• Fri. Apr 26th, 2024

PLACE YOUR AD HERE AT LOWEST PRICE

  • ಫೆಬ್ರವರಿ ೭ ರಮಾಬಾಯಿ ಅಂಬೇಡ್ಕರ್‌ ಜನ್ಮದಿನ, ಮಹಾ ತಾಯಿ ಕುರಿತು *ಅಶ್ವಜೀತ ದಂಡಿನ ಬರೆದಿರುವ ಲೇಖನ ನಮ್ಮಸುದ್ದಿ.ನೆಟ್‌ ಓದುಗರಿಗಾಗಿ

‘ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇದ್ದೆ ಇರುತ್ತಾಳೆ’ ಎಂದು ಹಿರಿಯರು ಹೇಳುವ ಮಾತಿನಂತೆ, ವಿಶ್ವಜ್ಞಾನಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿ ಯಶಸ್ಸಿನ ಹಿಂದೆ ಅ ತಾಯಿಯ ತ್ಯಾಗ ಮತ್ತು ಪಾತ್ರ ತುಂಬಾ ದೊಡ್ಡದು. ಅ ತಾಯಿ ಬೇರೆ ಯಾರು ಅಲ್ಲ.  ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಬಾಳಸಂಗಾತಿ ಮಾತಾ ರಮಾಬಾಯಿ ಅಂಬೇಡ್ಕರ. 

ತ್ಯಾಗಮಯಿಯಾದ ಮಾತೆ ರಮಾಬಾಯಿ ಅಂಬೇಡ್ಕರ ಅವರು ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ  ಸಮುದ್ರತೀರದ ಹಳ್ಳಿಯಾದ ವಣಂದಗಾವ ಎಂಬ ಊರಿನಲ್ಲಿ, ಭೀಕೂ ವಲಂಗಕರ ಮತ್ತು ರುಕ್ಮಿಣಿ ವಲಂಗಕರಯಂಬ ದಂಪತಿಗಳ ಪುಣ್ಯ ಉದ್ಧಾರದಲ್ಲಿ  ಕ್ರಿ.ಶ.1897 ಫೆಬ್ರವರಿ 7 ರಂದು ಎರಡನೇ ಮಗಳಾಗಿ ಜನಿಸಿದರು. ಇವರ ತಂದೆ ಭೀಕೂ ವಲಂಗಕರ ಅವರು ಬಂದರಿನಲ್ಲಿ ಮೀನು ಹಿಡಿದು ಬುಟ್ಟಿಯಲ್ಲಿ ತಂದು ಮಾರಾಟ ಮಾಡುತ್ತಿದ್ದರು. ದುಡಿಮೆಗೆ ತಕ್ಕ ಪ್ರತಿಫಲ ಸಿಗದ ಅ ಕಾಲದಲ್ಲಿ ಭೀಕೂ ವಲಂಗಕರ ಅವರೊಬ್ಬರ ದುಡಿಮೆಯ ಹಣದಿಂದ ಮನೆ ನಡೆಯುವುದು ತುಂಬಾ ಕಷ್ಟವಾಗಿತ್ತು. ಹಾಗಾಗಿ ತಾಯಿ ರುಕ್ಮಿಣಿ ಅವರು ಸಗಣಿ(ಹೆಂಡಿ) ಆರಿಸಿ ತಂದು ಕುಳ್ಳು(ಕುರುಳು) ಬಡಿದು ಮಾರಾಟ ಮಾಡುತ್ತಿದ್ದರು. ತನ್ನ ತಾಯಿಯೊಂದಿಗೆ ಬಾಲಕಿ ರಮಾ ಕೂಡ ಸಗಣಿ(ಹೆಂಡಿ) ಆರಿಸಿ ತಂದು ಕುಳ್ಳು(ಕುರುಳು) ಬಡಿದು ಮಾರಾಟಕ್ಕೆ ನೇರವಾಗುತ್ತಿದ್ದಳು. ಈ ಕೆಲಸ ಅವರಿಗೆ ಅನಿವಾರ್ಯವೂ ಆಗಿತ್ತು. ಇಲ್ಲದಿದ್ದರೆ ಹೊಟ್ಟೆ ತುಂಬುತ್ತಿರಲಿಲ್ಲ. ಹೀಗೆ ಬಾಲ್ಯದಲ್ಲಿಯೇ ಇಂತಹ ಕಷ್ಟದ ಕರಿ ನೆರಳು ರಮಾಬಾಯಿ ಅವರಿಗೆ ಬೆನ್ನು ಹತ್ತಿತ್ತು.

ರಮಾಬಾಯಿ ಅವರ ತಂದೆ ಭೀಕೂ ವಲಂಗಕರ ಅವರು ದಿನ ಭಾರವಾದ ಮೀನಿನ ಬಲೆಯನ್ನು ಎಳೆಯಬೇಕ್ಕಾಗಿತ್ತು. ಈ ಕೆಲಸದಿಂದಾಗಿ ಅವರಿಗೆ ಎದೆ ನೋವು ಬಂದು ತೀರಿಕೊಂಡರು. ಇವರು ಸತ್ತ ಕೆಲವೇ ದಿನಗಳಲ್ಲಿ ತಾಯಿ ರುಕ್ಮಿಣಿ ಅವರು ಕೂಡ ಅನಾರೋಗ್ಯದಿಂದ ತೀರಿಹೋದರು. ಇದರಿಂದಾಗಿ ಬಾಲಕಿ ರಮಾಬಾಯಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡು ತಬ್ಬಲಿಯಾದ್ದಳು. ಹಾಗಾಗಿ ಭೀಕೂ ವಲಂಗಕರ ಅವರ ಅಣ್ಣ ಗೋಪಾಲಬಾಬಾ ವಲಂಗಕರ ಅವರು ರಮಾಬಾಯಿ ಮತ್ತು ಅವರ ತಂಗಿ ಗೌರಾ ಹಾಗೂ ತಮ್ಮನಾದ ಶಂಕರನನ್ನು ತಮ್ಮ ಜೊತೆಗೆ ಮುಂಬಯಿಗೆ (ಮುಂಬೈ) ಕರೆದುಕೊಂಡು ಬಂದರು.

ರಮಾಬಾಯಿಯವರ ದೊಡ್ಡಪ್ಪ  ಗೋಪಾಲಬಾಬಾ ವಲಂಗಕರ ಅವರು ಮುಂಬೈಯಲ್ಲಿನ ಸೌದೆಡಿಪೊ ಒಂದರಲ್ಲಿ ಕೆಲಸ ಮಾಡುತ್ತಿದ್ದರು.  ಸುಬೇದರ್ ರಾಮಾಜೀ ಸಕ್ಪಾಲರು ಕೊಂಡ ಅದೇ ಸೌದೆಡಿಪೊದಲ್ಲಿ ಕೆಲಸ ಮಾಡುತ್ತಿದ್ದರು. ಒಂದು ದಿನ ರಮಾಬಾಯಿಯು ಅವರ ದೊಡ್ಡಪ್ಪನಾದ ಗೋಪಾಲಬಾಬಾ ವಲಂಗಕರ  ಅವರೊಂದಿಗೆ  ಸೋದೆಡೀಪೊಗೆ ಬಂದಾಗ ಸುಬೇದಾರ ರಾಮಾಜೀ ಸಕ್ಪಾಲರು ರಮಾಬಾಯಿ ಅವರನ್ನು ನೋಡಿ: ಇಷ್ಟೊಂದು ಚಿಕ್ಕವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಎಷ್ಟೊಂದು ಕಷ್ಟ ಪಡುತ್ತಿದ್ದಾಳೆ.  ಇಷ್ಟೊಂದು ಚಿಕ್ಕವಯಸ್ಸಿನಲ್ಲಿಯೇ ತಾನು ದುಡಿದು ತಿನ್ನಬೇಕೆಂಬ ಸ್ವಾಭಿಮಾನವೂಳ ಛಲಗಾತಿ ನಮ್ಮ ಭೀಮಾನಿಗೆ ಇವಳೇ ಸರಿಯಾದ ಜೋಡಿ. ಇವಳೇ ನಮ್ಮ ಮನೆಯ ಸೊಸೆಯಾಗಬೇಕು. ಎಂದು ಗೋಪಾಲಬಾಬಾ ವಲಂಗಕರ ಅವರನ್ನು ಕೇಳುತ್ತಾರೆ. ಗೋಪಾಲಬಾಬಾ ವಲಂಗಕರ ಅವರು ಕೂಡ ಸಂತೋಷದಿಂದ ಒಪ್ಪಿಗೆ ಸೂಚಿಸುತ್ತಾರೆ.

