PLACE YOUR AD HERE AT LOWEST PRICE
ಕೋಲಾರ, ಏಪ್ರಿಲ್.೨೦ : ತೀವ್ರ ಕುತೂಹಲ ಮೂಡಿಸಿದ್ದ ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನ ಮುಳಬಾಗಿಲು ಕ್ಷೇತ್ರ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಆಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ನಗರದಲ್ಲಿ ಗುರುವಾರ ವಿಧಾನಸಭಾ ಚುನಾವಣಾ ಆಕಾಂಕ್ಷಿಗಳ ನಾಮಪತ್ರ ಸಲ್ಲಿಕೆ ಭರದಿಂದ ಸಾಗಿತ್ತು. ಪ್ರಮುಖವಾಗಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಜಿಲ್ಲಾ ಕಾಂಗ್ರೆಸ್ ಭವನದಿಂದ ಕಾಲ್ನಡಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ಪರ್ಧೆ ಮಾಡುವುದಿಲ್ಲವೆಂದು ಖಚಿತವಾಗುತ್ತಿದ್ದಂತೆ, ಕೋಲಾರಕ್ಕೆ ಯಾರು ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೆ ಹೈಕಮಾಂಡ್ ಕೊತ್ತೂರು ಮಂಜುನಾಥ್ ಅವರನ್ನು ಕಣಕ್ಕಿಳಿಸಿದ್ದು, ಅವರ ಉಮೇದುವಾರಿಕೆ ಇಂದು ಸಲ್ಲಿಸಲಾಗಿದೆ.
ನಾಮಪತ್ರ ಸಲ್ಲಿಕೆ ಮಾಡಿದ ನಂತರ ಮಾದ್ಯಮಗಳೊಂದಿಗೆ ಮತನಾಡಿದ ಕೊತ್ತೂರು ಮಂಜುನಾಥ್, ಹೈಕಮಾಂಡ್ ಸೂಚನೆಯಂತೆ ಕೋಲಾರ ವಿಧಾನಸಭೆಗೆ ನಾಮಪತ್ರ ಸಲ್ಲಿಸಿದ್ದೇನೆ. ನಾಮಪತ್ರ ಸಲ್ಲಿಕೆ ಮಾಡಲು ಮಾಜಿ ಸಚಿವರುಗಳಾದ ನಜೀರ್ ಅಹ್ಮದ್, ನಿಸ್ಸಾರ್ ಅಹ್ಮದ್, ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಕೋಲಾರದ ಎಲ್ಲಾ ಹಿರಿಯರ ಸಹಕಾರದೊಂದಿಗೆ ನಾಮಪತ್ರ ಸಲ್ಲಸಿದ್ದೇನೆಂದರು.
ಕೋಲಾರದಲ್ಲಿ ಕಾಂಗ್ರೆಸ್ ಪಕ್ಷ ಸದೃಡವಾಗಿದೆ, ಮುಖಂಡರಲ್ಲಾಗಲೀ ಕಾರ್ಯಕರ್ತರಲ್ಲಾಗಲೀ ಯಾವುದೇ ಗೊಂದಲಗಳಿಲ್ಲ, ಎಲ್ಲರೂ ಒಟ್ಟಾಗಿ ಸೇರಿ ಚುನಾವಣೆ ಮಾಡುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ. ಕೋಲಾರ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದು, ನಾಳೆಯಿಂದಲೇ ಚುನಾವಣಾ ಪ್ರಚಾರ ನಡೆಸಲಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಭವನದಿಂದ ಕೆಲವೇ ಕೆಲವು ಆಪ್ತರೊಂದಿಗೆ ತರಾತುರಿಯಲ್ಲಿ ನಾಮಪತ್ರ ಸಲ್ಲಿಸಲು ಸಾಗಿದ ಕೊತ್ತೂರು ಮಂಜುನಾಥ್ ರವರು ಕಾಲ್ನಡಿಗೆಯಲ್ಲಿ ಟಿ.ಚನ್ನಯ್ಯ ರಂಗಮoದಿರದ ಸಮೀಪ ಬರುತ್ತಿದ್ದಂತೆಯೇ ಸುಮಾರು ಒಂದು ಸಾವಿರಕ್ಕೂ ಅಧಿಕ ಕೊತ್ತೂರು ಅಭಿಮಾನಿಗಳು ಮ್ಯಾಜಿಕ್ ನಂತೆ ಸೇರಿಕೊಂಡರು. ಮೆಕ್ಕೆ ವೃತ್ತದ ಸಮೀಪ ಬರುವಷ್ಟರಲ್ಲಿ ಕಾರ್ಯಕರ್ತರ ಸಂಖ್ಯೆ ದ್ವಿಗುಣಗೊಂಡಿತ್ತು. ಇದ್ದಕ್ಕಿದ್ದಂತೆ ಕಾಂಗ್ರೆಸ್ ಬಾವುಟಗಳ ರಾರಾಜಿಸಿದವು.
ಈ ಸಂದರ್ಭದಲ್ಲಿ ಮಾಜಿ ಸಚಿವರುಗಳಾದ ನಜೀರ್ ಅಹ್ಮದ್, ನಿಸ್ಸಾರ್ ಅಹ್ಮದ್, ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ನಂದಿನಿ ಪ್ರವೀಣ್, ಕೆ.ಜಯದೇವ್, ಮೈಲಾಂಡಹಳ್ಳಿ ಮುರಳಿ, ವಕ್ಕಲೇರಿ ರಾಜಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರತ್ನಮ್ಮ, ಮುಖಂಡ ಚಂದ್ರಮೌಳಿ, ಚಂಜಿಮಲೆ ರಮೇಶ್, ಸೀಸಂದ್ರ ಗೋಪಾಲಗೌಡ, ನಗರಸಭೆ ಸದಸ್ಯ ಅಂಬರೀಶ್ ಉಪಸ್ಥಿತರಿದ್ದರು.