• Sun. Sep 8th, 2024

ಎನ್.ಹೆಚ್.ಎಂ ಸಿಬ್ಬಂದಿಯಿಂದ ಮುಷ್ಕರ ಹಿನ್ನಲೆ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ನರಳಾಟ ಅರೆ ವೈಧ್ಯಕೀಯ ಸಿಬ್ಬಂದಿ, ವಿದ್ಯಾರ್ಥಿಗಳ ಪರದಾಟ !?

PLACE YOUR AD HERE AT LOWEST PRICE

ಆರೋಗ್ಯ ಇಲಾಖೆಯಲ್ಲಿ ನ್ಯಾಷನಲ್ ಹೆಲ್ತ್ ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಳಗುತ್ತಿಗೆ ನೌಕರರು ಕಳೆದ ೪ ದಿನಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೋರಾಟ ಹಮ್ಮಿಕೊಂಡಿದ್ದು, ಕೋಲಾರದ ಎಸ್.ಎನ್.ಆರ್. ಜಿಲ್ಲಾಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ವಿಶೇಷ ವೈದ್ಯಕೀಯ ಸಿಬ್ಬಂದಿ, ಆಯುಶ್ ವೈಧ್ಯಕೀಯ ಸಿಬ್ಬಂದಿ, ಅರೆ ವೈಧ್ಯಕೀಯ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ, ಕಚೇರಿ ಸಿಬ್ಬಂದಿ, ಆರೋಗ್ಯ ನಿರೀಕ್ಷಕರು, ೧೦೮ ಅಂಬುಲೆನ್ಸ್ ಸಿಬ್ಬಂದಿ ಸೇರಿದಂತೆ ಸುಮಾರು ೯೦ ಜನ ಹೋರಾಟದಲ್ಲಿ ಭಾಗವಹಿಸಲು ತೆರಳಿದ್ದಾರೆ.

ಇತ್ತ ಜಿಲ್ಲೆಯ ಬಡಜನರಿಗೆ ಆಸರೆಯಾಗಿರುವ ಏಕೈಕ ಜಿಲ್ಲಾಸ್ಪತ್ರೆಯಲ್ಲಿ ಏಕಾ ಏಕಿ ೯೦ಕ್ಕೂ ಹೆಚ್ಚು ಸಿಬ್ಬಂದಿ ಗೈರುಹಾಜರಿ ಆಗಿರುವ ಪರಿಣಾಮ ಆಸ್ಪತ್ರೆಯಲ್ಲಿ ರೋಗಿಗಳನ್ನು ನಿಭಾಯಿಸಲು ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಬುಧವಾರ ದಿನ ಇಡೀ ಆಸ್ಪತ್ರೆಯಲ್ಲಿ ರೋಗಿಗಳು ತುಂಬಿ ಹೋಗಿದ್ದರು.

ರೋಗಿಗಳನ್ನು ನೋಡಲು ಸಮೀಪದ ವೈದ್ಯಕೀಯ ಕಾಲೇಜಿನಿಂದ ವೈದ್ಯರುಗಳು ಇದ್ದರಾದರೂ, ಸೇವೆಗೆ ಅಗತ್ಯವಾಗಿರುವ ಇತರೆ ಸಿಬ್ಬಂದಿಗಳು ಇಲ್ಲವಾದ ಕಾರಣ ರೋಗಿಗಳಿಗೆ  ಸ್ಪಂಧಿಸಲು ತಾತ್ಕಾಲಿಕವಾಗಿ ಬಂದಿದ್ದ ಹೊಸ ನರ್ಸಿಂಗ್ ವಿದ್ಯಾರ್ಥಿಗಳು ಪರದಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಈ ವಿಷಯದಲ್ಲಿ ವಿದ್ಯಾರ್ಥಿಗಳನ್ನು ದೂರಲೂ ಆಗದ ಸ್ಥಿತಿಯಲ್ಲಿ ಸಾರ್ವಜನಿಕರು ಇರಬೇಕಾಯಿತು.

