• Fri. Apr 26th, 2024

PLACE YOUR AD HERE AT LOWEST PRICE

 

ನನ್ನ ವಿರುದ್ದ ದಾಖಲಾಗಿರುವ ೯ ಕೇಸ್‌ಗಳಿಗೆ ನಾನು ತಡೆಯಾಜ್ಞೆ ಪಡೆದುಕೊಂಡಿದ್ದೇನೆ ಎಂದು ಸುಳ್ಳು ಹೇಳಿಕೆ ನೀಡಿರುವ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಸದರಿ ಪ್ರಕರಣಗಳ ಮಾಹಿತಿಯನ್ನು ಮಾಧ್ಯಮದ ಮುಂದೆ ಬಹಿರಂಗಪಡಿಸಿದರೆ ಆ ಕ್ಷಣವೇ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ಮಂಗಳವಾರ ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ಇತ್ತೀಚೆಗೆ ಪತ್ರಿಕಾ ಗೋಷ್ಟಿಯೊಂದರಲ್ಲಿ, ಡಿಸಿಸಿ ಬ್ಯಾಂಕ್‌ನಲ್ಲಿನ ಭ್ರಷ್ಟಾಚಾರದ ವಿರುದ್ದ ೯ ಕೇಸುಗಳು ಹೈಕೋರ್ಟ್ನಲ್ಲಿದ್ದು, ಅದಕ್ಕೆ ಬೆಂಗಳೂರಿನಿಂದ ತಡೆಯಾಜ್ಞೆ ತಂದಿರುವುದೇ ಅವರ ಸಾಧನೆ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಹೇಳಿಕೆ ನೀಡಿದ್ದರ ಹಿನ್ನಲೆಯಲ್ಲಿ ಗೋವಿಂದಗೌಡರು ಪ್ರತ್ಯುತ್ತರ ನೀಡಿದರು.

ಗೋವಿಂದರಾಜು ಹಿರಿಯರು ಆದರೆ ಅವರಿಂದ ಇಂತಹ ಸುಳ್ಳು ಹೇಳಿಕೆ ನಿರೀಕ್ಷಿಸಿರಲಿಲ್ಲ, ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕನ್ನು ಕಟ್ಟಿ ಬೆಳೆಸಿದ್ದೇವೆ. ಡಿಸಿಸಿ ಬ್ಯಾಂಕ್ ಚಿನ್ನದ ತಟ್ಟೆಯಲ್ಲಿ ಊಟ ಮಾಡುವವರಿಗೆ ಸಾಲ ಕೊಟ್ಟಿಲ್ಲ, ಬಡವರಿಗೆ ಕೊಟ್ಟಿದೆ ಮರುಪಾವತಿಯೂ ಸಹ ಆಗುತ್ತಿದೆ.೮ ಲಕ್ಷ ಫಲಾನುಭವಿಗಳಿಗೆ ೧೦ ಸಾವಿರ ಕೋಟಿ ಸಾಲ ನೀಡಿದ್ದೇವೆ, ಇಂತಹ ಸಂದರ್ಭದಲ್ಲಿ ಸುಳ್ಳು ಹೇಳಿಕೆ ನೀಡುವ ಮೂಲಕ ಬಡವರು, ರೈತರು, ಮಹಿಳೆಯರಿಗೆ ಬೆನ್ನೆಲುಬಾಗಿರುವ ಬ್ಯಾಂಕಿನ ಘನತೆಗೆ ಮಸಿ ಬಳಿಯುವ ಎಂಎಲ್‌ಸಿ ಗೋವಿಂದರಾಜು ಪ್ರಯತ್ನ ಅವರ ಘನತೆಗೆ ತಕ್ಕುದಲ್ಲ ಅಸಮದಾನ ವ್ಯಕ್ತಪಡಿಸಿದರು.