ಆದರೆ, ಸುಬೇದಾರ ರಾಮಾಜೀ ಸಕ್ಪಾಲರು ಈ ಮೊದಲೇ ತಮ್ಮ ಮಗನಾದ ಭೀಮರಾವ್ ಅಂಬೇಡ್ಕರರಿಗೆ ಬೇರೆ ಕಡೆ ಒಂದು ಹೆಣ್ಣು ನೋಡಿದರು. ಆ ಹುಡುಗಿಯ ತಂದೆಗೆ ತಮ್ಮ ಕುಂಟುನೆಪ ಹೇಳಿ ಸದ್ಯ ಮದುವೆ ಮಾಡಲು ಆಗುವುದಿಲ್ಲ ಎಂದು ತಿಳಿಸುತ್ತಾರೆ. ಸುಬೇದಾರ ರಾಮಾಜೀ ಸಕ್ಪಾಲರ ಇತರದ ನಡವಳಿಕೆಯು ಸುಬೇದರ್ರಾದ ಅವರಿಗೆ ಯೋಗ್ಯವಾಗಿರಲಿಲ್ಲ. ಹುಡುಗಿಯ ತಂದೆ ಸುಬೇದಾರ್ ರಾಮಾಜೀ ಸಕ್ಪಾಲರ ವಿರೋಧ ಪಂಚಾಯಿತಿ ಸೇರಿಸಿದನು. ಸುಬೇದಾರ ರಾಮಾಜೀ ಸಕ್ಪಾಲರು ತಮ್ಮ ತಪ್ಪನ್ನು ಒಪ್ಪಿಕೊಂಡು ಪಂಚಾಯಿತಿ ವಿಧಿಸಿರುವ ಐದು ರೂಪಾಯಿ ದಂಡವನ್ನು ಸಂತೋಷದಿಂದಲೇ ತುಂಬಿದರು. ಆಮೇಲೆ ಕೆಲವೇ ದಿನಗಳಲ್ಲಿ ಕ್ರಿ.ಶ 1906 ರಲ್ಲಿ ಮುಂಬೈ ನಗರದ ಬೈಕುಳಾದ ಮೀನಿನ ಮಾರುಕಟ್ಟೆಯಲ್ಲಿ ಡಾ. ಭೀಮಾರಾವ ಅಂಬೆಡ್ಕರ್ ಅವರೊಂದಿಗೆ ರಮಾಬಾಯಿ ಅವರ ಮದುವೆ ಮಾಡಿದರು. ಆಗ ರಮಾಬಾಯಿ ಅವರಿಗೆ ಕೇವಲ ಒಂಬತ್ತು ವರ್ಷ ವಯಸ್ಸಾಗಿತ್ತು. ಭೀಮಾರಾವ ಅಂಬೆಡ್ಕರ್ ಅವರಿಗೆ ಹದಿನೇಳು ವರ್ಷ ವಯಸ್ಸಾಗಿತ್ತು.

ಅಕ್ಷರದ ಗಾಳಿ ಗಂಧವೇ ಅರಿಯದ ರಮಾಬಾಯಿಯು ಅಕ್ಷರಗಳೇ ತನ್ನ ಪ್ರಾಣ, ಪುಸ್ತಕಗಳೇ ತನ್ನ ಜೀವ ಎಂದು ತಿಳಿದ ಡಾ.ಅಂಬೇಡ್ಕರ್ ಅವರ ಮಡದಿ ಅದಳು. ಮಹಾತ್ಮ ಜ್ಯೋತಿಬಾಫುಲೆಯವರು ತಮ್ಮ ಮಡದಿ ಸಾವಿತ್ರಿಬಾಯಿ ಫುಲೆ ಅವರಿಗೆ ಅಕ್ಷರ ಕಲಿಸಿದಂತೆ, ಡಾ.ಅಂಬೇಡ್ಕರ್ ಅವರು ತನ್ನ ಮಡದಿಯಾದ ರಮಾಬಾಯಿ ಅವರಿಗೆ ಅಕ್ಷರ ಕಲಿಸುತ್ತಿದ್ದರು. ಶ್ರದ್ಧೆಯಿಂದ ಕಲಿತ ರಮಾಬಾಯಿಯು ತಕ್ಕಮಟ್ಟಿಗೆ ಓದಲು-ಬರೆಯಲು ಕಲಿತುಕೊಂಡಳು. ಅಕ್ಷರದ ಮಹತ್ವ ತಿಳಿದುಕೊಂಡಳು. ಡಾ.ಅಂಬೇಡ್ಕರವರ ಅಕ್ಷರದ ದಾಹವನ್ನು ಅರಿತುಕೊಂಡು, ಅವರ ಓದಿಗೆ ಯಾವುದೇ ರೀತಿಯಿಂದ ಅಡ್ಡಿಯಾಗದ ಹಾಗೆ ನಡೆದುಕೊಳ್ಳುತ್ತಿದ್ದಳು. ಇದರಿಂದಾಗಿ ಡಾ.ಅಂಬೇಡ್ಕರ್ ಅವರು ಹೆಚ್ಚಿನ ಉತ್ಸಾಹದಿಂದ ಜ್ಞಾನವನ್ನು ಸಂಪಾದಿಸಲು ರಮಾಬಾಯಿಯವರು ಕಾರಣರಾದರು. ಡಾ.ಅಂಬೇಡ್ಕರ್ ಅವರು ಮದುವೆಯಾದ ಒಂದು ವರ್ಷದಲ್ಲಿ ಕ್ರಿ.ಶ 1907ರಲ್ಲಿ ಮೆಟ್ರಿಕ್ ಪರೀಕ್ಷೆ ಪಾಸಾದರು. ಇದರಿಂದಾಗಿ ರಮಾಬಾಯಿಯವರು ಅತ್ಯಂತ ಖುಷಿಪಟ್ಟರು.

ಕ್ರಿ.ಶ 1912 ಡಿಸೆಂಬರ್ 12 ರಂದು ರಮಾಬಾಯಿ ಅಂಬೇಡ್ಕರ ಅವರಿಗೆ ಒಂದು ಮುದ್ದಾದ ಗಂಡು ಮಗುವಿನ ಜನನವಾಯಿತು. ಆಗ ಅವರ ಮನೆಯ ಪರಿಸ್ಥಿತಿ ಅಷ್ಟೊಂದು ಸುಧಾರಿತವಾಗಿರಲಿಲ್ಲ. ಬಡತನದ ಭೂತ ಬೆನ್ನಹಿಂದೆಯೇ ಇತ್ತು. ಇಂತಹ ಕಡುಬಡತನದ ಪರಿಸ್ಥಿತಿಯಲ್ಲಿಯೂ ಅ ಮಗು ಮನೆಯ ಸರ್ವ ಸದಸ್ಯರ  ಮುಖದಲ್ಲಿ ನಗೆಯನ್ನು ಅರಳಿಸಿತು. ಮನೆಯ ತುಂಬಾ ಸಾಗರದಂತೆ ಸಂತೋಷದ ಹೊನಲು ಚೆಲ್ಲಿತ್ತು.

