• Mon. May 29th, 2023

ಬಂಗಾರಪೇಟೆ:ಗ್ರಾಮೀಣ ಭಾಗದ ಸರ್ವಾಂಗಿಣ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ, ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದೆ ಎಂದು ಶಾಸಕ ಎಸ್. ಎನ್. ನಾರಾಯಣಸ್ವಾಮಿ ಹೇಳಿದರು.

ಅವರು ತಾಲ್ಲೂಕಿನ ಆಲಂಬಾಡಿ ಜ್ಯೋತನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮ ಪಂಚಾಯಿತಿ ಕಟ್ಟಡವನ್ನು ಅತಿ ಶೀಘ್ರದಲ್ಲಿ .ಪೂರ್ಣಗೊಳಿಸಲಾಗುವುದು ಎಂದರು.

ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಕಣದಿಂದ ಪಲಾಯನವಾದ ಅನುಸರಿಸಿದ ನಂತರ ವಿ.ಶೇಷು ಸಂಜೆ ಸುಮಾರು ಎಂಟು ಗಂಟೆಗೆ ನನಗೆ ಕರೆ ಮಾಡಿ”ನೀವು ನನಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಲು ಸಹಕರಿಸಿದ್ದೀರಾ”ಆದಕಾರಣ ನಿಮ್ಮ ಋಣವನ್ನು ತೀರಿಸಲು ನಾನು ನಿಮ್ಮನ್ನು ಬೆಂಬಲಿಸುತ್ತೇನೆ ಎಂದು ವಚನ ನೀಡಿದರು.

ತದನಂತರ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಿದಾಗ ಒಂದು ಗಂಟೆ ಕಾಲಾವಕಾಶ ಕೇಳಿದ ಶೇಷು ಜೆಡಿಎಸ್ ಅಭ್ಯರ್ಥಿ, ಮಲ್ಲೇಶ್ ಬಾಬುರವರ ಕುಂಬಾರ ಹಳ್ಳಿಯಲ್ಲಿನ ಶಾಲೆಗೆ ಭೇಟಿ ನೀಡಿ ಜೆಡಿಎಸ್ ಪಕ್ಷದೊಂದಿಗೆ ವ್ಯವಹಾರಿಕ ಒಪ್ಪಂದ ಮಾಡಿಕೊಂಡರು ಎಂದು ಆರೋಪ ಮಾಡಿದರು.

ಸಂಸದ ಎಸ್. ಮುನ್ಸಾಮಿರವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ತನ್ನ ಅಧಿಕಾರದ ವ್ಯಾಪ್ತಿಯನ್ನು ಮೀರಿ ಅಧಿಕಾರಿಗಳಿಗೆ ಬೆದರಿಕೆ ಹಾಕುವುದರ ಮೂಲಕ ಎಲ್ಲಾ ಇಲಾಖೆಗಳಲ್ಲಿ ತನ್ನ ಅದಿಪತ್ಯ ಸ್ಥಾಪಿಸಿದರು. ಆದರೆ ಈಗ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಸಂಸದರು ಕೇವಲ ದಿಶಾ ಸಭೆಗೆ ಮಾತ್ರ ಸೀಮಿತವಾಗಬೇಕು, ಇತರ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಎಚ್ಚರಿಸಿದರು.

ಚುನಾವಣಾ ಪೂರ್ವದಲ್ಲಿ ಸಂಸದ ಎಸ್. ಮುನಿಸ್ವಾಮಿ  ರವರು ಅಪಪ್ರಚಾರ ಮಾಡುವುದರ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದರು, ಎಲ್ಲಿ ನೋಡಿದರೂ ಬಿಜೆಪಿ ಬಾವುಟ ಜಯಕಾರಗಳು ಆರ್ಭಟಿಸುತಿತ್ತು, ಆದರೆ ಜಿಲ್ಲೆಯ ಜನರು ಇವರ ಡೋಂಗಿ ಆರ್ಭಟಕ್ಕೆ ಮನ್ನಣೆ ನೀಡಲಿಲ್ಲ.

