• Wed. May 8th, 2024

PLACE YOUR AD HERE AT LOWEST PRICE

ಉಡುಪಿ: ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿರುವ ಕಾಲೇಜು ಆಡಳಿತ ಮಂಡಳಿ, ವಿಡಿಯೋ ಮಾಡಲು ಮೊಬೈಲ್ ಇಟ್ಟಿದ್ದನ್ನು ವಿದ್ಯಾರ್ಥಿನಿಯರು ಒಪ್ಪಿಕೊಂಡಿದ್ದಾರೆ. ಆದರೆ, ಸಂತ್ರಸ್ತ ವಿದ್ಯಾರ್ಥಿನಿಯು ತಪ್ಪಿತಸ್ಥ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ದೂರು ಕೊಡಲು ಒಪ್ಪಿಲ್ಲ‌ ಎಂದು ತಿಳಿಸಿದ್ದಾರೆ.

ಘಟನೆಯು ರಾಜ್ಯಾದ್ಯಂತ ರಾಜಕೀಯ ಚರ್ಚೆಗೆ ವೇದಿಕೆಯೊದಗಿಸಿದ ಹಿನ್ನೆಲೆಯಲ್ಲಿ ಉಡುಪಿಯ ಪ್ರೆಸ್‌ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಆಡಳಿತ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್, ‘ಘಟನೆಯು ನಮ್ಮ ಗಮನಕ್ಕೆ ಬಂದ ಕೂಡಲೇ ನಾವು ಪೊಲೀಸರನ್ನು ಕರೆಸಿದ್ದೇವೆ.

ಪೊಲೀಸರ ಎದುರು ತಪ್ಪೊಪ್ಪಿಕೊಂಡ ಮೂವರು ವಿದ್ಯಾರ್ಥಿನಿಯರನ್ನು ತಕ್ಷಣ ಅಮಾನತು ಮಾಡಿದ್ದೇವೆ. ಸಂತ್ರಸ್ತೆ ಯುವತಿ ಭವಿಷ್ಯದ ದೃಷ್ಟಿಯಿಂದ ಪೊಲೀಸರಿಗೆ ದೂರು ಕೊಡಲು ಒಪ್ಪಿಲ್ಲ‌. ತಪ್ಪು ಮಾಡಿದವರ ಪರವಾಗಿ ನಾವು ನಿಂತಿಲ್ಲ’ ಎಂದು ತಿಳಿಸಿದರು.

‘ಪ್ರಾಥಮಿಕ ಪರಿಶೀಲನೆ ನಡೆಸಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ, ಮೊಬೈಲ್ ಒಪ್ಪಿಸಿದ್ದೇವೆ. ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇಡಲು ಜಾಗ ಇಲ್ಲ. ಶೌಚಾಲಯದ ಹೊರಗಡೆ ನಿಂತು ಮೇಲ್ಭಾಗದಲ್ಲಿ ತಮ್ಮ ಕೈಯಲ್ಲಿ ಮೊಬೈಲ್ ಹಿಡಿದು ಚಿತ್ರೀಕರಣ ಮಾಡುವ ಪ್ರಯತ್ನ ನಡೆಸಿದ್ದಾರೆ. ಇದನ್ನು ಶೌಚಾಲಯದಲ್ಲಿದ್ದ ವಿದ್ಯಾರ್ಥಿನಿ ನೋಡಿ ಮಾಹಿತಿ ನೀಡಿದ್ದಾರೆ. ಬಳಿಕ ಮೂವರು ವಿದ್ಯಾರ್ಥಿನಿಯರನ್ನು ಕರೆಸಿ ಮೊಬೈಲ್ ತೆಗೆದು ಓಪನ್ ಮಾಡಿ ನೋಡಿದ್ದೇವೆ.

