• Thu. Sep 28th, 2023

PLACE YOUR AD HERE AT LOWEST PRICE

ಒಬ್ಬ ಬಡ ಮಹಿಳೆಯ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಬಿ.ಜೆ.ಪಿ ಸಂಸದ ಎಸ್.ಮುನಿಸ್ವಾಮಿ  ನಿಜವಾಗಿಯೂ ಮಹಿಳೆಯರ ಮೇಲೆ ಗೌರವ ಇದ್ದರೆ ನೊಂದ ಮಹಿಳೆ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಇಲ್ಲವೇ ರಾಜೀನಾಮೆ ನೀಡಬೇಕು ಎಂದು ಮಹಿಳಾ ಕಾಂಗ್ರೆಸ್ ರಾಜ್ಯ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಆಗ್ರಹಿಸಿದರು. 

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಬಿಜೆಪಿಗೆ ಮಹಿಳೆಯರ ಬಗ್ಗೆ ಗೌರವ ಇಲ್ಲ ಎನ್ನುವುದಕ್ಕೆ ಬಿ.ಜೆ.ಪಿ.ಯ ಸಂಘ ಪರಿವಾರದ ಮುಖ ಹೊತ್ತಿರುವ ಕೋಲಾರದ ಸಂಸದ ಎಸ್.ಮುನಿಸ್ವಾಮಿ ರವರು ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳೆಯ ಖಾಸಗಿ ಹಾಗೂ ವೈಯಕ್ತಿಕ ವಿಷಯವಾದ ಬಿಂದಿ ಇಡುವ ಬಗ್ಗೆ ಬಹಿರಂಗವಾಗಿ, ಕೀಳಾಗಿ ಮಾತಾಡಿರುವುದು ಸರಿಯಾದ ಉದಾಹರಣೆ ಎಂದು ಟೀಕಿಸಿದರು.

ಮತ್ತೊಂದೆಡೆ ತಮ್ಮ ಪಕ್ಷದ ಸಂಸದರಿಂದ ಮಹಿಳೆಗೆ ಅವಮಾನ ಆದರೂ ಬಿ.ಜೆ.ಪಿ.ಪಕ್ಷದಲ್ಲಿರುವ ಮಹಿಳೆಯರು ಧ್ವನಿ ಎತ್ತದೆ ಇರುವುದು ಶೋಚನೀಯ, ಖಂಡನೀಯ ಮತ್ತು ನಾಚಿಕೆಗೇಡು ಎಂದು ಹೇಳಿದ ಅವರು, ರಾಜ್ಯದಲ್ಲಿ ಮಹಿಳಾ ಮತದಾರರು ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಇದ್ದು, ಮಹಿಳಾ ವಿರೋಧಿಯಾದ ಬಿ.ಜೆ.ಪಿ.ಪಕ್ಷವನ್ನು  ತಿರಸ್ಕರಿಸಿ, ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಕರೆ ನೀಡಿದರು.

ರಾಜಕೀಯವಾಗಿ ಮಹಿಳೆಯರಿಗೆ ಮೀಸಲಾತಿ ನೀಡಬಾರದೆಂದು ನ್ಯಾಯಾಲಯದ ಮೆಟ್ಟಿಲು ಏರಿದ ಬಿ.ಜೆ.ಪಿ.ಪಕ್ಷದ ಬಗ್ಗೆ ಮಹಿಳೆಯರು ಚಿಂತನೆ ಮಾಡುವ ಸಮಯ ಈಗ ಬಂದಿದೆ ಎಂದರು.

ಕಾಂಗ್ರೆಸ್ ಪಕ್ಷ ಮಹಿಳೆಯರ ಆರ್ಥಿಕ ಸಭಲೀಕರಣಕ್ಕಾಗಿ ಕುಟುಂಬದ ಹಿರಿಯ ಮಹಿಳೆಗೆ 2 ಸಾವಿರ ರೂ ಹಾಗೂ ಉಚಿತ 200 ಯೂನಿಟ್ ವಿದ್ಯುತ್ ಹಾಗೂ ಪ್ರತಿಯೊಬ್ಬರಿಗೂ 10 ಕೆ.ಜಿ.ಅಕ್ಕಿ ನೀಡುವ ಗ್ಯಾರೆಂಟಿ ಕಾರ್ಡ್ ನೀಡುತ್ತಿದ್ದು,ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಮನೆ ಮನೆ ತಲುಪಿಸುವ ಕೆಲಸ ಮಾಡುತ್ತದೆ ಎಂದರು.

ಅಲ್ಲದೆ,ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿ.ಜೆ.ಪಿ ಪಕ್ಷದ ದುರಾಡಳಿತ, ಭ್ರಷ್ಟಾಚಾರ, ಕಮೀಷನ್ ಪಡೆಯುವ ಬಗ್ಗೆ ಹಾಗೂ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಆಗಿರುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುವುದೆಂದು ತಿಳಿಸಿದರು. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಸ್ಪರ್ಧೆ ಮಾಡಲು ಇಚ್ಚಿಸಿರುವ ಕೋಲಾರ ವಿಧಾನ ಸಭಾ ಕ್ಷೇತ್ರ ರಾಜ್ಯದಲ್ಲಿ ಚರ್ಚೆ ಆಗುತ್ತಿದ್ದು, ಸಿದ್ದರಾಮಯ್ಯ ನವರು ಇದೇ ತಿಂಗಳ 20-21 ರಂದು ಕ್ಷೇತ್ರದಲ್ಲಿ ಪ್ರವಾಸ ಮಾಡುವ ನಿರೀಕ್ಷೆ ಇದೆಯೆಂದು ತಿಳಿಸಿದರು.

ದೇಶದ ಭವಿಷ್ಯಕ್ಕಾಗಿ ಹಾಗೂ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ತಿಂದು ತೇಗುತ್ತಿರುವ ಬಿ.ಜೆ.ಪಿ ಪಕ್ಷವನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಅವರು ಮ‌ನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ನ ಕೋಲಾರ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಧ, ಜಿಲ್ಲಾ ಅಧ್ಯಕ್ಷೆ ರತ್ನಮ್ಮ , ಪ್ರಧಾನ ಕಾರ್ಯದರ್ಶಿ ರೂಪ, ಸುಜಾತ, ಸರಸ್ವತಿ, ಶಶಿಕಲಾ , ಮಂಗಳ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!