• Wed. Sep 18th, 2024

PLACE YOUR AD HERE AT LOWEST PRICE

ಕೋಲಾರ, ಮಾರ್ಚ್. ೩೦ : ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಬೇರೆ ಬೇರೆಯಾಗಿದ್ದರೂ, ಸಿದ್ಧಾಂತಗಳು ಮಾತ್ರ ಒಂದೇ ಆಗಿದೆ. ಮೂರೂ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅವರು ಒಂದೇ ನಾಣ್ಯದ ಮುಖಗಳು ಇದ್ದಂತೆ, ಅವುಗಳಿಂದ ಜನತೆಗೆ ಎಂದಿಗೂ ಒಳ್ಳೆಯದಾಗುವುದಿಲ್ಲ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಪಿ ಸುರೇಶ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇಶ ಮತ್ತು ರಾಜ್ಯದಲ್ಲಿ ಸುಮಾರು ೭೫ ವರ್ಷಗಳಿಂದ ಅಧಿಕಾರದಲ್ಲಿ ಇದ್ದ ಪಕ್ಷಗಳಿಂದ ಇದುವರೆಗೂ ಬಡತನ ನಿರ್ಮೂಲನೆ ಆಗಲಿಲ್ಲ, ನಿರುದ್ಯೋಗ ಸಮಸ್ಯೆ ಬಗೆಹರಿಸಲು ಸರಕಾರಗಳು ಕಾಳಜಿ ವಹಿಸಲಿಲ್ಲ ಜನರ ನೆಮ್ಮದಿಯ ಬದುಕು ಅಕ್ಕ ಮಾಯಾವತಿ ಅವರ ಬಿಎಸ್ಪಿ ಪಕ್ಷದಿಂದ ಮಾತ್ರ ಸಾಧ್ಯವಿದ್ದು, ಆ ನಿಟ್ಟಿನಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಮೀಸಲು ಕ್ಷೇತ್ರದಲ್ಲಿ ನಾನು ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು ಒಂದು ಅವಕಾಶ ನೀಡುವಂತೆ ಮನವಿ ಮಾಡಿದರು.

ದೇಶದಲ್ಲಿ ಮೋದಿ ಸರಕಾರ ಬಂದ ನಂತರ ಕಾರ್ಪೊರೇಟ್ ಸಂಸ್ಥೆಗಳ ಪರವಾದ ಕಾನೂನನ್ನು ಜಾರಿಗೆ ಮಾಡಲು ಹೊರಟಿದ್ದಾರೆ ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ಬಂಡವಾಳಶಾಹಿಗಳ ಅಭಿವೃದ್ಧಿಗೆ ದುರುಪಯೋಗ ಪಡಿಸಿಕೊಳ್ಳುತ್ತಿರುವ ಇವರುಗಳಿಂದ ದೇಶ ಎಂದಿಗೂ ಅಭಿವೃದ್ದಿಯಾಗದು. ಇಂತಹ ಪಕ್ಷಗಳನ್ನು ದೂರವಿಟ್ಟು ಬಡವರಿಗಾಗಿ ಶ್ರಮಿಸುತ್ತಿರುವ ಸಂವಿಧಾನ ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲಾ ಧರ್ಮವನ್ನು ಸಹಿಷ್ಣುತೆಯಿಂದ ಕಾಣುತ್ತಿರುವ ಬಿ.ಎಸ್.ಪಿ. ಪಕ್ಷವನ್ನು ಬೆಂಬಲಿಸಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಜಿಲ್ಲೆಯಿಂದ ಗೆದ್ದ ಲೋಕಸಭಾ ಸದಸ್ಯರು ಜನರ ಬದುಕಿನ ಪ್ರಶ್ನೆಗಳ ಬಗ್ಗೆ ಕಾಳಜಿ ವಹಿಸಲಿಲ್ಲ ದೇವಸ್ಥಾನ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿಕೊಂಡು ಹೊಡೆದು ಆಳುವ ನೀತಿಗಳನ್ನು ಅನುಸರಿಸಿದ್ದಾರೆ ಜೆಡಿಎಸ್ ಬಿಜೆಪಿ ಪಕ್ಷಗಳು ಮೈತ್ರಿಯಾಗಿದ್ದು ಈಗಾಗಲೇ ಈ ಮೂರು ಪಕ್ಷವನ್ನು ಗೆಲ್ಲಿಸಿ ನೋಡಿ­ದ್ದೀರಿ. ಅವರನ್ನು ಈ ಚುನಾವಣೆಯಲ್ಲಿ ತಿರಸ್ಕರಿಸಿ ನನಗೆ ಒಂದು ಅವಕಾಶ ನೀಡಬೇಕೆಂದು ಅವರು ಮನವಿ ಮಾಡಿದರು

ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಬಿ.ವಿ ನಾಗಪ್ಪ, ಸಂಯೋಜಕರಾದ ಮಧುಸೂದನ್, ರಮಣ್ ಕುಮಾರ್, ಮುಳಬಾಗಿಲು ತಾಲೂಕು ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಅಂಬರೀಶ್, ನಾರಾಯಣಸ್ವಾಮಿ ಇದ್ದರು

Leave a Reply

Your email address will not be published. Required fields are marked *

You missed

error: Content is protected !!