ಸಮಾಜದಲ್ಲಿ ಬದುಕುವಾಗ ನಮ್ಮ ಹಕ್ಕುಗಳನ್ನು ಮಾತ್ರ ಕೇಳುವ ನಾವು ಕರ್ತವ್ಯವನ್ನು ಮರೆಯುವುದು ಸರಿಯಲ್ಲ, ಉತ್ತಮ ಆಡಳಿತ,ದೇಶದ ಅಭಿವೃದ್ದಿಗೆ ಮತದಾನ ಒಂದು ಪವಿತ್ರವಾದ ಕರ್ತವ್ಯ ಮತ್ತು ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವ ಪ್ರಯತ್ನ ಎಂಬುದನ್ನು ಮರೆಯಬಾರದು ಎಂದು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಎನ್.ವಿಜಯಲಕ್ಷ್ಮಿ ತಿಳಿಸಿದರು.
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು, ಮಂಡಿ ಏಜೆಂಟರು, ರೈತರಿಗೆ ಮತದಾನದ ಮಹತ್ವದ ಕುರಿತು ಅರಿವು ನೀಡುವ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಮತದಾನದಂದು ರಜೆ ಸಿಕ್ಕಿದೆ ಪ್ರವಾಸ ಹೋಗೋಣ ಎನ್ನುವ ಅನೇಕರಿದ್ದಾರೆ, ಇದು ಸರಿಯಲ್ಲ, ಮತದಾನದ ಪವಿತ್ರ ಹಕ್ಕು ಚಲಾಯಿಸಿದಾಗ ಮಾತ್ರವೇ ನಾವು ಸುಂದರ ದೇಶ ಕಟ್ಟಲು ನೆರವಾಗಿದ್ದೇವೆ ಎಂಬ ಆತ್ಮತೃಪ್ತಿ ಸಿಕ್ಕಂತಾಗುತ್ತದೆ ಎಂದರು.
ನಿಮ್ಮ ನೆರೆಯವರು, ಸ್ನೇಹಿತರು ಮತದಾನ ಮಾಡದೇ ದೂರ ಉಳಿಯುವುದು ಕಂಡು ಬಂದರೆ ಅವರಿಗೂ ಅರಿವು ಮೂಡಿಸಿ, ಮತದಾನದ ಮಹತ್ವ ತಿಳಿಸಿಕೊಡಿ, ಇದರಿಂದ ಸದೃಢ ಭಾರತ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.ಕೆಲವರಲ್ಲಿ ನಾವು ಹಾಕುವ ಮತ ಬೇರೆ ಪಕ್ಷದ ಅಭ್ಯರ್ಥಿಗೆ ಹೋಗುತ್ತದೆ ಎಂಬ ಸಂಶಯ ಮತ್ತು ಅನುಮಾನಗಳು ಇರುವುದು ಸಹಜ ಆದರೆ ಈ ಅನುಮಾನಗಳನ್ನು ಹೋಗಲಾಡಿಸಲು ಇರುವ ಪರಿಹಾರವೇ ಇ.ವಿ.ಪ್ಯಾಟ್ ಯಂತ್ರವಾಗಿದ್ದು, ಯಾವುದೇ ಅನುಮಾನಗಳು ಇಲ್ಲ ಎಂದರು.
ಮತದಾರರಿಗೆ ಇರುವ ಅನುಮಾನಗಳನ್ನು ಹೋಗಲಾಡಿಸಲು ಹಾಗೂ ಅದಕ್ಕೆ ಪರಿಹಾರ ನೀಡಲು ಇ.ವಿ. ಪ್ಯಾಟ್ ಯಂತ್ರ ಸಹಕಾರಿಯಾಗಿದೆ ಈ ಯಂತ್ರದ ವಿಶೇಷವೆಂದರೆ ನೀವು ಯಾವ ಪಕ್ಷದ ವ್ಯಕ್ತಿಗೆ ಮತ ಹಾಕಿದ್ದೀರಿ ಎಂಬುದನ್ನು ಖಾತ್ರಿ ಮಾಡಿಕೊಳ್ಳಲು ವೋಟು ಹಾಕಿದ ನಂತರ ಏಳು ಸೆಕೆಂಡುಗಳ ಕಾಲ ನಿಮಗೆ ಕಾಣುವ ಹಾಗೆ ನೀವು ಹಾಕಿದ ಮತ ಯಾವ ಚಿಹ್ನೆ ಹಾಗೂ ಅವರ ಹೆಸರನ್ನು ತಾವು ಈ ಯಂತ್ರದ ಮುಖಾಂತರವಾಗಿ ಪ್ರತ್ಯಕ್ಷವಾಗಿ ಕಾಣಬಹುದು ಎಂದರು.
ಪ್ರತಿಯೊಬ್ಬರೂ ಮತದಾನ ತಮ್ಮ ಕರ್ತವ್ಯವೆಂದು ಭಾವಿಸಿ ಮತದಾನದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ ಅವರು, ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ನಾವು ನಮ್ಮ ದೇಶದ ಸಾರ್ವಭೌಮತೆಯನ್ನು ಕಾಪಾಡುವ ನಿರ್ಧಾರ ಕೈಗೊಳ್ಳೋಣ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಮುನಿರಾಜು, ಶಶಿಧರ್,ಅರುಣಾ, ಶ್ರೀನಿವಾಸಮೂರ್ತಿ ಹಾಗೂ ಸಮಿತಿಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.