ಆಫ್ರಿಕಾದ ಕಿರಿನ್ಯಾಗದಿಂದ ವಲಸೆ ಬಂದ, ಗಿಕಿಯು ಜನಾಂಗದ ತಾತ ಮುರುಂಗಜ್ಜ ಮತ್ತು ಮೂಂಬಿತಾಯಿ ಮಕ್ಕಳಾದ ಏಳು ಮಂದಿ ಅಕ್ಕತಂಗೇರು ಪೈಕಿ ವಾಂಜಿಕೊ ಒಬ್ಬಳು. ಇವಳೇ ನಮ್ಮ ಆದಿಮ ದ್ರಾವಿಡ ಮಾತೆ. ಜಿಂಕೆ ಇವಳ ತೇರು. ನವಿಲು, ಮೀನು ಒಡನಾಡಿಗಳು. ಅತ್ತಿ ಮರದ ಬುಡ ವಾಂಜಿಕೊ ಇರುವ ಸ್ಥಳ. ‘ವಾಂಜಿಕೊ’ಳನ್ನು ಹಲವು ಹೆಸರುಗಳಿಂದ ಕರೆಯುತ್ತಾರೆ.
ವಾಂಜಿಕೊ: ಕೋ, ಕೊರ್ತಿ, ಕೊಟ್ರವೈ , ಕೊರವಿ,
ಮೀನ್ ಕಣ್ಣಿ (=ಮೀನಾಕ್ಷಿ ) ಎಂದರೂ ಇವಳೇ !
ಮುಂದೆ ಕಾಲಾನುಕ್ರಮದಲ್ಲಿ ಕೊರವಿಯನ್ನು ದುರ್ಗೆಯ ಜೊತೆ ಸಮೀಕರಿಸಲಾಗಿದೆ. ಕೊರವಿ ಮತ್ತು ದುರ್ಗಿ ಸಮನ್ವಯದ ಸಂದರ್ಭದಲ್ಲಿ ಜಿಂಕೆ, ನವಿಲು, ಮೀನು ಎತ್ತಂಗಡಿಗೊಳಪಟ್ಟು , ಮಹಿಷ, ಸಿಂಹ, ಹುಲಿ, ನಾಲ್ಕು ಭುಜಗಳು, ಆಯುಧಗಳು ಮುಂತಾದುವನ್ನು ಇಟ್ಟು ಆದಿಶಕ್ತಿ / ಪರಾಶಕ್ತಿ ಎಂದು ವೈದಿಕೀಕರಣ ಮಾಡಲಾಯಿತು.
ಏಳು ಮಂದಿ ಅಕ್ಕತಂಗೇರು ಎಂಬುದು ಸಂಸ್ಕೃತೀಕರಣ / ಬ್ರಾಹ್ಮಣೀಕರಣಕ್ಕೊಳಗಾಗಿ, “ಸಪ್ತ ಮಾತೃಕೆಯರು” = ಬ್ರಾಹ್ಮಿ ವಾರಾಹಿ ವೈಷ್ಣವಿ ಇತ್ಯಾದಿ ಸಂಸ್ಕೃತ ಹೆಸರು ಬಂದಿತು. ಅತ್ತಿಮರದ ಬುಡ ಹೋಗಿ, ಮಂದಿರ ಮತ್ತು ಪೂಜಾರಿ ಬಂದರು.
ಕೊರವಿಗೂ ದುರ್ಗಮಾತೆಗೂ ಸಂಬಂಧವಿಲ್ಲವೆಂದು ಪ್ರತಿಪಾದಿಸಲು, ಕೊರವಿಯನ್ನು ದೆವ್ವವೆಂದು ಬಿಂಬಿಸಿ, ಕೊರವಿ ದೆಯ್ಯಮು (=ಕೊಳ್ಳಿ ದೆವ್ವ ) ಮಾಡಿಬಿಟ್ಟರು. ನಮ್ಮ ಆದಿಮ ದ್ರಾವಿಡ ಮಾತೆ ನಮಗೆ ಮರೆತೇ ಹೋಯಿತು.
ಆದರೆ, ಈಗ ತಮಿಳುನಾಡು, ಕೇರಳದಲ್ಲಿ ದೊರೆತಿರುವ ಕೊರವಿ ಪ್ರತಿಮೆಗಳು ಕೆಂಡದಂತೆ ಪ್ರಕಟವಾಗಿ, ಇದರ ಮೇಲೆ ಮುಚ್ಚಿದ ವೈದಿಕ ಬೂದಿಯನ್ನು ಕೊಡವಿಹಾಕಿದೆ. [ ಗೆಳೆಯ ಲಕ್ಷ್ಮೀಪತಿ ಕೋಲಾರನ ಮಾತುಕತೆ, PPT ನಿರೂಪಣೆ ಮತ್ತು ‘ಮರೆತ ದಾರಿ’ ನಾಟಕ ಆಧರಿಸಿ ಮೇಲ್ಕಂಡ ಟಿಪ್ಪಣಿ ಮೂಡಿಬಂದಿದೆ ]
ಪ್ರೊ:ವಿ.ಚಂದ್ರಶೇಖರ ನಂಗಲಿ.