PLACE YOUR AD HERE AT LOWEST PRICE
ಕೆಜಿಎಫ್:ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಕ್ಷೇತ್ರದಲ್ಲಿ ಆಹಾರ ಕಿಟ್ ಹಂಚಲು ತಯಾರಿ ನಡೆಸಿದ್ದು, ಅಧಿಕಾರಿಗಳು ಸೂಕ್ತವಾಗಿ ತನಿಖೆ ಮಾಡಿ ಈ ಕಿಟ್‍ಗಳಿಗೆ ಹಣ ಎಲ್ಲಿಂದ ಬಂತು ಯಾರೆಲ್ಲ ಈ ಅನಧಿಕೃತ ಕಿಟ್ ಸರಬರಾಜಿನಲ್ಲಿದ್ದಾರೆಂದು ತನಿಖೆ ಮಾಡಿ ತಪಿತಸ್ಥತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ವಿ.ಮೋಹನ್ ಕೃಷ್ಣ ಮನವಿ ಮಾಡಿದರು.
ಅವರು ತಾಲ್ಲೂಕಿನ ಬೇತಮಂಗಲ ಹೋಬಳಿ ಮಹದೇವಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕೋಲಾರದ ಬ್ಯಾಲಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬಕ್ಕೆ ಕೆಜಿಎಫ್ ಜನತೆಗೆ ನೀಡಲು ಆಹಾರ ಕಿಟ್‍ಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿದ್ದ ಗೋದಾಮು ಮೇಲೆ ಪೊಲೀಸ್ ಇಲಾಖೆ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದುಕೊಂಡುಈ ಕುರಿತು ತನಿಖೆಯಾಗಬೇಕು ಎಂದರು.
ಮಾಜಿ ಕೇಂದ್ರ ಸಚಿವ ಕೆ.ಎಚ್ ಮುನಿಯಪ್ಪ 27 ವರ್ಷ ಹಾಗೂ ಶಾಸಕಿ ಎಂ.ರೂಪಕಲಾ 5 ವರ್ಷಗಳ ಅವಧಿಯಲ್ಲಿ ಎಂದೂ ಯುಗಾದಿ ಹಬ್ಬಕ್ಕೆ ನೀಡದ ಉಡುಗೊರೆಯನ್ನು ಈ ಬಾರಿ ನೀಡುತ್ತಿರುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದ ಅವರು ಹೀಗೆ ನೀವು ಕಿಟ್‍ಗಳನ್ನು ವಿತರಿಸುವುದಾದರೆ ವರ್ಷಕ್ಕಲ್ಲ, ವಾರಕ್ಕೆ ಒಮ್ಮೆ ನೀಡಿದರೂ ತಪ್ಪೇನಿಲ್ಲ ಎಂದು ಲೇವಡಿ ಮಾಡಿ,ಈ ವರ್ಷ ಮಾತ್ರ ಹಬ್ಬಕ್ಕೆ ಉಡುಗೊರೆ ನೀಡಿ ಚುನಾವಣೆಯಲ್ಲಿ ಮತ್ತೆ ಅಧಿಕಾರ ಪಡೆಯಲು ಜನರನ್ನು ಆಮಿಷಗಳಿಗೆ ಬಲಿ ನೀಡುತ್ತಿದ್ದಾರೆಂದು ಆರೋಪಿಸಿದರು.
ಡಿಸಿಸಿ ಬ್ಯಾಂಕ್ ಹಣ ಜನರದ್ದು, ಈ ಹಣದಲ್ಲಿಯೇ ಹಬ್ಬಕ್ಕೆ ಆಹಾರ ಕಿಟ್ ನೀಡಿ ಮತ್ತೆ ಶಾಸಕರಾಗಲು ಹೋರಟಿದ್ದೀರಿ, ಆದರೆ ಭಾಷಣ ಮಾಡುವಾಗ ಈ ಬಾರಿ 60 ಸಾವಿರ ಲೀಡ್‍ನಲ್ಲಿ ಗೆಲ್ಲುತ್ತೇವೆಂದು ಹೇಳಿಕೊಳ್ಳುವವರು ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಮತ ಕೇಳದೆ ಏಕೆ ಇಂತಹ ಆಮಿಷಗಳನ್ನು ಒಡ್ಡುತ್ತಿದ್ದೀರಿ ಹಾಗೂ ಡಾ.ಅಂಬೇಡ್ಕರ್ ನೀಡಿರುವ ಸಂವಿದಾನ ಅಡಿಯಲ್ಲಿ ನೋಟು ಕೊಡದೆ ಓಟು ಕೇಳಿ ಎಂದು ಶಾಸಕರಿಗೆ ಸವಾಲೆಸೆದರು.
ಜನರ ದುಡ್ಡನ್ನು ಕೊಳ್ಳೆ ಹೊಡೆದು ಜನರಿಗೆ ನೀಡಲು ತಿರ್ಮಾನಿಸಿದ್ದೀರಾ ಎಂದು ಪ್ರಶ್ನಿಸಿದ ಅವರು ನಿಮ್ಮ ಪಾಪದ ಕೊಡ ತುಂಬಿದೆ. ಕೆಜಿಎಫ್‍ನ ಜನ ನಿಮ್ಮ ಆಸೆ, ಆಮಿಷಗಳಿಗೆ ಒಳಗಾಗುವುದಿಲ್ಲ ಆದರೆ ದೇವರು ದೊಡ್ಡವರು ನೀವು ಮಾಡುತ್ತಿರುವ ಎಲ್ಲಾ ಕೆಲಸಗಳನ್ನು ಗಮನಿಸುತ್ತಿದ್ದು, ಇಂದು ಸಾರ್ವಜನಿಕವಾಗಿ ಆಮಿಷಗಳು ಬಯಲಾಗಿವೆ ಇನ್ನಾದರೂ ಪಾಪಗಳನ್ನು ಬಿಡಿ ಎಂದು ಶಾಸಕರಿಗೆ ಸಲಹೆ ನೀಡಿದರು.
ಕೆಜಿಎಫ್ ಕ್ಷೇತ್ರದ ಮೇಲೆ ಬ್ಯಾಲಹಳ್ಳಿ ಗೋವಿಂದೇ ಗೌಡಗೆ ವಿಶೇಷ ಆಸಕ್ತಿ ಯಾಕೆ?, ಅವರಿಗೆ ಕೆಜಿಎಫ್ ಕ್ಷೇತ್ರದ ಮೇಲೆ ಆಸಕ್ತಿಯೋ ಅಥವಾ ಬೇರೆ ಯಾವುದರ ಮೇಳೆ ಆಸಕ್ತಿಯೋ ಎಂದು ಪ್ರಶ್ನಿಸಿದ ಅವರು ಶಾಸಕಿ ಎಂ.ರೂಪಕಲಾ ಕುತಂತ್ರಗಳಿಗೆ ಜನರು ಮರಳಾಗುವುದಿಲ್ಲ. ಜನ ಶಾಸಕಿ ರೂಪಕಲಾಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಾಲಚಂದ್ರ, ಶ್ಯಾಮಿಯಾನ ಮೋಹನ್, ಕೃಷ್ಣಪ್ಪ, ಶ್ರೀನಿವಾಸ್, ಗಂಗಿರೆಡ್ಡಿ, ತೇಜು, ನಂದೀಶ್ ಗೌಡ, ಶ್ರೀನಾಥ್ ಹಾಗೂ ಇತರರಿದ್ದರು.