬಹುತೇಕ ಅಧಿಕಾರಿಗಳು ಇಲ್ಲಿ ವಾಸ ಇಲ್ಲ. ತುರ್ತು ಸಮಸ್ಯೆ ಏರ್ಪಟ್ಟರೆ ಗತಿ ಇಲ್ಲದ ಸ್ಥಿತಿ ಇದೆ. ಕೆಜಿಎಫ್ ನಲ್ಲಿ ಕೆಲಸ ಮಾಡುತ್ತಿರುವ ಬಹುಪಾಲು ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಛೇರಿಗೆ ಬರುತ್ತಿಲ್ಲ. ದಿನನಿತ್ಯ ಬೆಂಗಳೂರಿನಿಂದ ಪಿಕ್ ನಿಕ್ ಗೆ ಬರುವ ರೀತಿ ಬಂದು ಹೋಗುತ್ತಿದ್ದಾರೆ. ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರಿ ವಾಹನಗಳನ್ನು ಬಂಗಾರಪೇಟೆ ರೈಲ್ವೆ ನಿಲ್ದಾಣಕ್ಕೆ ಕರೆಸಿಕೊಂಡು ದುಂದುವೆಚ್ಚ ಮಾಡುತ್ತಿದ್ದಾರೆ. ಇವರ ಮೇಲೆ ಕ್ರಮ ಜರುಗಿಸಬೇಕು. ಇಲ್ಲೇ ಉಳಿಯಲು ಇಷ್ಟವಿಲ್ಲದಿದ್ದರೆ ಇವರನ್ನು ಬೇರೆಡೆಗೆ ವರ್ಗಾವಣೆ ಮಾಡಿ ಇಲ್ಲಿ ಇರಲು ಇಷ್ಟಪಡುವ ಅಧಿಕಾರಿಗಳನ್ನು ನಿಯೋಜಿಸಬೇಕು.

ಎಪಿಎಲ್ ರಂಗನಾಥ್. ಬೆಂಗಳೂರು ವಿಭಾಗೀಯ ಸಂಚಾಲಕರು, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ), ಕೆಜಿಎಫ್.

Leave a Reply

Your email address will not be published. Required fields are marked *

You missed

error: Content is protected !!