• Thu. May 16th, 2024

PLACE YOUR AD HERE AT LOWEST PRICE

ಶ್ರೀ ಜವಳಿ ಬಸಪ್ಪ ಮತ್ತು ಸಿದ್ಧಲಿಂಗಮ್ಮ ಈ ದಂಪತಿಗಳ ಎಂಟು ಮಕ್ಕಳ ಪೈಕಿ, ಬಿ. ಬಸವಲಿಂಗಪ್ಪ  ಒಬ್ಬರು. ಇವರ ಜನನ ದಿನಾಂಕ 21-4-1924. ಇವರ ಪೂರ್ವಜರು, ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ನಾಗರಬೆಟ್ಟ ಗ್ರಾಮದವರು. ಜೀವನ ಹುಡುಕಿಕೊಂಡು ಇವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿಗೆ, ತರುವಾಯ ಹರಿಹರಕ್ಕೆ ಬಂದು ನೆಲೆಸಿದರು. ತಂದೆ ಬಸಪ್ಪ ಮನೆಯಲ್ಲಿ,  ಕೈ ಮಗ್ಗಗಳನ್ನಿಟ್ಟುಕೊಂಡು  ಬಟ್ಟೆ ನೆಯಿಗೆ ಮಾಡುತ್ತಿದ್ದರು. ಕುದುರೆ ಮೇಲೆ ಸುತ್ತಿ, ಜವಳಿ ಮಾರಾಟ ಮಾಡುತ್ತಿದ್ದರು. ಆ ಕಾರಣದಿಂದ, ಇವರಿಗೆ ‘ಜವಳಿ ಬಸಪ್ಪ’ ಎಂದು ಕರೆಯುತ್ತಿದ್ದರು.

ಶ್ರೀ ಬಿ ಬಸವಲಿಂಗಪ್ಪ ಇವರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು  ಮೈಸೂರು ಮಹಾರಾಜರು ಹರಿಹರದಲ್ಲಿ ಸ್ಥಾಪಿಸಿದ್ದ, ಛತ್ರದ ಶಾಲೆಯಲ್ಲಿ ;  ಪ್ರೌಢ ಮತ್ತು PUC ಶಿಕ್ಷಣವನ್ನು ಬೆಂಗಳೂರಿನ ಸೆಂಟ್ರಲ್ ಶಾಲೆಯಲ್ಲಿ ;  BA ಪದವಿಯನ್ನು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ; ಕಾನೂನು ಪದವಿಯನ್ನು ಬೆಳಗಾವಿಯ ರಾಜ ಲಕ್ಷ್ಮಣರಾವ್ ಕಾನೂನು ಮಹಾವಿದ್ಯಾಲಯ ಇಲ್ಲಿ ಮಾಡಿದರು.  ಒಟ್ಟು ಶಿಕ್ಷಣ 1948ರಲ್ಲಿ ಮುಗಿಸಿದರು.

ಶ್ರೀ ಬಿ. ಬಸವಲಿಂಗಪ್ಪ ಇವರು ಶಿಕ್ಷಣ ಮುಗಿಸಿ ವಾಪಸ್ ಹರಿಹರಕ್ಕೆ ಹಿಂದಿರುಗಿದರು. ಪ್ರತಿದಿನ ಸೈಕಲ್ ಏರಿ, ಹರಿಹರ ಮತ್ತು ಸುತ್ತಮುತ್ತಲಿನ ಹಳ್ಳಿ, ದಲಿತರ ಕೇರಿಗಳಿಗೆ ತೆರಳಿ,  ಜೀತ ಮಾಡುತ್ತಿದ್ದ, ಕೂಲಿ ಕೆಲಸ ಮಾಡುತ್ತಿದ್ದ, ಹಸು ಎಮ್ಮೆ ಮೇಯಿಸುತ್ತಿದ್ದ ಮಕ್ಕಳನ್ನು ಭೇಟಿಯಾಗಿ, ಅವರ ಬಡತನ, ನೋವು ದುಃಖಗಳನ್ನು ಅಲ್ಲಿಸುತ್ತಿದ್ದರು.  ಮನವೊಲಿಸಿ ಅವರನ್ನು ಶಾಲೆಗೆ ಸೇರಿಸುವ  ಪ್ರಯತ್ನ ಮಾಡುತ್ತಿದ್ದರು.  ಇದಕ್ಕೆ ಉತ್ತಮ ಸ್ಪಂದನ ಸಿಗಲಿಲ್ಲ. ಈ ದಲಿತ ಮಕ್ಕಳನ್ನು ಶಾಲೆಗೆ ಸೇರಿಸುವ ಪ್ರಯತ್ನದಲ್ಲಿ, ಬಿ ಬಸವಲಿಂಗಪ್ಪನವರಿಗೆ ಒಂದು ಸಮಸ್ಯೆ ಎದುರಾಗುತ್ತದೆ. ರಾಜನಹಳ್ಳಿ ಗ್ರಾಮದ ಮರದಡಿಯ ಜಗಲಿ ಕಟ್ಟೆ ಮೇಲೆ ಗ್ರಾಮದ ಸವರ್ಣೀಯ ಜಾತಿಯ ಯಜಮಾನ, ಹಿರಿಯರು ಕೆಲಸ ಇಲ್ಲದೆ ಬೆಳಿಗ್ಗೆ ಸಂಜೆ ಕುಳಿತಿರುತ್ತಿದ್ದರು.

