• Mon. May 6th, 2024

PLACE YOUR AD HERE AT LOWEST PRICE

ಕೋಲಾರ:ಇಂದಿನ ಆಧುನಿಕ ಜೀವನದ ಭರಾಟೆಯಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆಯೇ ಹೊರತು, ಅವರು ಶಾಲೆಯಲ್ಲಿ ಏನನ್ನು ಕಲಿಯುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವ ಬಿಡುವು ಇಲ್ಲದಂತಹ ಒತ್ತಡದಲ್ಲಿ ಜೀವನ ಸಾಗಿಸುವಂತಾಗಿರುವುದು ವಿಷಾದಕರ ಸಂಗತಿಯಾಗಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಎಂ.ಕೆ.ವೆಂಕಟರಾಮ್ ತಿಳಿಸಿದರು.

ತಾಲ್ಲೂಕಿನ ಹರಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ೧೯೯೫-೯೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಪೋಷಕರು ತಮ್ಮ ವ್ಯವಸಾಯ ಮತ್ತು ಕೃಷಿ ಚಟುವಟಿಕೆಗಳ ಬಗ್ಗೆ ತೋರಿಸುವ ಕಾಳಜಿಯನ್ನು ಮಕ್ಕಳ ಬಗ್ಗೆ ತೋರಿಸುವ ಗೋಜಿಗೆ ಹೋಗುವುದಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ತಮ್ಮ ಕೆಲಸ ಮುಗಿಯಿತು ಎನ್ನುವ ಭಾವನೆಯಲ್ಲಿ ಪೋಷಕರು ಇಂದು ಜೀವನ ನಡೆಸುತ್ತಿದ್ದಾರೆ ಎಂದರು.

ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ದೂರದ ಊರುಗಳಲ್ಲಿನ ಶಾಲಾ ಕಾಲೇಜುಗಳ ವಸತಿ ನಿಲಯಗಳಲ್ಲಿ ಸೇರಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಪ್ರತಿದಿನ ಮನೆಗಳಲ್ಲಿದ್ದರೇನೇ ಮಕ್ಕಳು ಓದಿನ ಕಡೆ ಗಮನಹರಿಸುವುದಿಲ್ಲದಂತಹ ಪರಿಸ್ಥಿತಿ ಇರುವಾಗ, ಇನ್ನು ವಸತಿ ನಿಲಯಗಳಲ್ಲಿದ್ದುಕೊಂಡು ಎಷ್ಟರ ಮಟ್ಟಿಗೆ ವ್ಯಾಸಂಗದತ್ತ ಗಮನಹರಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಪೋಷಕರಿಗೆ ಎಷ್ಟೇ ಕೆಲಸದ ಒತ್ತಡಗಳಿದ್ದರೂ ದಯಮಾಡಿ, ಪ್ರತಿದಿನ ನಿಮ್ಮ ಮಕ್ಕಳು ಶಾಲೆಯಿಂದ ಮನೆಗೆ ವಾಪಸ್ಸಾದ ಬಳಿಕ ಅವರೊಂದಿಗೆ ಅರ್ಧ ಗಂಟೆ ಕಾಲ ಕುಳಿತುಕೊಂಡು ಆ ದಿನ ಶಾಲೆಯಲ್ಲಿ ಏನೇನು ಪಾಠಗಳನ್ನು ಬೋಧಿಸಿದರು, ಏನು ಮಾಡಿದರು ಎಂಬುದರ ಬಗ್ಗೆ ಮಕ್ಕಳನ್ನು ಪ್ರಶ್ನಿಸುವಂತೆ ಮನವಿ ಮಾಡಿದರು.

ನಿವೃತ್ತ ಇಂಗ್ಲೀಷ್ ಶಿಕ್ಷಕಿ ಬಿ.ಶಾಹಿದ ಮಾತನಾಡಿ, ೧೯೯೪ ರಲ್ಲಿ ಸೇವೆಗೆ ಸೇರಿಕೊಂಡು ೨೮ ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿ ೨ ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ನಿವೃತ್ತಿಯಾಗುವ ಭಾಗ್ಯ ನನಗೆ ದೊರೆತಿದ್ದು ನನ್ನ ಸೌಭಾಗ್ಯ. ಬೇರೆ ಶಾಲೆಗೆ ವರ್ಗಾವಣೆ ದೊರೆತರೂ ಈ ಶಾಲೆಯೊಂದಿಗೆ ಇದ್ದ ಬಾಂಧವ್ಯದಿಂದಾಗಿ ವರ್ಗಾವಣೆಯನ್ನು ತೆಗೆದುಕೊಳ್ಳದೇ ಇಲ್ಲಿಯೇ ಸೇವೆಯನ್ನು ಸಲ್ಲಿಸಿದ್ದಾಗಿ ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳು ಬೇರೆ ಯಾವುದೇ ಖಾಸಗೀ ಶಾಲೆಗಳಲ್ಲಿ ದೊರೆಯಲು ಸಾಧ್ಯವಿಲ್ಲ. ಆದರೂ ಪೋಷಕರು ತಮ್ಮ ಮಕ್ಕಳು ಇಂಗ್ಲೀಷ್ ಕಲಿಯಲು ಎನ್ನುವ ವ್ಯಾಮೋಹದಿಂದಾಗಿ ಖಾಸಗೀ ಶಾಲೆಗಳತ್ತ ವಾಲುತ್ತಿರುವುದು ದುರಾದೃಷ್ಟಕರವಾಗಿದ್ದು, ಪೋಷಕರು ಖಾಸಗೀ ಶಾಲೆಗಳ ವ್ಯಾಮೋಹದಿಂದ ಹೊರಬಂದು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಮುಂದಾಗಬೇಕೆಂದರು.

ವಿಜ್ಞಾನ ಶಿಕ್ಷಕ ಎಸ್.ರಾಮಣ್ಣ ಮಾತನಾಡಿ, ಶಿಕ್ಷಕರು ಎಂದಿಗೂ ಮಕ್ಕಳ ಮೇಲೆ ವೈಯಕ್ತಿಕ ದ್ವೇಷ ಸಾಧಿಸಲು ಹೋಗುವುದಿಲ್ಲ, ತಮ್ಮ ವೃತ್ತಿ ಜೀವನದಲ್ಲಿ ಶಿಕ್ಷಕರು ಮಕ್ಕಳನ್ನು ಏನಾದರೂ ದಂಡಿಸಿದ್ದರೆ ಅದು ಕೇವಲ ಅವರ ಭವಿಷ್ಯವನ್ನು ತಿದ್ದಿ, ತೀಡಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಜೀವನ ರೂಪಿಸಿಕೊಳ್ಳಲಿ ಎನ್ನುವ ಭಾವನೆಯಿಂದಲೇ ಹೊರತೂ ಮತ್ಯಾವುದೇ ಉದ್ದೇಶದಿಂದಲ್ಲ ಎಂದರು.

ಗುರುವಂದನಾ ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗೆ ರಂಗೋಲಿ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪ್ರಸ್ತುತ ಶಾಲೆಯಲ್ಲಿ ೮ ರಿಂದ ೧೦ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ೧೫೦ ಮಕ್ಕಳಿಗೆ ಹಳೆ ವಿದ್ಯಾರ್ಥಿಗಳಿಂದ ಟ್ರಾಕ್ ಪ್ಯಾಂಟ್ ಮತ್ತು ಟಿ- ಶರ್ಟ್ಗಳನ್ನೊಳಗೊಂಡ ಸಮವಸ್ತ್ರಗಳನ್ನು ವಿತರಿಸಲಾಯಿತು.

ಅಂದು ತಮಗೆ ಪಾಠ ಬೋಧಿಸಿದ ಶಿಕ್ಷಕರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಕಿರು ಕಾಣಿಕೆ ನೀಡುವ ಮೂಲಕ ಆತ್ಮೀಯವಾಗಿ ಸನ್ಮಾನಿಸಿ, ಶಿಕ್ಷಕರಿಗೆ ಮತ್ತು ಶಾಲಾ ಮಕ್ಕಳಿಗೆ ಹಬ್ಬದೂಟವನ್ನು ಉಣಬಡಿಸಿದರು.

ಮುಖ್ಯ ಶಿಕ್ಷಕ ಪಿ.ವೆಂಕಟರವಣಪ್ಪ, ಶಿಕ್ಷಕರಾದ ಬಿ.ಆರ್.ರವೀಂದ್ರನಾಥ್, ಎಂ.ಎಸ್.ನಾರಾಯಣಸ್ವಾಮಿ, ರಮೇಶ್, ಮೊದಲಾದವರು ಇದ್ದರು. ಕಾರ್ಯಕ್ರಮದ ನೇತೃತ್ವವನ್ನು ಹಳೆಯ ವಿದ್ಯಾರ್ಥಿಗಳಾದ ನಾಗೇಂದ್ರ, ಕಣಿಂಬೆಲೆ ರಾಮ್‌ಪ್ರಸಾದ್, ಶಿವಶಂಕರ್, ವೆಂಕಟಾಚಲಪತಿ, ಚಂದ್ರಶೇಖರ, ಲೋಕೇಶಗೌಡ, ಹೆಚ್.ನಾರಾಯಣಸ್ವಾಮಿ, ಎಂ.ಎಲ್.ಮಂಜುನಾಥ್ ವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!