• Sat. Mar 25th, 2023

ಉಪ್ಪುಕುಂಟೆ ರಾಜಯೋಗ ಶಿಕ್ಷಣ ಕೇಂದ್ರ ಉದ್ಘಾಟನೆ ಸಮಾಜ ಶಾಂತಿ ನೆಮ್ಮದಿಗೆ ಆಧ್ಯಾತ್ಮಿಕ ಕೇಂದ್ರಗಳು ಸಹಕಾರಿ – ಎಸ್ಪಿ ನಾರಾಯಣ

ಸಾವಿರಮಂದಿಗೆ ಒಬ್ಬ ಪೊಲೀಸ್ ಸಿಬ್ಬಂದಿ ಇಲ್ಲದಿದ್ದರೂ ಸಮಾಜದ ಶಾಂತಿ ನೆಮ್ಮದಿ ಕಾಪಾಡಲು ಆಧ್ಮಾತ್ಮಿಕ ಕೇಂದ್ರಗಳು ಸಹಕಾರಿಯಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಹೇಳಿದರು.

ತಾಲೂಕಿನ ಉಪ್ಪುಕುಂಟೆ ಗ್ರಾಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗ ಶಿಕ್ಷಣ ಕೇಂದ್ರವನ್ನು ಧ್ವಜಾರೋಹಣದ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಎಲ್ಲಾ ಮತಗಳ ತತ್ವ ಒಂದೇ ಆದರೂ ಕೆಲವರು ಕೆಟ್ಟ ವಿಚಾರಗಳನ್ನು ಹರಡುತ್ತಿರುವುದರಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ ಎಂದು ವಿಷಾದಿಸಿದ ಅವರು, ಬ್ರಹ್ಮಕುಮಾರಿ ಸಮಾಜವು ಸತ್ಸಂಗ ರಾಜಯೋಗಗಳ ಮೂಲಕ ಸಮಾಜದಲ್ಲಿ ಸಂಸ್ಕಾರವನ್ನು ಬೆಳೆಸಿ ಶಾಂತಿ ನೆಮ್ಮದಿಗೆ ಕಾರಣವಾಗುತ್ತಿದೆ ಎಂದು ವಿವರಿಸಿ ನೂತನ ಕೇಂದ್ರಕ್ಕೆ ಶುಭ ಹಾರೈಸಿ, ಕೇಂದ್ರಕ್ಕೆ ಜಮೀನು ಕೊಟ್ಟು ಸಹಕರಿಸಿದ ವ್ಯಕ್ತಿಗಳನ್ನು ಸನ್ಮಾನಿಸಿ ಗೌರವಿಸಿದರು.

ರೆಡ್‌ಕ್ರಾಸ್ ಜಿಲ್ಲಾ ಛೇರ್ಮನ್ ಡಾ.ಎನ್.ಗೋಪಾಲಕೃಷ್ಣೇಗೌಡ ಮಾತನಾಡಿ, ಇಡೀ ವಿಶ್ವವೇ ಭಾರತದ ಆಧ್ಯಾತ್ಮಿಕತೆಗೆ ಶರಣಾಗುತ್ತಿದೆ, ಬ್ರಹ್ಮಕುಮಾರಿ ಸಮಾಜವು ರಾಜಯೋಗದ ಮೂಲಕ ನೈಜ ಜ್ಞಾನವನ್ನು  ಹೆಚ್ಚಿಸುತ್ತಿದೆ, ಈ ಜ್ಞಾನವನ್ನು ಎಲ್‌ಕೆಜಿ ಯಿಂದಲೇ ಮಕ್ಕಳಲ್ಲಿ ತುಂಬಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ, ಮುಂದಿನ ದಿನಗಳಲ್ಲಿ ಬ್ರಹ್ಮಕುಮಾರಿ ಸಂಘದಲ್ಲಿ ಉಚಿತ ಆರೋಗ್ಯತಪಾಸಣಾ ಶಿಬಿರಗಳನ್ನು ಏರ್ಪಡಿಸುವುದಾಗಿ ಘೋಷಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್ ಮಾತನಾಡಿ, ಜೀವನ ಮೌಲ್ಯಗಳು ನಶಿಸುತ್ತಿರುವ ದಿನಗಳಲ್ಲಿ ಆಧ್ಯಾತ್ಮಿಕ ಕೇಂದ್ರಗಳಿoದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು.

ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಬ್ರಹ್ಮಕುಮಾರಿ ಸಮಾಜದ ಕೇಂದ್ರ ಸ್ಥಾನವಾಗಿರುವ ಮೌಂಟ್ ಅಬು ಪರ್ವತ ಕೇಂದ್ರವು ಸತ್ಯಯುಗದ ಮಾದರಿಯಂತಿದ್ದು, ಪ್ರತಿಯೊಬ್ಬರೂ ಅಲ್ಲಿಗೆ ಭೇಟಿ ನೀಡಿ ಅದರ ಅನುಭೂತಿಯನ್ನು ಪಡೆದುಕೊಳ್ಳಬೇಕೆಂದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ರಘುಪತಿಗೌಡ ಮಾತನಾಡಿ, ಸಂಸ್ಕಾರವoತ ಯುವ ಪೀಳಿಗೆಯನ್ನು ರೂಪಿಸಲು ಕೇಂದ್ರವು ಶ್ರಮಿಸಲಿ ಎಂದು ಆಶಿಸಿದರು.

ಬಿ.ಕೆ.ನಾರಾಯಣಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಅನ್ಯಾಯ, ಅಧರ್ಮ, ಅನೀತಿ ಹೆಚ್ಚಾಗುತ್ತಿದ್ದು, ಇವುಗಳನ್ನು ಅಂತ್ಯಕಾಣಿಸಲು ಪ್ರಜಾಪಿತರು ೧೯೩೬ ರಲ್ಲಿ ಸಿಂದ್ ಪ್ರಾಂತ್ಯದಲ್ಲಿ ಅವತರಿಸಿದರು. ಶೀಘ್ರ ಕಲಿಯುವ ಅಂತ್ಯವಾಗಿ ಸತ್ಯಯುಗ ಬರಲಿದ್ದು, ಯುಗ ಪರಿವರ್ತನೆಗೆ ಪ್ರಜಾಪಿತರ ಹಾದಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕೆಂದರು. ಚಿoತಾಮಣಿಯ ಬ್ರಹ್ಮಕುಮಾರಿ ಶಾಮಲ ಸಂಸ್ಥೆಯ ಇತಿಹಾಸ ವಿವರಿಸಿದರು. ಮುಳಬಾಗಿಲು ಬ್ರಹ್ಮಕುಮಾರಿ ಗಾಯಿತ್ರಿ ರಾಜಯೋಗ, ಧ್ಯಾನ ಕುರಿತು ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ಕೋಲಾರ ಕೇಂದ್ರದ ಸಂಚಾಲಕಿ ಬಿ.ಕೆ.ಶಕುಂತಲವಹಿಸಿದ್ದರು. ಬಿ.ಕೆ.ಚಂದ್ರಶೇಖರ್ ಸ್ವಾಗತಿಸಿದರು. ಉಪ್ಪುಕುಂಟೆ ಸುತ್ತಮುತ್ತಲ ಗ್ರಾಮದ ಜನರು ಬ್ರಹ್ಮಕುಮಾರ ಕುಮಾರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!