ಬಸವಲಿಂಗಪ್ಪ ಇವರ ಸೈಕಲ್ ಪ್ರಯಾಣವನ್ನು ಗಮನಿಸಿ, ಯಜಮಾನ ಪ್ರಶ್ನಿಸುತ್ತಾನೆ.  ದಲಿತ ಕೇರಿಗೆ ದಿನವೂ ಭೇಟಿ ನೀಡುತ್ತಿದ್ದೀಯ, ನೀನು ಕೆಂಪು ಕೆಂಪಾಗಿ, ಸುಂದರವಾಗಿದ್ದೀಯ… ಕೇರಿ ಒಳಗಿನ ಹೆಣ್ಣು ಮಕ್ಕಳಿಗೆ ಏನಾದರೂ ಆಸೆ ಪಟ್ಟಿದಿಯಾ ? ಯಜಮಾನನ ಪ್ರಶ್ನೆಗಳಿಗೆ ಅವಕ್ಕಾದ ಬಸವಲಿಂಗಪ್ಪನವರು ವಾಸ್ತವವನ್ನು ತಿಳಿಸುತ್ತಾರೆ. ಸಂಶಯದಿಂದಲೇ ಯಜಮಾನ ಮರುದಿನ ಬೆಳಗ್ಗೆ ನೀನು ಈ ಜಗಲಿ ಕಟ್ಟೆ ಬಳಿ ಬಾ ಎಂದು ಹೇಳಿ ಕಳಿಸುತ್ತಾನೆ. ಮರುದಿನ  ಬಸವಲಿಂಗಪ್ಪ ಬರುತ್ತಾರೆ. ವಾಡಿಕೆಯಂತೆ ಬೆಳಿಗ್ಗೆ ದಲಿತ ಮಕ್ಕಳು / ಹಿರಿಯರು ಜೇತಕ್ಕೆ, ಕೂಲಿ ಕೆಲಸಗಳಿಗೆ ಮತ್ತು ಹಸು ಕರು ಎಮ್ಮೆ ಮೇಸ್ಲಿಕ್ಕೆ ಹೊರಟಿದ್ದರು.

ಯಜಮಾನ ತನ್ನ ಪಾಳೇಗಾರಿಕೆಯ ಏರಿದ ಧ್ವನಿಯಲ್ಲಿ “ಲೋ ಸೂಳೆಮಕ್ಕಳ ಬರೊ ಇಲ್ಲಿ. ನಿಮ್ಮ ಹಸು ಕರು ಮೇಕೆ ಅಲ್ಲಿ ಕಟ್ಟಿ. ಈ ಕೆಂಪ ಹುಡುಗ ದಿನವೂ ನಿಮ್ಮ ಕೇರಿಗೆ ಬರುತ್ತಿದ್ದಾನೆ ಏನು ಕಾರಣ ?” ಎಂದು ಕೇಳಿದನು.  ಅದಕ್ಕೆ  ಪ್ರತಿಕ್ರಿಯೆ ನೀಡಿದ ದಲಿತರು,  “ನಮ್ಮತ್ರಕ್ಕೆ ದಿನವೂ ಬಂದು, ನಮ್ಮ ಮಕ್ಕಳನ್ನು ಸ್ಕೂಲಿಗೆ ಕಳುಹಿಸಿ ಅಂತ ಗಂಟು ಬಿದ್ದಿದ್ದಾನೆ” ಸ್ವಾಮಿರ ಎಂದು ದೈನೀಸಿ ಧ್ವನಿಯಲ್ಲಿ ಉತ್ತರಿಸಿದರು. ಯಜಮಾನ ಮತ್ತೆ ಗುಡುಗಿದ, “ಸೂಳೆಮಕ್ಕಳ ತ*** ಮುಚ್ಚಿಕೊಂಡು ಈ ಹುಡುಗನನ್ನು ನಿಮ್ಮ ಓಣಿಗೆ ಕರೆದುಕೊಂಡು ಹೋಗಿ, ಅವನು ಹೇಳಿದಂಗೆ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ.

ಇಲ್ಲವಾದರೆ ಒಬ್ಬೊಬ್ಬನ ಚರ್ಮ ಸಿಗದು ಹಾಕಿಬಿಡುತ್ತೇನೆ” ಎಂದು ಗುಡುಗಿದ. ಈ ಗುಡುಗಿಗೆ ನಡುಗಿದ ದಲಿತರು ತಕ್ಷಣವೇ ಬಸವಲಿಂಗಪ್ಪ ಅವರನ್ನು ತಮ್ಮ ಕೇರಿಗೆ ಕರೆದೊಯ್ದು ತಮ್ಮ  ಮಕ್ಕಳನ್ನು ಶಾಲೆಗೆ ಕಳುಹಿಸಿದರು. ಯಜಮಾನನ ಪಾಳೇಗಾರಿಕೆ ಫಲ ನೀಡಿದ್ದನ್ನು ಗಮನಿಸಿದ ಬಸವಲಿಂಗಪ್ಪ,  ಅಂದಿನಿಂದ ತಮ್ಮ ಮಾತು,   ಕೃತಿಗಳಲ್ಲಿ  ಪಾಳೇಗಾರಿಕೆ ರೂಪ ಅಳವಡಿಸಿಕೊಂಡರು.

