PLACE YOUR AD HERE AT LOWEST PRICE
ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ವಿದರ್ಭ ಪ್ಯಾಕೇಜ್ ನೀಡುವ ಜೊತೆಗೆ ವಿವಾದಿತ ಮೂರು ಕೃಷಿ ಕಾಯಿದೆಗಳನ್ನು ವಾಪಸ್ ಪಡೆದು ಟೊಮೇಟೊ ಮಾರುಕಟ್ಟೆ ಅಭಿವೃದ್ಧಿಗೆ ೧೦೦ ಕೋಟಿ ವಿಶೇಷ ಅನುದಾನ ನೀಡಬೇಕೆಂದು ರೈತಸಂಘದಿಂದ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಪ್ರತಿ ಬಜೆಟ್‌ನಲ್ಲೂ ಕೂಗಳತೆ ದೂರದಲ್ಲಿರುವ ಕೋಲಾರ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿ ಯಾವುದೇ ಅನುದಾನವನ್ನು ನೀಡದೆ ನಾಮಗಳನ್ನು ಹಾಕುತ್ತಿದ್ದರೂ ವಿಧಾನಸೌಧದಲ್ಲಿ ಏರುಧ್ವನಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚಕಾರವೆತ್ತಲು ಧಮ್ ಇಲ್ಲದ ಜಿಲ್ಲೆಯ ಶಾಸಕರು ಈ ಬಾರಿಯಾದರೂ ಕೋಲಾರ ಜಿಲ್ಲೆಗೆ ಹೆಚ್ಚಿನ ಅನುದಾನದ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ೩ ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯುವಂತೆ ಐತಿಹಾಸಿಕ ಹೋರಾಟ ಮಾಡಿ ನೂರಾರು ಜನ ರೈತರು ಹುತಾತ್ಮರಾಗಿದ್ದು, ಈ ಹೋರಾಟದ ಪ್ರತಿಫಲವಾಗಿ ಕೇಂದ್ರ ಸರ್ಕಾರ ೩ ಕಾಯಿದೆಗಳನ್ನು ವಾಪಸ್ ಪಡೆದಿದೆ. ಆದರೆ, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ ಎಂದು ಹಠ ಹಿಡಿದಿದ್ದು, ಬಜೆಟ್‌ನಲ್ಲಿ ೩ ಕಾಯಿದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಏಷ್ಯಾದಲ್ಲೇ ಅತಿ ದೊಡ್ಡ ೨ನೇ ಮಾರುಕಟ್ಟೆ ಎಂದು ಹೆಸರು ಪಡೆದಿರುವ ದೇಶ ವಿದೇಶಗಳಿಗೆ ಟೊಮೇಟೊ, ಕ್ಯಾಪ್ಸಿಕಂ, ರಫ್ತು ಮಾಡುವ ಮಾರುಕಟ್ಟೆಯಲ್ಲಿ ಜಾಗದ ಸಮಸ್ಯೆ ಜೊತೆಗೆ ಮೂಲಭೂತ ಸೌಕರ್ಯಗಳು ಇಲ್ಲದೆ ರೈತರು ೯೦ ದಿನ ಬೆವರು ಸುರಿಸಿ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಜಾಗದ ಸಮಸ್ಯೆ ನೆಪದಲ್ಲಿ ವಂಚನೆಯಾಗುತ್ತಿದ್ದು, ಇದನ್ನು ತಪ್ಪಿಸಲು ನೂರು ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಕೃಷಿ ತೋಟಗಾರಿಕೆ ರೇಷ್ಮೆ ಇಲಾಖೆಗಳಲ್ಲಿ ಸ್ಥಗಿತಗೊಂಡಿರುವ ಕೃಷಿಹೊಂಡ, ಪಾಲಿಹೌಸ್ ಹಾಗೂ ನರೇಗಾ ಕಾಮಗಾರಿಗಳನ್ನು ಮುಂದುವರೆಸಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಟೊಮೇಟೊ ಸಂಸ್ಕರಣಾ ಘಟಕ ಸ್ಥಾಪಿಸಬೇಕು.
