• Tue. Jun 18th, 2024

PLACE YOUR AD HERE AT LOWEST PRICE

ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ವಿವಿಧ 44ಕ್ಕೂ ಹೆಚ್ಚು ಶಾಲೆಗಳಿಗೆ ಮುಜಾಹಿದ್ದೀನ್ ಸಂಘಟನೆಯಿಂದ ಇ-ಮೇಲ್ ಮೂಲಕ ಬಾಂಬ್‌ ಬೆದರಿಕೆ ಹಾಕಲಾಗಿದೆ. ಇದರಿಂದಾಗಿ ಶಾಲೆಗಳ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಶಾಲಾ ಮಕ್ಕಳನ್ನು ಸಿಬ್ಬಂದಿ ಹೊರ ಕಳಿಸಿದ್ದಾರೆ.

ಇ-ಮೇಲ್ ನಲ್ಲಿ ಕೆಲವು ಅಂತಾರಾಷ್ಟ್ರೀಯ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಇ-ಮೇಲ್ ಪರಿಶೀಲನೆ ಕೆಲಸ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದೊಂದು ವರ್ಷದ ಹಿಂದೆ ಇದೇ ರೀತಿ ಬಾಂಬ್ ಬೆದರಿಕೆಯನ್ನು ಹಾಕಲಾಗಿತ್ತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಬೆಂಗಳೂರು ನಗರ ಕಮಿಷನ‌ರ್ ಬಿ.ದಯಾನಂದ, ‘ಯಾರೂ ಆತಂಕ ಪಡಬೇಡಿ. ಬಾಂಬ್ ನಿಷ್ಕ್ರಿಯ ದಳ ಮತ್ತು ಬಾಂಬ್ ಪತ್ತೆ ಸಿಬ್ಬಂದಿ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಯಲಹಂಕ, ಬಸವೇಶ್ವರ ನಗರ ಸೇರಿ ವಿವಿಧ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಇ- ಮೇಲ್ ಮೂಲಕ ಬಸವೇಶ್ವರ ನಗರದ ನ್ಯಾಫಲ್, ಯಲಹಂಕ ರಾಷ್ಟ್ರೀಯ ಶಾಲೆ, ನಾಗದೇವನಹಳ್ಳಿ ಚಿತ್ರಕೂಟ ಶಾಲೆ, ಆನೇಕಲ್ ರಾಷ್ಟ್ರೀಯ 5 ಶಾಲೆಗಳಿಗೆ, ಸದಾಶಿವನಗರದ ನೀವ್ ಶಾಲೆ, ದೊಮ್ಮಸಂದ್ರದ ಇನ್ವೆಂಚರ್ ಶಾಲೆ ಸೇರಿದಂತೆ 44 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದಾರೆ.

ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ ಕಳುಹಿಸಿದ್ದಾರೆ. ಇತ್ತ ಬೆದರಿಕೆ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ಶಾಲೆಯ ಬಳಿ ಓಡಿ ಬಂದಿದ್ದಾರೆ.

ಕಳೆದ ವರ್ಷವೂ ಬೆಂಗಳೂರು ನಗರದ ನಾಲ್ಕು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿತ್ತು. ಅಂದು ಕೂಡ ಇ-ಮೇಲ್ ಮಾಡಿದ್ದ ಆಗಂತುಕರು, ‘ನಿಮ್ಮ ಶಾಲೆಯಲ್ಲಿ ಶಕ್ತಿಶಾಲಿ ಬಾಂಬ್ ಇರಿಸಲಾಗಿದ್ದು. ಎಚ್ಚರಿಕೆ ವಹಿಸುವುದು ನಿಮ್ಮ ಕರ್ತವ್ಯ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ’ ಎಂದು ಹೇಳಲಾಗಿತ್ತು.

ಮಹದೇವಪುರದ ಗೋಪಾಲನ್ ಇಂಟರ್‌ನ್ಯಾಷನಲ್ ಶಾಲೆ, ವರ್ತೂರು ಠಾಣಾ ವ್ಯಾಪ್ತಿಯ ಡೆಲ್ಲಿ ಪಬ್ಲಿಕ್ ಸ್ಕೂಲ್, ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯ ನ್ಯೂ ಅಕಾಡೆಮಿ ಸ್ಕೂಲ್, ಹೆಣ್ಣೂರು ಠಾಣಾ ವ್ಯಾಪ್ತಿಯ ಸೈಂಟ್ ವಿನ್ಸೆಂಟ್ ಪೌಲ್ ಶಾಲೆ, ಗೋವಿಂದಪುರ ಠಾಣಾ ವ್ಯಾಪ್ತಿಯ ಇಂಡಿಯನ್ ಪಬ್ಲಿಕ್ ಸ್ಕೂಲ್‍ನಲ್ಲಿ ಬಾಂಬ್ ಇಟ್ಟಿರುವುದಾಗಿ ದುಷ್ಕರ್ಮಿಗಳು ಬೆದರಿಸಿದ್ದರು. ಕೂಡಲೇ ಶಾಲೆಗೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ದೌಡಾಯಿಸಿ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು. ಬಳಿಕ ಅದು ಹುಸಿಬಾಂಬ್ ಕರೆ ಎಂದು ಪೊಲೀಸರು ಪತ್ತೆ ಹಚ್ಚಿದ್ದರು.

