• Sat. Apr 20th, 2024

ಕಾಮಧೇನುಹಳ್ಳಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ರ್ಯಾಕ್‌ಸೂಟ್ ಕೊಡುಗೆ – ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರಿ ಶಾಲೆ ಉಳಿಸಿ-ಬ್ಯಾಲಹಳ್ಳಿ ಗೋವಿಂದಗೌಡ

PLACE YOUR AD HERE AT LOWEST PRICE

ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರಿ ಶಾಲೆಗಳನ್ನು ಉಳಿಸಲು ಸರ್ಕಾರ ಹಾಗೂ ದಾನಿಗಳ ನೆರವಿನಿಂದ ಅಭಿವೃದ್ದಿಪಡಿಸುವ ಅಗತ್ಯವಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.

ಕೋಲಾರ ತಾಲ್ಲೂಕಿನ ಕಾಮಧೇನುಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಬಡತನ ಶಾಪವಾಗಬಾರದು, ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಸರ್ಕಾರದ ಧ್ಯೇಯವನ್ನು ಶಿಕ್ಷಕರು ಬದ್ದತೆಯಿಂದ ಅನುಷ್ಠಾನಗೊಳಿಸಬೇಕು ಎಂದರು.

ಖಾಸಗಿ ಶಾಲೆಗಳಿಗೆ ಸೆಡ್ಡುಹೊಡೆದು ಸರ್ಕಾರಿ ಶಾಲೆಗಳು ಬಲಗೊಳ್ಳಬೇಕಾಗಿದೆ, ಈ ನಿಟ್ಟಿನಲ್ಲಿ ಸರ್ಕಾರ ನೀಡುತ್ತಿರುವ ಬಿಸಿಯೂಟ, ಕ್ಷೀರಭಾಗ್ಯ, ಸಮವಸ್ತ್ರ,ಪಠ್ಯಪುಸ್ತಕಗಳ ಜತೆಗೆ ದಾನಿಗಳು ನೆರವಾಗಬೇಕು ಮತ್ತು ಶಿಕ್ಷಕರು ಈ ಸೌಲಭ್ಯಗಳನ್ನು ಮಕ್ಕಳಿಗೆ ಒದಗಿಸುವುದರ ಜತೆಗೆ ಬದ್ದತೆಯಿಂದ ಬೋಧನೆಯಲ್ಲಿ ತಲ್ಲೀನರಾಗಲಿ ಎಂದು ಆಶಿಸಿದರು.

ವಿದ್ಯೆ ಯಾರ ಸ್ವತ್ತು ಅಲ್ಲ, ಅದು ಸಾಧಕನ ಸ್ವತ್ತಾಗಿದೆ ಎಂಬುದನ್ನು ಅರಿತು ಕಲಿಕೆ ಮುಂದುವರೆಸಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದ ಅವರು, ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದೇವೆ ಎಂಬ ಯಾವ ಕೀಳಿರಿಮೆ ಅಗತ್ಯವಿಲ್ಲ, ಈ ದೇಶದಲ್ಲಿ ಮಹಾನ್ ಸಾಧಕರೆಲ್ಲರೂ ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಎಂದು ತಿಳಿಸಿದರು.

ಮೊಬೈಲ್ ಗೀಳು ಬೇಡ, ದುಶ್ಚಟಗಳಿಂದ ದೂರವಿದ್ದು, ನಿರಂತರ ಕಲಿಕೆಯ ಮೂಲಕ ಸಾಧಕರಾಗಿ ನಿಮ್ಮ ಜೀವನ ನೀವೇ ರೂಪಿಸಿಕೊಳ್ಳಬೇಕು, ಸಮಾಜಕ್ಕೆ ನೀವು ಹೊರೆಯಾಗದೇ ಆಸ್ತಿಯಾಗಬೇಕು ಎಂದು ಕಿವಿಮಾತು ಹೇಳಿದರು.
ಮಕ್ಕಳು ಬಿಳಿ ಹಾಳೆ ಇದ್ದಂತೆ ಅದರ ಮೇಲೆ ಕಪ್ಪುಚುಕ್ಕೆ ಬೀಳದಂತೆ ಪೋಷಕರು ಮಾತ್ರವಲ್ಲ, ಶಿಕ್ಷಕರು ಎಚ್ಚರಿಕೆ ವಹಿಸಬೇಕು, ನಿಮ್ಮದೇ ಮಕ್ಕಳೆಂದು ಭಾವನೆಯಿಂದ ಅವರ ಕಲಿಕೆಗೆ ನೀವು ದಾರಿದೀಪವಾಗಿ ಎಂದು ಕೋರಿದರು.


