• Mon. Sep 16th, 2024

ಕೋಲಾರ@ಗೋಬ್ಯಾಕ್ ಅಮುಲ್ ಹೋರಾಟಕ್ಕೆ ರೈತ ಸಂಘ ನಿರ್ಧಾರ ಏ.೧೩ ಸಂಸದರ ಕಚೇರಿಗೆ ಜಾನುವಾರ ಸಮೇತ ಮುತ್ತಿಗೆ

PLACE YOUR AD HERE AT LOWEST PRICE

ಕನ್ನಡಿಗರ ಆಸ್ತಿಯಾದ ನಂದಿನಿಯನ್ನು ಗುಜರಾತಿನ ಮಾರ್ವಾಡಿಗಳ ಅಮುಲ್ ಉತ್ಪನ್ನಗಳಿಗೆ ಅಡ ಇಡಲು ಹೊರಟಿರುವ ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಏ.೧೩ರ ಗುರುವಾರ ಜಾನುವಾರಗಳ ಸಮೇತ ಸಂಸದರ ಕಚೇರಿ ಮುತ್ತಿಗೆ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೋಲಾರ ನಗರದ ಎಪಿಎಂಸಿ ಆವರಣದಲ್ಲಿ ಕರೆದಿದ್ದ ರೈತಸಂಘದ ಸಭೆಯಲ್ಲಿ ಗೋ ಬ್ಯಾಕ್ ಅಮುಲ್ ಎಂಬ ಘೋಷಣೆಯೊಂದಿಗೆ ಕನ್ನಡಿಗರ ಆಸ್ತಿ, ರೈತ ಕೂಲಿ ಕಾರ್ಮಿಕರ ಸ್ವಾಭಿಮಾನದ ಬದುಕು ಕಲ್ಪಿಸಿ ಕೊಟ್ಟಿರುವ ನಂದಿನಿ ಹಾಲಿಗೆ ಪರ್ಯಾಯವಾಗಿ ಗುಜರಾತಿನ ಅಮುಲ್ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ಒದಗಿಸಲು ಹೊರಟಿರುವ ಆದೇಶವನ್ನು ವಾಪಸ್ ಪಡೆಯದೇ ಇದ್ದರೆ ಮತ ಕೇಳಲು ಬರುವ ಬಿಜೆಪಿ ನಾಯಕರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಪೊರಕೆ ಚಳವಳಿ ಮಾಡುವ ಎಚ್ಚರಿಕೆಯನ್ನು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಸಭೆಯ ಮುಖಾಂತರ ಜನಪ್ರತಿನಿಧಿಗಳಿಗೆ ನೀಡಿದರು.

ದೇಶದಲ್ಲಿನ ಬಹಳಷ್ಟು ಕೆಟ್ಟು ಕಣ್ಣುಗಳು ಕರ್ನಾಟಕದ ಮೇಲೆಯೇ ಬೀಳುತ್ತಿರುವುದು ವಿಪರ್ಯಾಸ. ಬೆಳಗಾವಿ ಮೇಲೆ ಮಹಾರಾಷ್ಟ್ರದ ಕಾಕದೃಷ್ಠಿ, ಅದು ಭೀಕರತೆ ಪಡೆಯುವ ಸಮಯದಲ್ಲಿ ಮತ್ತೆ ನಮ್ಮ ರಾಜ್ಯದ ಹೆಮ್ಮೆಯ ನಂದಿನಿ ಹಾಲಿಗೆ ಸಂಬಂಧಿಸಿದಂತೆ ಕೆಲವರ ವಕ್ರದೃಷ್ಠಿ ಬೀಳುತ್ತಲೇ ಬಂದಿದೆ.

