• Mon. Apr 29th, 2024

PLACE YOUR AD HERE AT LOWEST PRICE

ಕೋಲಾರ : ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲಿನ ಭದ್ರಕೋಟೆಯಾಗಿದೆ. ಕಳೆದ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಕೆ.ಹೆಚ್.ಮುನಿಯಪ್ಪ ಅವರ ವಿರುದ್ಧ ಸ್ವಪಕ್ಷೀಯರೇ ತಿರುಗಿಬಿದ್ದ ಕಾರಣ ಸೋಲು ಅನುಭವಿಸಬೇಕಾಯಿತು. ಹಾಗಾಗಿ  ಕ್ಷೇತ್ರ ಬಿಜೆಪಿ ಅಭ್ಯರ್ಥಿಯ ಪಾಲಾಯಿತು. ಬಿಜೆಪಿಯ ಎಸ್.ಮುನಿಸ್ವಾಮಿ ೨ ಲಕ್ಷ ಮತಗಳ ಅಂತರದಿoದ ಗೆಲುವು ಸಾಧಿಸಿದ್ದರು. ಈ ಬಾರಿ ಕೆ,ಹೆಚ್.ಮುನಿಯಪ್ಪನವರು ರಾಜ್ಯ ಸರ್ಕಾರದ ಆಹಾರ ಸಚಿವರಾಗಿದ್ದು ಲೋಕಾ ಸ್ಪರ್ಧೆಗೆ ನಿರುತ್ಸಾಹ ತೋರಿದ್ದರಿಂದ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಫೈಟ್ ಜೋರಾಗಿಯೇ ನಡೆಯಿತು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡ ಹಿನ್ನಲೆಯಲ್ಲಿ ಸಂಸದ ಎಸ್. ಮುನಿಸ್ವಾಮಿ ಈ ಬಾರಿ ಮತ್ತೊಮ್ಮೆ ತಮ್ಮ ಆಯ್ಕೆ ಖಚಿತ ಎಂದೇ ವಿಶ್ವಾಸದಲ್ಲಿದ್ದರು. ಆದರೆ, ಜೆಡಿಎಸ್ ಪಕ್ಷ ಮೈತ್ರಿ ಕೂಟದಲ್ಲಿ ತಮಗೆ ಸಿಕ್ಕ ೩ ಕ್ಷೇತ್ರಗಳಲ್ಲಿ ಕೋಲಾರವೂ ಒಂದಾಗಿತ್ತು. ಕೋಲಾರ ಕ್ಷೇತ್ರಕ್ಕಾಗಿ ಬಿಗಿ ಪಟ್ಟು ಹಿಡಿಯಿತು. ಆದ್ದರಿಂದ ಮೈತ್ರಿ ಟಿಕೆಟ್ ಜೆಡಿಎಸ್ ಪಕ್ಷದ ಪಾಲಾಯಿತು. ಈ ನಡುವೆ ಜೆಡಿಎಸ್ ಪಕ್ಷದಲ್ಲಿ ೩ ಜನ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದರು. ದೇವನಹಳ್ಳಿಯ ನಿಸರ್ಗ ನಾರಾಯಣಸ್ವಾಮಿ, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್, ಹಾಗೂ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಎರಡು ಬಾರಿ ಪರಾಜಿತ ಅಭ್ಯರ್ಥಿ ಮಲ್ಲೇಶ್ ಬಾಬು ಟಿಕೆಟ್ ಪೈಟ್ ನಡೆಸಿದರು. ಕೊನೆಗೆ ಟಿಕೆಟ್ ಮಲ್ಲೇಶ್‌ಬಾಬುಗೆ ಲಭಿಸಿತು.
ಕಾಂಗ್ರೆಸ್ ಟಿಕೆಟ್‌ಗಾಗಿ ಕೆ.ಹೆಚ್.ಮುನಿಯಪ್ಪ ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ನೀಡಬೇಕು ಎಂದು ಹಟ ಹಿಡಿದರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಜಿಲ್ಲೆಯಲ್ಲಿ ಬಲಗೈ ಸಮುದಾಯ ಹೆಚ್ಚಿರುವ ಕಾರಣ ಬಲಗೈ ಸಮುದಾಯಕ್ಕೆ ನೀಡಬೇಕೆಂದು ಒತ್ತಡ ಹೇರಿದರು. ಇವರಿಬ್ಬ ಜಗಳ ರಾಜ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವಾಗಿ ಅಂತಿಮವಾಗಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಇಬ್ಬರಿಗೂ ಒಪ್ಪಿಗೆಯಾದ ಒಮ್ಮತದ ಅಭ್ಯರ್ಥಿಯಾಗಿ ಬೆಂಗಳೂರಿನ ಯುವಕ ಕೆ.ವಿ.ಗೌತಮ್‌ಗೆ ಟಿಕೆಟ್ ನೀಡಿ ಕಣಕ್ಕಿಳಿಸಿದೆ.
ಕೋಲಾರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಮತದಾರರು ಶೇ.೩೮ ರಷ್ಟು ಇದ್ದು, ಸುಮಾರು ೫ ಲಕ್ಷಕ್ಕೂ ಹೆಚ್ಚು ಮತದಾರರು  ಇದ್ದು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಇವರೊಂದಿಗೆ ಅಲ್ಪಸಂಖ್ಯಾತರರು ಹಾಗೂ ಅತಿ ಹಿಂದುಳಿದ ಜಾತಿಗಳು ಅಂದಾಜು ಶೇ.೪೫ ರಷ್ಟು ಜನ ಸಂಖ್ಯೆ ಇದ್ದು. ಒಟ್ಟಾರೆಯಾಗಿ ಅಹಿಂದ ಸಮುದಾಯಗಳು ಶೇ. ೮೦ಕ್ಕೂ ಹೆಚ್ಚು ಇದ್ದು ಇವರ ಮತಗಳೇ ಅಂತಿಮ ಫಲಿತಾಂಶದ ಮೇಲೆ ಪರಿಣಾಮ ಬೀರಬಲ್ಲವು ಎಂಬoತಾಗಿದ್ದು, ಈ ಕಾರಣಕ್ಕಾಗಿಯೇ ಕೋಲಾರ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ ಎಂದು ಬೀಗುತ್ತಿತ್ತು. ಆದರೆ, ಕಳೆದ ೨೦೧೯ರ ಚುನಾವಣೆ ಈ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ್ದನ್ನು ಅಲ್ಲಗೆಳೆಯುವಂತಿಲ್ಲ.
೧೭ ಚುನಾವಣೆಗಳಲ್ಲಿ ಗೆದ್ದವರು ೮ ಮಂದಿ ಮಾತ್ರ!
ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಈವರೆಗೂ ಹದಿನಾರು ಚುನಾವಣೆಗಳು ನಡೆದಿದ್ದರೂ ಆರಂಭದ ಎರಡು ಚುನಾವಣೆಗಳಲ್ಲಿ ದ್ವಿಸದಸ್ಯ ಕ್ಷೇತ್ರವಿತ್ತು. ಹಾಗಾಗಿ ಈವರೆಗೂ ಕ್ಷೇತ್ರವನ್ನು ಸಂಸತ್ತಿನಲ್ಲಿ ಪ್ರತಿನಿಧಿಸಿದವರು ಕೇವಲ ೮ ಮಂದಿ.
ಒಟ್ಟು ೧೭ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ತಿಮ್ಮಯ್ಯ ೩ ಬಾರಿ ಇವರೊಂದಿಗೆ ದ್ವಿಸದಸ್ಯ ಕ್ಷೇತ್ರಗಳನ್ನು ಹಂಚಿಕೊoಡ ಎಂ.ವಿ.ಕೃಷ್ಣಪ್ಪ, ಕೆ.ಚಂಗಲರಾಯರೆಡ್ಡಿ, ಆನಂತರ ನಾಲ್ಕು ಬಾರಿ ಗೆದ್ದ ಜಿ.ವೈ.ಕೃಷ್ಣನ್, ತಲಾ ಒಂದು ಬಾರಿ ಗೆದ್ದ ಡಾ.ಜಿ.ವೆಂಕಟೇಶ್, ವೈ.ರಾಮಕೃಷ್ಣ ಹಾಗೂ ಎಸ್.ಮುನಿಸ್ವಾಮಿ. ಇವರೊಂದಿಗೆ ಕೆ.ಹೆಚ್.ಮುನಿಯಪ್ಪ ಸತತ ಏಳು ಬಾರಿ ಗೆಲುವು ಪಡೆದು ದಾಖಲೆ ಬರೆದಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದ ಮತ್ತೊಂದು ವಿಶೇಷವೆಂದರೆ, ಲೋಕಸಭಾ ಚುನಾವಣೆಯಲ್ಲಿ ಒಮ್ಮೆ ಸೋತವರು ಮತ್ತೇ ಚುನಾವಣೆ ಗೆದ್ದಿದ್ದೇ ಇಲ್ಲ. ಗೆಲ್ಲುವವರು ಗೆಲ್ಲುತ್ತಲೇ ಇರುತ್ತಾರೆ. ಗೆದ್ದವರು ಒಮ್ಮೆ ಸೋತರೆಂದರೆ ಜನ ಅವರನ್ನು ಪುನರಾಯ್ಕೆ ಮಾಡಿಕೊಂಡಿದ್ದೇ ಇಲ್ಲ. ಆದರೆ, ಇಲ್ಲಿಯವರೆಗೆ ೩ ಜನ ಗೆದ್ದ ಅಭ್ಯರ್ಥಿಗಳಿಗೆ ಎರಡನೇ ಅವಧಿಗೆ ಟಿಕೆಟ್ ನೀಡದೆ ನಿರಾಕರಿಸಲಾಗಿದೆ. ೧೯೮೪ರಲ್ಲಿ ಆಯ್ಕೆಯಾದ ಡಾ.