• Tue. May 7th, 2024

PLACE YOUR AD HERE AT LOWEST PRICE

ಕೋಲಾರ: ಗುಣಾತ್ಮಕ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ದಿಗೆ ಸಮಾಜ, ಸಂಸ್ಥೆಗಳು ಕೈಜೋಡಿಸಬೇಕು, ಕಾನ್ವೆಂಟ್ ವ್ಯಾಮೋಹ ಬಿಟ್ಟು ಮಕ್ಕಳನ್ನು ದಾಖಲಿಸಲು ಪೋಷಕರು ಪಣ ತೊಡಬೇಕು ಎಂದು ಶಾಹಿ ಎಕ್ಸ್‌ಪೋಟ್ಸ್ ಸಂಸ್ಥೆಯ ನಿವೃತ್ತ ಜನರಲ್ ಮ್ಯಾನೇಜರ್ ಎಲ್.ರಘುರಾಜ್ ಕರೆ ನೀಡಿದರು.
ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ತಮ್ಮ ನಿಸ್ವಾರ್ಥ ಸೇವೆಯ ಭಾಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ನೋಟ್‌ಪುಸ್ತಕಗಳು, ಗಣಿತ ಕಲಿಕೆಗೆ ಅನುಕೂಲವಾಗಲು ಜಾಮಿಟ್ರಿ ಬಾಕ್ಸ್‌ಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡುತ್ತಿದ್ದರು.
ದೇಶ ಕಂಡ ಸಾಧಕರೆಲ್ಲಾ ಸರ್ಕಾರಿ ಶಾಲೆಯಲ್ಲೇ ಓದಿದವರು ಎಂದ ಅವರು, ಕೀಳಿರಿಮೆ ತೊರೆದು ಮಕ್ಕಳನ್ನು ಇಲ್ಲಿ ದಾಖಲಿಸುವ ಮೂಲಕ ಸಮಾನ ಶಿಕ್ಷಣಕ್ಕೆ ಹಾನಿಯಾಗುವುದನ್ನು ತಪ್ಪಿಸುವ ಹೊಣೆ ಪೋಷಕರು,ಸರ್ಕಾರ ಮತ್ತು ಸಮಾಜದ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಅರಾಭಿಕೊತ್ತನೂರು ಶಾಲೆ ಆವರಣದಲ್ಲಿ ಧನಾತ್ಮಕ ಶಕ್ತಿಯ ಸಂಚಲನವಾಗುತ್ತಿದೆ, ಇಲ್ಲಿನ ಪರಿಸರ,ಬೆಟ್ಟದ ತಪ್ಪಲಿನ ಸುಂದರ ಪ್ರಕೃತಿಯ ಮಡಿಲು ಕಲಿಕೆಗೆ ಹೇಳಿ ಮಾಡಿಸಿದಂತಿದೆ, ಈ ವಾತಾವರಣದಲ್ಲಿ ಮಕ್ಕಳು ಕಲಿತರೆ ಸಾಧಕರಾಗುವುದರಲ್ಲಿ ಸಂಶಯವಿಲ್ಲ ಎಂದರು.
ಶಾಲೆಗೆ ಬರುವ ಮಕ್ಕಳು ಶಿಸ್ತು ರೂಢಿಸಿಕೊಳ್ಳಿ,ಪರಸ್ಪರ ದ್ವೇಷ,ಅಸೂಯೆ ತೊರೆದು ಎಲ್ಲರೂ ಸ್ನೇಹಿತರಂತೆ ಇರಬೇಕು, ಜಾತಿ,ಧರ್ಮದ ಎಲ್ಲೆ ಮೀರಿ ನಾವೆಲ್ಲಾ ಒಂದೇ ಎಂಬ ಪವಿತ್ರ ಭಾವನೆಯೊಂದಿಗೆ ಉತ್ತಮ ಸ್ನೇಹಿತರಾಗಿ ಕಲಿಕೆಯ ಧ್ಯೇಯ,ಗುರಿ ಸಾಧನೆಗೆ ಮುನ್ನಡಿ ಬರೆಯಬೇಕು,ಮೊಬೈಲ್,ಟಿವಿ ಅಗತ್ಯಕ್ಕಿಂತ ಹೆಚ್ಚು ಬಳಸದಿರಿ, ಅವುಗಳ ದಾಸರಾಗದಿರಿ ಎಂದು ಕಿವಿಮಾತು ಹೇಳಿದರು.
ರಘುರಾಜ್‌ರ ಆದರ್ಶ
ಪಾಲಿಸಿ ನೆರವಾಗುವೆ
ಶಾಹಿ ಎಕ್ಸ್‌ಪೋಟ್ಸ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ರಾಜೇಶ್ ಮಾತನಾಡಿ, ರಘುರಾಜ್ ಅವರು ನಿವೃತ್ತರಾಗಿ ಬೆಂಗಳೂರು ಸೇರಿದ್ದರೂ, ಈ ಸರ್ಕಾರಿ ಶಾಲೆಯ ಕುರಿತು ಹೊಂದಿರುವ ಪ್ರೀತಿ, ಈ ಮಕ್ಕಳ ಮೇಲಿನ ಮಮತೆ ನನ್ನನ್ನು ಮಂತ್ರಮುಗ್ದನನ್ನಾಗಿಸಿದೆ, ಅವರಂತೆ ನಾನು ಈ ಶಾಲೆಗೆ ಅಗತ್ಯವಾದ ನೆರವು ಒದಗಿಸುವುದಾಗಿ ಭರವಸೆ ನೀಡಿದರು.