ಅಲ್ಲಿ ಯಾವುದೇ ವಿಡಿಯೋ ಇರಲಿಲ್ಲ. ಅವರೇ ವಿಡಿಯೋ ಡಿಲೀಟ್ ಮಾಡಿರುವುದಾಗಿ ತಿಳಿಸಿದರು. ವಿಡಿಯೋ ರೆಕಾರ್ಡ್ ಸರಿಯಾಗಿ ಆಗಿಲ್ಲ. ತಮಾಷೆಗಾಗಿ ಮಾಡಿದ್ದು ಎಂದು ತಿಳಿಸಿದ್ದಾರೆ. ಆದರೆ, ಅದರ ಉದ್ದೇಶ ನಮಗೆ ಗೊತ್ತಿಲ್ಲ ಎಂದು ಆ ಮೂವರು ವಿದ್ಯಾರ್ಥಿನಿಯರೇ ಹೇಳಿದ್ದಾರೆ. ಈ ರೀತಿಯ ಘಟನೆ ನಮ್ಮ ಸಂಸ್ಥೆಯಲ್ಲಿ ನಡೆದಿತ್ತು ಎಂಬುದು ಸುಳ್ಳು’ ಎಂದು ಅವರು ಮಾಹಿತಿ ನೀಡಿದರು.

ಎಲ್ಲ ಧರ್ಮದ ವಿದ್ಯಾರ್ಥಿನಿಯರು ಸೇರಿ ಪ್ರತಿಭಟಿಸಿದ್ದಾರೆ: ಬಾಲಕೃಷ್ಣ

ಈ ಘಟನೆ ರಾಜ್ಯದಲ್ಲಿ ಕೋಮುಬಣ್ಣಕ್ಕೆ ತಿರುಗಿರುವ ಹಿನ್ನೆಲೆಯ ಬಗ್ಗೆ ಉತ್ತರಿಸಿರುವ ಕಾಲೇಜಿನ ಮುಖ್ಯ ಶೈಕ್ಷಣಿಕ ಸಂಯೋಜನಾಧಿಕಾರಿ ಬಾಲಕೃಷ್ಣ, ಇಲ್ಲಿ ಯಾವುದೇ ಕೋಮು, ಧರ್ಮದ ಲೇಪ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಮ್ಮ ಸಂಸ್ಥೆಯಲ್ಲಿ ನಡೆದ ಘಟನೆಗೆ ಧರ್ಮದ ಲೇಪ ಹಚ್ಚಬಾರದು ಎಂದು ವಿನಂತಿಸಿರುವ ಅವರು, ಈ ಘಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿನಿಯರ ಧರ್ಮಕ್ಕೆ ಸೇರಿದ ಹಲವು ಮಕ್ಕಳು ನಮ್ಮಲ್ಲಿ ಇದ್ದಾರೆ. ವಿಚಾರ ತಿಳಿದ ಬಳಿಕ ಎಲ್ಲ ಧರ್ಮದ ವಿದ್ಯಾರ್ಥಿನಿಯರು ಸೇರಿ ಪ್ರತಿಭಟಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

‘ಸಂಸ್ಥೆ ಯಾಕೆ ದೂರು ನೀಡಿಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಬಾಲಕೃಷ್ಣ, ‘ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿ ವಿದ್ಯಾರ್ಥಿನಿಯರು ತಪ್ಪೊಪ್ಪಿಗೆ ಕೊಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ ಮೊಬೈಲ್‌ ಅನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ವಿಡಿಯೋ ರೆಕಾರ್ಡಿಂಗ್ ಆಗಿದೆಯಾ, ಅಗಿದ್ದರೆ ಯಾರಿಗಾದರೂ ಫಾರ್ವಡ್ ಮಾಡಿದ್ದಾರ ಎಂಬುದು ನೋಡಿದಾಗ ಅದೂ ಕೂಡ ನಮಗೆ ಸಿಕ್ಕಿಲ್ಲ.

ಪೊಲೀಸಿನವರೂ ಕೂಡ ನೋಡಿದ್ದರು. ಅವರ ವಿರುದ್ಧ ದೂರು ಕೊಡಲು ನಮಗೆ ಯಾವುದೇ ಕಾರಣ ಇರಲಿಲ್ಲ. ಹಾಗಾಗಿ ಆಡಳಿತ ಮಂಡಳಿ ಪೊಲೀಸರಿಗೆ ದೂರು ಕೊಟ್ಟಿಲ್ಲ. ದೂರು ಕೊಡುವುದಕ್ಕೆ ಕಾರಣ ಬೇಕಲ್ಲವೇ’ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ರಾಜೀಬ್ ಮೆಂಡನ್ ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!