• Mon. Sep 16th, 2024

ಸಾವಿರಾರು ಮಂದಿಯಿಂದ ದಾಖಲೆಯ ಬೃಹತ್ ಯೋಗ ಪ್ರದರ್ಶನ ಯೋಗದಿಂದ ವಿಶ್ವಗುರುವಾದ ಯುವಶಕ್ತಿಯ ಭಾರತ-ಸಂಸದ ಮುನಿಸ್ವಾಮಿ

PLACE YOUR AD HERE AT LOWEST PRICE

ಯೋಗದ ಮೂಲಕ ವಿಶ್ವಗುರುವಾಗಿರುವ ಭಾರತದಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗುವುದಿಲ್ಲ, ಮೊಬೈಲ್‌ಗೆ ದಾಸರಾಗುವುದಿಲ್ಲ ಎಂದು ಸಂಕಲ್ಪ ಮಾಡಿ ಎಂದು ಸಂಸದ ಎಸ್.ಮುನಿಸ್ವಾಮಿ ಕರೆ ನೀಡಿದರು.

ಕೋಲಾರ ಜಿಲ್ಲಾಡಳಿತ, ಜಿಪಂ,ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆ,ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ದಾಖಲೆಯ ಯೋಗಾಥಾನ್ ಅಂಗವಾಗಿ ನಡೆದ ೧೦ ಸಾವಿರಕ್ಕೂ ಹೆಚ್ಚು ಮಂದಿಯ ಯೋಗ ಪ್ರದರ್ಶನಕ್ಕೆ ಚಾಲನೆ ನೀಡಿ, ತಾವೂ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಸುಮಾರು ಒಂದು ಗಂಟೆ ಕಾಲ ನಡೆದ ಬೃಹತ್ ಯೋಗ ಪ್ರದರ್ಶನದಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ಭಾರತದ ಮೊದಲ ಯೋಗ ಸಾಕ್ಷರತಾ ರಾಜ್ಯವನ್ನಾಗಿಸಲು ಇದು ಅಡಿಪಾಯವಾಗಿದ್ದು, ಕೋಲಾರ ಜಿಲ್ಲೆಯ ಯೋಗದ ತವರಾಗಿದೆ, ತಾಲೂಕಿನ ಬೆಳ್ಳೂರಿನ ಪದ್ಮವಿಭೂಷಣ ಬಿ.ಕೆ.ಎಸ್.ಅಯ್ಯಂಗಾರ್ ಅವರು ವಿಶ್ವದ ೫೦ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಯೋಗ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿ ಭಾರತದ ಸಂಸ್ಕೃತಿಯಾದ ಯೋಗವನ್ನು ಹರಡಿದ್ದಾರೆ ಎಂದರು.

ಯುವಕರು ತಂದೆ ತಾಯಿಯ ಋಣ ತೀರಿಸುವ ಕೆಲಸ ಮಾಡಿ,ರಾಜ್ಯದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಕ್ರೀಡಾ ಯುವಜನ ಸಚಿವ ನಾರಾಯಣಗೌಡರ ಪ್ರಯತ್ನದಿಂದ ಇಂದು ಕರ್ನಾಟಕ ಯೋಗ ಸಾಕ್ಷರತೆಯ ಸಾಧನೆ ಮಾಡಿ ಗಿನ್ನೀಸ್ ದಾಖಲೆ ಬರೆಯುತ್ತಿದೆ ಎಂದರು.

ಐತಿಹಾಸಿಕ ಕ್ಷಣಕ್ಕೆ
ಕೋಲಾರ ಸಾಕ್ಷಿ
ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಯೋಗ ಪ್ರದರ್ಶನದ ಮೂಲಕ ದಾಖಲೆ ಬರೆಯುವ ಐತಿಹಾಸಿಕ ಕ್ಷಣಕ್ಕೆ ಕೋಲಾರವೂ ಸಾಕ್ಷಿಯಾಗಿದೆ, ಈ ವರ್ಷ ಯುವಜನೋತ್ಸವದ ಅಂಗವಾಗಿ ನಡೆಸಿರುವ ಈ ಪ್ರದರ್ಶನ ಭಾರತದ ಯುವಶಕ್ತಿಯ ಕೊಡುಗೆಯಾಗಿದೆ, ಶಾಲಾ ಸಾಕ್ಷರತಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕ್ರೀಡಾ,ಯುವ ಸಬಲೀಕರಣ ಇಲಾಖೆ ಎಲ್ಲರ ಪ್ರಯತ್ನ ಯಶಸ್ವಿಯಾಗಿದೆ, ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸೋಣ ಎಂದು ಎಲ್ಲರಿಗೂ ಶುಭಾಶಯ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಽಕಾರಿ ಎಂ.ನಾರಾಯಣ, ಯುವಕರ ಶೈಕ್ಷಣಿಕ, ಭೌತಿಕ ಅಭಿವೃದ್ದಿಗೂ ಯೋಗ ಸಹಕಾರಿಯಾಗಿದ್ದು, ಎಲ್ಲರೂ ಯೋಗ ಮುಂದುವರೆಸಿ, ನಿರಂತರ ಯೋಗದಿಂದ ಉತ್ತಮ ಆರೋಗ್ಯ ಪಡೆಯಿರಿ ಎಂದರು.