ವೆಂಕಟೇಶ್, ಆನಂತರ ಬಂದ ವೈ.ರಾಮಕೃಷ್ಣ, ಇದೀಗ ಎಸ್. ಮುನಿಸ್ವಾಮಿ ೨ ಲಕ್ಷ ಮತಗಳಿಂದ ಆಯ್ಕೆಯಾಗಿದ್ದವರು ಎರಡನೇ ಬಾರಿಗೆ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಮೈತ್ರಿ ಕಾರಣದಿಂದಾಗಿ ಟಿಕೆಟ್ ವಂಚಿತರಾಗಿದ್ದಾರೆ.
ಇನ್ನೂ ಚುನಾವಣೆಗೆ ಅಭ್ಯರ್ಥಿಯಾಗಿ ಪಕ್ಷದ ಬಿ.ಫಾರಂ ಪಡೆದಿರುವ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು, ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಇಬ್ಬರೂ ಹೊಸ ಅಭ್ಯರ್ಥಿಗಳಾದ್ದು. ಮತದಾರ ಪ್ರಭುವಿಗೆ ಆಭ್ಯರ್ಥಿಗಳ ಬಗ್ಗೆ ತಿಳಿದುಕೊಳ್ಳಲೂ ಸಾಧ್ಯವಾಗದ  ಪರಿಸ್ಥಿತಿಯಲ್ಲಿ ಮತಚಲಾವಣೆಗೆ ಸಜ್ಜಾಗಿದ್ದಾರೆ. ತಮ್ಮ ಮತ ಯಾರಿಗೆ ಎಂಬುದರ ಬಗ್ಗೆಯೇ ಇನ್ನೂ ಸಾರ್ವಜನಿಕ ವಲಯದಲ್ಲಿ ಮತದಾರ ಒಂದು ಅಭಿಪ್ರಾಯಕ್ಕೆ ಬಾರದ ಸ್ಥಿತಿಯಲ್ಲಿ ಯಾವ ಪಕ್ಷ, ಯಾರಿಗೆ ಮತ ಎಂಬುವ ಅಳೆದು ತೂಗುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್,ಬಿಜೆಪಿ ಮೈತ್ರಿ ಕೂಟ ದೊಡ್ಡ ಮಟ್ಟದಲ್ಲೇ ಚುನಾವಣಾ ಪ್ರಚಾರಕ್ಕೆ ಇಳಿದಿದೆ.
ಈಗಾಗಲೇ ಕಾಂಗ್ರೆಸ್ ತಮ್ಮ ಅಭ್ಯರ್ಥಿಯ ನಾಮಪತ್ರ ಸಲ್ಲಿಸಿದ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರು ರೋಡ್ ಶೋ ನಡೆಸಿದ್ದಾರೆ. ಎಲ್ಲಾ ತಾಲ್ಲೂಕುಗಳಲ್ಲಿ ಚುನಾವಣಾ ಪ್ರಚಾರ ಸಭೆಗಳು ನಡೆಯುತ್ತಿವೆ. ಇನ್ನೂ ಕಾಂಗ್ರೆಸ್ ಒಳಗಿನ ಗುಂಪುಗಾರಿಕೆ ಬಹುತೇಕ ಶಮನಗೊಳ್ಳುವ ಹಂತ ತಲುಪಿರುವ ಕಾರಣ ಇದೇ ಏಪ್ರಿಲ್ ೬ರಂದು ಖುದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಮೂಡಲಬಾಗಿಲಿನ ವಿಘ್ನವಿನಾಶಕ ಕುರುಡುಮಲೆ ಗಣೇಶನ ಸನ್ನಿಧಿಯಲ್ಲಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಲಿದ್ದಾರೆ.