ಕೆಂಚಾಪುರ ಸೊಸೈಟಿಯಲ್ಲಿ ನಾರಾಯಣರೆಡ್ಡಿ ಅವರಿಗೆ ಸಂಬಂಧಿಸಿದಂತೆ ಎರಡು ದೂರುಗಳು ದಾಖಲಾಗಿದ್ದವು , ಅದು ಬಹಳ ಹಳೆಯ ಪ್ರಕರಣ, ಅದೂ ಇಗ ವಿಚಾರಣೆ ಮುಗಿದಿದೆ, ಇದನ್ನು ಹೊರತು ಪಡಿಸಿ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ, ಒಂದು ವೇಳೆ ಒಂಬತ್ತು ಕೇಸುಗಳು ದಾಖಲಾಗಿದ್ದು ಅದಕ್ಕೆ ನಾನು ತಡೆಯಾಜ್ಞೆ ತಂದಿದ್ದರೆ ಮಾಧ್ಯಮಗಳ ಮುಂದೆ ದಾಖಲೆ ಸಮೇತ ಸಾಬೀತು ಮಾಡಲಿ, ಒಬ್ಬ ಹಿರಿಯ ರಾಜಕಾರಣಿಯಾಗಿ ಮನಬಂದಂತೆ ಹೇಳಿಕೆ ನೀಡುವ ಮೂಲಕ ಒಂದು ಆರ್ಥಿಕ ಸಂಸ್ಥೆಯ ಘನತೆ ಹಾಳು ಮಾಡುವ ಪ್ರಯತ್ನ ಮಾಡಬಾರದು ಎಂದು ವಾಬ್ದಾಳಿ ನಡೆಸಿದರು.

ಡಿಸಿಸಿ ಬ್ಯಾಂಕ್ ಸಾಲ ನೀಡಿಕೆ, ವಸೂಲಾತಿಯಲ್ಲಿ ರಾಜ್ಯಕ್ಕೆ ಮೊದಲಿದ್ದರೂ, ಠೇವಣಿ ಸಂಗ್ರಹದಲ್ಲಿ ಹಿನ್ನಡೆ ಹೊಂದಿದ್ದೇವೆ, ಗೋವಿಂದರಾಜು ಅಂತಹವರು ಇಂತಹ ಸುಳ್ಳು ಹೇಳಿಕೆ ನೀಡಿ ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನ ನಡೆಸಿದರೆ ಬ್ಯಾಂಕನ್ನೆ ನಂಬಿರುವ ಜಿಲ್ಲೆಯ ಮಹಿಳೆಯರು, ಬಡ ರೈತರಿಗೆ ದ್ರೋಹ ಬಗೆದಂತೆ ಅಲ್ಲವೇ ಎಂದು ಪ್ರಶ್ನಿಸಿದ ಅವರು, ಬ್ಯಾಂಕಿನಲ್ಲಿ ತಪ್ಪು ನಡೆದಿದ್ದರೆ ಅದರ ವಿರುದ್ದ ತನಿಖೆ ನಡೆಸಲು ಮುಕ್ತ ಅವಕಾಶ ನೀಡಿದ್ದೇವೆ, ಈಗಾಗಲೇ ಎಲ್ಲವೂ ಸುಳ್ಳು ಎಂದು ಸಾಬೀತಾಗಿದೆ, ಕೇವಲ ಪ್ರಚಾರಕ್ಕಾಗಿ ಬಡವರು, ಮಹಿಳೆಯರಿಗೆ ನೆರವಾಗುತ್ತಿರುವ ಒಂದು ಸಂಸ್ಥೆಯನ್ನು ಹಾಳು ಮಾಡದಿರಿ ಎಂದರು.

ಇನ್ನೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಅಡ್ಡಗಲ್ ಸೊಸೈಟಿಯಲ್ಲಿ ೩೭ ಕೋಟಿ ಅವ್ಯವಹಾರವಾಗಿದೆ, ಅಲ್ಲಿ ನಕಲಿ ಸಂಘಗಳಿವೆ ಎಂದೆಲ್ಲಾ ಹೇಳಿಕೆ ನೀಡಿದ್ದಾರೆ, ಆದರೆ ಅಲ್ಲಿ ಸಾಲ ನೀಡಿರುವುದೇ ಒಟ್ಟು ೬.೮೦ ಕೋಟಿ ರೂ, ಅಲ್ಲಿ ೮೭ ಮಹಿಳಾ ಸಂಘಗಳಿಗೆ ೪.೩೫ ಕೋಟಿ ರೂ ಸಾಲ ನೀಡಿದ್ದೇವೆ, ೨೬೭ ರೈತರಿಗೆ ೨.೩೨ ಕೋಟಿ ರೂ ನೀಡಿದ್ದೇವೆ, ಮಹಿಳೆಯರು ಪ್ರಾಮಾಣಿಕವಾಗಿ ಕಂತು ಪಾವತಿಸುತ್ತಿದ್ದು, ಈಗಾಗಲೇ ೧.೫ ಕೋಟಿ ರೂ ವಸೂಲಿಯಾಗಿದೆ ಎಂದು ಸ್ಪಷ್ಟನೆ ನೀಡಿದರು.

