• Wed. Jul 3rd, 2024

PLACE YOUR AD HERE AT LOWEST PRICE

ಪ್ರತಿಫಲಾಪೇಕ್ಷೆ ಬಯಸದೆ ಕಲೆಯನ್ನೇ ಉಸಿರಾಗಿಸಿಕೊಂಡ ಜನಪದ ಕಲಾವಿದ ದೊಮ್ಮಸಂದ್ರ ಎಂ. ನರಸಿಂಹ

ಬದಲಾಗುತ್ತಿರುವ ಆದುನಿಕ ಯುಗದಲ್ಲಿ ಗ್ರಾಮೀಣ ಸೊಗಡಿನ ನೆಲ ಮೂಲದ ಕಲೆಗಳು ಪರಧಿಗೆ ಸರಿಸಲ್ಪಡುತ್ತಿರುವ ಸನ್ನಿವೇಶದಲ್ಲಿ, ಮಕ್ಕಳಲ್ಲಿ ಜೀವನೋತ್ಸಾಹ ತುಂಬಲು ನಿಸರ್ಗದಲ್ಲಿ ಕಲಾಶ್ರೀಮಂತಿಕೆ ಕಂಡುಕೊಳ್ಳುತ್ತಿರುವ ಅಪ್ಪಟ ಗ್ರಾಮೀಣ ಪ್ರತಿಭೆ ದೊಮ್ಮಸಂದ್ರ ಎಂ. ನರಸಿಂಹ ಕೋಲಾರ ಜಿಲ್ಲೆಯ ಸಾಂಸ್ಕೃತಿಕ ಲೋಕಕ್ಕೆ ತನ್ನದೇ ವಿಶಿಷ್ಟ ಸೇವೆಯನ್ನು ನೀಡುತ್ತಿದ್ದಾರೆ.

ತನ್ನ ಶಾಲಾ ದಿನಗಳಿಂದಲೇ ಕಲಾ ಸೇವೆಯನ್ನು ಅಪ್ಪಿಕೊಂಡ ನರಸಿಂಹ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ತಾಯಿಲೂರು ಹೋಬಳಿಯ ದೊಮ್ಮಸಂದ್ರ ಗ್ರಾಮದ ಪರಿಶಿಷ್ಟ ಸಮುದಾಯದ ಮುನಿಯಪ್ಪನವರ ಮಗ. ಕಡುಬಡತನದ ಕುಟುಂಬದಲ್ಲಿ ಬೆಳೆದ ನರಸಿಂಹ ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಮುಳಬಾಗಿಲಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿ ಆ ತರುವಾಯ ಡಿಪ್ಲೋಮಾ ಇನ್ ಫಿಲಂ ಟೆಕ್ನಾಲಜಿ ಅಂಡ್ ಫಿಲಂ ಆಕ್ಟಿಂಗ್ ಮಾಡಿರುವ ಇವರು ಮದ್ರಾಸ್‌ನ “ರೇ ಇನ್ಸ್ಟಿಟ್ಯೂಟ್‌ನಲ್ಲಿ ಅಭಿನಯದ ತರಬೇತಿ ಪಡೆದು ನೃತ್ಯ ಕಲೆಯ ತರಬೇತುದಾರರಾಗಿ ಸೇವೆ ಮಾಡುತ್ತಿದ್ದಾರೆ.