ಮತ್ತೊಂದು ಕಡೆ ಮೈತ್ರಿ ಅಭ್ಯರ್ಥಿ ಪರವಾಗಿ ಈಗಾಗಲೇ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ಹಿರಿಯ ಮುಖಂಡ ಜಿಟಿ.ದೇವೇಗೌಡ ಹಾಗೂ ಬಿಜೆಪಿಯ ಅರವಿಂದ ಲಿಂಬಾವಳಿ ಜೊತೆಗೆ ಸಂಸದ ಎಸ್.ಮುನಿಸ್ವಾಮಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಮೈತ್ರಿ ಅಭ್ಯರ್ಥಿಯ ಪರವಾಗಿ ಬಿಜೆಪಿ ಪಕ್ಷದವರಿಗೆ ಇರುವ ಉತ್ಸಾಹ ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಕಾಣುತ್ತಿಲ್ಲ, ಈ ಬೆಳವಣಿಗೆ ಉಭಯ ಪಕ್ಷಗಳಲ್ಲಿ ಹೊಂದಾಣಿಕೆಯ ಕೊರತೆ ಹಾಗೂ ಕಾರ್ಯಕರ್ತರಲ್ಲಿ ಅಸಮದಾನದ ಹೊಗೆಯಾಡುತ್ತಿರುವಂತೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ತಳ ಮಟ್ಟದ ಕಾರ್ಯಕರ್ತರನ್ನು ಜೆಡಿಎಸ್ ಕಡೆಗಣಿಸಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದರೂ ಬಿಜೆಪಿ ಅವಕಾಶ ಕಳೆದುಕೊಂಡರೂ ಸಹ ತಮ್ಮದೇ ಅಭ್ಯರ್ಥಿ ಎಂಬoತೆ ಅತಿ ಉತ್ಸಾಹದಲ್ಲಿ ಚುನಾವಣೆಯಲ್ಲಿ ಭಾಗವಹಿಸುತ್ತಿರುವುದು ಕಂಡುಬರುತ್ತಿದೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ೮ ವಿಧಾನಸಭೆ ಕ್ಷೇತ್ರಗಳು ಇದ್ದು, ೩ ಕ್ಷೇತ್ರಗಳಲ್ಲಿ ಜೆಡಿಎಸ್. ೫ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆ. ಬಿಜೆಪಿ ಪಕ್ಷದ ಯಾವುದೇ ಶಾಸಕರು ಇಲ್ಲದಿದ್ದರೂ ಹಾಲಿ ಸಂಸದರು ಬಿಜೆಪಿ ಪಕ್ಷದವರೇ ಆಗಿದ್ದು, ಮೂರೂ ಪಕ್ಷಗಳ ಬಲಾಬಲ ಬಹುತೇಕ ಸಮಬಲ ಎಂದೇ ಹೇಳಬಹುದು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುವುದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ತಾಕತ್ತಾಗಿದ್ದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಹಾಗೂ ಮೋದಿ ಅಲೆ, ಮೈತ್ರಿ ಆಭ್ಯರ್ಥಿಗೆ ಶಕ್ತಿಯಾಗಿದೆ.
ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷ ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನೇ ನೆಚ್ಚಿಕೊಂಡು ಮತ ಕೇಳುತ್ತಿದ್ದರೆ, ಮೈತ್ರಿ ಪಕ್ಷಗಳು ಮೋದಿ ಹೆಸರಿನಲ್ಲಿ ಮತ ಕೇಳುತ್ತಿವೆ. ಅಂತಿಮವಾಗಿ ಮತದಾರ ಪ್ರಭು ತನ್ನ ಮತ ಯಾರಿಗೆ ಅನ್ನೋ ಗುಟ್ಟು ಇನ್ನು ಬಿಟ್ಟುಕೊಡದೆ ಇರುವುದು ಕುತೂಹಲಕ್ಕೆ ಕಾರಣವಾಗಿದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!