• Sat. Apr 27th, 2024

PLACE YOUR AD HERE AT LOWEST PRICE

ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಬೇರೆ ವ್ಯಕ್ತಿಯನ್ನು ಅಭ್ಯರ್ಥಿ ಮಾಡುವುದು ಸರಿಯಲ್ಲ. ಅವರಿಗೂ ಬೇಡ, ಇವರಿಗೂ ಬೇಡ ಎಂಬ ಧೋರಣೆಯಿಂದ ಮೂರನೆಯವರನ್ನು ಕಣಕ್ಕಿಳಿಸಿದರೆ ಯಾರೂ ಕೆಲಸ ಮಾಡುವುದಿಲ್ಲ. ಅಲ್ಲದೇ ಅಭ್ಯರ್ಥಿಯಾಗಿ ಬಂದವರು ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ಸಚಿವ ಕೆ ಎಚ್ ಮುನಿಯಪ್ಪ ಎಚ್ಚರಿಕೆ ನೀಡಿದರು.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಎರಡೂ ಬಣಗಳು ಒಂದಾದರೆ ಮಾತ್ರ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯ. ಅದನ್ನು ಬಿಟ್ಟು ಮೂರನೇ ವ್ಯಕ್ತಿಯನ್ನು ಕಣಕ್ಕಿಳಿಸುತ್ತೇವೆ ಎಂದರೆ ಗೆಲ್ಲಲು ಸಾಧ್ಯವಿಲ್ಲ” ಎಂದು ಕಡ್ಡಿ ಮುರಿದಂತೆ ತಿಳಿಸಿದರು.

“ಇತ್ತೀಚಿನ ಬೆಳವಣಿಗೆಗಳಿಂದ ನನಗೆ ನೋವಾಗಿದೆ. ಇದನ್ನೂ ಮೀರಿ ನನಗೆ ಪಕ್ಷ ಮುಖ್ಯ. ಇಲ್ಲಿ ನಾವಿಬ್ಬರೂ ಒಂದಾಗದಿದ್ದರೆ ಮೂರನೇ ವ್ಯಕ್ತಿ ಅಭ್ಯರ್ಥಿಯಾಗಿ ಬಂದರೂ ಗೆಲುವು ಕಷ್ಟ. ರಮೇಶ್‌ ಕುಮಾರ್‌ ಮತ್ತು ನನ್ನನ್ನು ಮೊದಲು ಒಂದು ಮಾಡಿ, ನಂತರ ಚುನಾವಣೆ ಮಾಡಿ ಎಂದಿದ್ದೇನೆ” ಎಂದರು.‌

ರಮೇಶ್‌ ಕುಮಾರ್‌ ಜೊತೆ ಸಮಸ್ಯೆ ಪರಿಹರಿಸಿ

“ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಲವರು ಕಾಂಗ್ರೆಸ್‌ ಪಕ್ಷಕ್ಕೆ ಬಂದರು. ಪಕ್ಷ ಗೆಲ್ಲಬೇಕು ಎಂಬ ಕಾರಣಕ್ಕೆ ನಾನು ಯಾರನ್ನೂ ವಿರೋಧಿಸಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಯಾರ ವಿರುದ್ಧವೂ ಕೆಲಸ ಮಾಡಿಲ್ಲ. ರಮೇಶ್‌ ಕುಮಾರ್‌ ಮತ್ತು ನನ್ನ ಮಧ್ಯೆ ಸಮಸ್ಯೆ ಪರಿಹರಿಸುವಂತೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಮನವಿ ಮಾಡಿರುವೆ” ಎಂದು ಹೇಳಿದರು.

“ನಾನು ಕೂಡ ಒಬ್ಬ ಅಭ್ಯರ್ಥಿಯ ಹೆಸರು ಹೇಳಿದ್ದೇನೆ. ಮೂರನೇ ಅಭ್ಯರ್ಥಿಯ ಹೆಸರನ್ನು ನಾನು ಹೇಳಿಲ್ಲ. ನಮ್ಮ ಕುಟುಂಬದ ಚಿಕ್ಕಪೆದ್ದಣ್ಣ ಅವರಿಗೇ ಟಿಕೆಟ್‌ ಕೊಡುವಂತೆ ನಾನು ಕೇಳಿದ್ದೇನೆ. ಗೌತಮ್‌ ಹೆಸರನ್ನು ನಾನು ಹೇಳಿಲ್ಲ. ಯಾರೇ ಅಭ್ಯರ್ಥಿಯಾದರೂ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ” ಎಂದು ತಿಳಿಸಿದರು.

ನಾವಿಬ್ಬರೂ ಒಂದಾದರೆ ಗೆಲುವು ಖಚಿತ

ರಮೇಶ್‌ ಕುಮಾರ್‌ ಮತ್ತು ನನ್ನನ್ನು ಒಂದು ಮಾಡಿದರೆ ಕೋಲಾರ, ಚಿಕ್ಕಬಳ್ಳಾಪುರ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತೇವೆ. ರಮೇಶ್‌ ಕುಮಾರ್‌ ಅವರ ಜತೆ ಚರ್ಚಿಸಲು ಪ್ರಯತ್ನಿಸಿದೆ. ನಾನೇ ಅವರ ಮನೆ ಬಳಿ ಹೋಗಿದ್ದೆ. ಆದರೆ, ಅವರು ಮನೆಯಲ್ಲಿರಲಿಲ್ಲ. ಕಾಂಗ್ರೆಸ್‌ ಕಚೇರಿಯಲ್ಲಿ ಅವರ ಜತೆ ಮಾತನಾಡಿದೆ. ಎಲ್ಲವನ್ನೂ ಬಿಟ್ಟುಬಿಡೋಣ ಎಂದು ಅವರೇ ಹೇಳಿದ್ದರು” ಎಂದರು.

“ನಾನು ಮತ್ತೊಮ್ಮೆ ಮನವಿ ಮಾಡುತ್ತೇನೆ. ನಾನು ಹೇಳಿದ ಅಭ್ಯರ್ಥಿಗೆ ಟಿಕೆಟ್‌ ಕೊಟ್ಟರೆ ಖಂಡಿತವಾಗಿಯೂ ಗೆಲ್ಲಿಸಿಕೊಂಡು ಬರುತ್ತೇನೆ. ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್‌ ಕೊಡುವಂತೆ ಕಾಂಗ್ರೆಸ್‌ ಹೈಕಮಾಂಡ್‌ ಬಳಿಯೂ ಹೇಳಿದ್ದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಮನವರಿಕೆ ಮಾಡಿದ್ದೆ. ಈಗಲೂ ಕಾಲ ಮಿಂಚಿಲ್ಲ” ಎಂದು ಹೇಳಿದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!