ಬಸವಲಿಂಗಪ್ಪ ಇವರು ಮುಂದೆ ವಕೀಲ ವೃತ್ತಿ ಮಾಡಲು ಬೆಂಗಳೂರಿಗೆ ಆಗಮಿಸಿ,  ಶ್ರೀ ನಿಟ್ಟೂರು ಶ್ರೀನಿವಾಸ್ ರಾವ್ ಅವರ ಬಳಿ ಸಹಾಯಕರಾಗಿ ವಕೀಲಿ ವೃತ್ತಿ ಪ್ರಾರಂಭಿಸಿದರು. ನಂತರ ಸ್ವಂತ ಪ್ರಾಕ್ಟೀಸ್ ಮಾಡುವ ಸಲುವಾಗಿ, ಬೆಂಗಳೂರಿನ ಬಳೆಪೇಟೆಯ  ಉಸಾ ಬಿಲ್ಡಿಂಗ್ ಕಟ್ಟಡದಲ್ಲಿ ಕೊಠಡಿ ಒಂದನ್ನು  ಬಾಡಿಗೆ ಪಡೆದು ಕಚೇರಿಯನ್ನಾಗಿ ಮಾಡಿಕೊಂಡರು.

ವಕೀಲಿಕೆ ವೃತ್ತಿಯಲ್ಲಿ ಪ್ರಮುಖವಾಗಿ ದಲಿತರ ಭೂಮಿ, ದೌರ್ಜನ್ಯ  ವ್ಯಾಜ್ಯಗಳನ್ನು ಮತ್ತು ಶ್ರೀ ವಾಟಲ್ ನಾಗರಾಜ್ ಮುಂತಾದ ಕನ್ನಡ ಚಳುವಳಿಗಾರರ ಪರವಾಗಿ ವ್ಯಾಜ್ಯಗಳನ್ನು ಪಡೆದು, ವಕೀಲ ವೃತ್ತಿ ಮಾಡುತ್ತಿದ್ದರು, ಅವರುಗಳಿಗೆ ಪರಿಹಾರವನ್ನು ನ್ಯಾಯಾಲಯಗಳಿಂದ ಕೊಡಿಸುತ್ತಿದ್ದರು. ಶ್ರೀ ವಾಟಾಳ್ ನಾಗರಾಜ್ ಮತ್ತು ಕೆಲ ಬಡ ದಲಿತರಿಂದ ಹಣ ಪಡೆದಿಲ್ಲ .

ಸಾಮಾಜಿಕ ನ್ಯಾಯ,  ಸಮಾನತೆ,  ಸಮಾಜದ ಒಳಗಿನ ಜಾತಿ ವ್ಯವಸ್ಥೆ, ಬಡತನ ಇವುಗಳನ್ನು ಹೋಗಲಾಡಿಸಲು ‘ರಾಜಕೀಯ ಶಕ್ತಿ’ ಬೇಕು ಎಂಬ ಡಾ: ಅಂಬೇಡ್ಕರ್ ಸಿದ್ದಾಂತ ಸಾಧನೆಗಾಗಿ, ಬಿ ಬಸವಲಿಂಗಪ್ಪನವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು, ತನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. 1957 ರಲ್ಲಿ,  ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ, ಕರ್ನಾಟಕ ವಿಧಾನಸಭೆ ಪ್ರವೇಶ ಮಾಡಿದರು.

1957-1962; 1972-1973; 1978-1982; 1985-1989; 1989-1992 ಈ ಅವಧಿಗಳಲ್ಲಿ ಶಾಸಕರಾಗಿದ್ದರು. 1958ರಲ್ಲಿ ಶ್ರೀ ಬಿ ಡಿ ಜತ್ತಿ ಇವರ ಮಂತ್ರಿಮಂಡಲದಲ್ಲಿ ಗೃಹ ಮಂತ್ರಿಯಾಗಿ; 1972ರಲ್ಲಿ ಶ್ರೀ ಡಿ ದೇವರಾಜ ಅರಸು ಅವರ ಸಚಿವ ಸಂಪುಟದಲ್ಲಿ ಪೌರಾಡಳಿತ ಮತ್ತು ವಸತಿ ಸಚಿವರಾಗಿ; ಕಂದಾಯ, RDPR.; ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ಕರ್ನಾಟಕ ಸರ್ಕಾರದಲ್ಲಿ ಕಾರ್ಯನಿರ್ವಹಿಸಿದರು.

ಶ್ರೀ ಬಿ ಬಸವಲಿಂಗಪ್ಪ ಇವರು ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿದ್ದ ಅವಧಿಗಳಲ್ಲಿ ಪ್ರಮುಖವಾಗಿ –  ದೇಶದ ನಗರ ಪ್ರದೇಶಗಳಲ್ಲಿದ್ದ  ಮಲವರುವ ಅನಿಷ್ಟ ಪದ್ದತಿಯನ್ನು ಕರ್ನಾಟಕ ರಾಜ್ಯದಲ್ಲಿ ನಿರ್ಮೂಲನ ಗೊಳಿಸಲು ಕಾಯ್ದೆ ತಂದರು. ಭೂ ವ್ಯಾಜ್ಯಗಳನ್ನು ಪರಿಹರಿಸುವ ಸಲುವಾಗಿ ಮತ್ತು ದಲಿತರಿಗೆ ಭೂ ಹಂಚಿಕೆ ಮಾಡುವ ಸಲುವಾಗಿ ಭೂ ಕಂದಾಯ ಕಾಯ್ದೆ ತಂದರು. ಶೋಷಿತ ಸಮಾಜದ ರಕ್ಷಣೆಗಾಗಿ PTCL; ಸರ್ಕಾರಿ ಉದ್ಯೋಗದಲ್ಲಿ,  ಬಡ್ತಿಗಳಲ್ಲಿ ಮೀಸಲಾತಿ…. ಇತ್ಯಾದಿ ಹಲವು ಕಾನೂನು ತಂದರು.

ದಲಿತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದರು. ದಲಿತರು ಸ್ವಾಭಿಮಾನದಿಂದ, ಆತ್ಮ ಗೌರವಗಳಿಂದ,  ಬದುಕುವ ಶಕ್ತಿಯನ್ನು ರಾಜ್ಯದಲ್ಲಿ ತುಂಬಿದರು.  ಸರ್ಕಾರದಲ್ಲಿ ಸವರ್ಣೀಯ ಅಧಿಕಾರಿಗಳು ದಲಿತರ ಪರವಾಗಿ ಕೆಲಸ ಮಾಡಲೇಬೇಕಾದ ಭಯವನ್ನು ನಿರ್ಮಾಣ ಮಾಡಿದರು.

“ಬೂಸಾ ಚಳುವಳಿ”

ಡಾ: ಬಿ ಆರ್ ಅಂಬೇಡ್ಕರ್ ಸ್ಕೂಲ್  ಆಫ್ ಥಾಟ್ಸ್,  ಈ ಸಂಸ್ಥೆಯು ದಿನಾಂಕ 19-11- 1973 ರಂದು  ಮೈಸೂರ ವಿಶ್ವವಿದ್ಯಾನಿಲಯದ ಶತಮಾನೋತ್ಸವ ಕಟ್ಟಡದಲ್ಲಿ, “ಹೊಸ ಅಲೆಗಳು” ವಿಚಾರ ಸಂಕೀರ್ಣ ಏರ್ಪಡಿಸಿದ್ದರು.  ಈ ಕಾರ್ಯಕ್ರಮದಲ್ಲಿ ಶ್ರೀ ಬಿ ಬಸವಲಿಂಗಪ್ಪ ಇವರು ಆಹ್ವಾನಿತರಾಗಿ ಆಗಮಿಸಿದ್ದರು. ಲಾಯರ್ ಸಂಜೀವಯ್ಯ  ಮೊದಲು ಉದ್ದೇಶಿತ ವಿಚಾರ ಸಂಕೀರ್ಣದ ಬಗ್ಗೆ ಭಾಷಣ ಮಾಡಲು ಪ್ರಾರಂಭಿಸಿದರು.

ಅವರ ಭಾಷಣ ಏಕಮುಖವಾಗಿ ಆಂಗ್ಲ ಭಾಷೆಯಲ್ಲಿಯೇ ಮುಂದುವರೆದಿತ್ತು,  ಸಭಾಂಗಣದಲ್ಲಿದ್ದ ಸಭಿಕರು ದಯಮಾಡಿ ಕನ್ನಡದಲ್ಲಿ ಭಾಷಣ ಮಾಡಲು ಒತ್ತಾಯ ಮಾಡಿದರು.  ಆದರೂ ಲಾಯರ್ ಸಂಜೆವಯ್ಯ ದಲಿತರಾಗಿದ್ದರು ನಾವುಗಳು ಹಲವು ಭಾಷೆಗಳಲ್ಲಿ ವಿದ್ಯುತ್ ಸಂಪಾದಿಸಿದ್ದೇವೆ ಎನ್ನುವ,  ಸಾಬೀತುಪಡಿಸುವ, ರೀತಿಯಲ್ಲಿ,  ಆಂಗ್ಲ ಭಾಷೆಯಲ್ಲಿಯೇ ಭಾಷಣವನ್ನು ಮುಂದುವರಿಸಿದರು.  ಸಭಾಂಗಣ ಸ್ವಲ್ಪ ಕಳವಳಗೊಂಡಿತ್ತು.

ಲಾಯರ್ ಸಂಜೀವಯ್ಯ ಇವರ ಭಾಷಣ ಮುಗಿದ ತರುವಾಯ,  ಶ್ರೀ ಬಿ ಬಸವಲಿಂಗಪ್ಪ ಇವರಿಗೆ ಭಾಷಣ ಮಾಡಲು ಆಹ್ವಾನಿಸಿದರು. ಕನ್ನಡ ಭಾಷಣಕ್ಕೆ ಒತ್ತಾಯಿಸಿ ಕಳವಳಗೊಂಡಿದ್ದ ಸಭಾಂಗಣವನ್ನು ಸರಿಪಡಿಸುವ ಹಿನ್ನೆಲೆಯಿಂದ ಭಾಷಣವನ್ನು ಪ್ರಾರಂಭಿಸಿದ ಶ್ರೀ ಬಿ ಬಸವಲಿಂಗಪ್ಪ ಇವರು ಭಾಷಣದ ಪ್ರಾರಂಭದಲ್ಲಿಯೇ,  “ಕನ್ನಡದಲ್ಲಿ ಏನಿದೆ ? ಅದರಲ್ಲಿ ಬಹುಪಾಲು ಬರಿ ಬೂಸಾ” ಎಂದರು.

