ಬಂಗಾರಪೇಟೆ:ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ದಿಢೀರನೆ ಕಣದಿಂದ ಹಿಂದೆ ಸರಿದ ಕಾರಣ ಆಕ್ರೋಷಗೊಂಡಿರುವ ಪಕ್ಷದ ಕಾರ್ಯರ್ತರು ಕುವೆಂಪು ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಆರ್ಥಿಕ ಮುಗ್ಗಟ್ಟಿನ ನೆಪ ಹೇಳಿ ಮತದಾನ ದಿನಕ್ಕೂ ಒಂದು ದಿನ ಮುಂಚಿತವಾಗಿ ಕಣದಿಂದ ಹಿಂದೆ ಸರಿದಿದ್ದರು. ಈ ವರೆಗೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಕಾರ್ಯಕರ್ತರು ಆಕ್ರೋಷಗೊಂಡು ಶ್ರದ್ಧಾಂಜಲಿ ಸಲ್ಲಿಸಿದರು.
ಈ ವೇಳೆ ಪುರಸಭೆ ಮಾಜಿ ಸದಸ್ಯ ಬಿ.ಸಿ.ಶ್ರೀನಿವಾಸಮೂರ್ತಿ ಮಾತನಾಡಿ, ಎಂ.ನಾರಾಯಣಸ್ವಾಮಿ ರಾಷ್ರ್ಟೀಯ ಪಕ್ಷವಾದ ಬಿಜೆಪಿಗೆ ದ್ರೋಹ ಬಗೆದು ಜೆಡಿಎಸ್ ಅಭ್ಯರ್ಥಿಯೊಂದಿಗೆ ಶಾಮೀಲಾಗಿ ಕಣದಿಂದ ಹಿಂದ ಸರಿದಿದ್ದಾರೆ ಎಂದು ಆರೋಪಿಸಿದರು.
ಎಂ.ನಾರಾಯಣಸ್ವಾಮಿ ನಿಧನರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿರುವುದನ್ನು ನೋಡಿ ನಾವು ಎಂ.ನಾರಾಯಣಸ್ವಾಮಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇವೆ ಎಂದರು.
ಎಂ.ನಾರಾಯಣಸ್ವಾಮಿ ಮಾಡಿದ ಪಕ್ಷದ್ರೋಹ ಕೆಲಸದಿಂದಾಗಿ ಬಿಜೆಪಿ ಪಕ್ಷದ ಬಗ್ಗೆ ಜನರಲ್ಲಿನ ಪ್ರೀತಿ ವಿಶ್ವಾಸ ಕಡಿಮೆಯಾಗಿದೆ. ಪಕ್ಷ ಹತ್ತು ವರ್ಷಗಳ ಕಾಲ ಹಿಂದೆ ಹೋಗಿದೆ. ಈಗ ಮತ್ತೆ ತಳಮಟ್ಟದಿಂದ ಪಕ್ಷವನ್ನು ಕಟ್ಟಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಬಿ.ಪಿ.ಮಹೇಶ್, ಯುವಮೋರ್ಚಾದ ಬಿಂಧುಮಾಧವ, ವಿನೋದ್, ಅಮರಾವತಿ ಮಂಜುನಾಥ್, ಅಯ್ಯಮಂಜು, ಇಂದಿರಾ ಆಶ್ರಯ ವಿನೋದ್, ಕಾರಹಳ್ಳಿ ಹರೀಶ್, ಕರವೇ ಚಲಪತಿ, ಜೋಗಿ ಮೊದಲಾದವರಿದ್ದರು.