ಸುಮಾರು ಮೂರು ತಿಂಗಳಿಂದ ಸಾರ್ವಜನಿಕರು ಓಡಾಡುವ ಜನನಿಬಿಡ ಕೋಲಾರ ಪ್ರಭಾತ್ ಚಿತ್ರಮಂದಿರದ ಪಕ್ಕ ಖಾಸಗಿ ಹೋಟೆಲೊಂದರ ಮುಂಭಾಗ ನಡು ರಸ್ತೆಯಲ್ಲೇ ಯುಜಿಡಿ ಬ್ಲಾಕ್ ಆಗಿ ಕೊಳಕು ನೀರು ರಸ್ತೆಯಲ್ಲಿ ಹರಿಯುತ್ತಿದೆ.
ಇದು ನಗರದ ಪ್ರಮುಖ ರಸ್ತೆಗಳಲ್ಲೊಂದಾಗಿದ್ದು, ಜಿಲ್ಲಾಮಟ್ಟದ ಕಚೇರಿಗಳಿಗೆ ಜನತೆ,ಸಿಬ್ಬಂದಿ, ಪದವಿ ಕಾಲೇಜು, ಜೂನಿಯರ್ ಕಾಲೇಜು ಮತ್ತಿತರ ಶಿಕ್ಷಣ ಸಂಸ್ಥೆಗಳಿಗೆ ಈ ರಸ್ತೆಯಲ್ಲೇ ಮೂಗು ಮುಚ್ಚಿಕೊಂಡು ವಿದ್ಯಾರ್ಥಿಗಳು,ನಾಗರೀಕರು ಓಡಾಡಬೇಕಾದ ದುಸ್ಥಿತಿ ಇದೆ.
ಯುಜಿಡಿಯ ಕೊಳಕು ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ನಿಂತ ನೀರಿನಲ್ಲಿ ವಾಹನಗಳು ಸಂಚರಿಸುವಾಗ ಕೊಳಕು ಪಾದಚಾರಿಗಳ ಮೇಲೆ ಹಾರಿ ತೊಂದರೆಯಾಗುತ್ತಿದೆ. ಈ ಯುಜಿಡಿ ಎದುರಿಗೆ ಹೋಟೆಲ್ ಒಂದಿದೆ, ಜತೆಗೆ ಅಲ್ಲೇ ಕಬ್ಬಿನ ಹಾಲಿನ ಅಂಗಡಿಯೂ ಇದೆ, ಇಷ್ಟೆಲ್ಲಾ ಇದ್ದರೂ, ನಗರಸಭೆಗೆ ಮಾತ್ರ ಈ ಯುಜಿಡಿ ಬ್ಲಾಕ್ ಆಗಿರುವುದು ಕಾಣಿಸಿಯೇ ಇಲ್ಲ.
ಇದೇ ಜಾಗದಲ್ಲೇ ಜೆರಾಕ್ಸ್ ಅಂಗಡಿಗಳು, ಸಬ್ ರಿಜಿಸ್ಟರ್ ಆಫೀಸ್, ಪ್ರಭಾತ್ ಸಿನಿಮಾ ಮಂದಿರ ಇದ್ದು ಜನರು ಪ್ರತಿನಿತ್ಯ ಹಿಡಿಶಾಪ ಹಾಕಿಕೊಂಡು ಓಡಾಡುತ್ತಿದ್ದಾರೆ.
ಕೂಡಲೇ ನಗರಸಭೆ ಅಥವಾ ಜಿಲ್ಲಾಧಿಕಾರಿಗಳು ಗಮನಹರಿಸಿ, ಈ ಯುಜಿಡಿ ಸಮಸ್ಯೆ ಪರಿಹರಿಸಿ, ನಗರದಲ್ಲಿ ಸಂಚರಿಸುವ ನಾಗರೀಕರು ನೆಮ್ಮದಿಯಿಂದ ಓಡಾಡಲು ಅವಕಾಶ ಕಲ್ಪಿಸಲಿ ಮತ್ತು ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿರುವ ಈ ಯುಜಿಡಿ ಸರಿಪಡಿಸಲಿ ಎಂದು ಈ ಭಾಗದ ಅಂಗಡಿ ಮಾಲೀಕರು, ಮುಖಂಡರು ಆಗ್ರಹಿಸಿದ್ದಾರೆ.