ಈ ಕಾರ್ಯಕ್ರಮ ಮುಗಿದು,  ಬೆಳಗಾಗುವುದರ ಒಳಗೆ, ಪುರೋಹಿತ ಮತ್ತು ಸಂಪ್ರದಾಯವಾದಿಗಳ ಹಿಡಿತದಲ್ಲಿರುವ ಮಾಧ್ಯಮ / ಪತ್ರಿಕೆಗಳು,   ಬಸವಲಿಂಗಪ್ಪನವರ ಭಾಷಣವನ್ನು ತಿರುಚಿ, ಕನ್ನಡ,  ಕನ್ನಡಿಗರ ಮತ್ತು ಪುರೋಹಿತ ಸಾಹಿತ್ಯಗಳ ಬಗ್ಗೆ  ಬಸವಲಿಂಗಪ್ಪ ಅವಮಾನ ಮಾಡಿದ್ದಾರೆ. ಕನ್ನಡ ಸಾಹಿತ್ಯದ ಬಗ್ಗೆ,  ಓದುಗರ ಅಭಿಮಾನಗಳ ಬಗ್ಗೆ ಅವಮಾನ ಮಾಡಿದ್ದಾರೆ… ಇತ್ಯಾದಿಯಾಗಿ ರೊಚ್ಚಿಗೆಬ್ಬಿಸುವ  ಲೇಖನಗಳು ಪತ್ರಿಕೆಗಳಲ್ಲಿ  ಬರೆದರು.

ಈ ಲೇಖನಗಳಿಗೆ ಶ್ರೀ ಬಸವಲಿಂಗಪ್ಪ ಪ್ರತಿಕ್ರಿಯೆ ನೀಡಿ,  ಕನ್ನಡ ಸಾಹಿತ್ಯಕ್ಕೆ ನನ್ನ ವಿರೋಧವಿಲ್ಲ.  ನಾನು ಕನ್ನಡಿಗ. ಕೆಲವು ಜನ ಬೂಸಾ ಸಾಹಿತ್ಯ ಬರೆದು,  ಕೊಬ್ಬು ಬೆಳೆಸಿಕೊಂಡು,  ಸಮಾಜದಲ್ಲಿದ್ದಾರೆ.  ಜನಗಳಲ್ಲಿರುವ ಮುಗ್ಧತೆ, ಶಿಕ್ಷಣ, ಜ್ಞಾನದ ಕೊರತೆಗಳನ್ನು ತಿಳಿದು,  ದುರುಪಯೋಗ ಪಡಿಸಿಕೊಂಡು ಅವರಿಗೆ – ಭಯ, ಮೌಡ್ಯ, ಕಂದಾಚಾರ, ಜಾತಿಭೇದ, ಮೇಲೂ ಕೀಳ ಹೇಳುವುದಿದೆಯಲ್ಲ ಅದೇ ಬೂಸಾ ಸಾಹಿತ್ಯ.  ಇದನ್ನು ಸಾವಿರ ಸರ್ತಿ ಹೇಳುತ್ತೇನೆ. ಉತ್ತಮ ಚಿಂತನೆಯ ಸಾಹಿತ್ಯ ಬೇಕು. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಸಮಾಜವನ್ನು ಹಾಳು ಮಾಡುವ ವಿಷಯಗಳ ಸಾಹಿತ್ಯ ಏನಿದೆ ಅದೇ ಬೂಸಾ ಸಾಹಿತ್ಯ.  ಅದರ ಮೇಲೆ ನನ್ನ ಕಣ್ಣು ಮತ್ತು ನನ್ನ ವಿರೋಧ ಎಂದರು.

ಈ ಪ್ರತಿಕ್ರಿಯೆ ಬಗ್ಗೆ ಕೂಡ ಪತ್ರಿಕೆಗಳಲ್ಲಿ ರೋಚಕವಾಗಿ ಲೇಖನಗಳು ಬಂದವು. ರಾಜ್ಯ ದಲ್ಲಿ ಈ ಘಟನೆ ಎರಡು ರೂಪದ ಹೋರಾಟವನ್ನು ಸೃಷ್ಟಿ ಮಾಡಿತ್ತು.  ಒಂದು ಬಸವಲಿಂಗಪ್ಪ ಅವರನ್ನು ಬೆಂಬಲಿಸುವ ಗುಂಪು ; ಮತ್ತೊಂದು ಬಸವಲಿಂಗಪ್ಪ ಅವರನ್ನು ವಿರೋಧಿಸುವ ಗುಂಪು;

