• Mon. Apr 29th, 2024

PLACE YOUR AD HERE AT LOWEST PRICE

-ಸಿ.ವಿ ನಾಗರಾಜ್.

ಕೋಲಾರ:ನೆಲಸಂಸ್ಕೃತಿಯ ಜಾಡು ಹಿಡಿದು ಮರೆತ ದಾರಿಗಳ ಹುಡುಕಾಟದಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರ ಸಾಂಸ್ಕೃತಿಕ ಯಾನ -200ರ ಅದ್ದೂರಿ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ.

ಕಳೆದ ಒಂದುವರೆ ದಶಕದಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರ ತನ್ನ ವಿಶಿಷ್ಟ ಪ್ರಯೋಗಗಳ ಮೂಲಕ ಕಣ್ಮರೆಯಾಗಿರುವ ಸಾಂಸ್ಕೃತಿಕ ಸೆಲೆಗಳ ಹುಡುಕಾಟ ನಡೆಸುತ್ತಿದ್ದು,  ಈ ಪಯಣದಲ್ಲಿ ಅದಕ ಕಂಡುಕೊಂಡ ಪ್ರಮುಖ ದಾರಿ ಹುಣ್ಣಿಮೆ ಹಾಡು, ಇದೀಗ ಇನ್ನೂರರ ಸಂಭ್ರಮದಲ್ಲಿದೆ.

ಈ ನೆಲ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ, ದಲಿತ, ರೈತ ಹಾಗೂ ಕಾರ್ಮಿಕ ಹೋರಾಟಗಳ ಇತಿಹಾಸದಲ್ಲೂ ತನ್ನದೇ ಚಾಪು ಮೂಡಿಸಿ ರಾಜ್ಯದ ಗಮನ ಸೆಳೆದಿದೆ.

ಸಾಹಿತ್ಯ ಕ್ಷೇತ್ರದಲ್ಲಿ ಡಿವಿ ಗುಂಡಪ್ಪ, ಮಾಸ್ತಿ ವೆಂಕಟೇಶ್ ಐಯ್ಯಂಗಾರ್, ಲಕ್ಷ್ಮೀಪತಿ ಕೋಲಾರ, ಕೋಟಿಗಾನಹಳ್ಳಿ ರಾಮಯ್ಯ, ಡಾ.ಚಂದ್ರಶೇಖರ್ ನಂಗಲಿ , ಪದ್ಮಾಲಯ ನಾಗರಾಜ್ ಸೇರಿದಂತೆ ಹಲವಾರು ಸಾಹಿತಿಗಳು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅದೇ ರೀತಿ ಇದೇ ನೆಲದಲ್ಲಿ ದಲಿತ ಚಳುವಳಿ ತನ್ನ ಉಚ್ರಾಯ ಸ್ಥಿತಿಯನ್ನು ತಲುಪಲು ಸಹಕಾರಿಯಾಗಿದೆ.

ಕಾರ್ಮಿಕ ಹೋರಾಟಗಳಿಗೆ ರಾಜ್ಯದಲ್ಲೇ ಕೆಜಿಎಫ್ ಗಣಿಕಾರ್ಮಿಕರ ಸಂಘಟನೆ ತನ್ನ ಮೊದಲ ಹೆಜ್ಜೆಯನ್ನಿಟ್ಟಿದೆ. ಇನ್ನೂ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲೂ ತತ್ವಜ್ಞಾನಿ ಗಟ್ಟಹಳ್ಳಿ ಆಂಜಿನಪ್ಪ, ಕಾಲಜ್ಞಾನಿ ಕೈವಾರ ನಾರಣಪ್ಪ ತಾತಯ್ಯನವರು, ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ವೇಮಗಲ್ ನಾರಾಯಣಸ್ವಾಮಿ, ಮುನಿರೆಡ್ಡಪ್ಪ , ಡಿ.ಆರ್.ರಾಜಪ್ಪ, ಜಾನಪದ ಹುಂಜ ಮುನಿರೆಡ್ಡಿ, ಮೊದಲಾದವರು ಆಯಾ ಕಾಲಘಟ್ಟಕ್ಕೆ ತಕ್ಕಂತೆ ತಮ್ಮದೇ ಕೊಡುಗೆಗಳನ್ನು ಜಿಲ್ಲೆಯ ಸಾಂಸ್ಕೃತಿಕ ಲೋಕಕ್ಕೆ ದಾರೆ ಎರೆದಿದ್ದಾರೆ.