ಕಷ್ಟದಲ್ಲಿಯೇ ಹುಟ್ಟಿ ಕಷ್ಟದಲ್ಲಿಯೇ ಬೆಳೆದ ರಮಾಬಾಯಿಯವರ ಜೀವನದಲ್ಲಿ ಈಗ ಸ್ವಲ್ಪ ನೆಮ್ಮದಿ ಮೂಡಿತ್ತು. ಕಡುಬಡತನದ ಪರಿಸ್ಥಿತಿಯಲ್ಲಿಯೇ ಆ ಮಗುವಿನ ಜೊತೆಗೆ ಲವಲವಿಕೆಯಿಂದ ಕಾಲ ಕಳೆಯತೊಡಗಿದಳು. ಆದರೆ, ಮತ್ತೆ ದುಃಖ ಬೆನ್ನಿಗೆ ವಿದ್ದಂತೆ ಕ್ರಿ.ಶ 1913 ಫೆಬ್ರವರಿ 2 ರಂದು ಸುಬೇದಾರ ರಾಮಾಜೀ ಸಕ್ಪಾಲರು ತೀರಿಕೊಂಡರು. ತಂದೆಯಂತೆ ನೆರಳಾಗಿದ್ದ ಸುಬೇದರ್ ರಾಮಾಜೀ ಸಕ್ಪಾಲರ ಸಾವಿನಿಂದಾಗಿ ರಾಮಬಾಯಿಯು ಅತ್ಯಂತ ದುಃಖಿತಳಾದಳು. ಸುಬೇದಾರ ರಾಮಾಜೀ ಸಕ್ಪಾಲರು ತೀರಿಕೊಂಡ ಕೆಲವೇ ದಿನಗಳಲ್ಲಿ ರಮಾಬಾಯಿಯು ಗರ್ಭಿಣಿಯಾದಳು. ಇದೇ ವೇಳೆಗೆ ಬಾಬಾಸಾಹೇಬರು ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಾಕ್ಕೆ ಹೋಗುವಾಗ “ಆಗಾಗ ಬರ್ತಾ ಇರಿ” ಎಂದು ಮುಗ್ದತೆಯಿಂದ ಹೇಳಿದ್ದಾಗ ರಮಾಬಾಯಿಯವರ ಮುಗ್ಧ ಮಾತಿಗೆ ಬಾಬಾಸಾಹೇಬರು ನಕ್ಕು “ರಮಾ ಅದಕ್ಕೆ ಸಾವಿರಾರು ರೂಪಾಯಿ ತಗಲುತ್ತದೆ.” ಎಂದು ಹೇಳಿದಾಗ “ಅದು ಅಲ್ಲರಿ ನನ್ನ ಚಿಂತೆ, ಅಲ್ಲಿ ನಿಮಗೆ ಮೈಕೈ ನೋವಾದರೆ ನೋಡಿಕೊಳ್ಳುವವರು ಯಾರು? ಸಮಯಕ್ಕೆ ಊಟ ಕೊಡುವವರ್ಯಾರು? ಹುಟ್ಟೂರಿನಲ್ಲಿಯೇ ಇಷ್ಟೊಂದು ಕಿರುಕುಳ ಇರಬೇಕಾದರೆ ಅ ಪರದೇಶದಲ್ಲಿ ಅದೆಷ್ಟ್ ಇರಬಾರದು? ನೀವು ಅಲ್ಲಿಗೆ ಹೋದಮೇಲೆ ನನ್ನ ಬಗ್ಗೆ ಚಿಂತಿಸಿ ತಾವು ಉಣ್ಣದೆ ದುಡ್ಡು ನನಗೆ ಕಳಿಸಲು ಹೋಗಬೇಡಿ. ನನ್ನ ಬಗ್ಗೆ ತಾವು ಯೋಚನೆ ಮಾಡಿಬೇಡಿ. ತಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ.” ಎಂದು ಹೇಳುವಾಗ ರಮಾಬಾಯಿಯವರ ಕಣ್ಣು ತುಂಬಿ ಬಂದಿದ್ದವು.

ಬಾಬಾಸಾಹೇಬರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ  ತಮ್ಮ ಅಭ್ಯಾಸದಲ್ಲಿ ನಿರಂತರಾದರೆ, ಈ ಕಡೆ ಮನೆಯಲ್ಲಿ ಘನ ಘೋರವಾದ ಬಡತನ ಕಾಡುತ್ತಿತ್ತು. ಮನೆಯಲ್ಲಿ ದುಡಿಯುವವರು ಆನಂದರಾವ್ ಒಬ್ಬರೇ ಆಗಿದ್ದರು. ತಾನೊಬ್ಬರ ದುಡಿಮೆಯಿಂದಲ್ಲೇ ಕುಟುಂಬದ  ಹದಿಮೂರು ಜನ ಸದಸ್ಯರ ಹೊಟ್ಟೆ ತುಂಬಿಸಲು ಆನಂದರಾವ್ ಅವರು ತುಂಬಾ ಕಷ್ಟಪಡುತ್ತಿದರು. ಇಂತಹ ಪರಿಸ್ಥಿತಿಯಲ್ಲಿ ಸ್ವಾಭಿಮಾನಿಯಾದ ರಮಾಬಾಯಿಯು ತಾನು ಗರ್ಭಿಣಿಯಾದರೂ ಸಹ ಸುಮಾರು ನಾಲ್ಕೈದು ಕಿಲೋಮೀಟರ್ ದೂರದವರೆಗೆ ಹೋಗಿ ಕಟ್ಟಿಗೆ ಕುಳ್ಳುಗಳನ್ನು ತಂದು ಮಾರಾಟ ಮಾಡಿ ಕುಟುಂಬದ ಬೇಕು-ಬೇಡಗಳನ್ನು ನೋಡಿಕೊಳ್ಳುತ್ತ ಆನಂದರಾವರಿಗೆ ನೆರವಾಗುತ್ತಿದ್ದಳು. ಇದೇ ವೇಳೆಗೆ ಜನಿಸಿದ ಎರಡನೇ ಮಗು ರಮೇಶ ಅನಾರೋಗ್ಯದಿಂದ ತಂದೆಯ ಮುಖ ನೋಡದೆ ಸತ್ತುಹೋಯಿತು. ಇದರಿಂದ ರಮಾಬಾಯಿ ಅವರಿಗೆ ತೀವ್ರ ನೋವುಂಟಾದರು ಸಹ ತನ್ನಲ್ಲಿ ತಾ ಧೈರ್ಯ ತಂದುಕೊಂಡು, ಈ ವಿಷಯ ಎಲ್ಲಿ ಬಾಬಾಸಾಹೇಬರಿಗೆ ತಿಳಿಸಿದ್ದರೆ ಅವರ ಓದಿಗೆ ತೊಂದರೆ ಆಗಬಹುದೆನ್ನೂ  ಎಂದು ತಡವಾಗಿ ಪತ್ರ ಬರೆದು ತಿಳಿಸುತ್ತ ಹೀಗೆ ಹೇಳುತ್ತಾರೆ; “ನಾನು ನಿಮ್ಮಗೆ ಅತ್ಯಂತ ನೋವು ಮತ್ತು ಸಂಕಷ್ಟದಿಂದ ಒಂದು ವಿಷಯವನ್ನು ತಿಳಿಸುತ್ತಿರುವೆ, ನಮ್ಮ ಎರಡನೇ ಮಗ ರಮೇಶ ನಮ್ಮನು ಬಿಟ್ಟು ಹೋದ. ನಮ್ಮ ಕರುಳಿನ ಕುಡಿಯೊಂದು ನಿಮ್ಮ ಅನುಪಸ್ಥಿತಿಯಲ್ಲಿ  ಕಳಚಿಹೋಯಿತು. ಇಂತಹ ಆಘಾತಕಾರಿ ಸುದ್ದಿಯನ್ನು ನಿಮಗೆ ನಾನು ತಡವಾಗಿ ತಿಳಿಸುತ್ತಿದ್ದೇನೆ. ನಮ್ಮ ಬದುಕಿನಲ್ಲಿ ನಮಗೆ ಎದುರಾದ ಅದೆಷ್ಟೋ ನೋವು ಯಾತನೆಗಳಲ್ಲಿ ಇದು ಕೂಡ ಒಂದು. ಈ ಸಂಕಷ್ಟಗಳನ್ನೆಲ್ಲ ನನಗೆ ಬಿಡಿ. ಅಧ್ಯಾಯದಲ್ಲಿ ಮುಳುಗಿರುವ ನಿಮ್ಮ ಮನಸ್ಸನ್ನು ವಿಚಲಿತಗೊಳಿಸಬಾರದೆಂದೇ ನಾನು ಆತನ ಅನಾರೋಗ್ಯವನ್ನು ನಿಮಗೆ ತಿಳಿಸಲಿಲ್ಲ. ನೀವು ನಿಮ್ಮ ಅಭ್ಯಾಸಕ್ಕೆ ತೊಂದರೆ ತಂದುಕೊಳ್ಳಬೇಡಿ. ನಿಮ್ಮ ಅಭ್ಯಾಸದೊಳ್ಳಗೆ ಈ ನೆಲದ ಶೋಷಿತರ ಹಿತವಿದೆ. ಕಳೆದು ಹೋದ ಒಬ್ಬ ಮಗನ ಬಗ್ಗೆ ಚಿಂತಿಸಬೇಡಿ. ಕೋಟ್ಯಂತರ ಶೋಷಿತರ ಮಕ್ಕಳು ಕೂಡ ನಮ್ಮ ಮಕ್ಕಳೇ ಅಲ್ಲವೆ?” ಎಂದು ಬರೆಯುತ್ತಾರೆ. ಇಂತಹ ದುಃಖದ ಪರಿಸ್ಥಿತಿಯಲ್ಲಿಯೂ ತಾನು ಧೃತಿಗೆಡದೆ ಮಗನ ಸಾವಿನ ವಿಚಾರ ತನ್ನಲ್ಲಿಯೇ ಇಟ್ಟುಕೊಂಡು ಅ ತಾಯಿ ಎಷ್ಟೊಂದು ಸಂಕಷ್ಟ ಅನುಭವಿಸಿರಬಹುದು? ಎಷ್ಟೇ ಧೈರ್ಯ ತಂದುಕೊಂಡರು ಮಗನ ಚಿತ್ರ ಮಾತ್ರ ಕಣ್ಣಿನಲ್ಲಿ ಕಾಣಿಸಿಕೊಂಡು ಕಣ್ಣೀರಧಾರೆಗೆ ಕಾರಣವಾಗುತ್ತಿತ್ತು.

ಕ್ರಿ.ಶ 1917 ರಲ್ಲಿ ಬಾಬಾಸಾಹೇಬರು ವಿದೇಶದಿಂದ ಭಾರತಕ್ಕೆ ಮರಳಿ ಬಂದರು. ದುಃಖದ ಮಡುವಿನಲ್ಲಿ ಮುಳುಗಿ ಹೋದ ರಮಾಬಾಯಿ ಅವರಿಗೆ ಅತ್ಯಂತ ಆನಂದವಾಯಿತು. ಮಗನ ಮರಣದ ನೆನಪಿನಿಂದ ಹೊರಬರುವಷ್ಟರಲ್ಲಿಯೇ, ಬಾಬಾಸಾಹೇಬರ ಮಲತಾಯಿ ಜೀಜಾಬಾಯಿ ತೀರಿಕೊಂಡಳು. ಇದರಿಂದ ಮತ್ತೆ ದುಃಖ ರಮಾಬಾಯಿಯವರ ಬೆನ್ನಿಗೆ ಬಿತ್ತು. ಬಾಬಾಸಾಹೇಬರ ಮಲತಾಯಿ ತೀರಿಕೊಂಡ ಕೆಲವು ತಿಂಗಳ ನಂತರ ರಮಾಬಾಯಿಯು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಇದರಿಂದ ಸಂತೋಷಗೊಂಡ ದಂಪತಿಗಳಿಬ್ಬರು ಮಗುವಿಗೆ ‘ಇಂದು’ ಎಂದು ಹೆಸರಿಟ್ಟರು. ಮಗುವಿನ ತುಂಟಾಟಗಳಿಂದ ಎಲ್ಲಾ ನೋವುಗಳನ್ನು ಮರೆಯುತ್ತಿದ ವೇಳೆಗೆ,  ಮಗು ಒಂದುವರೆ ವರ್ಷದಿಂದಾಗ ಅನಾರೋಗ್ಯಕ್ಕೆ ತುತ್ತಾಗಿ ಮರಣ ಹೊಂದಿತ್ತು. ಅಳುನುಂಗಿ ನಗಬೇಕೆನ್ನುವಷ್ಟರಲ್ಲಿ ಬಾಬಾಸಾಹೇಬರ ಅಣ್ಣ ಆನಂದರಾವ್ ಅವರು ವಿಧಿವಶರಾದರು.  ಆನಂದರಾವ್ ಅವರ ಸಾವಿನ ಕೆಲವೇ ದಿನಗಳ ನಂತರ ಆತನ ಮಗ ಕೊನೆಯುಸಿರೆಳೆದ. ಆನಂದರಾವರ ಹೆಂಡತಿ ಲಕ್ಷ್ಮಿಯು ಕಂಗಾಲಾದಳು. ಒಂದರಮೇಲೊಂದು ಸರಣಿ ಸಾವುಗಳನ್ನು ಕಂಡ ರಮಾಬಾಯಿಯವರ ಕಣ್ಣೀರು ಬತ್ತಿ ಹೋಗಿದ್ದವು. ಲಕ್ಷ್ಮಿಯ ಸಂಸಾರದ ಭಾರ ಕೋಡ ರಮಾಬಾಯಿಯವರ ಹೆಗಲೇರಿತಾದರು ಸಹ ಎದೆಗುಂದಲಿಲ್ಲ.

