ಯಾರೇ ಆಗಲಿ ಕೆಲಸ ಮಾಡುತ್ತಿದ್ದರೆ ಎಲ್ಲವೂ ಸುಲಭವಾಗಿರುತ್ತದೆ, ಕೆಲಸ ಮಾಡುವುದನ್ನು ನಿಲ್ಲಿಸಿ ಸೋಮಾರಿಯಾದಲ್ಲಿ ಪ್ರತಿಯೊಂದು ಹೆಜ್ಜೆಯೂ ಕಷ್ಟವಾಗುತ್ತದೆ ಎಂದು ಜೆಡಿಎಸ್ ಅಭ್ಯರ್ಥಿ ಡಾ.ರಮೇಶ್‍ಬಾಬು
ಹೇಳಿದರು.
ಕೆಜಿಎಫ್ ನಗರದ ವಿವೇಕ್‍ನಗರದ ಸ್ವಾಮಿ ವಿವೇಕಾನಂದ ಉದ್ಯಾನವನದಲ್ಲಿ ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಸ್ವಾಮಿ ವಿವೇಕಾನಂದ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಯಾವುದೇ ವ್ಯಕ್ತಿ ಸದಾ ಕ್ರಿಯಾಶೀಲವಾಗಿದ್ದಲ್ಲಿ ಮಾತ್ರ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ವಿವೇಕಾನಂದರು 1893ರ ಸೆಪ್ಟಂಬರ್ 11ರಂದು ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ನೀಡಿದ ಒಂದೇ ಒಂದು ಭಾಷಣದಿಂದ ಸಹಸ್ರಾರು ಸಂಖ್ಯೆಯ ಪಾಶ್ಚ್ಯಾತ್ಯರು ಎದ್ದು ನಿಂತು ಅಭಿನಂದನೆ ಸಲ್ಲಿಸಿದ್ದನ್ನು ಪ್ರತಿಯೊಬ್ಬ ಭಾರತೀಯರು ಸ್ಮರಿಸುವಂತಾಗಬೇಕು ಎಂದರು.
ಕೆಜಿಎಫ್ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ಜನಪ್ರತಿನಿಧಿಗಳ ಅಸಡ್ಡೆ, ಬಹುಮುಖ್ಯವಾಗಿ ಹೊಟ್ಟೆಪಾಡಿಗಾಗಿ ದಿನಬೆಳಗಾದರೆ ಯುವಕ, ಯುವತಿಯರು ದೂರದ ಬೆಂಗಳೂರಿಗೆ ಗಂಟೆಗಟ್ಟಲೆ ಪ್ರಯಾಣ ಮಾಡುತ್ತಿದ್ದಾರೆ.
ಕಾರ್ಮಿಕರ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳು ತಾಂಡವವಾಡುತ್ತಿದ್ದು, ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮಾತ್ರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದರು.
ಕುಮಾರಸ್ವಾಮಿಯವರು ಈಗಾಗಲೇ ಘೋಷಿಸಿರುವಂತೆ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಂಘಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಲಾಗುವುದು ಎಂದರು.
ಕೆಜಿಎಫ್‍ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ಅಧಿಕಾರ ನಡೆಸಿರುವುದನ್ನು ನೋಡಿದ್ದು, ಈ ಬಾರಿ ತಮಗೆ ಆಶೀರ್ವಾದ ಮಾಡಿದಲ್ಲಿ, ಕ್ಷೇತ್ರದ ಜನತೆಯ ಮನೆ ಮಗನಾಗಿ ಹಗಲಿರುಳು ದುಡಿಯುವುದಾಗಿ ತಿಳಿಸಿದರು.
ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಗರದ ವಿವಿಧೆಡೆಗಳಲ್ಲಿ ನಡೆಸಲಾದ ಕಾರ್ಯಕ್ರಮದಲ್ಲಿ ನೆರೆದಿದ್ದ ಸುಮಾರು 300 ಮಂದಿ ಮಹಿಳೆಯರಿಗೆ ಉಚಿತವಾಗಿ ಸೀರೆಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ದಯಾನಂದ್, ನಗರಸಭೆ ಮಾಜಿ ಸದಸ್ಯರಾದ ನಟರಾಜ್, ಮುರುಗೇಶ್, ಜಾವಿದ್, ಮನೋಹರ್ ರೆಡ್ಡಿ, ಬಾಬು, ಮಹೇಶ್ ಮೊದಲಾದವರು ಇದ್ದರು.