ಕೆಜಿಎಫ್:ಯುಗಾದಿ ಹಬ್ಬಕ್ಕಾಗಿ ಕ್ಷೇತ್ರದ ಬಡ ಜನರಿಗೆ ಆಹಾರ ಕಿಟ್ ನೀಡಲು ಮುಂದಾಗಿದ್ದು, ಬಿಜೆಪಿ ಪಕ್ಷದವರು ಅಧಿಕಾರಿಗಳನ್ನು ದುರ್ಬಳಕ್ಕೆ ಮಾಡಿಕೊಂಡು ಆಹಾರ ಕಿಟ್ ವಿತರಣೆಗೆ ಅಡ್ಡಿ ಪಡಿಸುತ್ತಿದ್ದಾರೆ, ಬಿಜೆಪಿ ಪಕ್ಷದ ಏಜೆಂಟ್‍ಗಳಾಗಿ ಕೆಲ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆಂದು ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಆಕ್ರೋಶ ಹೊರ ಹಾಕಿದರು.
ಅವರು ಬೇತಮಂಗಲದ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಮಾತನಾಡಿ, ತಾಲ್ಲೂಕಿನಲ್ಲಿ ಕೊರೊನಾ ಸಮಯದಲ್ಲಿ ಆಹಾರ ಕಿಟ್ ಗಳನ್ನು ವಿತರಣೆ ಮಾಡುವಾಗ ಪೊಲೀಸರು ಯಾವುದೇ ಕೇಸು ದಾಖಲು ಮಾಡಲಿಲ್ಲ.
ಈಗ ಯುಗಾದಿ ಹಬ್ಬಕ್ಕೆ ದಿನಸಿ ಕಿಟ್ ವಿತರಣೆ ಮಾಡಲು ನಮ್ಮ ಪಕ್ಷದ ಕಾರ್ಯಕರ್ತರು ಮುಂದಾಗಿದ್ದರೆ ಕೆಲ ಬಿಜೆಪಿ ಪಕ್ಷದವರ ದೂರುಗಳಿಂದ ಪೊಲೀಸ್ ಇಲಾಖೆ ಅಧಿಕಾರಿಗಳು ಕಾಂಗ್ರೇಸ್ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಮನೆಗಳಿಗೆ ತೆರಳಿ ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಿದರು.
ನಮ್ಮ ಬೆಂಬಲಿಗರು ಪ್ರೀತಿ ವಿಶ್ವಾಸದಿಂದ ಬಡ ಜನರಿಗೆ ನನ್ನ ಹೆಸರಿನಲ್ಲಿ ಹಬ್ಬಕ್ಕೆ ದಿನಸಿ ಕಿಟ್ ನೀಡಲು ಯೋಜನೆ ರೂಪಿಸಿಕೊಂಡಿದ್ದಾರೆ. ಪೊಲೀಸ್ ಇಲಾಖೆಯ ಅಧಿಕಾರಿಗಳು ಮದ್ಯ ರಾತ್ರಿಯ ವೇಳೆ ತಮ್ಮ ಮುಖಂಡರ ಮನೆಗಳಿಗೆ ತೆರಳಿ ಪರಿಶೀಲನೆ ಮಾಡುವುದಕ್ಕೆ ಯಾವ ಅಧಿಕಾರ ಇದೆ. ಚುನಾವಣಾ ನೀತಿ ಸಹಿತೆ ಏನಾದರೂ ಜಾರಿಯಲ್ಲಿದ್ದೀಯಾ ಎಂದು ಪ್ರಶ್ನಿಸಿದರು.
ದಿನಸಿ ಕಿಟ್ ವಿತರಣೆಯ ಬ್ಯಾಗ್ ಮೇಲೆ ನನ್ನ ಪೋಟೋ ಇದೆ ಎಂಬ ಕಾರಣಕ್ಕೆ ಅನಗತ್ಯವಾಗಿ ನನ್ನ ಮೇಲೆ ಕೇಸು ದಾಖಲು ಮಾಡಿದ್ದಾರೆ. ಈಗ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಕೇಸು ದಾಖಲು ಮಾಡಲು ಮುಂದಾಗಿದ್ದಾರೆ. ದೂರು ಕೊಟ್ಟ ಬಿಜೆಪಿ ಪಕ್ಷದವರು ಯಾರು ಎಂದು ಬಹಿರಂಗ ಪಡಿಸಬೇಕೆಂದು ಒತ್ತಾಯಿಸಿದರು.