ಎರಡು ಗುಂಪುಗಳು ಅವರವರ ವ್ಯಾಖ್ಯಾನಗಳನ್ನು ಮಾಡುತ್ತ,  ರಾಜ್ಯದ ಆದ್ಯಂತ ಚಳುವಳಿಗಳನ್ನು ಪ್ರಾರಂಭಿಸಿದರು.  ಕೆಲವು ಕಡೆ ಕಲ್ಲು ಎಸೆತಗಳು ನಡೆದವು. ಬೆಂಗಳೂರಿನ ಕೆಆರ್ ಸರ್ಕಲ್, ಮೈಸೂರ್, ಇನ್ನು ಹಲವು ನಗರಗಳಲ್ಲಿ ಘರ್ಷಣೆಗಳನ್ನು ತಪ್ಪಿಸಲು,  ಪೊಲೀಸರ ಲಾಠಿ ಪ್ರಹಾರ ಮಾಡಿದರು. ಸಂಪ್ರದಾಯವಾದಿಗಳನ್ನು,  ವಿದ್ಯಾರ್ಥಿಗಳನ್ನು , ದಲಿತರನ್ನು ಬಂಧಿಸಲಾಯಿತು. ತುಳಿತಕ್ಕೆ ಕಲ್ಲೆಸತ್ತಕ್ಕೆ,  ದೌರ್ಜನ್ಯಕ್ಕೆ, ದೈಹಿಕವಾಗಿ ಬಹುತೇಕರು ಹಲ್ಲೆಗೊಳಗಾದರು.

ರಾಜ್ಯದ ಉದ್ದಗಲಕ್ಕೂ ನಡೆಯುತ್ತಿದ್ದ ಪ್ರತಿಭಟನೆಗಳ ಸಂಬಂಧ,  ಸಮಾಜವಾದಿ ನಾಯಕ ಶ್ರೀ ಜೆ ಎಚ್ ಪಟೇಲ್, ರಾಷ್ಟ್ರಕವಿ ಕುವೆಂಪು,  ಬಸವಲಿಂಗಪ್ಪ ಅವರ ಮಾತುಗಳನ್ನು ಬೆಂಬಲಿಸಿ ಹೇಳಿಕೆ ನೀಡಿದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ದೇ. ಜವರೇಗೌಡ ಅವರು ಬಸವಲಿಂಗಪ್ಪ ಅವರ ಮಾತುಗಳನ್ನು ಖಂಡಿಸಿದರು. ಪ್ರತಿಭಟನೆಗಳು ಮತ್ತಷ್ಟು  ಮುಂದುವರೆದವು.

ಈ ಪ್ರತಿಭಟನೆ / ಚಳುವಳಿಗಳಿಂದ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರಿಗೆ ಇರುಸು ಮುರುಸು ನಿರ್ಮಾಣವಾಯಿತು. ಮಂತ್ರಿ ಮಂಡಲದಿಂದ ಬಸವಲಿಂಗಪ್ಪ ಅವರನ್ನು ವಜಾ ಗೊಳಿಸಬೇಕೆಂದು ಒತ್ತಡಗಳು ರಾಜ್ಯದಲ್ಲಿ ಜಾಸ್ತಿಯಾದವು. ಸರ್ಕಾರದ ಒಳಗಡೆ ಇದ್ದಂತಹ ಬಸವಲಿಂಗಪ್ಪ ಅವರ ವಿರೋಧಿಗಳು ದೆಹಲಿಯಲ್ಲಿನ ಕಾಂಗ್ರೆಸ್ ಹೈಕಮಾಂಡಿಗೆ ದೂರುಗಳನ್ನು ಸಲ್ಲಿಸಿದರು.

ಬಸವಲಿಂಗಪ್ಪ ದೆಹಲಿಗೆ ತೆರಳಿ ಹೈಕಮಾಂಡಿಗೆ ವಸ್ತು ಸ್ಥಿತಿ ವಿವರಿಸಲು ಪ್ರಯತ್ನಿಸಿದರು, ಸಾಧ್ಯವಾಗಲಿಲ್ಲ. ರಾಜೀನಾಮೆಗೆ ಒತ್ತಡ ಜಾಸ್ತಿಯಾಯಿತು. ದಿನಾಂಕ 14-12-1973 ರಂದು ಬಸವಲಿಂಗಪ್ಪ ಅವರು ದೆಹಲಿಯಿಂದಲೇ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಾದ ಅರಸು ಅವರಿಗೆ ಕಳುಹಿಸಿಕೊಟ್ಟರು.  ಪುರೋಹಿತಸಾಹಿ, ಪಟ್ಟಭದ್ರಾ ಹಿತಶಕ್ತಿ, ಜಾತಿ ವ್ಯವಸ್ಥೆ, ಜಾತಿ ದ್ವೇಷ…. ಅಂತಿಮವಾಗಿ ಬಸವಲಿಂಗಪ್ಪ ಅವರ ಮಂತ್ರಿ ಪದವಿಯನ್ನು ಕಸಿದುಕೊಂಡಿತ್ತು.

ಈ ರಾಜೀನಾಮೆ ನಂತರ –

ಡಾ: ಸಿದ್ದಲಿಂಗಯ್ಯ ಹೇಳಿಕೆ ನೀಡಿ, “ನಮ್ಮ ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ನಡೆದ  ಹಲ್ಲೇ.  ತನಗೆ ಅನ್ನಿಸಿದ್ದನ್ನು ಹೇಳುವ ಹಕ್ಕು ದಲಿತರಿಗೆ ಇಲ್ಲ” ಎಂದರು. ರಾಷ್ಟ್ರಕವಿ ಕುವೆಂಪು ಹೇಳಿಕೆ ನೀಡಿ, “ಈ ಬೂಸಾ ಸಾಹಿತ್ಯ ಅಂತ ಯಾವುದನ್ನು ಕರೆಯುತ್ತೇವೆಯೋ,  ಅದು ಪ್ರಪಂಚದ ಎಲ್ಲಾ ಸಾಹಿತ್ಯದಲ್ಲಿಯೂ ಇರುತ್ತದೆ.

