• Mon. Apr 29th, 2024

PLACE YOUR AD HERE AT LOWEST PRICE

ಕೆಜಿಎಫ್;ರಾಷ್ಟ್ರಾದ್ಯಂತ ಸಾರ್ವಜನಿಕರ ನೆಮ್ಮದಿಗೆ ಧಕ್ಕೆಯಾಗದಂತೆ ಹಗಲಿರುಳು ದುಡಿಯುವ ಪೊಲೀಸರ ಸೇವೆಯು ಶ್ಲಾಘನೀಯವೆಂದು ಕೆಜಿಎಫ್ ಪೀಠದ ೩ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ಅವರು ನುಡಿದರು.

ಅವರು ಕೆಜಿಎಫ್ ಪೊಲೀಸ್ ಜಿಲ್ಲೆಯ ಚಾಂಫೀಯನ್‌ರೀಫ್ಸ್ ನಲ್ಲಿನ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಏ.೨ ರಂದು ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದರು.

ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಮತ್ತು ನಾಗರೀಕರ ಸುರಕ್ಷತೆಗಾಗಿ ಹಗಲಿರುಳು, ತಮ್ಮ ಪ್ರಾಣವನ್ನು ಲೆಕ್ಕಿಸದೇ ದುಡಿಯುತ್ತಿರುವ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯವೆಂದರು.

ನಿವೃತ್ತರಾದ ಪೊಲೀಸರ ಕುಟುಂಬಗಳ ಕಲ್ಯಾಣಕ್ಕೆ ಸರ್ಕಾರವು ಸೂಕ್ತವಾದ ಯೋಜನೆಯನ್ನು ಜಾರಿಗೆ ತರಬೇಕೆಂದು ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ಅವರು ಕೋರಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಸ್.ಎಂ.ಸಮೀವುಲ್ಲಾ ಅವರು ಭಾಗವಹಿಸಿ, ಧ್ವಜ ವಂದನೆ ಸ್ವೀಕರಿಸಿದ ಬಳಿಕ ಮಾತನಾಡುತ್ತಾ, ಅಪರಾಧ ರಹಿತ ಉತ್ತಮ ಸಮಾಜ ನಿರ್ಮಿಸಲು ನಿವೃತ್ತ ಪೊಲೀಸರ ಸಹಕಾರ ಅಗತ್ಯವೆಂದು ಅಭಿಪ್ರಾಯಪಟ್ಟರು.

ಅನುಭವಿ ಹಾಗೂ ಉತ್ತಮ ಸೇವೆ ಗೈದ ನಿವೃತ್ತ ಪೊಲೀಸ್ ಅಧಿಕಾರಿಗಳ, ಸಿಬ್ಬಂದಿಗಳ ಸಲಹೆ, ಸೂಚನೆಗಳಿಂದ ಅಪರಾಧಗಳನ್ನು ತಡೆಗಟ್ಟಲು ಸಾಧ್ಯವೆಂದು ಸಮೀವುಲ್ಲಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಯಾವುದೇ ನಿವೃತ್ತ ಪೊಲೀಸರನ್ನು ಇಲಾಖೆಯು ಗೌರವಿಸಿ, ಸೂಕ್ತ ಸ್ಥಾನಮಾನ ದೊರಕಿಸಲು ಚಿಂತಿಸಬೇಕೆಂದು ಹಾಗೂ ನಿವೃತ್ತ ಪೊಲೀಸರಿಗೆ ಪೊಲೀಸ್ ಕಲ್ಯಾಣ ನಿಧಿಯಿಂದ ನೀಡುವ ಸೌಕರ್ಯದೊಂದಿಗೆ, ಇತರೆ ಸೌಲಭ್ಯಗಳನ್ನು ಸಹ ಕಲ್ಪಿಸಬೇಕು.

