• Sat. May 18th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ತಾಲ್ಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯ ಖಂಡಿಸಿ ದಲಿತಪರ, ರೈತಪರ, ಕನ್ನಡಪರ, ಪ್ರಗತಿಪರ ಮತ್ತು ಮಹಿಳಾ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬೋಡಗುರ್ಕಿ ಚಲೋವನ್ನು ಜಾನಗುಟ್ಟೆ ವೃತ್ತದಿಂದ ಬೊಡಗುರ್ಕಿ ವರೆಗೂ ಹಮ್ಮಿಕೊಳ್ಳಲಾಗಿತ್ತು.

ಸುಮಾರು ೫ ಕಿ.ಮೀ ವರೆಗೂ ಕಾಲ್ನಡಿಗೆ ಜಾಥಾವನ್ನು ಗ್ರಾಮದ ಹೊರವಲಯದಲ್ಲಿ ಅಂತ್ಯಗೊಳಿಸಲು ಸ್ಥಳವನ್ನು ಮೊದಲೇ ನಿಗದಿ ಮಾಡಲಾಗಿತ್ತು. ಬೋಡಗುರ್ಕಿ ಗ್ರಾಮದ ಹೊರವಲಯದ ಬಳಿ ತೆರಳಿದ ಮುಖಂಡರು ಹಾಗೂ ಕಾರ್ಯಕರ್ತರು ಜಾಥವನ್ನು ದಲಿತ ನೊಂದ ಕುಟುಂಬದವರೆಗೂ ಹೋಗಬೇಕೆಂದು ಪಟ್ಟು ಹಿಡಿದು ಪೊಲೀಸ್ ಅಧಿಕಾರಿಗಳ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ವಾಕ್ಸಮರ ಜರುಗಿಸಿದರು. ನಂತರ ಎಸ್ಪಿಯವರ ಆದೇಶದಂತೆ ಗ್ರಾಮದ ಒಳಗೆ ಹೋಗಲು ಅವಕಾಶ ಕಲ್ಪಿಸಲಾಯಿತು.

ಈ ವೇಳೆ ಗಮನ ಮಹಿಳಾ ಸಂಘಗಳ ಒಕ್ಕೂಟದ ಶಾಂತಮ್ಮ ಮಾತನಾಡಿ, ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದರೂ ದಲಿತ ಸಮುದಾಯಕ್ಕೆ ಇನ್ನೂ ಸಹ ಸ್ವಾತಂತ್ರ್ಯ ಬಂದಿಲ್ಲ. ಇಂದಿಗೂ ಸಹ ಜಾತಿ ಜಾತಿ ಎಂದು ಹೊಡೆದಾಡುತ್ತಾ ಇದ್ದೆವೆ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಆಹಾರದ ಹಕ್ಕು, ಉಡುಪಿನ ಹಕ್ಕು ಮತ್ತು ಸಂಗಾತಿ ಆಯ್ಕೆಯ ಹಕ್ಕು ಇದೆ. ಆದರೆ ಬೋಡಗುರ್ಕಿ ಗ್ರಾಮದಲ್ಲಿ ಆಯ್ಕೆಯ ಹಕ್ಕು ಇಲ್ಲದೆ ಬಾಳಿ ಬದುಕ ಬೇಕಾದ ಇಬ್ಬರು ಮಕ್ಕಳು ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಮಕ್ಕಳಿಗೆ ಯಾವ ಊಟ ಕೊಡಬೇಕು, ಯಾವ ಬಟ್ಟೆ ತೊಡಿಸಬೇಕು ಎಂದು ಯೋಚಿಸುವ ಅಪ್ಪ ಅಮ್ಮ ವಯಸ್ಸಿಗೆ ಬಂದಿರುವವರಿಗೆ ಸಂಗಾತಿ ಆಯ್ಕೆ ಮಾಡುವುದೂ ಸಹ ಗೊತ್ತಿರುತ್ತದೆ. ಅಕಸ್ಮಾತ್ ಗೊತ್ತಿಲ್ಲ ಅಂದ್ರೆ ಆಯ್ಕೆಯನ್ನು ಯುವತಿ ಯುವಕರಿಗೆ ಬಿಟ್ಟು ಅವರಿಗೆ ಬೆಂಬಲವಾಗಿ ನಿಲ್ಲಬೇಕೆ ಹೊರತು ಆ ಜಾತಿ ಈ ಜಾತಿ ಎಂದು ಸಾಯಿಸುವುದು ಸರಿಯಲ್ಲ.

ಬೋಡಗುರ್ಕಿಯಲ್ಲಿ ನಡೆದ ಘಟನೆಯಿಂದ ಮಗುವನ್ನು ಕಳೆದುಕೊಂಡ ಕುಟುಂಬಸ್ಥರು ಎಷ್ಟು ನೋವು ಪಡುತ್ತಿದ್ದಾರೆ ಎಂಬುವುದನ್ನು ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ಮೊದಲು ನಾವು ಮಾನವರಾಗೋಣ. ಹೊಲಸು ತಿಂದು ಬರುವ ನಾಯಿಯನ್ನು, ಹೆಗ್ಗಣ ತಿಂದು ಬರುವ ಬೆಕ್ಕನ್ನು ಎತ್ತಿಕೊಂಡು ಮುದ್ದಾಡುತ್ತೇವೆ. ಆದರೆ ಇಂದಿನ ಆಧುನಿಕ ಸಮಾಜದಲ್ಲಿ ಒಬ್ಬ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣದೇ ಇರುವುದು ವಿಷಾದ ಸಂಗತಿ ಎಂದರು.

ಒಬ್ಬ ಹೆಣ್ಣನ್ನು ಸಹ ಹೆಣ್ಣು ರೀತಿಯಲ್ಲಿ ಕಾಣುತ್ತಿಲ್ಲ ಬದಲಾಗಿ ಅಸ್ಪೃಶ್ಯ ರೀತಿಯಲ್ಲಿ ಕಾಣುತ್ತಿದ್ದೇವೆ. ಸಮಾಜದಲ್ಲಿ ಎರಡನೇ ಸ್ಥಾನವಿದ್ದರೂ ಇಂದಿಗೂ ಅದು ಸಿಗುತ್ತಿಲ್ಲ. ಮಗು ಹುಟ್ಟಿದಾಗ ಯಾವ ಜಾತಿ ಎಂದು ಹಣೆಯಲ್ಲಿ ಬರೆದಿರುವುದಿಲ್ಲ. ಮೊದಲು ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ಬೇಕು ಎಂದರು.

ಮೃತ ಗಂಗರಾಜುವಿನ ಅತ್ತಿಗೆ ಅರುಣ ಮಾತನಾಡಿ, ಜೂನ್ ೨೭ ರಂದು ಬೋಡಗುರ್ಕಿ ಗ್ರಾಮದಲ್ಲಿ ನಡೆದಿರುವ ಘಟನೆ ದೇಶದ ಯಾವ ಗ್ರಾಮದಲ್ಲೂ ನಡೆಯಬಾರದು. ಸಾಕಿ ಸಲುಹಿದ ಮಗಳನ್ನು ತಂದೆ ಸಾಯಿಸುತ್ತಾರೆ ಎಂದರೆ ಆತ ಮನುಷ್ಯನೇ ಅಲ್ಲ. ಸಾಯುವುದಕ್ಕೆ ಮುಂಚೆ ಆ ಹೆಣ್ಣುಮಗು ಮೂರು ದಿನಗಳ ಕಾಲ ಬಹಳ ನೊರಳಾಡಿದ್ದಾಳೆ.

