• Fri. Apr 26th, 2024

೩.೮೬ ಕೋಟಿ ವೆಚ್ಚದಲ್ಲಿ ಟೊಮೆಟೋ ಸಂಸ್ಕರಣಾ ಘಟಕಕ್ಕೆ ಶಂಕುಸ್ಥಾಪನೆ, ಶೀಘ್ರವೇ ಹೊಸ ಎಪಿಎಂಸಿಗೆ ಚಾಲನೆ

PLACE YOUR AD HERE AT LOWEST PRICE

 

 

 

 

ಕೋಲಾರದಲ್ಲಿ ಒಂದು ವರ್ಷದ ಹಿಂದೆ ಆಗಮಿಸಿದ್ದಾಗ ನೀಡಿದ ಭರವಸೆಯಂತೆ ಟೊಮೆಟೋ ಸಂಸ್ಕರಣಾ ಘಟಕ ಹಾಗೂ ರೈತರ ವಸತಿ ನಿಲಯಕ್ಕೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಶಂಕುಸ್ಥಾಪನೆ ನೆರವೇರಿಸಿದರು.

 

ನಗರದ ಹೊರವಲಯದಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ, ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ನವದೆಹಲಿ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರ ಇವರ ಸಹಯೋಗದಲ್ಲಿ ರೈತರ ವಸತಿ ನಿಲಯ ಹಾಗೂ ಟೊಮ್ಯಾಟೊ ಸಂಸ್ಕರಣಾ ಘಟಕದ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಗತ್ಯತೆಗಿಂತ ಹೆಚ್ಚಾಗಿ ಬಡಿಸಿಕೊಂಡ ಆಹಾರ ಪದಾರ್ಥ, ಉಪಯೋಗಿಸದ ಹಣ್ಣು ಮತ್ತು ತರಕಾರಿ ಹಾಗೂ ಉಪಯೋಗಕ್ಕಿಂತ ಹೆಚ್ಚುವರಿಯಾದ ಆಹಾರ ಧಾನ್ಯಗಳನ್ನು ವ್ಯರ್ಥ ಮಾಡುವುದು ಹಸಿದುಕೊಂಡಿರುವ ಮತ್ತೊಬ್ಬರ ಊಟ ಕಸಿದಂತೆ ಎಂದು ಆಭಿಪ್ರಾಯಪಟ್ಟ ಸಚಿವೆ ಶೋಭಾ ಕರಂದ್ಲಾಜೆ , ಜಿಲ್ಲೆಯಲ್ಲಿ ಒಂದು ವರ್ಷದ ಹಿಂದೆ ಜಿಲ್ಲಾ ಪ್ರವಾಸ ಮಾಡಿ ಈ ಆವರಣದಲ್ಲಿ ಆಡಳಿತ ಕಛೇರಿ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ರೈತರ ಮನವಿ ಮೇರೆಗೆ ಇಲ್ಲಿನ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈ ಪ್ರದೇಶದಲ್ಲಿ ಒಂದು ಟೊಮ್ಯಾಟೊ ಸಂಸ್ಕರಣಾ ಘಟಕದ ಅಗತ್ಯವಿದ್ದು, ಘಟಕದ ಸ್ಥಾಪನೆಗೆ ಅಗತ್ಯವಿರುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಗಿತ್ತು. ಇಂದು ಸರಿಯಾಗಿ ಒಂದು ವರ್ಷದ ನಂತರ ಸದರಿ ಘಟಕಕ್ಕೆ ಅಡಿಗಲ್ಲು ಹಾಕುವ ಸೌಭಾಗ್ಯ ನನ್ನದಾಗಿದೆ. ಜಿಲ್ಲೆಯಲ್ಲಿ ಕೇವಲ ಮಳೆ ಆಧಾರಿತ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಬಹಳ ಕಷ್ಟಪಟ್ಟು ನೀರನ್ನು ಹೊಂಚಿಕೊಂಡು ಮಾವು ಮತ್ತು ಟೊಮ್ಯಾಟೊವನ್ನು ಅತಿ ಹೆಚ್ಚು ಬೆಳೆಯುವ ಜಿಲ್ಲೆ ಇದಾಗಿದೆ ಎಂದು ಜಿಲ್ಲೆಯ ರೈತರನ್ನು ಶ್ಲಾಘಿಸಿದರು.