ಬಿಜೆಪಿ ಪಕ್ಷ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಒಂದು ಸ್ಥಾನವನ್ನು ಸಹ ಗೆಲ್ಲಲಾಗಲಿಲ್ಲ, ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಠೇವಣಿ ಕಳೆದುಕೊಂಡಿದೆ, ಸಂಸದರಿಗೆ ನಾಚಿಕೆ, ಮಾನ, ಮರ್ಯಾದೆ ಇದ್ದರೆ ರಾಜಕಾರಣದಲ್ಲಿ ತಟಸ್ಥ ರಾಗಬೇಕು ಎಂದರು.

ಸಂಸದ ಎಸ್. ಮುನಿಸ್ವಾಮಿ ರವರು  ತನ್ನ ಕುತಂತ್ರ ರಾಜಕಾರಣಕ್ಕೆ ಸಾಕ್ಷಿ ಎಂಬಂತೆ ನನ್ನ ವಿರುದ್ಧ ಪತ್ರಿಕಾ ಹೇಳಿಕೆ ನೀಡಿರುವುದು ಖಂಡನೀಯ, ಜಿಯೋನಿ ಹೀಲ್ಸ್ ಗಾಲ್ಫ್ ರೆಸಾರ್ಟ್ ನಲ್ಲಿ ದೊರೆತಿರುವ ಹಣ ನಿವೇಶನ ಕಾರು ನನ್ನದಲ್ಲ.

ಮಾಲೂರಿನ ನಂಜೇಗೌಡರು ಮೂರು ಬಾರಿ ಮರುಮತ ಎಣಿಕೆ ಮಾಡಿ ಇನ್ನೂರಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿದ್ದಾರೆ, ಹೀಗಿರುವಾಗ ಹೇಗೆ ತಾನೇ ಮರು ಚುನಾವಣೆ ನಡೆಯಲು ಸಾಧ್ಯ ಎಂದು ಪ್ರಶ್ನಿಸಿದರು.

ನಾನು ಶಾಸಕನಾಗಿ ಹತ್ತು ವರ್ಷಗಳ ಕಾಲ ಜಾತಿ, ಮತ, ಪಕ್ಷಬೇಧ ಮರೆತು ಪ್ರತಿಯೊಂದು ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ನಾಯಕರ, ಕಾರ್ಯಕರ್ತರ, ನಿರ್ಲಕ್ಷತನದಿಂದ ಬಹುತೇಕ ಸ್ಥಳಗಳಲ್ಲಿ ಅಧಿಕ ಮತಗಳನ್ನು ಪಡೆಯಲು ಸಾಧ್ಯವಾಗಲಿಲ್ಲ.

ಈ ಹಿನ್ನೆಲೆಯಲ್ಲಿ ನನ್ನ ಮನಸ್ಸಿಗೆ ತೀವ್ರ ನೋವು ಉಂಟಾಗಿದೆ ಆದ ಕಾರಣ ಯಾವುದೇ ಗ್ರಾಮಸ್ಥರು ಹಾರ ತುರಾಯಿಗಳನ್ನು ಹಾಕಬೇಡಿ, ಎಂದು ಮನವಿ ಮಾಡುವುದರೊಂದಿಗೆ ನಾನು ಎಂದಿಗೂ ಸಹ ಕ್ಷೇತ್ರದ ಬಡವರ,ದಲಿತರ, ರೈತರ, ಶ್ರಮಿಕ ವರ್ಗ, ಮಹಿಳೆಯರ ಅಭ್ಯುದಯಕ್ಕಾಗಿ ಶ್ರಮಿಸುತ್ತೇನೆ  ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾರಾಯಣಮ್ಮ, ಉಪಾಧ್ಯಕ್ಷೆ ಚೌಡಮ್ಮ ಮುನಿರಾಜು, ಸದಸ್ಯರಾದ ಸುರೇಶ್, ಮುನಿಯಪ್ಪ, ರಾಮಚಂದ್ರಪ್ಪ, ಮುಖಂಡರಾದ ನಾಗರಾಜ್, ಮಹದೇವಪ್ಪ, ರಮೇಶ್ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಕಲಾ  ಸಿಬ್ಬಂದಿಗಳಾದ ಸನಾವುಲ್ಲ ಹಾಗೂ ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You missed

error: Content is protected !!