ತುರ್ತು ಚಿಕಿತ್ಸಾ ವಿಭಾಗದಲ್ಲಿ ತುರ್ತು ಚಿಕಿತ್ಸೆಗೆ ಅಂಬುಲೆನ್ಸ್ನಲ್ಲಿ ಬರುವ ರೋಗಿಗಳನ್ನು ಸಾಗಿಸಲು ಸಹ ಸಿಬ್ಬಂದಿ ಇರದೆ ರೋಗಿಯ ಕಡೆಯವರೇ ಸಾಗಿಸುತ್ತಿದ್ದರು, ಅಲ್ಲದೆ, ಕೆಲವು ರೋಗಿಗಳು ಒಳರೋಗಿಗಳಾಗಿ ದಾಖಲಾಗಲು ಸೂಕ್ತ ಮಾರ್ಗದರ್ಶನವಿಲ್ಲದೆ ಪರದಾಡಿದ ದೃಶ್ಯಗಳೂ ಕಂಡು ಬಂದ ಹಿನ್ನಲೆ ಕೆಲವು ಸಂಘ ಸಂಸ್ಥೆಗಳವರು ಮುಂದೆ ನಿಂತು ದಾಖಲು ಮಾಡಿಸುತ್ತಿದ್ದರು.

ಈಗಾಗಲೇ ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ವಿಧಾನಪರಿಷತ್ ಸದಸ್ಯ ಎಂ.ಎಲ್. ಅನಿಲ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿ ಸದನದಲ್ಲಿ ಸರ್ಕಾರದ ಗಮನ ಸೆಳೆದು ತಮ್ಮ ಬೇಡಿಕೆಗಳನ್ನು ಈಡೇರಿಸಲು ಕೋರಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಮುಷ್ಕರದ ಸ್ಥಳಕ್ಕೆ ಸರ್ಕಾರದ ಯಾವೊಬ್ಬ ಸರ್ಕಾರದ ಪ್ರತಿನಿಧಿಯೂ ಬಂದಿಲ್ಲವೆ0ದು ಆಕ್ರೋಶಗೊಂಡ ಹೋರಾಟಗಾರರು ತಮ್ಮ ಅನಿರ್ಧಿಷ್ಟ ಹೋರಾಟವನ್ನು ಮುಂದುವರೆಸಿದ್ದಾರೆ.

ಇಡೀ ಆಸ್ಪತ್ರೆಯ ಶೇ.೭೦ ರಷ್ಟು ಸಿಬ್ಬಂದಿ ಇದ್ದಕ್ಕಿದ್ದಂತೆ ಗೈರು ಹಾಜರಾಗಿದ್ದು, ರೋಗಿಗಳಿಗೆ ಆಗುವ ತೊಂದರೆಗಳಿಗೆ ಸರ್ಕಾರವೇ ಹೊಣೆ ಎಂದು ಹೋರಾಟದಲ್ಲಿ ಭಾಗಿಯಾಗಿರುವ ನೌಕರರು ಹೇಳುತ್ತಿದ್ದಾರೆ. ಇಡೀ ರಾಜ್ಯದಲ್ಲಿ ೩೦ ಸಾವಿರ ನೌಕರರು ಇದ್ದು ಎಲ್ಲರೂ ಒಂದೇ ಬಾರಿಗೆ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವುದರಿಂದ ಇದು ಕೊನೆಯಾಗುವುದು ಯಾವಾಗ, ಇದರಿಂದ ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಪರ್ಯಾಯವೇನು ಅನ್ನೋದು ಸರ್ಕಾರದ ಮುಂದಿರುವ ಸವಾಲಾಗಿದೆ.

ಜನ ಬೀದಿಗೆ ಬರಬೇಕಾಗುತ್ತೆ :
ಜಿಲ್ಲೆಗೆ ಇರುವ ಒಂದೇ ಸರ್ಕಾರಿ ಧರ್ಮಾಸ್ಪತ್ರೆ ಎಂದರೆ, ಅದು ಎಸ್.ಎನ್.ಆರ್. ಜಿಲ್ಲಾಸ್ಪತ್ರೆ. ಜಿಲ್ಲೆಯ ಎಲ್ಲಾ ಬಡವರಿಗೂ ಇದೊಂದೇ ಆಸರೆ, ಈಗ ಆರೋಗ್ಯ ಸೇವೆ ನೀಡುವ ಸಿಬ್ಬಂದಿಯ ಮುಷ್ಕರದಿಂದ ಜನರಿಗೆ ಆಗುತ್ತಿರುವ ತೊಂದರೆಗಳನ್ನು ಸರ್ಕಾರ ಕೂಡಲೇ ಪರಿಹರಿಸಬೇಕು. ಇದು ಹೀಗೇ ಮುಂದುವರೆದರೆ ಜನ ಬೀದಿಗೆ ಬರಬೇಕಾಗುತ್ತದೆ.

ಸೋಮಶೇಖರ್, ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ, (ಕದಂಬ ಸೇನೆ.).

Leave a Reply

Your email address will not be published. Required fields are marked *

You missed

error: Content is protected !!