• Mon. May 29th, 2023

ಕೋಲಾರ I ನವೀಕೃತ ಭವನ ನಿರ್ಮಿಸಲು ನೌಕರರ ಭವನದ ಹಳೆ ಕಟ್ಟಡ ತೆರವಿಗೆ ಚಾಲನೆ ೧೭೫ ಲಕ್ಷ ವೆಚ್ಚದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಭವನ ನಿರ್ಮಾಣ-ಜಿ.ಸುರೇಶ್‌ಬಾಬು

ಕೋಲಾರ ನಗರದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ,ಜಿಲ್ಲಾ ಶಾಖಾ ಕಟ್ಟಡವನ್ನು ರೂ.೧೭೫.೦೦ ಲಕ್ಷಗಳಲ್ಲಿ ನವೀಕರಿಸಲು ಉದ್ದೇಶಿಸಲಾಗಿದ್ದು, ಅತಿ ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದರು.

ಕೋಲಾರ ನಗರದಲ್ಲಿ ಶುಕ್ರವಾರ ನವೀಕರಣದ ಉದ್ದೇಶಕ್ಕಾಗಿ ಹಳೆ ಕಟ್ಟಡವನ್ನು ತೆರವುಗೊಳಿಸಲು ನಡೆದ ಸಾಂಪ್ರದಾಯಿಕ ಪೂಜೆಯಲ್ಲಿ ಪಾಲ್ಗೊಂಡು ಕಟ್ಟಡ ತೆರವಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ೧೬ ಸಾವಿರ ಸರ್ಕಾರಿ ನೌಕರರಿದ್ದು, ಇಷ್ಟೊಂದು ನೌಕರರ ಸಭೆ,ಸಮಾರಂಭಗಳನ್ನು ನಡೆಸಲು ಸುಸಜ್ಜಿತವಾದ ಭವನ ಇಲ್ಲವಾಗಿದೆ, ಈ ನಿಟ್ಟಿನಲ್ಲಿ ಹಳೆ ಕಟ್ಟಡ ನೆಲಸಮಗೊಳಿಸಿ, ಅದೇ ಜಾಗದಲ್ಲಿ ಸುಸಜ್ಜಿತ ಭವನ, ಸಭಾಂಗಣ, ಕೊಠಡಿಗಳು, ಮಳಿಗೆ ನಿರ್ಮಿಸುವ ಪ್ರಯತ್ನ ನಡೆಸಿರುವುದಾಗಿ ತಿಳಿಸಿದರು.

ಇದರ ಜತೆಗೆ ನೌಕರರು ಮತ್ತು ಅವರ ಕುಟುಂಬದವರ ಕ್ಷೇಮಾಭ್ಯುದಯಕ್ಕಾಗಿ ನಗರ ಹೊರವಲಯದಲ್ಲಿ ೫ ಎಕರೆ ಜಾಗ ಮಂಜೂರಾತಿಗೆ ಕೋರಿದ್ದು, ಅದು ಶೀಘ್ರ ಮಂಜೂರಾದರೆ ಅಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ೧೬ ಸಾವಿರ ನೌಕರರಿರುವ ಸಂಘಟನೆಗೆ ಸುಸಜ್ಜಿತ ಕಟ್ಟಡದ ಅಗತ್ಯವಿದೆ, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಸುರೇಶ್‌ಬಾಬು ಮತ್ತವರ ತಂಡ ಶೀಘ್ರ ಕಟ್ಟಡ ನಿರ್ಮಾಣ ಮುಗಿಸುವ ಮೂಲಕ ಭವನವನ್ನು ನೌಕರರಿಗೆ ಅರ್ಪಣೆ ಮಾಡಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್‌ಕುಮಾರ್, ಗೌರವಾಧ್ಯಕ್ಷ ರವಿಚಂದ್ರ, ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ನೌಕರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎನ್.ಮಂಜುನಾಥ್,ಉಪಾಧ್ಯಕ್ಷರಾದ ಸುಬ್ರಮಣಿ, ನಂದೀಶ್‌ಕುಮಾರ್, ಪುರುಷೋತ್ತಮ್, ಮಂಜುನಾಥ್, ರತ್ನಪ್ಪ, ಜಂಟಿ ಕಾರ್ಯದರ್ಶಿಗಳಾದ ರವಿ,ವಿಜಯಮ್ಮ, ಪದಾಧಿಕಾರಿಗಳಾದ ಶ್ರೀರಾಮ್, ಪಿಡಿಒ ನಾಗರಾಜ್, ಸುಬ್ರಮಣಿ, ಕದಿರಪ್ಪ, ಶಿಕ್ಷಕ ಗೆಳೆಯರ ಬಳಗದ ಆರ್.ಶ್ರೀನಿವಾಸನ್, ಗೋವಿಂದು, ವೆಂಕಟಾಚಲಪತಿಗೌಡ, ವೆಂಕಟರಾಂ, ಕೃಷ್ಣಪ್ಪ, ಚಿಕ್ಕಣ್ಣ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ ಓದಿ ಹಂಚಿ:

 

Leave a Reply

Your email address will not be published. Required fields are marked *

You missed

error: Content is protected !!