ಶಾಹಿ ಸಂಸ್ಥೆ ಈ ಶಾಲೆಗೆ ಈಗಾಗಲೇ ಅಗತ್ಯ ನೆರವು ಒದಗಿಸಿದ್ದು, ಈ ಮಕ್ಕಳು, ಇಲ್ಲಿನ ಕಲಿಕೆಗೆ ಪೂರಕವಾದ ಪರಿಸರ, ಸೌಲಭ್ಯಗಳ ಸದ್ಬಳಕೆ ಕಂಡಾಗ ನೀಡಿರುವ ಸಹಾಯ ಸಾರ್ಥಕವೆನಿಸುತ್ತಿದೆ, ಇಂತಹ ಶಾಲೆಗೆ ಇನ್ನಷ್ಟು ನೆರವು ಒದಗಿಸುವ ಮೂಲಕ ನಿಮ್ಮೊಂದಿಗೆ ಸದಾ ಇರುವುದಾಗಿ ತಿಳಿಸಿದರು.
ಶಾಲೆಯ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ಮಾತನಾಡಿ, ಈಗಾಗಲೇ ಶಾಹಿ ಎಕ್ಸ್‌ಪೋರ್ಟ್ಸ್ ಸಂಸ್ಥೆ ಶಾಲೆಗೆ ಒಂದು ಕೊಠಡಿ, ಸುತ್ತಲೂ ಚಿರತೆಗಳಿಂದ ರಕ್ಷಣೆಗೆ ಕಾಂಪೌಂಡ್ ಮೇಲೆ ಮುಳ್ಳುತಂತಿಬೇಲಿ, ನೀರಿನ ಟ್ಯಾಂಕ್, ವಿಜ್ಞಾನ ಪ್ರಯೋಗಾಲಯ, ಶಾಲೆಯ ನಾಮಫಲಕದ ಕಮಾನು ಹೀಗೆ ಅಪಾರ ಕೊಡುಗೆ ನೀಡಿದೆ ಎಂದರು.
ರಘುರಾಜ್ ಅವರ ಹೃದಯವಂತಿಕೆಗೆ ಸಾಟಿಯಿಲ್ಲ, ಬೆಂಗಳೂರಿನವರಾದ ಅವರು ಕೋಲಾರ ತಾಲೂಕಿನ ನಮ್ಮ ಸರ್ಕಾರಿ ಶಾಲೆ ಕುರಿತು ಹೊಂದಿರುವ ಪ್ರೀತಿ ಅಸಾಧಾರಣವಾದುದು ಪ್ರತಿ ವರ್ಷವೂ ಸುಮಾರು ೫೦ ಸಾವಿರದಷ್ಟು ನೋಟ್ ಪುಸ್ತಕಗಳು,ಸ್ಟೇಷನರಿಗಳ ನೆರವು ಒದಗಿಸಿ ನಿಸ್ವಾರ್ಥತೆ ಮೆರೆದಿದ್ದಾರೆ ಅವರಿಗೆ ದೇವರು ಉತ್ತಮ ಆರೋಗ್ಯ,ಐಶ್ವರ್ಯ ನೀಡಲಿ ಎಂದು ಶಾಲೆಯ ಎಲ್ಲಾ ಮಕ್ಕಳ ಪರವಾಗಿ ಹಾರೈಸುವುದಾಗಿ ನುಡಿದರು.
ಶಿಕ್ಷಕ ಶ್ರೀನಿವಾಸಲು ಕಾರ್ಯಕ್ರಮ ನಿರೂಪಿಸಿ,ಸ್ವಾಗತಿಸಿ, ರಘುರಾಜ್ ಅವರು ಈ ಶಾಲೆಯ ಕುಟುಂಬ ಸದಸ್ಯರಾಗಿದ್ದಾರೆ, ನಾವು ಕೇಳದಿದ್ದರೂ ಪ್ರತಿವರ್ಷ ಅವರೇ ಮುತುವರ್ಜಿ ವಹಿಸಿ ನಮ್ಮ ಮಕ್ಕಳಿಗೆ ಇಷ್ಟೊಂದು ಅಪಾರ ಪ್ರಮಾಣದ ನೆರವು ಹರಿಸುತ್ತಿರುವುದು ಶ್ಲಾಘನೀಯವಾಗಿದ್ದು, ಅವರಿಗೆ ಶಿಕ್ಷಕರು, ಪೋಷಕರು,ವಿದ್ಯಾರ್ಥಿಗಳು ಋಣಿಯಾಗಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಹಿ ಎಕ್ಸ್‌ಪೋರ್ಟ್ಸ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಶ್ರೀನಿವಾಸಾಚಾರ್, ಎಸ್‌ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ, ಶಿಕ್ಷಕರಾದ ಸಿದ್ದೇಶ್ವರಿ,ಎಂ.ಆರ್.ಗೋಪಾಲಕೃಷ್ಣ, ಭವಾನಿ,ಸುಗುಣಾ, ಶ್ವೇತಾ,ವೆಂಕಟರೆಡ್ಡಿ, ಫರೀದಾ, ರಮಾದೇವಿ, ಡಿ.ಚಂದ್ರಶೇಖರ್ ಮತ್ತಿತರರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!