ಘಟನೆ ನಡೆದು ಒಂದು ವಾರ ಕಳೆದರೂ ಸಹ ಗ್ರಾಮದ ಮುಖಂಡರು ಅಥವಾ ರಾಜಕಾರಣಿಗಳು ಯಾರೂ ಸಹ ಮನೆಗೆ ಬಂದು ಸಾಂತ್ವಾನ ಹೇಳುವ ಕೆಲಸ ಮಾಡಿಲ್ಲ. ವಾರದ ನಂತರ ಸಂಘಟನೆಗಳ ಮುಖಂಡರು ಸಾಂತ್ವಾನ ಹೇಳಿ ದೈರ್ಯ ತುಂಬಿ ಪೊಲೀಸ್ ಕೇಸಿಗೆ ಸಹಕಾರ ನೀಡಿದ್ದಾರೆ.

ನಮ್ಮದೇ ಸಮುದಾಯದ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಒಮ್ಮೆಯೂ ಸಹ ಬಂದು ಸಾಂತ್ವಾನ ಹೇಳುವ ಕೆಲಸಕ್ಕೆ ಮುಂದಾಗಿಲ್ಲ. ಇನ್ನು ಮುಂದೆ ರಾಜಕಾರಣಿಗಳು ಸಾಂತ್ವಾನಕ್ಕೆ ಮನೆ ಬಳಿ ಬಂದ್ರೆ ಚೆನ್ನಾಗಿರಲ್ಲ ಎಂದು ಕಿಡಿ ಕಾರಿದರು.

ನಂತರ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಘಟನೆಯನ್ನು ತೀವ್ರವಾಗಿ ಖಂಡಿಸಿದರು ಗ್ರಾಮದಲ್ಲಿ ಇನ್ನು ಮುಂದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲರೂ ಅನ್ಯೋನ್ಯದಿಂದ ಇರುವಂತೆ ನೋಡಿಕೊಳ್ಳಬೇಕು. ಮೃತ ಗಂಗರಾಜು ಕುಟುಂಬಕ್ಕೆ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕು. ಮೃತರ ಕುಟುಂಬಕ್ಕೆ ಸರ್ಕಾರ  ಒಂದು ಕೋಟಿ ಪರಿಹಾರ ಮತ್ತು ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಖಾಯಂ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.

ಬೋಡಗುರ್ಕಿ ಚಲೋ ಹಿನ್ನಲೆಯಲ್ಲಿ ಮಾರ್ಗದಲ್ಲಿ ಮತ್ತು ಗ್ರಾಮದಲ್ಲಿ ಪೊಲೀಸ್ ಸರ್ಪಗಾವಲು ವ್ಯವಸ್ಥೆ ಮಾಡಲಾಗಿತ್ತು. ಮತ್ತು ಗ್ರಾಮಕ್ಕೆ ನಾಕಾಬಂದಿ ಹಾಕಲಾಗಿತ್ತು.

ಈ ಬೋಡಗುರ್ಕಿ ಚಲೋದಲ್ಲಿ ಸಂಘಟನೆಗಳ ಮುಖಂಡರಾದ ಶ್ರೀನಾಥ್ ನಾಸ್ತಿಕ್, ಕೂಡಗಲ್ಲು ಬಾಬು, ಜೈ ಬೀಮ್ ಶ್ರೀನಿವಾಸ್, ಕೋದಂಡರಾಮ, ಗೋಪಾಲ್, ಶಂಕರ್, ರಾಮಲಿಂಗಯ್ಯ, ನವೀನ್ ಮಹಾರಾಜ್, ಸಿದ್ದಾರ್ಥ್ ಆನಂದ್, ಹೆಬ್ಬಾಳ ವೆಂಕಟೇಶ್, ಹರೀಶ್, ಸಂದೇಶ್, ಸಂಗಸಂದ್ರ ವಿಜಯಕುಮಾರ್, ಸಂದ ಮುನಿಸ್ವಾಮಿ, ದಿಶಾ, ರಾಧಮ್ಮ, ಲಕ್ಷ್ಮಿ,  ಕಲಾವಿದ ಯಲ್ಲಪ್ಪ, ಕ್ಯಾಸಂಬಳ್ಳಿ ಸುಮತಿ ಮುಂತಾದವರು ಹಾಜರಿದ್ದರು.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!