ಕ್ರಿ.ಶ 1918 ರಲ್ಲಿ ಲಾರ್ಡ್ ಸಿಡನ್ ಹ್ಯಾಮ್ ಅವರ ಮೂಲಕ ಮುಂಬೈ ಸರಕಾರಿ ಸಿಡನ್ ಹ್ಯಾಮ್ ಕಾಲೇಜಿನಲ್ಲಿ ಬಾಬಾಸಾಹೇಬರು ಪ್ರೊಫೆಸರ್ ಆಗಿ ನೇಮಕಗೊಂಡರು. ಬಾಬಾಸಾಹೇಬರು ಪ್ರೊಫೆಸರ್ ಆಗಿರುವುದರಿಂದ ರಮಾಬಾಯಿಯವರಿಗೆ ಅತ್ಯಾನಂದವಾಯಿತು. ಇನ್ನು ಮುಂದೆ ನಮ್ಮ ಸಂಸಾರ ತುಂಬಾ ಸುಖಮಯವಾಗಿ ನಡೆಯುವುದೆಂದು ಕೊಂಡಿದ್ದರು. ಪಾಪ ಅವರಿಗೇನು ಗೊತ್ತು! ಬಾಬಾಸಾಹೇಬರ ಮನದಲ್ಲಿ ಲಂಡನ್ನಲ್ಲಿ ಅಪೂರ್ಣವಾಗಿ ಉಳಿದ ಶಿಕ್ಷಣವನ್ನು ಪೂರ್ಣ ಮಾಡಿ ಹೆಚ್ಚಿನ ಜ್ಞಾನ ಸಂಪಾದನೆ ಮಾಡುವುದರ ಜೊತೆಗೆ ಈ ದೇಶದ ಶೋಷಿತ ಜನಾಂಗವನ್ನು ಮೇಲೆತ್ತಬೇಕೆಂಬ ಪ್ರಕಾರವಾದ ಜ್ವಾಲೆ ಉರಿಯುತ್ತಿರುವ ವಿಷಯ.

ಕ್ರಿ.ಶ 1920 ರಲ್ಲಿ ಬಾಬಾಸಾಹೇಬರು ತಮ್ಮ ಅಪೂರ್ಣಗೊಂಡ ಶಿಕ್ಷಣ ಮುಂದುವರಿಸಲು ಲಂಡನ್ನಿಗೆ ಹೋಗಲು ತಯಾರಾದರು. ಆಗ ರಮಾಬಾಯಿಯವರು ಮತ್ತೆ ಗರ್ಭಿಣಿಯಾಗಿದ್ದರೂ. ಜೊತೆಗೆ ಸಂಸಾರದ ಭಾರ ಕೂಡ ಅವರ ಮೇಲೆಯೇ ಇತ್ತು. ಕ್ರಿ.ಶ 1920 ಜುಲೈ ತಿಂಗಳಿನಲ್ಲಿ ಬಾಬಾಸಾಹೇಬರು ಲಂಡನ್ನಿಗೆ ಹೋದರು. ಈ ವೇಳೆಗೆ ಜನಿಸಿದ ಮಗು ಗಂಗಾಧರನ್ನು ಅಪೌಷ್ಟಿಕತೆಯಿಂದ ಅನಾರೋಗ್ಯಕ್ಕೆ ಈಡಾಗಿ ತಂದೆಯ ಮುಖ ನೋಡದೆ ತೀರಿಕೊಂಡನು. ಈ ವಿಷಯವನ್ನು ಬಾಬಾಸಾಹೇಬರಿಗೆ ತಿಳಿಸಿದಾಗ ತುಂಬಾ ದುಃಖಪಟ್ಟು ಪತ್ರದ ಮೂಲಕವೇ ರಮಾಬಾಯಿ ಅವರನ್ನು ಸಂತೈಸಿದರು.

ಬಾಬಾಸಾಹೇಬರು ಎರಡನೇ ಸಲ ವಿದೇಶಕ್ಕೆ ಹೋದಾಗ ತನ್ನ ಸಂಸಾರದೊಂದಿಗೆ ವಿಧವೆ ನೆಗೆಣಿ ಲಕ್ಷ್ಮಿ ಮತ್ತವಳ ಮಕ್ಕಳ ಭಾರ ಕೂಡ ರಮಾಬಾಯಿಯವರ ಮೇಲೆಯೇ ಬಿದ್ದಿತ್ತು. ಈ ವೇಳೆಗೆ ನಾಲ್ಕೈದು ಕಿಲೋಮೀಟರ್ ದೂರದವರೆಗೆ ಹೋಗಿ, ಕಟ್ಟಿಗೆ ಕುಳ್ಳುಗಳನ್ನು ಆರಿಸಿ ತಂದು ಮಾರಾಟ ಮಾಡಿ ಬಂದ ದುಡ್ಡಿನಿಂದ ಕುಟುಂಬದ ಬೇಕು-ಬೇಡಗಳನ್ನು ಪೂರೈಸುತ್ತಾ, ರೋಗಕ್ಕೆ ತುತ್ತಾದ ಮಕ್ಕಳನ್ನು ಆರೈಕೆ ಮಾಡುತ್ತಾ, ತಾನು ಒಂದೊಂದು ಸಲ ಅರ್ಧ ಹೊಟ್ಟೆಯಲ್ಲೇ ಉಂಡು, ಮತ್ತೆ ಕೆಲವು ಸಲ ನೀರು ಕುಡಿದೆ ಮಲಗಿ ಕಾಲಕಳೆಯುತ್ತಿದ್ದರೆ ವಿನಹಾ, ಯಾರ ಮೇಲೆಯೂ ಸಿಟ್ಟಾಗಲಿಲ್ಲ. ಯಾರನ್ನು ಮೇಲೆಯೂ ಕೋಪಿಸಿಕೊಳ್ಳುಲ್ಲಿಲ. ಈ ತಾಯಿ ಅಷ್ಟೊಂದು ತ್ಯಾಗಮಯಿ ಆಗಿದ್ದಳು. ಈ ಭೂಮಿಯಷ್ಟೇ ಸಹನೆ ರಮಾಬಾಯಿ ಅವರಲ್ಲಿತ್ತು.

ಕ್ರಿ.ಶ 1923 ರಲ್ಲಿ ಬಾಬಾಸಾಹೇಬರು ಬ್ಯಾರಿಸ್ಟರರಾಗಿ ಭಾರತಕ್ಕೆ ಬರುತ್ತಿರುವ ಸುದ್ದಿಯನ್ನು ತಿಳಿದು ಜನಸಾಮಾನ್ಯರೆಲ್ಲ ಅವರನ್ನು ಸ್ವಾಗತಿಸಲು ಅತ್ಯಂತ ಸಂಭ್ರಮದಿಂದ ನೆರೆದಿದ್ದರು. ಹರಿದ ಸೀರೆಯನ್ನುಟ್ಟು ಗಂಡನನ್ನು ಸ್ವಾಗತಿಸುವ ಸಮಾರಂಭಕ್ಕೆ ಹೇಗೆ ಹೋಗುವುದೆಂದು ಯೋಚನೆಯಲ್ಲಿ ಮುಳುಗಿದ್ದ ರಮಾಬಾಯಿಯವರ ಕಷ್ಟವನ್ನು ಅರಿತ ಬಾಬಾಸಾಹೇಬರ ಸಹೋದರಿಯರ ಸಂಬಂಧಿ ಬಾಳರಮಾ ಅವರು ಸೀರೆ ಖರೀದಿಸಲು ಹಣ ನೀಡಿದರು. ಆ ಹಣದಿಂದ ತನಗಾಗಿ ಸೀರೆ ಖರೀದಿಸದೆ, ಗಂಡನಿಗಾಗಿ ಒಂದು ಪಂಚೆ ಮಲಗಲು ಗಾದಿ ಖರೀದಿಸಿ, ಈ ಹಿಂದೆ ಛತ್ರಪತಿ ಶಾಹು ಮಹಾರಾಜರು ಬಾಬಾಸಾಹೇಬರಿಗೆ ಸನ್ಮಾನಿಸಿದ ಜರಿಯಂಚಿನ ಪಟಗಾವನೆ ಸೀರೆಯಂತೆ ಹುಟ್ಟಿಕೊಂಡು ಬಾಬಾಸಾಹೇಬರಿಗೆ ಸ್ವಾಗತಿಸುತ್ತಿರುವ ಸ್ಥಳಕ್ಕೆ ಹೋದರೂ ಕೊಡ ಗಂಡನ ಬಳಿಗೆ ಹೋಗದೆ ದೂರದಲ್ಲಿ ಜನಗಳ ಮಧ್ಯೆ ನಿಂತು ಬಾಬಾಸಾಹೇಬರನ್ನು ನೋಡಿ ಆನಂದಿಸುತ್ತಿದ್ದರು.