ಯಾವುದೇ ನದಿನಾಲೆಗಳಿಲ್ಲದ ಜಿಲ್ಲೆಯ ಕೆರೆಗಳನ್ನು ಅಭಿವೃದ್ಧಿಪಡಿಸಲು ವಿಶೇಷ ಅನುದಾನ ನೀಡುವ ಜೊತೆಗೆ ಕೆಸಿವ್ಯಾಲಿ ೩ನೇ ಹಂತದ ಶುದ್ಧೀಕರಣ ಹಾಗೂ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರ ಮುಂದುವರೆಸಲು ಅನುದಾನವನ್ನು ಹೆಚ್ಚಾಗಿ ಮೀಸಲಿಡಬೇಕು ಎಂದು ಮನವಿ ಮಾಡಿದರು.
ರೈತರ ನಿದ್ದೆಗೆಡಿಸುತ್ತಿರುವ ಬೆಳೆದ ಬೆಳೆಯನ್ನು ನಾಶ ಮಾಡುತ್ತಿರುವ ನಾಯಿ ಕೊಡೆಗಳಂತೆ ತಲೆ ಎತ್ತಿರುವ ನಕಲಿ ಬಿತ್ತನೆ ಬೀಜ ರಸಗೊಬ್ಬರ ಕೀಟನಾಶಕಗಳ ನಿಯಂತ್ರಣಕ್ಕೆ ವಿಶೇಷ ಕಾನೂನು ಜಾರಿಗೆ ತಂದು ಸಬ್ಸಿಡಿ ಧರದಲ್ಲಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲು ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು.
ದೇಶದ ಭವಿಷ್ಯ ರೂಪಿಸುವ ಶಿಕ್ಷಣ, ಆರೋಗ್ಯ, ಖಾಸಗೀಕರಣವಾಗದಂತೆ ಬಜೆಟ್‌ನಲ್ಲಿ ಸರ್ಕಾರಿ ಶಾಲೆ, ಆಸ್ಪತ್ರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡುವ ಮುಖಾಂತರ ಜಿಲ್ಲೆಯ ಜನರ ಆಸೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಒಟ್ಟಾರೆಯಾಗಿ ಜಿಲ್ಲೆಯ ಅಭಿವೃದ್ಧಿಗಾಗಿ ವಿಶೇಷ ವಿದರ್ಭ ಪ್ಯಾಕೇಜ್ ಪ್ರಮುಖವಾಗಿ ರಸ್ತೆ, ಕೃಷಿ, ಶಿಕ್ಷಣ, ಆರೋಗ್ಯ, ನೀರಾವರಿ, ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ಬಜೆಟ್‌ನಲ್ಲಿ ನೀಡಬೇಕೆಂದು ಜಿಲ್ಲೆಯ ಸಮಸ್ತ ರೈತ-ಕೂಲಿಕಾರ್ಮಿಕ, ಸಾರ್ವಜನಿಕರ ಪರವಾಗಿ ಕೋರುತ್ತಿರುವುದಾಗಿ ತಿಳಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಽಕಾರಿಗಳು ಮನವಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‌ಪಾಷ, ಆದಿಲ್‌ಪಾಷ, , ತಾಲೂಕು ಪ್ರಧಾನ ಕಾರ್ಯದರ್ಶಿ ರಾಜೇಶ್, ವಿಜಯ್‌ಪಾಲ್, ರಂಜಿತ್, ಸುಪ್ರೀಂಚಲ, ಸುನಿಲ್‌ಕುಮಾರ್, ಮುದುವಾಡಿ ಚಂದ್ರಪ್ಪ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಕುವ್ವಣ್ಣ, ನಾರಾಯಣಗೌಡ, ಯಾರಂಘಟ್ಟ ಗಿರೀಶ್, ಕೋಟೆ ಶ್ರೀನಿವಾಸ್, ಮಂಜುಳಮ್ಮ, ತೆರ‍್ನಹಳ್ಳಿ ಆಂಜಿನಪ್ಪ, ಸಂದೀಪ್‌ರೆಡ್ಡಿ, ಸಂದೀಪ್‌ಗೌಡ, ರಾಮಸಾಗರ ವೇಣು ಮುಂತಾದವರಿದ್ದರು.
ಸುದ್ದಿ ಓದಿ ಹಂಚಿ: