• Wed. May 8th, 2024

PLACE YOUR AD HERE AT LOWEST PRICE

ಮಧ್ಯಪ್ರದೇಶದಲ್ಲಿ ದಲಿತ ಯುವಕನ ಮೇಲೆ ಮಾನವ ಮಲವನ್ನು ಬಳಿದಿರುವ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ(ಜುಲೈ 24) ಒತ್ತಾಯಿಸಿದ್ದಾರೆ.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಖರ್ಗೆ, ಇದು ಒಂದು ತಿಂಗಳ ಅವಧಿಯಲ್ಲಿ ನಡೆದ ಎರಡನೇ ದಲಿತ ದೌರ್ಜನ್ಯದ ಘಟನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಶಕಗಳಿಂದ ಮಧ್ಯಪ್ರದೇಶದ ಆದಿವಾಸಿಗಳು ಮತ್ತು ಹಿಂದುಳಿದ ವರ್ಗದ ನಾಗರಿಕರು ಬಿಜೆಪಿಯ ದುರಾಡಳಿತದಲ್ಲಿ ಅವಮಾನವನ್ನು ಅನುಭವಿಸುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

“ಬಿಜೆಪಿಯ ‘ಸಬ್‌ ಕಾ ಸಾಥ್’ ಕೇವಲ ಜಾಹೀರಾತಿಗೆ ಸೀಮಿತವಾಗಿದೆ ಮತ್ತು ಇದು ಶೋಷಣೆಯ ಘೋಷಣೆ ಮತ್ತು ಪ್ರಚಾರದ ತಂತ್ರವಾಗಿ ಮಾರ್ಪಟ್ಟಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಕನಸನ್ನು ಬಿಜೆಪಿ ಪ್ರತಿದಿನ ಭಗ್ನಗೊಳಿಸುತ್ತಿದೆ.

ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದ ಈ ಘಟನೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಾವು ಒತ್ತಾಯಿಸುತ್ತೇವೆ” ಎಂದು ಖರ್ಗೆ ಸೋಮವಾರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಛತ್ತರ್‌ಪುರ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಮೀ ದೂರದಲ್ಲಿರುವ ಬಿಕೌರಾ ಗ್ರಾಮದಲ್ಲಿ ಶುಕ್ರವಾರ(ಜುಲೈ 21) ಈ ಘಟನೆ ನಡೆದಿತ್ತು.

ಗ್ರಾಮದಲ್ಲಿ ಚರಂಡಿಯನ್ನು ಸ್ವಚ್ಛಗೊಳಿಸಿದ ಬಳಿಕ ಪಂಪ್‌ಸೆಟ್‌ ಪೈಪ್‌ ಮೂಲಕ ಸ್ನಾನ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಸಂತ್ರಸ್ತ ದಶರತ್ ಅಹಿರ್ವಾರ್ ತಮ್ಮ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.

ಇದೇ ವೇಳೆ ಒಬಿಸಿ ಸಮುದಾಯಕ್ಕೆ ಸೇರಿದ ರಾಮಕೃಪಾಲ್ ಪಟೇಲ್ ಕೂಡ ಅದೇ ಪಂಪ್‌ಸೆಟ್‌ ಬಳಿ ಬಂದಿದ್ದು, ದಶರತ್ ಅಹಿರ್ವಾರ್ ಆಕಸ್ಮಿಕವಾಗಿ ಆತನ ಕೈಯನ್ನು ಸ್ಪರ್ಶಿಸಿದ್ದಾರೆ.

ಘಟನೆಯಿಂದ ಕೋಪಗೊಂಡ ಪಟೇಲ್, ಮಗ್‌ನಿಂದ ಸಮೀಪದಲ್ಲಿ ಬಿದ್ದಿದ್ದ ಮಾನವ ಮಲವನ್ನು ಎತ್ತಿಕೊಂಡು ದಶರತ್ ಅಹಿರ್ವಾರ್ ತಲೆ ಮತ್ತು ಮುಖದ ಮೇಲೆ ಬಳಿದಿದ್ದಾನೆ. ಈ ವಿಷಯವನ್ನು ಪಂಚಾಯತಿ ಸಭೆಗೆ ದೂರು ನೀಡಿದಾಗ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವ ಬದಲು ದಲಿತ ಯುವಕನಿಗೇ ಪಂಚಾಯಿತಿಯು 600 ರೂ. ದಂಡ ವಿಧಿಸಿತ್ತು. ನಂತರ ದಶರತ್ ಅಹಿರ್ವಾರ್ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿ ರಾಮ್‌ಕೃಪಾಲ್‌ ಪಟೇಲ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294ರ (ಅಶ್ಲೀಲ ಕೃತ್ಯಗಳು ಅಥವಾ ಸಾರ್ವಜನಿಕ ಪದಗಳಿಗೆ ಶಿಕ್ಷೆ) ಮತ್ತು 506 (ಅಪರಾಧ ಬೆದರಿಕೆ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿದ್ದರು.

ಇತ್ತೀಚೆಗೆ, ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಯುವಕನ ಮೇಲೆ ಬಿಜೆಪಿ ಮುಖಂಡನೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ಆರೋಪಿ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಜೊತೆಗೆ ಆತನ ಅತಿಕ್ರಮಣ ಮನೆಯನ್ನು ಕೆಡವಲಾಗಿತ್ತು. ಈ ಘಟನೆಯಲ್ಲಿ ಸ್ವತಃ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ತಮ್ಮ ನಿವಾಸಕ್ಕೆ ಕರೆಸಿ ದಲಿತ ಯುವಕನ ಪಾದ ತೊಳೆದಿದ್ದರು.

ಉತ್ತರ ಪ್ರದೇಶದ ಇಟಾವಾ ಜಿಲ್ಲೆ ವ್ಯಾಪ್ತಿಯ ಸೈಫೈ ಎಂಬಲ್ಲಿ ದಲಿತ ಬಾಲಕನಿಗೆ ಥಳಿಸಿದ ಯುವಕನೊಬ್ಬ ತನ್ನ ಮಲವನ್ನು ಬಾಲಕನ ಕೈಯಿಂದ ಒತ್ತಾಯಪೂರ್ವಕವಾಗಿ ತೆಗೆಸಿದ್ದ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!