• Fri. Mar 1st, 2024

ತಮ್ಮ ಶಾಸಕ ಸ್ಥಾನದ ಮೇಲೆ ಅತ್ಯಾಚಾರವಾದಾಗ ಶ್ರೀನಿವಾಸಗೌಡರು ಎಚ್ಚರಗೊಂಡಿದ್ದಾರೆ ! ಇಂಚರ ಗೋವಿಂದರಾಜು

PLACE YOUR AD HERE AT LOWEST PRICE

ಶ್ರೀನಿವಾಸಗೌಡರಿಗೆ ತಾನು ಶಾಸಕ ಅನ್ನೋದು ಈಗ ಜ್ಞಾನೋದಯವಾದಂತಿದೆ, ಮಾಜಿ ಶಾಸಕರಿಗೆ ೧೦ ಕೋಟಿ ಬಿಡಿಗಡೆ ಮಾಡಿರುವುದು ಶಾಸಕ ಸ್ಥಾನಕ್ಕೆ ಚ್ಯುತಿ ತಂದಿರುವುದಷ್ಟೇ ಅಲ್ಲಾ ಅವರ ಅಧಿಕಾರದ ಮೇಲೆಯೇ ಅತ್ಯಾಚಾರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಲೇವಡಿ ಮಾಡಿದರು.

ನಗರದ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಕ್ಷೇತ್ರದ ಅಭಿವೃದ್ದಿಗೆ ಎಂದು ಮಾಜಿ ಶಾಸಕ ವರ್ತೂರ್ ಪ್ರಕಾಶ್ ಮನವಿ ಮೇರೆಗೆ ಮುಖ್ಯಮಂತ್ರಿ ಬೊಮ್ಮಾಯಿ ೧೦ ಕೋಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಶೇ. ೪೦ ರಷ್ಟೂ ಕೆಲಸ ಆಗುವ ಲಕ್ಷಣಗಳಿಲ್ಲ, ೧೦ ಕೋಟಿ ಹಣವನ್ನೂ ಚುನಾವಣೆ ದೃಷ್ಟಿಯಿಂದ ಬಿಡುಗಡೆ ಮಾಡಲಾಗಿದ್ದು ಶೇ. ೫೦ಕ್ಕೂ ಹೆಚ್ಚು ಅನುದಾನ ಭ್ರಷ್ಟಾಚಾರ ನಡೆಯಲಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಮಾಜಿ ಶಾಸಕರು ಅನುದಾನ ತಂದು ೩ ತಿಂಗಳಾಗಿದ್ದರೂ ತನಗೆ ಈಗ ಗೊತ್ತಾಯಿತು ಎಂದು ಸುದ್ಧಿಗೋಷ್ಠಿ ನಡೆಸಿರುವ ಶಾಸಕ ಶ್ರೀನಿವಾಸಗೌಡರಿಗೆ ತಾನೊಬ್ಬ ಶಾಸಕ ಅನ್ನೋದೆ ಈಗ ಜ್ಞಾನೋಧಯವಾಗದಂತಿದೆ. ಅವರು ಶಾಸಕರಾಗಿ ೪ ವರ್ಷಗಳೇ ಕಳೆದರೂ ಅವರು ಒಬ್ಬ ಜಿಲ್ಲಾ ಕೇಂದ್ರದ ಶಾಸಕರಾಗಿದ್ದು, ಕನಿಷ್ಟ ೧೦ ಕೋಟಿ ಹಣವನ್ನು ತರಲಿಲ್ಲ. ಈಗ ಮಾಜಿ ಶಾಸಕರ ಮೇಲೆ ಹಕ್ಕು ಚ್ಯುತಿಯಾಗಿದೆ ಎಂದು ಹೇಳುತ್ತಿರುವ ಇವರಿಗೆ ತಮ್ಮ ಅಧಿಕಾರದ ಮೇಲೆ ಅತ್ಯಾಚಾರವೇ ಆಗಿದೆ ಅನ್ನೋದು ಅರಿವಾಗಿಲ್ಲವೇ ಎಂದು ಪ್ರಶ್ನಿಸಿದರು.