ಬಿಜೆಪಿ ಪಕ್ಷದವರು ಗ್ರಾಮಗಳಿಗೆ ತೆರಳಿ ಸೀರೆ, ಕಂಬಳಿ ವಿತರಣೆ ಮಾಡಬಹುದು ಹಾಗೂ ಕೆಜಿಎಫ್ ನಗರದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಅವರ ಭಾವಚಿತ್ರದ ಕೊಡುಗೆಗಳನ್ನು ನೀಡಬಹುದು ಅದರೆ ನಾವು ಬಡವರ ಹೊಟ್ಟೆಗೆ ಆಹಾರದ ದಿನಸಿ ಕಿಟ್ ನೀಡುವುದು ತಪ್ಪೆ ಎಂದು ಪ್ರಶ್ನಿಸಿದರು.
ಬೇತಮಂಗಲ ವೃತ್ತ ನಿರೀಕ್ಷಕ ಸುರೇಶ್ ರಾಜು ಬಿಜೆಪಿ ಪಕ್ಷದ ಏಜೆಂಟರಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಬೇದರಿಕೆ ಹಾಕುವುದು, ಯಾವುದೇ ತಪ್ಪ ಇಲ್ಲದಿದ್ದರೂ ಮನೆಗಳಿಗೆ ತೆರಳಿ ಪರಿಶೀಲನೆ ಮಾಡುತ್ತಾರೆ. ದಿನಕ್ಕೆ ಮೂರು ಭಾರಿ ಬಿಜೆಪಿ ಮುಖಂಡರ ತೋಟಗಳಿಗೆ ತೆರಳುತ್ತಾರೆಂದು ಆರೋಪಿಸಿದರು.
ಇಂತಹ ಅಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡಬೇಕು, ಇಲ್ಲದಿದ್ದರೆ ಸಸ್ಪಡೆ ಮಾಡಬೇಕೆಂದು ಆಗ್ರಹಿಸಿದರು.ಕಾಂಗ್ರೆಸ್ ಪಕ್ಷದ ಮುಖಂಡರ ಯಾವುದೇ ತಪ್ಪು ಇಲ್ಲದಿದ್ದರೂ ದಾಳಿ ನಡೆಸುವುದಕ್ಕೆ ಕಾಣ ಏನು ಎಂಬುವುದರ ಬಗ್ಗೆ ಮಾಹಿತಿ ನೀಡಬೇಕು, ಇಲ್ಲದಿದ್ದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಠಾಣೆಯ ಮುಂದೆ ಶಾಸಕಿ ಪ್ರತಿಭಟನೆಗೆ ಕೂತು ಸುಮಾರು 02 ಗಂಟೆ ಕಳೆದ ನಂತರ ಡಿವೈಎಸ್ಪಿ ರಮೇಶ್ ಸ್ಥಳಕೆ ಭೇಟಿ ನೀಡಿ ಶಾಸಕರನ್ನು ಮನವೊಲಿಸಲು ಪ್ರಯತ್ನಿಸಿ, ಠಾಣೆ ಒಳಗೆ ಬನ್ನಿ ಮೇಡಮ್ ಸಮಸ್ಯೆ ಇತ್ಯರ್ಥ ಪಡಿಸೋಣ ಎಂದಾಗ ಶಾಸಕರು ಪ್ರತಿಭಟನೆ ಮುಂದುವರೆಸಿ ನ್ಯಾಯ ದೊರಕಿಸಲು ಪಟ್ಟು ಹಿಡಿದರು.
ಪ್ರತಿಭಟನೆಯಲ್ಲಿ ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ್, ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯ ರಾಘುವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಕೃಷ್ಣರೆಡ್ಡಿ, ಕೆಜಿಎಫ್ ನಗರ ಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಕೆಪಿಸಿಸಿ ಸದಸ್ಯ ದುರ್ಗಾಪ್ರಸಾದ್, ಮುಖಂಡರಾದ ಶ್ರೀನಿವಾಸ್, ರಮೇಶ್ ಜೈನ್, ಗ್ರಾಪಂ ಅಧ್ಯಕ್ಷರಾದ ಸುಂದರಪಾಳ್ಯ ರಾಂಬಾಬು, ಕಾರಿ ಪ್ರಸನ್ನ, ಪವಿತ್ರ ಗೋಪಾಲ್, ಕಮ್ಮಸಂದ್ರ ನಾಗರಾಜ್, ಮುಖಂಡರಾದ ವಕೀಲ ಪದ್ಮನಾಭ ರೆಡ್ಡಿ, ಸುರೇಂದ್ರ ಗೌಡ, ಒಬಿಸಿ ಮುನಿಸ್ವಾಮಿ, ಮುನೇಗೌಡ, ವಿನು ಕಾರ್ತಿಕ್ ಮೊದಲಾದವರಿದ್ದರು.