 

 

ಜಿಲ್ಲೆಯಲ್ಲಿ ದಿನ ಒಂದಕ್ಕೆ ೪ ಟನ್‌ಗಳ ಟೊಮ್ಯಾಟೊವನ್ನು ಸಂಸ್ಕರಿಸುವ ಸಂಸ್ಕರಣಾ ಘಟಕವನ್ನು ಅಂದಾಜು ೩.೮೬ ಕೋಟಿ ಹಾಗೂ ವಸತಿ ನಿಲಯವನ್ನು ೮೬ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲು ಇಂದು ಅಡಿಗಲ್ಲು ಹಾಕಲಾಗಿದೆ. ಆದರೆ ಇದು ಕೇವಲ ಆರಂಭ ಮಾತ್ರ. ಕೇಂದ್ರ ಸರ್ಕಾರವು ಅನುದಾನ ಬಿಡುಗಡೆ ಮಾಡಲು ಬದ್ದವಾಗಿದ್ದು, ಜಿಲ್ಲಾಡಳಿತ ಈ ಕಾರ್ಯವನ್ನು ಶೀಘ್ರದಲ್ಲಿ ಮುಗಿಸಿ ಲೋಕಾರ್ಪಣೆ ಮಾಡಲು ಉತ್ಸುಕವಾಗಿದೆ ಎಂದು ಹೇಳಿದರು. ಟೊಮ್ಯಾಟೊ ಮತ್ತು ಮಾವು ಬೆಳೆಗಳನ್ನು ಅತಿ ಹೆಚ್ಚು ಬೆಳೆಯುವ ಪ್ರದೇಶ ಇದಾಗಿದ್ದು, ದಿನ ಒಂದಕ್ಕೆ ೪ ಟನ್‌ಗಳ ಟೊಮ್ಯಾಟೊ ಸಂಸ್ಕರಣೆ ಕೇವಲ ಶೇ.೧೦ ರಷ್ಟು ಉತ್ಪಾದನೆಯನ್ನು ಮಾತ್ರ ಬಳಸಿಕೊಂಡಂತಾಗುತ್ತದೆ. ಆದರಿಂದ ಟೊಮ್ಯಾಟೊ ಮತ್ತು ಮಾವು ಬೆಳೆಯುವ ಅತಿ ಹೆಚ್ಚು ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿಯೂ ಸಹ ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದರೆ ಆಹಾರ ಪದಾರ್ಥಗಳು ವ್ಯರ್ಥವಾಗುವುದನ್ನು ತಡೆಗಟ್ಟಬಹುದಾಗಿದೆ ಎಂದರು. ಕೆಲವೊಮ್ಮೆ ಕಷ್ಟಪಟ್ಟು ಬೆಳೆದ ಟೊಮ್ಯಾಟೊ ಬೆಳೆಗೆ ಸೂಕ್ತ ದರ ಸಿಗದೆ. ಕೆಲವು ಬಾರಿ ರಸ್ತೆಗಳಲ್ಲಿ ಎಸೆದು, ಹಲವು ಬಾರಿ ಕೊಯ್ಲು ಮಾಡಲಾಗದೆ ತೋಟಗಳಲ್ಲಿ ಬೆಳೆಯನ್ನು ಹಾಗೇ ಬಿಟ್ಟು ಬಿಡುವ ರೈತರು ಕೊನೇ ಪಕ್ಷ ಆಹಾರ ಸಂಸ್ಕರಣಾ ಘಟಕದಲ್ಲಿ ತಮ್ಮ ಬೆಳೆಗಳನ್ನು ಸಾರ್ಥಕಪಡಿಸಿಕೊಳ್ಳಬಹುದಾಗಿದೆ ಎಂದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಯೋಜನೆಯಡಿ ೨೬ ಆಹಾರ ಸಂಸ್ಕರಣಾ ಘಟಕಗಳಿಗೆ ಮಂಜೂರಾತಿ ನೀಡಲಾಗಿದೆ. ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಡ್ರ್ಯಾಗನ್ ಹಣ್ಣು ಮತ್ತು ಸೀಬೆ ಹಣ್ಣುಗಳಂತಹ ಅಸಾಂಪ್ರದಾಯಿಕ ಬೆಳೆಗಳನ್ನು ಬೆಳೆದು ಯಶಸ್ಸನ್ನು ಸಾಧಿಸಲಾಗಿದೆ. ವಿಶೇಷವಾಗಿ ಈ ಭಾಗದ ಜನರು ಬಟನ್‌ರೋಸ್ ನಂತಹ ವಾಣಿಜ್ಯ ಬೆಳೆಗಳಿಗೆ ಮಾರು ಹೋಗಿ ಅದರಲ್ಲಿಯೂ ಸಹ ಯಶಸ್ಸನ್ನು ಕಂಡಿರುತ್ತಾರೆ. ಪ್ರಸ್ತುತ ಕೋಲಾರ ನಗರದ ಹೊರವಲಯದಲ್ಲಿ ೧೮ ಎಕರೆಗಳ ವಿಸ್ತೀರ್ಣದಲ್ಲಿರುವ ಎ.