ಬದಲಾದ ಸಾಮಾಜಿಕ ಸಾಂಸ್ಕೃತಿಕ ಸನ್ನಿವೇಶದಲ್ಲಿ ಚಳುವಳಿಗಳ ತವರೂರೆಂದೇ ಕರೆಸಿಕೊಂಡ ಕೋಲಾರದ ನೆಲ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಯನ್ನು ಹಾಕಿತು. ಅದು ‘ಆದಿಮ ಸಾಂಸ್ಕೃತಿಕ ಕೇಂದ್ರದ ಮೂಲಕ. ಸಾಮಾಜಿಕ ಹೋರಾಟಗಾರ ಹಾಗೂ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮತ್ತು ಅವರ ಆಪ್ತಬಳಗ ಮೊದಲಿಗೆ ಆದಿಮ ಚಟುವಟಿಕೆಗಳನ್ನು ಪ್ರಾರಂಭಿಸಿತು.

ಆರಂಭದಲ್ಲಿ ಪ್ರತಿಯೊಬ್ಬ ಸದಸ್ಯರು ದಿನಕ್ಕೊಂದು ರೂಪಾಯಿ ಹಣವನ್ನು ತಮ್ಮದೇ ಮನೆಯಲ್ಲಿ ಒಂದು ನೇಮದಂತೆ ಹಾಕುವ ಮೂಲಕ ತಿಂಗಳ ಎರಡನೇ ಶನಿವಾರ ಎಲ್ಲವನ್ನೂ ಕ್ರೂಡೀಕರಿಸಿ ಒಟ್ಟಿಗೆ ಒಂದೆಡೆಗೆ ತಂದು ಆದಿಮಕ್ಕೆ ನೀಡಲಾಗುತ್ತಿತ್ತು. ಹಣ ಸಂಗ್ರಹಣ  ಹೆಚ್ಚಾದಂತೆ ಆದಿಮಕ್ಕೊಂದು ನೆಲ ಹುಡುಕಾಟ ನಡೆಯಿತು. ಆಗ ಕೋಲಾರ ನಗರಕ್ಕೆ ಹೊಂದಿಕೊಂಡಿರುವ ಶತಶೃಂಗಪರ್ವತದ ಮೇಲಿನ ತೇರಹಳ್ಳಿ ಸಮೀಪದ ಶಿವಗಂಗೆ ಗ್ರಾಮದ ವೆಂಕಟೇಶಪ್ಪ ಆದಿಮಕ್ಕೆ ಮೊದಲ ಬಾರಿಗೆ ನೆಲೆಯನ್ನು ಕಲ್ಪಿಸಿಕೊಳ್ಳಲು ಸಹಕರಿಸಿದರು.

೨೦೦೭ರಲ್ಲಿ ಮೊದಲ ಹುಣ್ಣಿಮೆ ಹಾಡು ಕಾರ್ಯಕ್ರಮವನ್ನು ಆರಂಭಿಸಿದ ಆದಿಮ ನೋಡ ನೋಡುತ್ತಿದ್ದಂತೆ ಐವತ್ತಾಯಿತು, ನೂರಾಯಿತು, ನೂರ ಐವತ್ತಾಯಿತು ಇದೀಗ ಇನ್ನೂರರ ಗಡಿ ಮುಟ್ಟಿದೆ. ಹುಣ್ಣಿಮೆ ಹಾಡಿನ ಮುಖ್ಯ ಉದ್ದೇಶವೇ ಈ ಸಮಾಜದ ವಿವಿಧ ಸ್ಥರಗಳಲ್ಲಿ ಇರುವ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಕಲಾವಿದರು, ಸಮಾಜ ಸೇವಕರನ್ನು ಗುರುತಿಸಿ ಅವರಿಗೆ ಗದ್ದುಗೆ ಗೌರವ ಸಲ್ಲಿಸುವುದು.

ಅದೇ ರೀತಿ ಬೆಳಕಿಗೆ ಬಾರದೆ ಇರುವ ಸಾವಿರಾರು ಪ್ರತಿಭೆಗಳಿಗೆ ಆದಿಮ ಅವಕಾಶ ಕಲ್ಪಿಸುವ ಮೂಲಕ ಆ ಪ್ರತಿಭೆಗಳನ್ನು ಮುನ್ನೆಲೆಗೆ ತರುವುದಾಗಿದೆ. ಈ ಹಿನ್ನಲೆಯಲ್ಲಿ ಇಲ್ಲಿಯವರೆಗೂ ೧೯೯ ಹುಣ್ಣಿಮೆಗಳನ್ನು ಪೂರೈಸಿರುವ ಆದಿಮ ಸಾವಿರಾರು ದೇಶ ವಿದೇಶ ಹಾಗೂ ಸ್ಥಳೀಯ ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಈ ಪಟ್ಟಿಯಲ್ಲಿ ಬರ‍್ರಕಥ ಈರಮ್ಮಾಜೀ ಅವರಿಂದ ಹಿಡಿದು ಭೀಮ್ ರಾವ್ ಗಸ್ತಿ, ಪದ್ಮಶ್ರೀ ಪಿಂಡಪಾಪನಹಳ್ಳಿ ಮುನಿವೆಂಕಟಪ್ಪನವರ ವರೆಗೂ ನಾಡಿನ ಅಸಂಖ್ಯಾತ ಕಲಾವಿದರಿಗೆ ಆದಿಮ ಗೌರವ ಸಲ್ಲಿಸಿದೆ.

