• Fri. May 10th, 2024

PLACE YOUR AD HERE AT LOWEST PRICE

‘ಡ್ಯೂಟಿ ಮುಗಿಯಿತು’ ಎಂದು ಹೇಳಿ ಚಾಲಕ (ಲೋಕೊ ಪೈಲಟ್) ರೈಲನ್ನು ಮಧ್ಯದಲ್ಲಿ ನಿಲ್ಲಿಸಿ ಹೊರಟು ಹೋದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಬುರ್ವಾಲ್ ಜಂಕ್ಷನ್‌ ರೈಲು ನಿಲ್ದಾಣದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಇದರಿಂದಾಗಿ ಎರಡು ಎಕ್ಸ್‌ಪ್ರೆಸ್ ರೈಲುಗಳ ಸುಮಾರು 2,500ಕ್ಕೂ ಹೆಚ್ಚು ಪ್ರಯಾಣಿಕರು ಮೂರುವರೆ ಗಂಟೆಗಳ ಕಾಲ ಅನ್ನ, ನೀರಿಲ್ಲದೇ ರೈಲು ನಿಲ್ದಾಣದಲ್ಲೇ ಉಳಿದು ಹೈರಾಣಾಗಿದ್ದಾರೆ.

ರೈಲಿನೊಳಗೆ ನೀರು, ಆಹಾರ ಹಾಗೂ ವಿದ್ಯುತ್ ಸರಬರಾಜು ಕೂಡ ಇಲ್ಲದೆ, ಯಾತನೆಗೊಳಗಾಗಿದ್ದ ಪ್ರಯಾಣಿಕರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಲ್ಲದೇ, ಇನ್ನೊಂದು ಎಕ್ಸ್‌ಪ್ರೆಸ್ ರೈಲು ಹೋಗದಂತೆ ತಡೆದಿದ್ದಾರೆ.

ಎರಡೂ ರೈಲುಗಳು ರೈಲು ನಿಲ್ದಾಣದಲ್ಲೇ ನಿಂತ ಪರಿಣಾಮ ಸುಮಾರು 2,500 ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ವಿಷಯ ತಿಳಿದ ನಂತರ ರೈಲ್ವೇ ಇಲಾಖೆಯು ಬೇರೆ ಲೋಕೊಪೈಲಟ್ ಮತ್ತು ಸಿಬ್ಬಂದಿಯನ್ನು ಕಳುಹಿಸಿ ರೈಲನ್ನು ನಿಗದಿತ ಸ್ಥಾನಕ್ಕೆ ತಲುಪಿಸಿದೆ. ಚಾಲಕನ ವರ್ತನೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯನ್ನು ದೃಢೀಕರಿಸಿ ಮಾಹಿತಿ ನೀಡಿರುವ ಈಶಾನ್ಯ ರೈಲ್ವೆಯ ಅಧಿಕಾರಿಗಳು, “ರೈಲು ಸಂಖ್ಯೆ 15203 ಬರೌನಿ-ಲಕ್ನೋ ಎಕ್ಸ್‌ಪ್ರೆಸ್ ಬುರ್ವಾಲ್ ಜಂಕ್ಷನ್‌ ರೈಲು ನಿಲ್ದಾಣವನ್ನು ತಲುಪಿದ ನಂತರ ಲೋಕೋ ಪೈಲಟ್ ಡ್ಯೂಟಿ ಮುಂದುವರಿಯಲು ನಿರಾಕರಿಸಿದರು.

ಆ ಬಳಿಕ ಬೇರೊಬ್ಬ ಲೊಕೋ ಪೈಲಟ್ ಅನ್ನು ಸ್ಥಳಕ್ಕೆ ಕರೆಸಿ ನಿಗದಿತ ಸ್ಥಳಕ್ಕೆ ಪ್ರಯಾಣಿಕರನ್ನು ಕರೆದೊಯ್ಯುವಂತೆ ವ್ಯವಸ್ಥೆ ಮಾಡಲಾಯಿತು. ಈ ಘಟನೆಯಿಂದ ರೈಲು ಲಕ್ನೋಗೆ ತಡವಾಗಿ ತಲುಪಿತು” ಎಂದು ತಿಳಿಸಿದ್ದಾರೆ.

ಈ ನಡುವೆ ಲೋಕೋ ಪೈಲಟ್ ಕೆಲಸ ಮುಂದುವರಿಸಲು ನಿರಾಕರಿಸಿದ್ದಾರೆ ಎಂದು ಪ್ರಯಾಣಿಕರಿಗೆ ಸ್ಟೇಷನ್ ಮಾಸ್ಟರ್ ತಿಳಿಸುವ ವಿಡಿಯೋ ವೈರಲಾಗಿದೆ. ರೈಲು ಬುಧವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ನಿಲ್ದಾಣಕ್ಕೆ ತಲುಪಿತ್ತು ಎಂದು ಕೂಡ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ನಮ್ಮ ಪ್ರಯಾಣವು ಗರಿಷ್ಠ 25 ಗಂಟೆ 20 ನಿಮಿಷಗಳಲ್ಲಿ ಕೊನೆಗೊಳ್ಳಬೇಕಿತ್ತು. ಆದರೆ ಈ ವಿಶೇಷ ರೈಲಿನಲ್ಲಿ ನಮಗೆ ಇದು ಮೂರನೇ ದಿನ. ಇದು ನಮ್ಮಂತಹ ಬಡ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ನೀಡಿದ ಚಿತ್ರಹಿಂಸೆಯಾಗಿದೆ. ಲೋಕೋ ಪೈಲಟ್‌ಗಳು ನಿದ್ರೆ ಇಲ್ಲದ ಕಾರಣಕ್ಕೆ ಡ್ಯೂಟಿ ಮುಗಿಸಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಉತ್ತರಿಸಿದ್ದಾರೆ.

ಆದರೆ ನಮ್ಮ ಅವಸ್ಥೆಯನ್ನು ಅಧಿಕಾರಿಗಳು ಯೋಚಿಸಿದ್ದಾರ? ಅನ್ನ ನೀರಿಲ್ಲದೆ ಮೂರೂವರೆ ಗಂಟೆ ರೈಲಲ್ಲೇ ಕೊಳೆಯುವಂತೆ ಮಾಡಿದ್ದಾರೆ. ಇದಕ್ಕೆ ಯಾರು ಹೊಣೆ?” ಎಂದು ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!