ಪಿ.ಎಂ.ಸಿ ಮಾರುಕಟ್ಟೆಯು ಟೊಮ್ಯಾಟೊ ವಹಿವಾಟಿಗೆ ಕಡಿಮೆಯಾಗಿದ್ದು ಟೊಮ್ಯಾಟೊ ಬೆಳೆಯುವ ರೈತರ ಹಿತಾಸಕ್ತಿಯಿಂದ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಡಂತೆ ೩೭ ಎಕರೆಗಳ ವಿಸ್ತೀರ್ಣದಲ್ಲಿ ಹೊಸ ಎ.ಪಿ.ಎಂ.ಸಿ ಮಾರುಕಟ್ಟೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಮಾರುಕಟ್ಟೆಗೆ ಈಗಾಗಲೇ ೩೭ ಎಕರೆಗಳ ಜಮೀನು ಮಂಜೂರಾಗಿದ್ದು, ಕೇಂದ್ರ ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರಕ್ಕಾಗಿ ನಿರೀಕ್ಷಿಸಲಾಗುತ್ತಿದೆ. ಕೇಂದ್ರ ಕೃಷಿ ಸಚಿವರಾದ ತಾವು ಅರಣ್ಯ ಸಚಿವರೊಂದಿಗೆ ಮಾತನಾಡಿ ಶೀಘ್ರವಾಗಿ ನಿರಾಕ್ಷೇಪಣಾ ಪತ್ರ ದೊರಕುಂತೆ ಮಾಡಬೇಕೆಂದು ಸಚಿವರಿಗೆ ಮನವಿ ಮಾಡಿದರು. ಉದ್ದೇಶಿತ ಹೊಸ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಕೇವಲ ಟೊಮ್ಯಾಟೊ ಮಾರುಕಟ್ಟೆಯಲ್ಲದೆ ಶೀಥಲೀಕರಣ ಘಟಕ, ಆಹಾರ ಸಂಸ್ಕರಣಾ ಘಟಕ, ಶುದ್ಧಿಕರಣ ಘಟಕ ಮತ್ತು ತ್ಯಾಜ್ಯ ಮರುಬಳಕೆ ಘಟಕಗಳೊಂದಿಗೆ ಸುಸಜ್ಜಿತ ಮಾರುಕಟ್ಟೆ ಪ್ರಾಂಗಣವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಶ್ರೀನಿವಾಸಗೌಡ,ವಿಧಾನ ಪರಿಷತ್ ಸದಸ್ಯರು ಹಾಗೂ ತೋಟಗಾರಿಕಾ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಪಿ.ಹೆಚ್.ಪೂಜಾರ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ನಾಗರಾಜು, ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎಂ.ಇoದಿರೇಶ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎಸ್.ಐ.ಅಥಣಿ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಕೆ.ತುಳಸಿರಾಮ್, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಹೆಚ್.ಎಸ್.ಶಿವರಾಮು, ನಿವೃತ್ತ ಅಧಿಕಾರಿ ಮಾಚೇಗೌಡ, ಕೃಷಿ ಇಲಾಖೆಯ ಉಪನಿರ್ದೇಶಕಿ ಪಂಕಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

 

 

 

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!