ಬಾಬಾಸಾಹೇಬರು ಮನೆಗೆ ಬಂದ ನಂತರ ತಾನು ಸಂಪಾದಿಸಿದ ಡಿಗ್ರಿಗಳ ಬಗ್ಗೆ ರಮಾಬಾಯಿ ಅವರಿಗೆ ಹೇಳಿದಾಗ, ರಮಾಬಾಯಿಯವರು ಬಾಬಾಸಾಹೇಬರಿಗೆ ಅಂದಿದ್ದೇನೆಂದರೆ; “ಇನ್ಮೇಲೆ ಮತ್ತೆ ಯಾವ ಡಿಗ್ರಿಯ ಸಲುವಾಗಿ ಲಂಡನ್ನಿಗೆ ಹೋಗೋದಿಲ್ಲ ತಾನೇ?” ಎಂದು ಆಗ ಬಾಬಾಸಾಹೇಬರು ‘ಇಲ್ಲ’ ಎಂದುತ್ತರಿಸಿದಾಗ ರಮಾಬಾಯಿ ಅವರಿಗೆ ಎಷ್ಟೊಂದು ಖುಷಿಯಾಯಿತು ಎಂದು ಊಹಿಸುವುದಕ್ಕೆ ಸಾಧ್ಯವಿಲ್ಲ.

ವಿದೇಶದಿಂದ ಹಿಂದಿರುಗಿ ಬಂದ ನಂತರ ಸಮಾಜ ಸೇವೆ ಹೋರಾಟಗಳಲ್ಲಿ ತೊಡಗಿದ್ದ ಬಾಬಾಸಾಹೇಬರಿಗೆ ಅ ತಾಯಿ ತೊಂದರೆ ಕೊಡಲಿಲ್ಲ. ಬೇಸರ ಪಟ್ಟುಕೊಳ್ಳಲಿಲ್ಲ. ಅವರ ಪ್ರತಿಯೊಂದು ಕಾರ್ಯಗಳಿಗೆ ತಾಯಿಯಂತೆ ನೆರಳಾಗಿ ಪ್ರೋತ್ಸಾಹ ನೀಡುತ್ತಿದ್ದರು. ಕಷ್ಟದ ಸಮಯದಲ್ಲಿ ಗೆಳತಿಯಾಗಿ ಪರಿಹಾರ ಸೂಚಿಸುತ್ತಿದಳು. ಈ ತಾಯಿ ಬಾಬಾಸಾಹೇಬರನ್ನು ಹೇಗೆ ಅರ್ಥ ಮಾಡಿಕೊಂಡಿದ್ದರು ಎಂದರೆ, ಬಾಬಾಸಾಹೇಬರರೇ ಹೇಳುವಂತೆ; “ಮಹಾಡ ಕೆರೆಯ ಸತ್ಯಾಗ್ರಹ ಸಂದರ್ಭದಲ್ಲಿ ನನ್ನ ಕೊನೆಯ ಮಗ ರಾಜರತ್ನ ತೀರಿಕೊಂಡಾಗ  ಪಾಥಿರ್ವ ಶರೀರಕ್ಕೆ ಹೊಸ ಬಟ್ಟೆ ಹಾಕಲು ಜನ ಹಣ ಕೇಳಿದಾಗ ಅ ದಿನ ನನ್ನಲಿ ಅಷ್ಟೊಂದು ಹಣ ಇರಲಿಲ್ಲ. ಆಗ ನನ್ನ ರಮಾ ತನ್ನ ಹರಿದ ಸೀರೆಯ ಪಾರ್ಥಿವ ಶರೀರದ ಮೇಲೆ ಹಾಕಿದಳು ನಂತರ ಶವ ಸಂಸ್ಕಾರ ಮಾಡಲಾಯಿತು. ಇಂತಹ ಸ್ಥಿತಿ ಭಾರತದ ಯಾವ ನಾಯಕನಿಗೂ ಬಂದಿರಲಿಕ್ಕಿಲ್ಲ. ಆದರೂ ನಾನು ಯಾರಿಗೆ ಮಾರಾಟವಾಗಲ್ಲಿಲ.” ಈ ನಿದರ್ಶನವು ರಮಾಬಾಯಿ ಅವರು ಬಾಬಾಸಾಹೇಬರಿಗೆ ಎಷ್ಟೊಂದು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು ಎಂದು ತಿಳಿಸುತ್ತದೆ. ತನ್ನ ಗಂಡನ ಗೌರವಕ್ಕೆ ಎಳ್ಳಷ್ಟೂ ಚ್ಯುತಿ ಬರದಂತೆ ಕಾಪಾಡಿದ ಮಹಾಸತಿ ರಮಾಬಾಯಿ.

ಬಾಬಾಸಾಹೇಬರು ತಮ್ಮ ಬ್ಯಾರಿಸ್ಟರ್ ಕೆಲಸದಿಂದ ಹಣ ಸಂಪಾದಿಸಿ ಕಾರೊಂದನ್ನು ಖರೀದಿಸಿದರು. ಒಮ್ಮೆ ಬಾಬಾಸಾಹೇಬರು ಕೋರ್ಟಿನಿಂದ ಮನೆಗೆ ಬಂದಾಗ ರಮಾಬಾಯಿ ಅವರು ಹರಿದ ಸೀರೆಯನ್ನು ಹೊಲಿದುಳ್ಳುತ್ತಿರುವುದನ್ನು ಕಂಡು ಕೋರ್ಟಿನ ಕೆಲಸ ಮತ್ತು ಸಮಾಜ ಕಾರ್ಯದ ಒತ್ತಡದಿಂದಾಗಿ ರಮಾಳ ಬೇಕು-ಬೇಡಗಳ ಕಡೆ ಗಮನ ಕೊಡದೆ ಹೋದೆನಲ್ಲಾ ಎಂದು ಮರುಗಿ ಪ್ರೀತಿಯಿಂದ ರಮಾಬಾಯಿ ಅವರನ್ನು ಕರೆದು ಕಾರಿನಲ್ಲಿ ಕುಡಿಸಿಕೊಂಡು ಸೀರೆ ಖರೀದಿಸಲು ಅಂಗಡಿಗೆ ಹೋಗುತ್ತಿರುವ ವೇಳೆ ರಮಾಬಾಯಿ ಅವರು ಬಾಬಾಸಾಹೇಬರನ್ನು ಎವೆಯಿಕ್ಕದೆ ನೋಡುತ್ತಿದ್ದರು. ಅಂಗಡಿಯಲ್ಲಿ “ರಮಾ ನಿನ್ನಗೆ ಇಷ್ಟವಾದ ಸೀರೆ ಅರಿಸಿಕೊ” ಎಂದರೂ ಕೂಡ, ಬಾಬಾಸಾಹೇಬರನೆ ದಿಟ್ಟಿಸಿನೋಡುತ್ತಿರುವ ರಮಾಬಾಯಿ ಅವರನ್ನು ಬಾಬಾಸಾಹೇಬರು ಗದರಿಸಿದಾಗ; “ತುಂಬಾ ದಿನಗಳ ನಂತರ ಇದೆ ಮೊದಲ ಬಾರಿಗೆ ನಿಮ್ಮನ್ನು ಇಷ್ಟೋಂದು ಹತ್ತಿರದಿಂದ ನೋಡುವ ಸದಾವಕಾಶ ಸಿಕ್ಕಿದೆ. ನಿವೇ ನನ್ನ ಸರ್ವಸ್ವ ಆದಮೇಲೆ ನನಗೆ ಯಾವ ಸೀರೆಯಾದರೆನ್ನು? ನಿವೇ ನೋಡಿ” ಎಂದಳಂತೆ. ಇಂತಹ ಉದಾರವಾದ ಸ್ವಚ್ಛಂದ ನಿರ್ಮಲಾ ಮನಸ್ಸಿನವರು ಇಗೆಷ್ಟು ಜನರಿದ್ದಾರೆ ಹೇಳಿ?

