ಕೋಲಾರ ಜಿಲ್ಲೆಯಲ್ಲಿ ತಿಗಳ ಜನಾಂಗದ ಆರಾಧ್ಯ ದೈವವಾದ ಶ್ರೀ ಆದಿಶಕ್ತಿ ಕರಗ ಶಕ್ತ್ಯೋತ್ಸವವನ್ನು ಇತರೆ ಜನಾಂಗದವರು ಆಚರಿಸಿ ನಮ್ಮ ಮೂಲ ಧಾರ್ಮಿಕ ಭಾವನೆಗಳಿಗೆ ಭಂಗ ಉಂಟು ಮಾಡುತ್ತಿರುವುದನ್ನು ತಡೆಯುವಂತೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜಿಲ್ಲಾ ತಿಗಳ ಜನಾಂಗದ ಸಮನ್ವಯ ಸಮಿತಿ ಮನವಿ ಮಾಡಿತು.
ಕೋಲಾರ ಜಿಲ್ಲೆಯಲ್ಲಿ ೪೪ ಶ್ರೀ ಧರ್ಮರಾಯಸ್ವಾಮಿ ದ್ರೌಪದಿ ದೇವಾಲಯಗಳು ಇದ್ದು ಈ ದೇವಾಲಯಗಳಲ್ಲಿ ವಹ್ನಿಕುಲ ಕ್ಷತ್ರಿಯ (ತಿಗಳ) ಜನಾಂಗದ ಶಾಸ್ತ್ರ- ಸಂಪ್ರದಾಯ, ವಿಽ-ವಿಧಾನ, ಆಚಾರ- ವಿಚಾರ ನೀತಿ -ನಿಯಮ ವ್ರತಗಳ ಹವನ-ಹೋi, ಅರ್ಚನೆ ಅಭಿಷೇಕ, ತಪ್ಪದೇ ಪಾಲಿಸಿಕೊಂಡು ಕುಲದೇವತೆಯ ಘನತೆ ಗೌರವಗಳನ್ನು ಕಾಪಾಡಿಕೊಂಡು ಪ್ರತಿ ವರ್ಷವು ಕರಗ ಶಕ್ತ್ಯೋತ್ಸವವು ಧಾರ್ಮಿಕ ನೆಲೆಗಟ್ಟಿನಲ್ಲಿ ಈ ಉತ್ಸವವನ್ನು ಯಥಾವತ್ತಾಗಿ ಸಂಪ್ರದಾಯಕವಾಗಿ ಆಚರಣೆ ಮಾಡಿಕೊಂಡು ಬರುತ್ತಿದೆ.
ಈ ಕರಗ ಶಕ್ತ್ಯೋತ್ಸವವನ್ನು ಅತಿ ಪುರಾತನ ಕಾಲದಿಂದಲೂ ವಹ್ನಿಕುಲ ಕ್ಷತ್ರಿಯ ಜನಾಂಗದವರು ತಮ್ಮ ಕುಲದೇವತೆಯಾದ ದ್ರೌಪದಿ ದೇವಿಯನ್ನು ಆದಿಶಕ್ತಿಯ ರೂಪದಲ್ಲಿ ಪ್ರತಿ ವರ್ಷ ಚೈತ್ರಮಾಸದಲ್ಲಿ ಹುಣ್ಣಿಮೆಗೆ ಮೂರು ದಿನಗಳ ಮುಂಚಿತವಾಗಿ ಬರಮಾಡಿಕೊಂಡು ಶ್ರದ್ದಾ ಭಕ್ತಿಯಿಂದ ಆಚರಿಸುತ್ತಿದ್ದಾರೆ.
ಆದರೆ, ಇತರೆ ಜನಾಂಗದ ಕೆಲವರು ಊರ ಹಬ್ಬ, ಗ್ರಾಮ ಜಾತ್ರೆ ಅಂತ ಕರಗಗಳನ್ನು ಆಚರಣೆ ಮಾಡುವುದನ್ನು ತಡೆಯಬೇಕು ಹಾಗೂ ನಮ್ಮ ಜನಾಂಗದವರೇ ಬೇರೆ ಸಮುದಾಯದ ಕರಗಗಳನ್ನು ಮಾಡುತ್ತಿದ್ದರೂ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು, ತಿಗಳ ಸಮುದಾಯದ ಸಂಸ್ಕೃತಿ ಹಾಗೂ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗುವುದನ್ನು ತಪ್ಪಿಸಬೇಕೆಂದು ಮನವಿ ಮಾಡಿದರು.
ಕೋಲಾರ ಜಿಲ್ಲಾ ತಿಗಳ ಜನಾಂಗದ ಸಮನ್ವಯ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಎಲ್.ಎ.ಮಂಜುನಾಥ್, ಅಧ್ಯಕ್ಷ ಎಂ.ಉದಯಕುಮಾರ್, ಕಾರ್ಯದರ್ಶಿ ಎನ್.ಪಲ್ಗುಣ ಮತ್ತಿತರ ಸಮುದಾಯದ ಮುಖಂಡರಿದ್ದರು.