ನಡುಗುವ ಚಳಿಯಲ್ಲೂ
ಯುವಶಕ್ತಿಯಸಾಗರ
ನಡುಗುವ ಚಳಿಯಲ್ಲೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಯುವಜನರು ಜಿಲ್ಲಾ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೇರಿದರು. ವಿವಿಧ ಶಾಲೆ,ಕಾಲೇಜುಗಳಿಂದ ಆಗಮಿಸಿದ್ದ ಸಾವಿರಾರು ವಿದ್ಯಾರ್ಥಿಗಳು ಯೋಗ ಪ್ರದರ್ಶನದಲ್ಲಿ ಗಮನ ಸೆಳೆದರು.ನಗರ ಮಾತ್ರವಲ್ಲದೇ ತಾಲೂಕಿನ ವಿವಿಧ ಶಾಲೆಗಳ ಮಕ್ಕಳು ಪಾಲ್ಗೊಂಡಿದ್ದರು.

ಸಾಧಕ ಶಾಲೆಗಳಿಗೆ
ಪ್ರಶಸ್ತಿ ಪತ್ರ
ಯೋಗ ಪ್ರದರ್ಶನಕ್ಕೆ ೧೧೦೦ ಮಕ್ಕಳನ್ನು ಕರೆತಂದಿದ್ದ ಚಿನ್ಮಯ ಶಾಲೆ, ೪೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕರೆತಂದಿದ್ದ ನಗರದ ಬಾಲಕಿಯರ ಪಿಯು ಕಾಲೇಜಿಗೆ ಕಾಲೇಜು ಹಂತದಲ್ಲಿ ಪ್ರಥಮ ಸ್ಥಾನ, ಗ್ರಾಮೀಣ ಶಾಲೆಗಳಲ್ಲಿ ಅತಿ ಹೆಚ್ಚು ಮಕ್ಕಳನ್ನು ಕರೆತಂದಿದ್ದ ಬೆಗ್ಲಿ ಪ್ರೌಢಶಾಲೆಗೆ ಪ್ರಥಮ ಸ್ಥಾನದ ಗೌರವ ಲಭಿಸಿದ್ದು, ಸಂಸದರು ಪ್ರಮಾಣಪತ್ರ ವಿತರಿಸಿದರು.

ಟೀಶರ್ಟ್ ನೀಡದ್ದು
ಮಕ್ಕಳಿಗೆ ಬೇಸರ
ಯೋಗ ಪ್ರದರ್ಶನದಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೂ ಟೀ-ಶರ್ಟ್ ನೀಡಲಾಗುವುದು ಎಂದು ಪ್ರಕಟಿಸಲಾಗಿತ್ತಾದರೂ ನೀಡಲಿಲ್ಲ, ಈ ಕುರಿತು ಅನೇಕ ಶಿಕ್ಷಕರು,ಅಽಕಾರಿಗಳು,ವಿದ್ಯಾರ್ಥಿಗಳಲ್ಲಿ ಬೇಸರ ಕಂಡು ಬಂತು. ಈ ಕುರಿತು ಡಿಸಿಯವರನ್ನು ಕೇಳಿದಾಗ ಟೀಶರ್ಟ್ ಅಗತ್ಯಕ್ಕೆ ತಕ್ಕಷ್ಟು ಬಾರದಿರುವ ಕಾರಣ ವಿತರಣೆ ಸಾಧ್ಯವಾಗಿಲ್ಲ, ಮುಂದಿನ ದಿನಗಳಲ್ಲಿ ಶಾಲೆಗಳಿಗೆ ತಲುಪಿಸಲಾಗುವುದು ಎಂದರು.
ಯೋಗ ಶಿಕ್ಷಕರಾದ ಮಾರ್ಕಂಡೇಶ್ವರ್. ಚಂದ್ರಣ್ಣ, ಮಂಜುಳಕ್ಕ ಹಾಗೂ ವೆಂಕಟ, ಸೋಮಣ್ಣ ಯೋಗ ಪ್ರದರ್ಶನದಲ್ಲಿ ಮಕ್ಕಳಿಗೆ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಪಿಯು ಡಿಸಿ ರಾಮಚಂದ್ರಪ್ಪ, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಬಿಇಒ ಕನ್ನಯ್ಯ, ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ, ಪತ್ರಕರ್ತರ ಸಂಘದ ರಾಜ್ಯಕಾರ್ಯಕಾರಿ ಸದಸ್ಯ ವಿ.ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

You missed

error: Content is protected !!