ಸುಮಾರು ಮುಕ್ಕಾಲು ಪಾಲಿನ ಮೇಲೆ ಇರುವುದು ಬೂಸಾ ಸಾಹಿತ್ಯವೇ” ಎಂದು ಹೇಳಿಕೆ ನೀಡಿದರು. ಡಾ: ಯು ರ್ ಅನಂತಮೂರ್ತಿ ಹೇಳಿಕೆ ನೀಡಿ,  “ನಮ್ಮ ಮತ ಧರ್ಮಗಳಿಂದ ಮೊದಲಿನಿಂದಲೂ ವಂಚಿತರಾಗಿ ಹೊರಗುಳಿದ ಪಂಚಮರಿಗೆ, ಮತೀಯ ಸಾಹಿತ್ಯದಿಂದ ತುಂಬಿದ ಕನ್ನಡ ಸಾಹಿತ್ಯ ಅರ್ಥಹೀನವಾಗಿ ಕಂಡರೆ ಅದರಲ್ಲೇನೋ ಆಶ್ಚರ್ಯ ? ಬಸವಲಿಂಗಪ್ಪನವರು, ಕನ್ನಡ ಸಾಹಿತ್ಯವನ್ನು  ಭೂಸ ಎಂದು ಕರೆದಾಗ ಆಗೇಕೆ ಕರೆದರೂ ಎಂಬ ಪ್ರಶ್ನೆಯನ್ನು ನಾವು ಹಾಕಿಕೊಳ್ಳಬೇಕು ? ಎಂದು ಬಸವಲಿಂಗಪ್ಪನವರನ್ನು ಬೆಂಬಲಿಸಿದರು.

ಈ “ಬೂಸಾ ಚಳುವಳಿ” ಯನ್ನು ಒಳಹಕ್ಕಿ ನೋಡಿದಾಗ,    ಕೆಲವು ಸತ್ಯಗಳನ್ನು ಕಾಣಬಹುದು –  ಶ್ರೀ ಬಸವಲಿಂಗಪ್ಪ ಅವರು ನೇರ, ನಡೆ-ನುಡಿ ಉಳ್ಳವರಾಗಿದ್ದರು. ಸಮಾಜದಲ್ಲಿನ ಜಾತಿವಾದಿ, ಕೋಮುವಾದಿ, ಬಂಡವಾಳ ಶಾಹಿಗಳ  ಹುನ್ನಾರಗಳನ್ನು ವಿಫಲಗೊಳಿಸಬೇಕು ಎಂದು ಹೋರಾಟ ಮಾಡುತ್ತಿದ್ದರು. ದಲಿತರು ಮತ್ತೊಬ್ಬರ ಕಕ್ಕಸನ್ನು ಅವರ ತಲೆ ಮೇಲೆ ವರುವುದನ್ನು  ತಪ್ಪಿಸಿದ್ದರು. ಭೂ ರಹಿತ ದಲಿತರಿಗೆ ಭೂಮಿ ಕೊಡಿಸಿದ್ದರು. ದಲಿತರು ತನ್ನ ಬಡತನ,  ತಿಳುವಳಿಕೆ ಇಲ್ಲದೆ ಮಾರಾಟ ಮಾಡಿದ್ದ ಭೂಮಿಗಳನ್ನು ವಾಪಸ್ ಕೊಡಿಸಿದ್ದರು.

ದಲಿತರನ್ನು ದೌರ್ಜನ್ಯಗಳಿಂದ ರಕ್ಷಣೆ ಮಾಡಿದ್ದರು. ರಾಜ್ಯದಲ್ಲಿ ದಲಿತರು ಸ್ವಾಭಿಮಾನ,  ಆತ್ಮ ಗೌರವಗಳಿಂದ ಬದುಕುವಂತೆ ಮಾಡಿದ್ದರು.  ಇವುಗಳನ್ನು ಸಹಿಸದ, ಒಪ್ಪದ ಸವರ್ಣೀಯ ಮೂಲಭೂತವಾದಿಗಳು, ಸಂಪ್ರದಾಯವಾದಿಗಳು, ಪುರೋಹಿತಸಾಹಿ ಈ “ಬೂಸಾ ಚಳುವಳಿ” ಯನ್ನು ಸೃಷ್ಟಿ ಮಾಡಿ ದಲಿತಶಕ್ತಿ, ಹೋರಾಟಗಾರ ಶ್ರೀ ಬಿ. ಬಸವಲಿಂಗಪ್ಪ ಅವರ ಮಂತ್ರಿ ಪದವಿಯನ್ನು ಕಸಿದು ಕೊಂಡಿದ್ದರು.

ಶ್ರೀ ಬಿ. ಬಸವಲಿಂಗಪ್ಪ  ದಿನಾಂಕ 27-12-1992 ರಂದು ಮೃತರಾದರು. ಇವರಿಗೆ 7 ಮಕ್ಕಳು.