ದಾಖಲೆ ನೀಡಿ ಆರೋಪಿಸಿದರೆ ಖಂಡಿತಾ ತಲೆ ಬಾಗುವೆ, ಅವ್ಯವಹಾರ ನಡೆದಿದ್ದರೆ ಗಮನಕ್ಕೆ ತನ್ನಿ ನಾನೇ ಜವಾಬ್ದಾರಿ ವಹಿಸಿಕೊಳ್ಳುವೆ ಎಂದ ಅವರು, ನಕಲಿ ಮಹಿಳಾ ಸಂಘಗಳಿದ್ದರೆ ಕೂಡಲೇ ತಮ್ಮ ಗಮನಕ್ಕೆ ತರಲಿ, ನನಗೆ ನನ್ನ ಮಾನಹಾನಿಗಿಂತ ಬ್ಯಾಂಕಿನ ಘನತೆ ಮುಖ್ಯವಾಗಿದೆ, ಬ್ಯಾಂಕನ್ನು ಅನೇಕ ಬಡವರು, ಮಹಿಳೆಯರು ನಂಬಿದ್ದಾರೆ, ಅವರಿಗೆ ದ್ರೋಹವಾಗಬಾರದು, ಇಂತಹ ಸಂದರ್ಭದಲ್ಲಿ ಮಾಜಿ ಶಾಸಕರು ವಿಷಯ ತಿಳಿದು ಆರೋಪ ಮಾಡಬೇಕಾಗಿತ್ತು ಎಂದರು.

ಬ್ಯಾಂಕ್ ಉಳಿಸಬೇಕು ಎಂದು ಕಷ್ಟಪಟ್ಟು ಕೆಲಸ ಮಾಡಿದ್ದೇವೆ, ನಾನು ಅಧ್ಯಕ್ಷನಾದಾಗ ಕೇವಲ ೩೩ ಸಂಘಗಳು ಮಾತ್ರ ಅವಿಭಜಿತ ಜಿಲ್ಲೆಯಲ್ಲಿ ಆರ್ಥಿಕವಾಗಿ ಸಬಲವಾಗಿದ್ದವು, ಆದರೆ ಈಗ ೧೯೩ ಸಂಘಗಳು ಸಬಲವಾಗಿವೆ, ಗಣಕೀಕರಣಗೊಂಡಿವೆ. ನಾನು ಕಳೆದ ೯ ವರ್ಷ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿಂದಲೇ ಆಡಳಿತ ಅಧ್ಯಕ್ಷನಾಗಿದ್ದೇ, ನನಗೆ ಈ ಸ್ಥಾನ ಸಿಗಲು ಕಾಂಗ್ರೆಸ್ ಕಾರಣ, ಅವಿಭಜಿತ ಜಿಲ್ಲೆಯ ಆ ಪಕ್ಷದ ಶಾಸಕರು ಸಹಕಾರ ನೀಡಿದ್ದಾರೆ ಎಂದರು.

ನಿಮ್ಮನ್ನು ರಮೇಶ್‌ಕುಮಾರ್ ಬಲಿಪಶು ಮಾಡಿದ್ದಾರೆ ಎಂದು ಜಿ.ಕೆ.ವೆಂಕಟಶಿವಾರೆಡ್ಡಿ ದೂರಿರುವ ಕುರಿತು ಮಾತನಾಡಿದ ಅವರು, ನನ್ನನ್ನು ಬಲಿಪಶು ಮಾಡಲು ದೇವರು ಮತ್ತು ಅವಿಭಜಿತ ಜಿಲ್ಲೆಯ ಬಡವರಿಂದ ಮಾತ್ರ ಸಾಧ್ಯ ಬೇರೆ ಯಾರೂ ಬಲಿಪಶು ಮಾಡಲು ಆಗಲ್ಲ ಎಂದರು. ಕಾಂಗ್ರೆಸ್ ಶಾಸಕರಿಗೆ ಸಾಲ ನೀಡಿರುವ ಕುರಿತ ಆರೋಪಕ್ಕೆ ಉತ್ತರಿಸಿದ ಅವರು, ನಿಯಮಾನುಸಾರ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಕೋಳಿ ಫಾರಂಗಾಗಿ ಅಡಮಾನ ಪಡೆದು ೪ ಕೋಟಿ ರೂ ಸಾಲ ನೀಡಿದ್ದೇವೆ, ರಮೇಶ್‌ಕುಮಾರ್ ೪೦ ಲಕ್ಷ ಸಾಲ ಪಡೆದಿದ್ದಾರೆ ಆದರೆ ಎಲ್ಲಾದರೂ ಅವ್ಯವಹಾರ ನಡೆದಿದ್ದರೆ ಸಾಬೀತು ಪಡಿಸಲಿ ಎಂದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್,ಎಸ್.ವಿ.ಸುಧಾಕರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಶಿಧರ್ ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!