ಇದಕ್ಕೆ ಕೆಜಿಎಫ್‌ನ ಪೊಲೀಸ್ ಅಧೀಕ್ಷಕರು, ಇಲಾಖಾ ಮುಖ್ಯಸ್ಥರು ಸರ್ಕಾರದೊಂದಿಗೆ ವ್ಯವಹರಿಸಿ ನಿವೃತ್ತರಿಗೆ ಸವಲತ್ತು ಕಲ್ಪಿಸಿಕೊಡಬೇಕೆಂದು ಕೋರಿದರು.

ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ೧೯೬೫ರ ಏಪ್ರಿಲ್ ೨ ರಂದು ಕರ್ನಾಟಕ ಪೊಲೀಸ್ ಕಾಯ್ದೆಯು ಜಾರಿಗೆ ಬಂದಿದ್ದು, ಅಂದಿನಿಂದಲೇ ಪೊಲೀಸ್ ಧ್ವಜ ದಿನಾಚರಣೆಯನ್ನು ಪೊಲೀಸ್ ಕಲ್ಯಾಣ ದಿನವನ್ನಾಗಿ ಆಚರಿಸುತ್ತಿದ್ದೇವೆ.

ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ತಂತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಯಾವುದೇ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾಗಿ ಬಗೆಹರಿಸಿಕೊಳ್ಳಬಹುದೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ೨೦೨೩-೨೪ನೇ ಸಾಲಿನಲ್ಲಿ ನಿವೃತ್ತರಾದ ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಶಾಲು ಹೊದಿಸಿ, ಆತ್ಮೀಯವಾಗಿ ಸನ್ಮಾನಿಸಿ, ಹಣ್ಣುಹಂಪಲು, ನೆನಪಿನ ಕಾಣಿಕೆಗಳನ್ನು ನೀಡಿ ಗಣ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಮುಜಾಫೀರ್ ಎಂ ಮಾಂಜರಿ, ಆರ್.ಮಂಜುನಾಥ, ಕೆಜಿಎಫ್ ವಕೀಲರ ಸಂಘದ ಅಧ್ಯಕ್ಷ ಎಸ್.ಎನ್. ರಾಜಗೋಪಾಲಗೌಡ, ಸಾರ್ವಜನಿಕ ಆಸ್ಪತ್ರೆಯ ಡಾ|| ಸುರೇಶ್‌ಕುಮಾರ್, ಪ್ರಭಾರ ಸಹಾಯಕ ಆಡಳಿತಾಧಿಕಾರಿ ಎ.ನಜೀಮಾಬಾನು, ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಆರ್.ಪಿ.ಐ. ಹೆಚ್.ಕೆ. ರಾಮಕೃಷ್ಣ ಅವರ ನೇತೃತ್ವದಲ್ಲಿ ಡಿ.ಎ.ಆರ್, ನಾಗರೀಕ ಮತ್ತು ಮಹಿಳಾ ಪೊಲೀಸ್ ತಂಡಗಳಿಂದ ಆಕರ್ಷಕ ರೀತಿಯಲ್ಲಿ ಪಥಸಂಚಲನ ನಡೆಯಿತು. ಅತಿಥಿಗಳು ಪೊಲೀಸ್ ಧ್ವಜಗಳನ್ನು ಬಿಡುಗಡೆಗೊಳಿಸಿ, ತಂತಮ್ಮ ದೇಣಿಗೆಯನ್ನು ನೀಡುವ ಮೂಲಕ ಪೊಲೀಸ್ ಧ್ವಜಗಳ ಮಾರಾಟಕ್ಕೆ ಚಾಲನೆ ನೀಡಿದರು.

ಪೊಲೀಸ್ ಪೇದೆ ಸದಾಶಿವ ಮನಗುಳಿ ಮತ್ತು ಶರಣಪ್ಪ ಕವಟಗಿ ಅವರುಗಳಿಂದ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಣೆ ಹಾಗೂ ಡಿವೈಎಸ್ಪಿ ಎಸ್.ಪಾಂಡುರಂಗ ಅವರಿಂದ ವಂದನೆಗಳಾದವು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!