ಶಾಲಾ ದಿನಗಳಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಉಪೇಂದ್ರ ಚಿತ್ರದ ಮಸ್ತು ಮಸ್ತು ಹುಡುಗಿ ಬಂದ್ಲು ಹಾಡಿನ ವಿಶೇಷ ಶೈಲಿಯ ನೃತ್ಯಕ್ಕೆ ದೊರೆತ ಚಪ್ಪಾಳೆ ನೃತ್ಯದ ಕಡೆ ಹೆಚ್ಚಿನ ಆಸಕ್ತಿ ತೋರಲು ಕಾರಣವಾಯಿತು. ಮುಳಬಾಗಿಲು ಪಟ್ಟಣದ ಪ್ರೌಡ ಪೂರ್ವ ವಿದ್ಯಾರ್ಥಿನಿಲಯದಲ್ಲಿದ್ದಾಗ ದಲಿತ ಸಂಘರ್ಷ ಸಮಿತಿ ನಂಟು ಪ್ರಾರಂಭವಾಯಿತು. ೧೦ ತರಗತಿಯ ವಿದ್ಯಾರ್ಥಿಗಳನ್ನು ಕೋಲಾರದ ಟಿ.ಚನ್ನಯ್ಯ ರಂಗಮoದಿರದಲ್ಲಿ ನಡೆದ ದಸಂಸ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತು. ಅಲ್ಲಿಂದ ಜನಪದ ಕಲೆಯ ಕಡೆ ಹೆಚ್ಚು ಗಮನ ಹರಿಸಲು ಉತ್ತೇಜನ ದೊರೆಯಿತು.

ಹೀಗೇ ನಾಟಕ, ನೃತ್ಯ ಅಭಿನಯಗಳೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ವೃತ್ತಿ ಜೀವನದತ್ತ ಪಯಣ ಬೆಳೆಸಿದ ನರಸಿಂಹ ಕ್ರಮೇಣ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ನೃತ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಸಾಗಿದರು. ಇವರು, ಅಭಿನಯದೊಂದಿಗೆ ನಾಟಕ ನಿರ್ದೇಶನದತ್ತಲೂ ತಮ್ಮ ಆಸಕ್ತಿಯನ್ನು ತೋರುವ ಮೂಲಕ ವೃತ್ತಿಯಲ್ಲಿ ಮತ್ತೊಂದು ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡರು. ಬೆಂಗಳೂರು ವಿಶ್ವ ವಿದ್ಯಾಲಯದ ಉಪನ್ಯಾಸಕರಾದ ಸಾಹಿತಿ ಪಿ.ಚೈತ್ರ ರವರು ರಚಿಸಿದ “ತಾಯಿ” ನಾಟಕವನ್ನು ಮೊದಲ ಬಾರಿಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡರು.

ಸುಮಾರು ೧೨ ನಾಟಕಗಳನ್ನು ನಿದೇರ್ಶನ ಮಾಡಿರುವ ಇವರು ಇಲ್ಲಿಯ ತನಕ ಅಂದಾಜು ೬೦೦೧ ನೃತ್ಯ ರೂಪಕಗಳನ್ನು ತರಬೇತಿ ನೀಡಿ ಪ್ರದರ್ಶಿಸಿದ್ದಾರೆ. ಇವರ ಕಲಾ ಸೇವೆಯನ್ನು ಗುರುತಿಸಿ ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಸಂಘ ಸಂಸ್ಥೆಗಳಿAದ ಹಲವು ಗೌರವ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ. ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ, ಮಹಾರಾಷ್ಟç, ಒಡಿಶಾ, ದೆಹಲಿ ಮೊದಲಾದ ರಾಜ್ಯಗಳಲ್ಲಿ ನಡೆದ ಕಲಾ ಸ್ಪರ್ಧೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಸಾಂಪ್ರದಾಯಿಕ ದೇವಿ ನೃತ್ಯ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ಕಲೆಯನ್ನೇ ಉಸಿರಾಗಿಸಿಕೊಂಡ ಇವರಿಗೆ ಸ್ವಂತ ಮನೆಯಿಲ್ಲ, ಯಾವುದೇ ಆಸ್ತಿಯೂ ಇಲ್ಲ, ಆದರೂ ತನ್ನ ಕನಸಿನ ಲೋಕವನ್ನು ಕಟ್ಟಲು ಯುವಕ ಯುವತಿಯರ ಕಲಾತಂಡವನ್ನು ಕಟ್ಟಿಕೊಂಡು ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪರಿಸರ, ಸಾಮಾಜಿಕ ಬದಲಾಣೆಗಳ ಕುರಿತು ಜಾಗೃತಿ ಮೂಡಿಸಲು ಕಂಕಣಕಟ್ಟಿಕೊAಡಿರುವ ಇವರನ್ನು ಜಿಲ್ಲಾಡಳಿತವಾಗಲೀ, ತಾಲ್ಲೂಕು ಆಡಳಿತವಾಗಲೀ ಗುರುತಿಸುವಲ್ಲಿ ವಿಫಲವಾಗಿವೆ. ಜಿಲ್ಲಾಡಳಿತ ಇವರ ಸೇವೆಯನ್ನು ಬಳಸಿಕೊಳ್ಳುವುದಾದರೆ ಇನ್ನಷ್ಟು ಪರಿಣಾಮಕಾರಿಯಾಗಿ ಯುವಜನತೆಯಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಪರಿಸರ ಕುರಿತು ಅರಿವು ಮೂಡಿಸುವ ಮೂಲಕ ಸಾಮಾಜಿಕ ಸ್ವಾಸ್ತಕ್ಕೆ ಕೊಡುಗೆ ನೀಡಬಹುದು ಎಂದು ಭಾವಿಸಿದ್ದಾರೆ.

ಹೀಗೆ ಸುಮಾರು ೨೦ ವರ್ಷಗಳಿಗೂ ಹೆಚ್ಚು ಸಮಯ ಕಲಾ ಸೇವೆಯಲ್ಲಿ ತೊಡಗಿಸಿಕೊಂಡ ದೊಮ್ಮಸಂದ್ರ ನರಸಿಂಹ ರಂತಹ ಇನ್ನೂ ಹಲವಾರು ಕಲಾವಿದರಿದ್ದಾರೆ. ಜಿಲ್ಲಾಡಳಿತ ಇಂತಹ ಕಲಾವಿದರನ್ನು ಗುರುತಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡುವುದೇ ಎನ್ನುವುದು ಯಕ್ಷಪ್ರಶ್ನೆಯಾಗಿದ್ದು, ಸರ್ಕಾರ ಇಂತಹ ಎಲೆ ಮರೆ ಕಾಯಿಯಂತೆ ಕಲಾ ಸೇವೆಯಲ್ಲಿ ತೊಡಿಗಿಕೊಂಡಿರುವ ಕಲಾವಿದರ ನೆರವಿಗೆ ಬಂದರೆ  ಕಲಾವಿದರ ಕುರಿತ  ಲೇಖನದ ಈ ಪ್ರಯತ್ನ ಸಾರ್ಥಕವಾಗುತ್ತದೆ.

“ನನಗೆ ಬಾಲ್ಯದಲ್ಲಿ ಕಲೆಯ ಬಗ್ಗೆ ಆಸಕ್ತಿ ಏನೂ ಇರಲಿಲ್ಲ, ಆದರೆ, ತಾನು ಆರನೇ ತರಗತಿ ಓದುತ್ತಿರುವ ಸಂದರ್ಭದಲ್ಲಿ ತನ್ನ ನೆಚ್ಚಿನ ಕೋದಂಡರಾಮಯ್ಯ ಮೇಷ್ಟುç ಹುಚ್ಚುದೊರೆ ಎಂಬ ಏಕಪಾತ್ರಾಭಿನಯದ ನಾಟಕವನ್ನು ಬಲವಂತವಾಗಿ ಮಾಡಿಸಿದ್ದು, ಆಗ ಪ್ರೇಕ್ಷಕರಿಂದ ದೊರೆತ ಚಪ್ಪಾಳೆ ಕಲಾ ಸೇವೆಯಲ್ಲಿ ಮುಂದುವರೆಯಲು ಸ್ಪೂರ್ತಿಯಾಯಿತು,”

– ದೊಮ್ಮಸಂದ್ರ ನರಸಿಂಹ, ಖ್ಯಾತ ನೃತ್ಯ ಕಲಾವಿದ.

 

Leave a Reply

Your email address will not be published. Required fields are marked *

You missed

error: Content is protected !!