• Sat. Mar 2nd, 2024

PLACE YOUR AD HERE AT LOWEST PRICE

ದೂರದರ್ಶನ ಚಂದನ ವಾಹಿತಿ ಹಾಗೂ ಹಿಂದೂಸ್ತಾನ್ ಸಮಾಚಾರ್ ಕೋಲಾರ ಜಿಲ್ಲಾ ವರದಿಗಾರ ಎಸ್.ಚಂದ್ರಶೇಖರ್ ಈ ಬಾರಿಯ ಕೋಲಾರ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪತ್ರಿಕೋದ್ಯಮಕ್ಕೆ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಕೋಲಾರ ಜಿಲ್ಲಾ ವರದಿಗಾರರಾಗಿ ಚಂದ್ರಶೇಖರ್ ಸೇವೆ ಸಲ್ಲಿಸಿದ್ದಾರೆ.

 ಮಾನವೀಯ ಆಸಕ್ತಿ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಮಾಡಿರುವ ಹಲವಾರು ವರದಿಗಳು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಗಮನ ಸೆಳೆದಿವೆ. ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿ ದಲಿತರ ಮಾರಣ ಹೋಮದ ಬಗ್ಗೆ ಮನಕಲುಕುವಂತೆ ಜನವಾಹಿನಿಯಲ್ಲಿ ವರದಿ ಮಾಡಿದ್ದರು. ಈ ವರದಿಗಾರಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.

 ಮಾನವೀಯ ಆಸಕ್ತಿ ವರದಿಗಳಿಗಾಗಿ ರಾಜ್ಯಮಟ್ಟದಲ್ಲಿ ಹಲವು ಬಾರಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮುಳಬಾಗಿಲು ತಾಲ್ಲೂಕಿನ ದೊಂಬರು ಗುಡಿಸಲಿನ ಲೈಂಗಿಕ ಕಾರ್ಯಕರ್ತೆಯರ ಪರಿವರ್ತನೆಯ ಬಗ್ಗೆ ಕನ್ನಡ ಪ್ರಭದಲ್ಲಿ ಪ್ರಕಟವಾದ ಆರಿದ ಕೆಂಪು ದೀಪ ಭವಣೆಯಾದ ಬದುಕು ವರದಿಗೆ ಮೊದಲಬಾರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಪಟೇಲ್ ಬೈರ ಹನುಮಯ್ಯ ಹೆಸರಿಯಲ್ಲಿ ನೀಡುವ ಅತ್ಯುತ್ತಮ ಮಾನವೀಯ ವರದಿಗೆ ಪ್ರಶಸ್ತಿ ಲಭಿಸಿತು.

 ಕೆಜಿಎಫ್ ನಗರದ ಸುಧಾರಣಾ ಸಂಸ್ಥೆಯಲ್ಲಿ ಅಧೀಕ್ಷಕರೊಬ್ಬರು ಅಲ್ಲಿನ ಬಾಲಕರೊಬ್ಬರ ಮೇಲೆ ನಡೆಸಿದ ದೌರ್ಜನ್ಯದ ಬಗ್ಗೆ ಮುಸರೆ ತಿಕ್ಕದ ಬಾಲಕನಿ ಮೂಳೆ ಮುರಿತದ ಶಿಕ್ಷೆ ವರದಿಗೆ ಎರಡನೇ ಬಾರಿ ಪಟೇಲ್ ಬೈರ ಹನುಮಯ್ಯ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿ ಲಭಿಸಿತು.

 ಮಲ ಹೊರುವ ಹೀನ ಪದ್ದತಿಯ ಬಗ್ಗೆ ಜನವಾಹಿನಿಯಲ್ಲಿ ಪ್ರಕಟವಾದ ಮಲಹೊರವು ಪದ್ದತಿ ಇನ್ನೂ ಜೀವಂತ ವರದಿಗೆ ಮೂರನೇಯ ಬಾರಿ ಅತ್ಯುತ್ತಮ ಮಾನವೀಯ ಪ್ರಶಸ್ತಿ ಲಭಿಸಿತು. ಮಾನವೀಯ ವರದಿಗಳಿಗಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿಂದ ವಿಶೇಷ ಪ್ರಶಸ್ತಿ ಲಭಿಸಿದೆ.

 ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾದ ಮಂಗಳಮುಖಿಯರ ಹೈನುಗಾರಿಗೆ ಮೂಲಕ ಸಬಲೀಕರಣದ ವರದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಲಭಿಸಿದೆ. ಅಭಿವೃದ್ಧಿ ಪತ್ರಿಕೋದ್ಯಮಕ್ಕಾಗಿ ಕೋಲಾರದ ಮನ್ವಂತರ ಸಂಸ್ಥೆಯಿಂದ ಪ್ರಶಸ್ತಿ ಲಭಿಸಿದೆ.

ಕೋಲಾರದಿಂದ ಪ್ರಕಟವಾಗುವ ಹೊನ್ನುಡಿ ಪತ್ರಿಕೆಯಿಂದ ವೃತ್ತಿ ಜೀವನ ಆರಂಭಿಸಿದರು. ಕನ್ನಡಪ್ರಭ, ಇಂಡಿಯನ್ ಎಕ್ಸ್ ಪ್ರೆಸ್, ಜನವಾಹಿನಿ ಸಂಯುಕ್ತ ಕರ್ನಾಟಕ ಕೋಲಾರ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ.

ಈ-ಟಿ.ವಿ. ಕನ್ನಡ ವಾಹಿನಿ, ಕಸ್ತೂರಿ ವಾಹಿನಿಯ ಕೋಲಾರ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ.ಪ್ರಸ್ತುತ ದೂರದರ್ಶನ ಚಂದನ ವಾಹಿನಿ ಮತ್ತು ಹಿಂದೂಸ್ಥಾನ್ ಸಮಾಚಾರ್ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ತಮ್ಮ ವೃತ್ತಿ ಜೀವನದಲ್ಲಿ ನೂರಾರು ಅಭಿವೃದ್ಧಿ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ವರದಿ ಮಾಡಿ ಗಮನ ಸೆಳೆದಿದ್ದಾರೆ.

ತನಿಖಾ ಪತ್ರಿಕೋದ್ಯಮದ ಮೂಲಕ ಸರ್ಕಾರಿ ಇಲಾಖೆಗಳ ಹಲವಾರು ಹಗರಣಗಳನ್ನು ಬಯಲಿಗೆ ಎಳೆದಿದ್ದಾರೆ. ಕೃಷಿಕರ ಸಮಸ್ಯೆಗಳು ಮತ್ತು ಕೃಷಿಯ ಬಗ್ಗೆ ಹಲವಾರು ವರದಿಗಳನ್ನು ಮಾಡಿದ್ದಾರೆ.

ಅಂತರಗಂಗೆ ಪರ್ವತ ಶ್ರೇಣಿಯಲ್ಲಿ ಕೈಗೊಳ್ಳಲಾದ ಪ್ರಾಸ್ಟಿಕ್ ನಿರ್ಮೂಲನಾ ಆಂದೋಲನ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಅರಣ್ಯ ಪ್ರದೇಶದಲ್ಲಿ ತಮ್ಮ ಇಡೀ ಜೀವನವನ್ನು ಅರಣ್ಯಕ್ಕಾಗಿ ಮುಡಿಪಾಗಿಟ್ಟ ಕೊಂಡಕಾವಲಿ ಪೆದ್ದನ್ನ ಕುರಿತ ಪರಿಸರ ವರದಿಗಳನ್ನು ದೂರದರ್ಶನಕ್ಕಾಗಿ ಮಾಡಿದ್ದಾರೆ. ಪಾಲಿಹೌಸ್‌ನಲ್ಲಿ ಪುಷ್ಪ ಕೃಷಿ, ಕುಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಪ್ರಧಾನ ಮಂತ್ರಿಗಳ ಗ್ರಾಮ ಸಡಕ್ ಯೋಜನೆಯ ಅನುಷ್ಠಾನದ ಬಗ್ಗೆ ದೂರದರ್ಶನಕ್ಕೆ ವರದಿ ಮಾಡಿದ್ಧಾರೆ.

Leave a Reply

Your email address will not be published. Required fields are marked *

You missed

error: Content is protected !!