ತಮ್ಮ ಪ್ರೀತಿಯ ಪತ್ನಿ ರಮಾಬಾಯಿಯವರ ಕುರಿತು ಬಾಬಾಸಾಹೇಬರು ತಾವೇ ಸ್ಥಾಪಿಸಿದ ‘ಬಹಿಷ್ಕೃತ ಭಾರತ ಪತ್ರಿಕೆಯಲ್ಲಿ’ ಸಂಪಾದಿಕ ಲೇಖನ ಬರೆಯುತ್ತಾ; “ನಾನು ಶಿಕ್ಷಣ ಪಡೆಯುವ ದಿನಗಳಲ್ಲಿ ಸುಖ, ಸಂತೋಷ, ನೆಮ್ಮದಿ ಯಾವುದರ ಬಗ್ಗೆಯೂ ನಾನು ತಲೆಕೆಡಿಸಿಕೊಳ್ಳದ ಸಮಯದಲ್ಲಿ, ಸಂಸಾರದ ನೋವು ಸ್ವಲ್ಪವೂ ತಿಳಿಯದಂತೆ ನನ್ನನ್ನು ಕಾಪಾಡಿದ್ದು  ರಮಾಬಾಯಿ” ಎಂದು ರಮಾಬಾಯಿ ಅವರ ತ್ಯಾಗದ ಬಗ್ಗೆ ತಮ್ಮ ಅನುಯಾಯಿಗಳಿಗೆ ತಿಳಿಸುತ್ತಾರೆ.

ಸತತ ದುಡಿಮೆಯಿಂದಾಗಿ ರಮಾಬಾಯಿ ಅವರ ಆರೋಗ್ಯ ತುಂಬಾ ಹದಗೆಟ್ಟಿತು. ಎಷ್ಟೇ ಚಿಕಿತ್ಸೆ ನೀಡಿದರು ಅವರ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಇದ್ದಾಗ ಬಾಬಾಸಾಹೇಬರ ಹಿತೈಸಿಗಳಾದ ವರಾಳೆ ಎನ್ನುವವರು ಸೊಲ್ಲಾಪುರ ಜಿಲ್ಲೆಯ ಬಾವಿ ಎಂಬಲ್ಲಿ ಕೆಲವು ದಿನಗಳಕಾಲ ಆಯುರ್ವೇದಿಕ ಚಿಕಿತ್ಸೆ ಕೊಡಿಸುತ್ತಾರೆ. ರಮಾಬಾಯಿಯವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡು ಬರುತ್ತದೆ. ಈ ವೇಳೆಗೆ ಬಾಬಾಸಾಹೇಬರು ಕ್ರಿ.ಶ 1930 ಅಕ್ಟೋಬರ್ 4 ರಂದು ಮೊದಲನೇ ದುಂಡು ಮೇಜಿನ ಪರಿಷತ್ತಿಗೆ ಹಾಜರಾಗಲು ಲಂಡನ್ನಿಗೆ ತೆರಳುತ್ತಾರೆ. ಈಕಡೆ ವರಾಳೆ ದಂಪತಿಗಳು ರಮಾಬಾಯಿ ಅವರನ್ನು ನಮ್ಮ ಕರ್ನಾಟಕದ ಧಾರವಾಡಕ್ಕೆ ಕರೆದುಕೊಂಡು ಬರುತ್ತಾರೆ. ಧಾರವಾಡದ ಕೊಪ್ಪದ ಕೇರಿಯಲ್ಲಿ ಡಾ.ಪರಾಂಜಪೆ ಅನ್ನುವ ಆಯುರ್ವೇದ ಪಂಡಿತರು ರಮಾಬಾಯಿ ಅವರಿಗೆ ಚಿಕಿತ್ಸೆ ನೀಡುತ್ತಾರೆ. ಇಲ್ಲಿನ ವಾತಾವರಣ ಮತ್ತು ಚಿಕಿತ್ಸೆ ಒಳ್ಳೆಯದೆನಿಸಿ ರಮಾಬಾಯಿಯವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬರುತ್ತದೆ.

ಈ ಮೊದಲು ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ಕ್ರಿ.ಶ 1929 ರಲ್ಲಿ ಧಾರವಾಡದಲ್ಲಿ  ‘ಡಾ.ಬಿ.ಆರ್. ಅಂಬೇಡ್ಕರ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ‘ (ಕ್ರಿ.ಶ 1984 ರಲ್ಲಿ ಬುದ್ಧ ರಕ್ಕಿತ ವಸತಿ ಶಾಲೆ ಎಂದು ಮರುನಾಮಕರಣ ಮಾಡಲಾಗಿದೆ.) ಸ್ಥಾಪಿಸಿದರು. ಅದಕ್ಕೆ ವರಾಳೆಯವರೆ ವಾರ್ಡನ್ ಆಗಿದ್ದರು. ರಮಾಬಾಯಿಯವರು ಚಿಕಿತ್ಸೆಯಿಂದ ಸ್ವಲ್ಪ ಚೇತರಿಕೆ ಕಂಡಾಗ, ಬುದ್ಧರಕ್ಕಿತ ವಸತಿ ನಿಲಯಕ್ಕೆ ಭೇಟಿ ನೀಡುತ್ತಾರೆ. ಅಲ್ಲಿ ವಸತಿ ಗೃಹದ ಹುಡುಗರ ಬಾಡಿದ ಮುಖಗಳನ್ನು ಕಂಡು ಇವರಿಗೆ ಸರಿಯಾಗಿ ಊಟ ಸಿಗುತ್ತಿಲ್ಲ ಎನ್ನುವುದು ಅರಿವಾಗಿ ವರಾಳೆಯವರನ್ನು ವಿಚಾರಿಸಿದಾಗ “ಸರಕಾರದಿಂದ ಅನುಧಾನ ಬಂದಿಲ್ಲ. ಹಿಂದಿನ ಬಾಕಿ ಹಣ ತೀರಿಸುವ ವರೆಗೆ ಅಂಗಡಿಯವರು ದವಸ ಧಾನ್ಯ ನೀಡುವುದಿಲ್ಲಯಂದು ನೀಡುತ್ತಿಲ್ಲ.” ಎಂಬ ವಿಷಯ ವರಾಳೆಯವರು ತಿಳಿಸಿದಾಗ; “ಈ ವಸತಿ ನಿಲಯ ಅವರು(ಬಾಬಾಸಾಹೇಬರು) ಸ್ಥಾಪಿಸಿದ್ದು, ಇಲ್ಲಿರುವ ಎಲ್ಲಾ ಮಕ್ಕಳು ನನ್ನ ಮಕ್ಕಳೆ ಇವರ ತಾಯಿಯಾದ ನಾನು ಇವರುಗಳು ಹಸಿದುಕೊಂಡು ಇರುವುದನ್ನು ನೋಡಿ ನಾ ಹೇಗೆ ಸುಮ್ಮನಿರಲಿ” ಎಂದು, ಕೂಡಲೇ ತಮ್ಮ ಕೈಗಳಲಿದ್ದ ನಾಲ್ಕು ಬಂಗಾರದ ಬಳೆಗಳನ್ನು ವರಾಳೆಯವರಿಗೆ ನೀಡಿ “ಇದನ್ನು ಮಾರಿ ರೇಷನ್ ತೆಗೆದುಕೊಂಡು ಬನ್ನಿ” ಎಂದು ರೇಷನ್ ತರುಸಿ ತಾವೇ ಮುಂದೆ ನಿಂತು ಅಡಿಗೆ ಮಾಡಿ ಮಕ್ಕಳಿಗೆ ಊಣಬಡಿಸುತ್ತಾರೆ. ಅ ತಾಯಿಯಲ್ಲಿ ಅಷ್ಟೊಂದು ತಾಯ್ತನದ ಮಮತೆ ಮತ್ತು ಕರುಣೆಯ ಸೆಲೆ, ತ್ಯಾಗದ ಭಾವವಿತ್ತು.

