• Fri. Mar 1st, 2024

PLACE YOUR AD HERE AT LOWEST PRICE

ವಿಧಾನಸಭಾ ಚುನಾವಣಾ ಕರ್ತವ್ಯದಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ 4 ವರ್ಷದ ಬಾಲಕಿಯನ್ನೇ ಅತ್ಯಾಚಾರಗೈದಿರುವ ಅಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಠಾಣೆಗೆ ನುಗ್ಗಿದ ಕುಟುಂಬಸ್ಥರು ಹಾಗೂ ಸ್ಥಳೀಯರು, ಸಬ್ ಇನ್ಸ್‌ಪೆಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ನಾಲ್ಕು ವರ್ಷದ ಪುಟ್ಟ ಬಾಲಕಿಯನ್ನು ಪುಸಲಾಯಿಸಿ ತನ್ನ ಕೋಣೆಗೆ ಕರೆಯಿಸಿಕೊಂಡ ಬಳಿಕ ಇನ್ಸ್‌ಪೆಕ್ಟರ್ ಅತ್ಯಾಚಾರ ಎಸಗಿದ್ದಾನೆ.

ಈ ಮಾಹಿತಿ ಹೊರಬರುತ್ತಿದ್ದಂತೆ ಕುಟುಂಬಸ್ಥರು, ಸ್ಥಳೀಯರು ನೇರವಾಗಿ ಪೊಲೀಸ್ ಠಾಣೆಗೆ ನುಗ್ಗಿ ಆರೋಪಿ ಸಬ್ ಇನ್ಸ್‌ಪೆಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಸ್ಥಳದಲ್ಲಿದ್ದ ಇತರೆ ಪೊಲೀಸರು ಸಾರ್ವಜನಿಕರಿಂದ ಆರೋಪಿಯನ್ನು ಮುಕ್ತಿಗೊಳಿಸಿ ಬಂಧಿಸಲಾಗಿದೆ.

ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದೆ. ಆರೋಪಿ ಇನ್ಸ್‌ಪೆಕ್ಟರ್ ಭೂಪೇಂದ್ರ ಸಿಂಗ್ ದೌಸಾದ ರಹುವಾ ವಲಯದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. 50 ರೂಪಾಯಿ ಹಾಗೂ ಚಾಕಲೇಟ್ ಆಸೆ ತೋರಿಸಿ 4 ವರ್ಷದ ಹೆಣ್ಣು ಮಗುವನ್ನು ಕೋಣೆಗೆ ಕರೆಯಿಸಿ ಅತ್ಯಾಚಾರ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯನ್ನು ರಾಜಸ್ಥಾನದಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ಖಂಡಿಸಿದ್ದು, ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಘಟನೆಯನ್ನು ಖಂಡಿಸಿರುವ ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ, ಭೂಪೇಂದ್ರ ಸಿಂಗ್ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಠಾಣೆಯ ಎಲ್ಲ ಪೊಲೀಸರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ. ಇಲ್ಲಿ ಇತರ ಪೊಲೀಸರು ಕೂಡ ಸಹಕಾರ ನೀಡಿದ್ದಾರೆ. ಇದು ಅತ್ಯಂತ ಹೇಯ ಘಟನೆ. ರಾಜಸ್ಥಾನ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ, ಅದನ್ನು ಕಾಪಾಡುವ ಪೊಲೀಸರೇ ಈ ರೀತಿ ಮಾಡಿದರೆ ಜನಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದ್ದಾರೆ‌.

ಅತ್ಯಾಚಾರ ನಡೆದಿರುವ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಸ್ಥಳೀಯ ಜನರ ಗುಂಪು, ನೇರವಾಗಿ ಠಾಣೆ ಒಳಗೆ ನುಗ್ಗಿ ಆರೋಪಿ ಸಬ್ ಇನ್ಸ್‌ಪೆಕ್ಟರ್ ಭೂಪೇಂದ್ರ ಸಿಂಗ್ ಹೊರಗೆಳೆದು ತಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನೂರಕ್ಕೂ ಹೆಚ್ಚು ಜನ ಏಕಾಏಕಿ ದಾಳಿ ನಡೆಸಿದ್ದಾರೆ.

ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚುನಾವಣೆ ಸಮೀಪಿಸುತ್ತಿರುವಂತೆಯೇ ಪೊಲೀಸ್ ಅಧಿಕಾರಿಯೇ ಅತ್ಯಾಚಾರ ಎಸಗಿರುವುದು ಸರ್ಕಾರವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ನವೆಂಬರ್ 25ರಂದು ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ.

Leave a Reply

Your email address will not be published. Required fields are marked *

You missed

error: Content is protected !!