ಡಿಸಿಎಂ ಡಿಕೆ ಶಿವಕುಮಾರ್ ಭೇಟಿ

ಮಾಧ್ಯಮಗಳಲ್ಲಿನ ಸುದ್ದಿ ನೋಡಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸದಾಶಿವನಗರದಲ್ಲಿರುವ ನ್ಯೂ ಅಕಾಡೆಮಿ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿನ ಸುದ್ದಿ ನೋಡಿ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದಿರುವೆ. ಮನೆಯ ಬಳಿಯೇ ಇರುವ ಶಾಲೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಗರ ಪೊಲೀಸ್ ಕಮಿಷನರ್​ ಬಳಿಯೂ ಮಾಹಿತಿ ಪಡೆದಿದ್ದೇನೆ. ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಪೋಷಕರು, ಮಕ್ಕಳು ಆತಂಕಪಡುವುದು ಬೇಡ: ಪರಮೇಶ್ವರ್‌ 

ಶಾಲೆಗಳಲ್ಲಿ ಬಾಂಬ್ ಬೆದರಿಕೆ ಪ್ರಕರಣದ ಕುರಿತು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಕರೆ ಮಾಡಿ ಮಾಹಿತಿ ಪಡೆದರು.

ಬೆದರಿಕೆ ಕರೆ ಬಂದಿರುವ ಎಲ್ಲ ಕಡೆ ಸಿಐಡಿ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಎಲ್ಲ ಸ್ಕ್ವಾಡ್‌ಗಳನ್ನು ಕಳುಹಿಸಿ ತಪಾಸಣೆ ನಡೆಸಬೇಕು, ಕಟ್ಟೆಚ್ಚರಿಕೆ ವಹಿಸುವಂತೆ ನಿರ್ದೇಶಿಸಿದರು.

ಬೆದರಿಕೆ ಬಂದಿರುವ 15 ಶಾಲೆಗಳಲ್ಲಿಯೂ ಪೊಲೀಸ್ ಅಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ. ಕಳೆದ ವರ್ಷವು ಇದೇ ರೀತಿ ಕರೆ ಬಂದಿತ್ತು ಎನ್ನಲಾಗುತ್ತಿದೆ. ಪ್ರಕರಣವನ್ನು ಲಘುವಾಗಿ ತೆಗೆದುಕೊಂಡಿಲ್ಲ. ಗಂಭೀರವಾಗಿ ಪರಿಗಣಿಸಲಾಗಿದೆ. ಬಾಂಬ್ ಬೆದರಿಕೆಯ ಇಮೇಲ್ ಬಗ್ಗೆ ಪರಿಶಿಲೀಸುವಂತೆ ಸಿಐಡಿ ಅಧಿಕಾರಿಗಳಿಗೆ ಸೂಚಿಸಿದರು.

ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮೂಲ‌ ಪತ್ತೆ ಹಚ್ಚುವವರೆಗೂ ಬಿಡುವುದಿಲ್ಲ. ತುಮಕೂರಿನಿಂದ ಬೆಂಗಳೂರಿಗೆ ವಾಪಸ್ ಆದ ನಂತರ ಇಲಾಖೆಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಪೋಷಕರು ಮಕ್ಕಳು ಆತಂಕಪಡುವುದು ಬೇಡ ಎಂದು ಪರಮೇಶ್ವರ್‌ ಹೇಳಿದರು.

Related Post

ಜನ್ಮದಿನಕ್ಕೊಂದು ಸಸಿ ನೆಟ್ಟು ಹಸಿರನ್ನು ಉಸಿರಾಗಿಸಿ – ಹೆಚ್.ಎನ್.ಮೂರ್ತಿ
ಅಂಧಕಾರದಲ್ಲಿ ಮುಳುಗಿದ ವಿಶ್ವವನ್ನು ಸಮ-ಸಮಾಜದ ಬೆಳಕೆಂಬ ಜ್ಞಾನದ ಕಡೆ ಕೊಂಡೊಯ್ಯುವ ನವಯುಗವನ್ನು ಪ್ರತಿಷ್ಠಾಪನೆ ಮಾಡಿದ ಚೇತನ  ಗೌತಮಬುದ್ದ: ಕಲಾವಿದ ಯಲ್ಲಪ್ಪ
ಎಂಎಲ್ಸಿ ಸ್ಥಾನಕ್ಕೆ ನನ್ನ ಸೇವಾ ಹಿರಿತನವನ್ನು ಪರಿಗಣಿಸುವಂತೆ ಸಿಎಂಗೆ ಮನವಿ ಮಾಡಿದ ಊರಬಾಗಿಲು ಶ್ರೀನಿವಾಸ್

Leave a Reply

Your email address will not be published. Required fields are marked *

You missed

error: Content is protected !!