ಜೀವನದುದ್ದಕ್ಕೂ ಬರೀ ಕಷ್ಟ ನೋವು ಯಾತನೆಗಳಲ್ಲಿನೆ ಅನುಭವಿಸಿದ ರಮಾಬಾಯಿಯವರು ಕ್ಷಯರೋಗದಿಂದ ಬಳಲುತ್ತಿದ್ದರು. ಈ ನೆಲದ ಶೋಷಿತರ ಬಗ್ಗೆ ಯೋಚಿಸುತ್ತಾ ತನ್ನ ಬಗ್ಗೆ ಯೋಚಿಸುವುದೇ ಮರೆತ ಅ ತಾಯಿಯ ಆರೋಗ್ಯ ದಿನದಿಂದ ದಿನಕ್ಕೆ ಮತ್ತಷ್ಟು ಹದಗೆಡುತ್ತ ಹೋಯಿತು. ಮುಂಬೈಯಲ್ಲಿನ ರಾಜಗೃಹ ಎನ್ನುವ ತಮ್ಮ ಮನೆಯಲ್ಲಿ ಕ್ರಿ.ಶ 1935  ಮೇ 27 ರಂದು ಸಾವನ್ನಪ್ಪಿದ್ದರು. ತನ್ನ ಎಲ್ಲ ಬಗೆಯ ಚಟುವಟಿಕೆಗಳಿಗೆ ಬೆಂಬಲವಾಗಿದ್ದ ರಮಾಬಾಯಿಯವರ ಸಾವಿನಿಂದಾಗಿ ಬಾಬಾಸಾಹೇಬರ ಮನಸ್ಸಿಗೆ ತೀವ್ರವಾದ ನೋವನು ತಂದಿತು. “ಸಮಾಜ ಸೇವೆ, ಹೋರಾಟ, ಬರಹ, ಭಾಷಣಗಳಲ್ಲಿ ತೊಡಗಿಸಿಕೊಂಡು ರಮಾಳ ಆರೋಗ್ಯದ ಕಡೆ ಗಮನಹರಿಸದೆ ಹೋದೆನಾಲ್ಲ.” ಎಂದು ಬಿಕ್ಕಿ ಬಿಕ್ಕಿ ಅತ್ತರು. ರಮಾಬಾಯಿ ಹಾಗೂ ಬಾಬಾಸಾಹೇಬರ ಅನ್ಯೋನ್ಯತೆ ಎಷ್ಟಿತ್ತು ಎಂದರೆ, ಸತತ ಒಂದು ವಾರಗಳ ಕಾಲ ನಿರಂತರವಾಗಿ ರಮಾಬಾಯಿಯವರ ನೆನಪಿನಲ್ಲಿ ಬಾಬಾಸಾಹೇಬರಿಗೆ ಕಣ್ಣೀರು ಧಾರೆಯಾಗಿಯಾಗಿ ಸುರಿಯುತ್ತಿತ್ತು.

ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ಕ್ರಿ.ಶ 1945 ರಲ್ಲಿ ‘Thoughts on pakistan’ ಎಂಬ ವಿದ್ವತಪೂರ್ಣ ಗ್ರಂಥವನ್ನು ಬರೆಯುತ್ತಾರೆ. ಅ ಗ್ರಂಥವನ್ನು ತಮ್ಮ ಪ್ರೀತಿಯ ಪತ್ನಿ ರಮಾಬಾಯಿಯವರಿಗೆ ಸಮರ್ಪಿಸುತ್ತಾ; “ಆಕೆಯ ಹೃದಯ ಸೌಜನ್ಯತೆ ಹಾಗೂ ಪರಿಶುದ್ಧ ಶೀಲ ಮತ್ತು ನಮಗೆ ಯಾವುದೇ ಹಿತ ಚಿಂತಕರು ಇಲ್ಲದ ಅ ದಿನಗಳಲ್ಲಿ ನಮ್ಮ ಪಾಲಿಗೆ ಬಂದ ಬಡತನ ಮತ್ತು ಕಷ್ಟಗಳಲ್ಲಿ ಶಾಂತಚಿತ್ತದಿಂದ ಮನಪೂರ್ವಕವಾಗಿ ನನ್ನನು ಸಂತೈಸುತ ಸಹಕರಿಸಿದ ರಮಾಗೆ ಈ ಕೃತಿ ಸಮರ್ಪಿತ” ಎಂದು ಅತ್ಯಂತ ಭಾವುಕರಾಗಿ ಬರೆದಿದ್ದಾರೆ.

ಜೀವನದುದ್ದಕ್ಕೂ ರಮಾಬಾಯಿ ಹಾಗೂ ಬಾಬಾಸಾಹೇಬರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹರಿದ ಕಣ್ಣೀರು, ಬಡತನದ ಕಾರ್ಗತ್ತಲೆ, ಕಷ್ಟಗಳ ಸರಮಾಲೆಗಳಿಗೆ ಲೆಕ್ಕಗಳೆ ಇಲ್ಲ. ಎಷ್ಟೇ ಕಷ್ಟ ನೋವುಗಳು ಬಂದರು ಕೂಡ ಬಾಬಾಸಾಹೇಬರ ಮನದಲ್ಲಿ ಧೈರ್ಯ, ಉತ್ಸಾಹದ ಸ್ಪೂರ್ತಿ, ಮಾನಸಿಕ ಬಲವನ್ನು ಹೆಚ್ಚಿಸುವುದರ ಮೂಲಕ ಬಾಬಾಸಾಹೇಬರನ್ನು ಈ ನೆಲದ ಕೋಟ್ಯಾನುಕೋಟಿ ಶೋಷಿತ ಜನರ ವಿಮೋಚಕರರಾಗಿ ನಿಲ್ಲುವಂತೆ ಮಾಡಿದ್ದರು. ನಿಜಕ್ಕೂ ಅ ತಾಯಿಯ ಚರಿತ್ರೆ ಇಂದಿನ ಜನಗಳಿಗೆ ಸ್ಪೂರ್ತಿದಾಯಕವಾದದ್ದು.

*ಅಶ್ವಜೀತ ದಂಡಿನ 

 

ಲೇಖನ ಓದಿ ಹಂಚಿ: 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!