ಇದೀಗ ೨೦೦ನೇ ಹುಣ್ಣಿಮೆ ಹಾಡು ಸಮೀಪಿಸಿದ್ದು,. ಡಿ.೨೫ರಿಂದ ಡಿ ೨೭ರವರೆಗೆ ಮೂರು ದಿನಗಳ ಕಾಲ ನಡೆಯುವ ಹುಣ್ಣಿಮೆ ಹಾಡು ಸಾಂಸ್ಕೃತಿಕ ಯಾನ-೨೦೦ ಕಾರ್ಯಕ್ರಮದಲ್ಲಿ ಈ ಬಾರಿ ಹಲವು ವಿಶೇಷತೆಗಳಿವೆ.  ಮೊದಲ ದಿನ ನಾಡಿನ ಹೆಸರಾಂತ ಸಾಹಿತಿಗಳಿಂದ ವಿವಿಧ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ವಿಚಾರಗಳ ಬಗ್ಗೆ ಗೋಷ್ಠಿಗಳು ನಡೆಯಲಿವೆ. ಸಂಜೆ ವೇಳೆ ಎಂದಿನಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕ ಇದ್ದೇ ಇರುತ್ತದೆ.

ಈ ಬಾರಿ ವಿಶೇಷವಾಗಿ  ಕರ್ನಾಟಕದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ ನಾಡಿನ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾರೋಪ ಸಮಾವೇಶ ನಡೆಸಿಕೊಡಲಿದ್ದಾರೆ.

ಆದಿಮದ ಹುಣ್ಣಿಮೆ ಹಾಡು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಿರುವ ಹಿನ್ನಲೆಯಲ್ಲಿ ಆದಿಮ ಕೇಂದ್ರವಂತೂ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ.

ಗೋಷ್ಠಿಗಳಿಗೆ ಸುಸಜ್ಜಿತ ವೇದಿಕೆಗಳು ಒಂದೆಡೆ ಸಜ್ಜುಗೊಳ್ಳುತ್ತಿದ್ದರೆ ಮತ್ತೊಂದೆಡೆ ಕಲಾವಿದರಿಗಾಗಿ ಬಯಲು ರಂಗಮಂಟಪಗಳು ಮತ್ತೊಂದೆಡೆ ಸ್ವಚ್ಚಂದವಾಗಿ ಅಲಂಕೃತಗೊಂಡಿವೆ.

…………………………….

 ನೆಲಸಂಸ್ಕೃತಿ ಪರಂಪರೆಯ ಮುಂದುವರಿದ ಭಾಗವಾಗಿ ಹುಣ್ಣಿಮೆ ಹಾಡು ಸಾಂಸ್ಕೃತಿಕ ಯಾನ-200 ಸಂಘಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಂಚರಾಜ್ಯಗಳ ಜಾನಪದ ಕಲಾಪ್ರಕಾರಗಳು ಅನಾವರಣಗೊಳಿಸಲಾಗುತ್ತಿದೆ.

– ಎನ್.ಮುನಿಸ್ವಾಮಿ. ಅಧ್ಯಕ್ಷರು, ಆದಿಮ ಸಾಂಸ್ಕೃತಿಕ ಕೇಂದ್ರ.

……………………………

ನೆಲಸಂಸ್ಕೃತಿಯ ಜಾಡು ಹಿಡಿದು ಹೊರಟ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಸಾವಿರಾರು ಕಲಾವಿದರು ತಮ್ಮದೇ ರೀತಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಆದಿಮ ಸಾಂಸ್ಕೃತಿಕ ಯಾನ- 200 ಹೊಸದೊಂದು ಪಯಣಕ್ಕೆ ನಾಂದಿಯಾಗಲಿದೆ.

ಹ.ಮಾ.ರಾಮಚಂದ್ರ. ಆದಿಮ ಸದಸ್ಯರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!