ಹಿಂದೆ ಮಂಡ್ಯದ ಸಾರ್ವಜನಿಕ ಸಭೆಯಲ್ಲಿ ಗುಜರಾತಿನ ಅಮುಲ್ ಅನ್ನು ಕರ್ನಾಟಕದ ನಂದಿನಿಯೊಂದಿಗೆ ವಿಲೀನ ಮಾಡಬೇಕೆಂಬ ಪ್ರಸ್ತಾಪ ಮುಂದಿಟ್ಟ ದಿನದಿಂದ ಈ ಮಾತಿಗೆ ಕನ್ನಡಿಗರ ರೈತಾಪಿ ವರ್ಗದ ಆಕ್ರೋಶದ ಬೆನ್ನಲ್ಲೇ ಕೈಬಿಟ್ಟ ವಿಲೀನದ ಆದೇಶದ ಬೆನ್ನಲ್ಲೇ ತನ್ನ ನರಿ ಬುದ್ಧಿಯನ್ನು ಅಮಿತ್ ಶಾ ಅವರು ಅಮುಲ್ ಉತ್ಪನ್ನಗಳನ್ನು ಕರ್ನಾಟಕದ ಮಾರುಕಟ್ಟೆಗೆ ಅವಕಾಶ ನೀಡಿರುವುದು ದುರಾದೃಷ್ಠಕರ. ಈ ಆದೇಶವನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಂಡು ಕನ್ನಡಿಗರ ಆಸ್ತಿಯನ್ನು ಮಾರ್ವಾಡಿಗಳಿಗೆ ಅಡ ಇಡಲು ಹೊರಟಿದ್ದಾರೆಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಕೋಟ್ಯಾಂತರ ಗ್ರಾಮೀಣ ಪ್ರದೇಶದ ರೈತಾಪಿ ಕುಟುಂಬಗಳಿಗೆ ಸಾಂಕ್ರಾಮಿಕ ರೋಗಗಳು ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಆರ್ಥಿಕವಾಗಿ ಸಂಸಾರದ ಕೈ ಹಿಡಿದ ಏಕೈಕ ಉದ್ಯಮ ಎಂದರೆ ಹೈನುಗಾರಿಕೆ. ಅಂತಹ ಉದ್ಯಮವನ್ನೇ ಹೊರ ರಾಜ್ಯದವರು ಕಿತ್ತುಕೊಳ್ಳಲು ಹೊರಟಿರುವುದು ದುರಾದೃಷ್ಟಕರ.
ಕೇಂದ್ರ ಸರ್ಕಾರದ ಆದೇಶವನ್ನು ತಿರಸ್ಕರಿಸದೆ ಅವರ ಮಾತಿಗೆ ಬೆನ್ನೆಲುಬಾಗಿ ರಾಜ್ಯದ ರೈತರೇ ಅಮುಲ್ ಉತ್ಪನ್ನಗಳನ್ನು ಬಯಸಿದ್ದಾರೆಂದು ಹೇಳಿಕೆ ನೀಡುತ್ತಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಕರ್ನಾಟಕವನ್ನೇ ಮಹಾರಾಷ್ಟ್ರಕ್ಕೆ ಮಾರಾಟ ಮಾಡುವ ಕಾಲ ದೂರವಿಲ್ಲವೆಂದು ಏಕ ನಿರ್ಣಯ ತೆಗೆದುಕೊಳ್ಳುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

೨೪ ಗಂಟೆಯಲ್ಲಿ ಕನ್ನಡಿಗರ ನಂದಿನಿಯನ್ನು ನಿರ್ಲಕ್ಷ್ಯ ಮಾಡಿ ಅಮುಲ್ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಿರುವ ಆದೇಶವನ್ನು ವಾಪಸ್ ಪಡೆಯದೇ ಇದ್ದರೆ ಜಾನುವಾರುಗಳ ಸಮೇತ ಸಂಸದ ಕಚೇರಿ ಏ.೧೩ರಂದು ಮುತ್ತಿಗೆ ಹಾಕಿ ನ್ಯಾಯ ಪಡೆದುಕೊಳ್ಳುತ್ತೇವೆ. ನಮ್ಮ ಹೋರಾಟ ನಮ್ಮ ಕನ್ನಡಿಗರ ಆಸ್ತಿಯಾದ ನಂದಿನಿಯ ಉಳಿವಿಗಾಗಿ ಎಂದು ಹೇಳಿದರು.

ಸಭೆಯಲ್ಲಿ ರಾಜ್ಯ ಪ್ರ.ಕಾ. ಫಾರೂಖ್ ಪಾಷ, ರಾಜ್ಯ ಕಾರ್ಯಾಧ್ಯಕ್ಷ ಬಂಗಾರಿ ಮಂಜು, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಹೆಬ್ಬಣಿ ಆನಂದರೆಡ್ಡಿ, ಭಾಸ್ಕರ್, ರಾಜೇಶ್, ಆದಿಲ್ ಪಾಷ, ವಿಜಯ್ ಪಾಲ್, ಜುಬೇರ್ ಪಾಷ, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಗಿರೀಶ್, ರಾಮಸಾಗರ ವೇಣು, ಮಾಸ್ತಿ ವೆಂಕಟೇಶ್, ಯಲ್ಲಣ್ಣ, ಹರೀಶ್ ಮುಂತಾದವರಿದ್ದರು.

 

Leave a Reply

Your email address will not be published. Required fields are marked *

You missed

error: Content is protected !!