ವೇದಿಕೆ ನಿರ್ಮಾಣಕ್ಕೆ
ನಾಳೆಯಿಂದಲೇ ಕ್ರಮ

ಶಾಲೆಯ ಆವರಣದಲ್ಲಿ ಮಕ್ಕಳ ಕಾರ್ಯಕ್ರಮಗಳಿಗೆ ಅಗತ್ಯವಾದ ವೇದಿಕೆ ನಿರ್ಮಿಸಿಕೊಡಲು ಶಾಲೆಯ ಮುಖ್ಯಶಿಕ್ಷಕ ಸಿದ್ದೇಶ್ ಮನವಿಗೆ ಸ್ಪಂದಿಸಿದ ಗೋವಿಂದಗೌಡರು, ನಾಳೆಯಿಂದಲೇ ವೇದಿಕೆ ಕಾಮಗಾರಿ ಆರಂಭಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಸರ್ಕಾರ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡುತ್ತಿದೆ, ಈ ಎರಡು ನಿಮ್ಮದಾದರೆ ನಿಮ್ಮ ಸಾಧನೆಯ ಹಾದಿ ಸುಲಭವಾಗುತ್ತದೆ ಎಂದು ತಿಳಿಸಿ, ಆರೋಗ್ಯದ ಬಗ್ಗೆ ಮಕ್ಕಳು ಕಾಳಜಿ ವಹಿಸಿ, ಸ್ವಚ್ಚತೆಗೆ ಒತ್ತು ನೀಡಿ ಎಂದರು.

ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸಮವಸ್ತ್ರ ಸದ್ಬಳಕೆ ಮಾಡಿಕೊಳ್ಳಿ, ಸರ್ವಾಂಗೀಣವಾಗಿ ಅಭಿವೃದ್ದಿ ಹೊಂದಿ ಮುಂದೆ ನೀವು ಸಾಧಕರಾಗಿ ಸಮಾಜಕ್ಕೆ ನೆರವಾಗಿ ಎಂದರು.

ಕಾಮಧೇನುಹಳ್ಳಿಯ ಪ್ರತಿಮನೆಯಲ್ಲೂ ಸರ್ಕಾರಿ ನೌಕರರಿದ್ದಾರೆ, ನ್ಯಾಯಾಧೀಶರು, ವಕೀಲರು, ಡಾಕ್ಟರ್‌ಗಳು ತುಂಬಿದ್ದಾರೆ, ಅವರ ಹಾದಿಯಲ್ಲೇ ನೀವು ನಡೆದು ಗ್ರಾಮದ ಹಿರಿಮೆ ಎತ್ತಿಹಿಡಿಯಿರಿ, ಉನ್ನತ ಸ್ಥಾನಕ್ಕೇರಿ ಎಂದು ಪ್ರೋತ್ಸಾಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಸಿದ್ದೇಶ್, ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸದಾ ನೆರವಿನ ಹಸ್ತ ಚಾಚುತ್ತಿರುವ ಬ್ಯಾಲಹಳ್ಳಿ ಗೋವಿಂದಗೌಡರ ಕಾರ್ಯ ಶ್ಲಾಘನೀಯವಾಗಿದ್ದು, ಮತ್ತಷ್ಟು ನೆರವಿಗೆ ಕೋರಿದರು.

ಗ್ರಾಮದ ಮುಖಂಡ ರವಿಚಂದ್ರೇಗೌಡ, ಕಾಮಧೇನುಹಳ್ಳಿ ಸರ್ಕಾರಿ ಪ್ರೌಢಶಾಲೆ ಅಭಿವೃದ್ದಿಗೆ ಮತ್ತಷ್ಟು ನೆರವಿನ ಅಗತ್ಯವಿದ್ದು, ಗೋವಿಂದಗೌಡರು ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

ಕೀರ್ತಿ,ಜಯಶ್ರೀ,ಪೂರ್ಣಿಮಾ ಪ್ರಾರ್ಥಿಸಿ, ಶಿಕ್ಷಕಿ ಬಿ.ಎ.ಕವಿತಾ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಗ್ರಾಮದ ಮುಖಂಡ ಆರ್.ವಿ.ಚೌಡಪ್ಪ, ಪಾರೇಹೊಸಹಳ್ಳಿ ನಾರಾಯಣಸ್ವಾಮಿ, ವಿನೋದ್, ಮಂಜುನಾಥ್, ಶಿಕ್ಷಕರಾದ ಮಂಜುನಾಥ್,ಬ್ಯಾಟಪ್ಪ, ಅಪರ್ಣಶೆಟ್ಟಿ, ವಾಣಿಶ್ರೀ, ವೇದಾ, ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ ಓದಿ ಹಂಚಿ ಪ್ರೋತ್ಸಾಹಿಸಿ

Related Post

2024ರ ಲೋಕಸಭಾ ಚುನಾವಣೆ ಸಂವಿಧಾನ ಪರ ಮತ್ತು ಸಂವಿಧಾನ ವಿರೋಧಿ ಧೋರಣೆ ಹಾಗೂ ಮನಸ್ಥಿತಿಗಳ ನಡುವಿನ ಯುದ್ಧವಾಗಿದೆ – ಎಂ.ಎಲ್.ಸಿ. ಸುಧಾಮದಾಸ್
ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,

Leave a Reply

Your email address will not be published. Required fields are marked *

You missed

error: Content is protected !!