೩ ತಿಂಗಳಿoದ ತಾನು ಊರಲ್ಲಿ ಇರಲಿಲ್ಲ ಎನ್ನುವ ಶಾಸಕರಿಗೆ ಮಾಜಿ ಶಾಸಕರಿಗೆ ಇರುವ ತಾಕತ್ತು ನಿಮಗೆ ಇಲ್ಲವಾ ಎಂದು ಪ್ರಶ್ನೆ ಮಾಡಿದ ಅವರು, ಕೋಲಾರ ನಗರಸಭೆಗೆ ೪೦ ಕೋಟಿ ಬಂದಿದೆ, ಎಂ.ಎಲ್.ಸಿ ವಿಶೇಷ ಅನುದಾನದಲ್ಲಿ ೫ ಕೋಟಿ ಬಂದಿದೆ. ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರದಿಂದ ೧೪ನೇ ಹಣಕಾಸು ಯೋಜನೆ ಹಾಗೂ ೧೫ನೇ ಹಣಕಾಸು ಯೋಜನೆಗಳಿಂದಲೂ ಹಣ ಬಿಡುಗಡೆ ಆಗಿದೆ, ಈ ಎಲ್ಲಾ ಅನುದಾನಗಳನ್ನು ಬಳಸಿಕೊಂಡು ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ತಮಗೆ ಬೇಕಾದವರನ್ನು ಬೆಂಗಳೂರಿಗೆ ಕರೆಸಿಕೊಂಡು ಕ್ರಿಯಾಯೋಜನೆ ತಯಾರಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಒಂದು ವರ್ಷದಿಂದ  ಉಸ್ತುವಾರಿ ಸಚಿವರು ತಲೆಕೆಡಿಸಿಕೊಂಡಿಲ್ಲ ಎಂದು ನಾನು ಹೇಳಿದ್ದರೂ ಸಹ ಈ ಬಗ್ಗೆ ತುಟಿ ಬಿಚ್ಚದ ಶಾಸಕರು ಉಸ್ತುವಾರಿ ಸಚಿವರೊಂದಿಗೆ ಕೈಜೋಡಿಸಿದ್ದಾರೆ ಎಂದು ದೂರಿದ ಅವರು, ಜಿಲ್ಲಾಡಳಿತಕ್ಕೆ ಸರ್ಕಾರದಿಂದ ಎಷ್ಟು ಅನುದಾನ ಬಂದಿದೆ ಎಂಬುದೇ ಗೊತ್ತಿಲ್ಲ, ಕೆಡಿಪಿ ಸಭೆಗಳೂ ನಡೆದಿಲ್ಲವಾದ್ದರಿಂದ ಜಿಲ್ಲಾ ಪಂಚಾಯತಿಯೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಆರೋಪ ಮಾಡಿದರು

ಇನ್ನೂ ಬಿಜೆಪಿ ಶಾಸಕ ಮಾಡಾಳು ವೀರೂಪಾಕ್ಷ ಪುತ್ರ ಪ್ರಶಾಂತ್ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿರುವ ಕ್ರಮ ನಿಜಕ್ಕೂ ಶ್ಲಾಘನೀಯವಾಗಿದ್ದು, ಲೋಕಾಯುಕ್ತ ತನ್ನ ಗತವೈಭವ ಸಾರಲು ಇಂಥ ಅಕ್ರಮಗಳನ್ನು ಬಯಲಿಗೆಳೆಯಬೇಕು. ಚುನಾವಣೆ ಹಿನ್ನೆಲೆಯಲ್ಲಿ ಅವ್ಯವಹಾರ ನಿರಂತರವಾಗಿ ನಡೆಯುತ್ತಿದ್ದು ಈಗ ಸಾಸಿವೆ ಕಾಳಿನಷ್ಟು ಅಕ್ರಮ ಹೊರಬಂದಿದೆ. ಬಿಜೆಪಿಯವರು ಅಕ್ರಮಕ್ಕೆ ಸಾಕ್ಷಿ ಕೊಡಿ ಎಂದು ಸದನದಲ್ಲಿ ಕೇಳುತ್ತಿದ್ದು ಇದಕ್ಕಿಂತ ಎಷ್ಟು ಸಾಕ್ಷಿ ಬೇಕು ಎಂದು ಪ್ರಶ್ನಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ , ಕೋಲಾರ ತಾಲೂಕು ಜೆಡಿಎಸ್ ಅಧ್ಯಕ್ಷೆ ಕುರ್ಕಿ ರಾಜರಾಜೇಶ್ವರಿ, ಮುಖಂಡ ವಕ್ಕಲೇರಿ ರಾಮು, ಚಂಬೆರಾಜೇಶ್,ಯುವ ಮುಖಂಡ ವಿಜಯಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!