ಬರವಣಿಗೆ ಮುಗಿಸುವ ಮುನ್ನ,

1988ರಲ್ಲಿ ನನಗೆ ವಿಧಾನಸೌಧದಲ್ಲಿ ಉದ್ಯೋಗ ಸಿಕ್ಕಿತ್ತು. ಭದ್ರಾವತಿಯಿಂದ ಬಂದಿದ್ದ ನನಗೆ ಶ್ರೀ ಬಸವಲಿಂಗಪ್ಪ ಅವರೊಡನೆ ಒಂದು ದಿನ  ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಆ  ದಿನದ ಕೆಲಸಕ್ಕಿಂತ,  ಘಟನೆಯೊಂದು ನೆನಪಿದೆ.  ಹಂಚಿಕೊಳ್ಳುತ್ತೇನೆ –

ಶ್ರೀ ಬಸವಲಿಂಗಪ್ಪ  ಅವರ ಮಗಳ ಮನೆ ಬೆಂಗಳೂರಿನ ಕುಮಾರ ಪಾರ್ಕ್ ಬಡಾವಣೆಯಲ್ಲಿದೆ.  ರಾಜಾಜಿನಗರದ ಸಮೀಪದ ಬಡಾವಣೆಯೊಂದರಲ್ಲಿ ಇವರ ಮಲ ಸಹೋದರ ಶ್ರೀ ಕೆ ಎಚ್ ರಂಗನಾಥ್ ವಾಸವಿದ್ದರು.  ಅವರ ಮಗಳ ಮನೆಯಿಂದ ಶ್ರೀ ಕೆ ಎಚ್ ರಂಗನಾಥ್ ಮನೆಗೆ ಬಸವಲಿಂಗಪ್ಪ ಹೊರಟರು.  ಆ ವೇಳೆಯಲ್ಲಿ, ಕಾರಿನ ಚಾಲಕ  ಬೇದಿ ಆಗುತ್ತಿದೆ, ಹೊಟ್ಟೆ ನೋಯುತ್ತಿದೆ ಎಂದು ಶೌಚಾಲಯಕ್ಕೆ ಓಡಿ ಹೋದ. ನನಗೆ ಡ್ರೈವಿಂಗ್  ಬರುತ್ತದೆಯೇ ಎಂದು ಕೇಳಿದರು. ಇಲ್ಲ ಎಂದೆ.

ಕಾರಿನ ಹಿಂಬದಿ ಸೀಟಿನಲ್ಲಿ ನನ್ನನ್ನು ಕೂರಲು ಹೇಳಿ, ಅವರೇ ಡ್ರೈವಿಂಗ್ ಮಾಡಿದರು. ಕಾರು ಸ್ವಸ್ತಿಕ್ ಸಮೀಪ ಬಂದಾಗ, ಟಯರೊಂದು ಪಂಚರ್ ಆಗಿರುವುದು ತಿಳಿಯಿತು.    ಕಾರನ್ನು ಸೈಡಿಗೆ ಹಾಕಿ, ಡಿಕ್ಕಿಯಲ್ಲಿ ಸ್ಟೆಪ್ನಿ ಟೈಯರ್ ತಂದು,  ಪಂಚರಾಗಿರುವ ಟೈರನ್ನು ಬದಲಾಯಿಸು ಎಂದರು. ನಾನು ಪ್ರಯತ್ನ ಪಡುತ್ತಿದ್ದೆ.  ನಿಧಾನ ಮತ್ತು ನನಗೆ ಈ ಕೆಲಸ ಬರೋದಿಲ್ಲವೆಂದು ಗಮನಿಸಿ,  ಶ್ರೀ ಬಸವಲಿಂಗಪ್ಪ ಅವರೇ ಡಿಕ್ಕಿಯಿಂದ  ಸ್ಟೆಪ್ನಿ ತೆಗೆದು, ಪಂಚರ್ ಆಗಿರುವ ಟೈಯರನ್ನು ಬದಲಾಯಿಸಿದರು. ನಂತರ ಇಬ್ಬರೂ ಶ್ರೀ ಕೆಚ್ ರಂಗನಾಥ್ ಅವರ ಮನೆ ತಲುಪಿದೆವು.

ನನ್ನ ಮನೆಯ ಬಡತನ ಕಾರಣದಿಂದ, ಸೈಕಲ್ ಕೂಡ ನಮ್ಮ ಮನೆಯಲ್ಲಿ 80ರ ದಶಕಗಳಲ್ಲಿ ಇರಲಿಲ್ಲ. ಕಾರಿನ ಒಳಗೆ ಯಾವತ್ತೂ ಕುಳಿತಿಲ್ಲ. ಇನ್ನೂ ಕಾರಿನ ಬಗ್ಗೆ ನನಗೆ ಗೊತ್ತೇ ಇರಲಿಲ್ಲ.  ಆ ಕಾರಣದಿಂದ ಮಾನ್ಯರು ಹೇಳಿದ ಕೆಲಸವನ್ನು ನಾನು ಮಾಡಲಿಕ್ಕೆ ಆಗಲಿಲ್ಲ.  ಈ ಬಗ್ಗೆ ನನಗೆ ತುಂಬಾ ನೋವಿದೆ.

ಈ ಘಟನೆಯೊಂದಿಗೆ “ಬೂಸಾ ಚಳುವಳಿ” ಯ  ನೆನಪು ಮಾಡುವ ಬರಹ ಮುಕ್ತಾಯ ಮಾಡುತ್ತೇನೆ.

ಎಸ್. ಮೂರ್ತಿ,

ಮಾಜಿ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ.

ಬೆಂಗಳೂರು.

9740197676

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!